ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸನ್ 2022-23 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ವಿಶಿಷ್ಟವಾಗಿ ನಡೆಯಿತು. ಅತ್ಯಂತ ಖುಷಿಯಿಂದ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಶಿಕ್ಷಕರು ಹೂ ಹಾಗೂ ಸಿಹಿ ನೀಡುವುದರ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು. ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಹೊಸ ಶೈಕ್ಷಣಿಕ ವರ್ಷವನ್ನು ಬರಮಾಡಿಕೊಳ್ಳಲಾಯಿತು. ಶಾಲೆಯಲ್ಲಿ ಶ್ರಮದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಕೋವಿಡ್ ಕಾರಣದಿಂದ ಉಂಟಾದ ಕಲಿಕಾ ಹಿನ್ನೆಡೆಯನ್ನು ಸರಿದೂಗಿಸುವ ಸಲುವಾಗಿ 2022-23 ನೇ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಆಚರಿಸಲಾಗುತ್ತಿದ್ದು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಆಶಯದಂತೆ ವಿದ್ಯಾರ್ಥಿಗಳಿಗೆ ಬುನಾದಿ ಅಕ್ಷರ ಜ್ಞಾನ ಹಾಗೂ ಸಂಖ್ಯಾಜ್ಞಾನ ಸಾಧಿಸುವುದು ಶಿಕ್ಷಣದ ಮೊದಲ ಆದ್ಯತೆಯಾಗಿದೆ ಎಂದು ಅಭಿಪ್ರಾಯಪಟ್ಟರು. ನಾವಿನ್ಯಯುತ ಕಲಿಕಾ ಚಟುವಟಿಕೆಗಳಿಂದ ಆನಂದದಾಯಕ ಕಲಿಕೆಯಾಗುತ್ತದೆ ಎಂದು ಅವರು ಹೇಳಿದರು.
ಮಳೆಬಿಲ್ಲು ಎಂಬ ವಿಶೇಷ ಕಾರ್ಯಕ್ರಮದ ಮೂಲಕ 14 ದಿನಗಳವರೆಗೆ ಮಕ್ಕಳಿಗೆ ಆಟದ ಹಬ್ಬ, ಆಟಿಕೆ ತಯಾರಿಕೆ, ನಾಟಕದ ಹಬ್ಬ, ಕಲಾ ಹಬ್ಬ, ಚಿತ್ರ ಜಗತ್ತು, ಕಥೆಗಳ ಹಬ್ಬ, ಕವಿತೆ ಕಟ್ಟೋಣ, ಪರಿಸರ ಹಬ್ಬ, ಗಣಿತದ ಗಮ್ಮತ್ತು, ಇತಿಹಾಸದ ಹಬ್ಬ, ಅಡುಗೆ ಮನೆಯಲ್ಲಿ ವಿಜ್ಞಾನ, ಗೊಂಚಲು ಸಾಂಸ್ಕೃತಿಕ ಸಂಭ್ರಮ, ಶಾಲೆ ಸಿಂಗಾರ ಇತ್ಯಾದಿ ವಿಭಿನ್ನ ಚಟುವಟಿಕೆಗಳಿದ್ದು ಎಲ್ಲ ಮಕ್ಕಳು ಸಕ್ರಿಯವಾಗಿ ಭಾಗವಹಿಸುವಂತೆ ಅವರು ಕರೆ ಕೊಟ್ಟರು.
ರಜೆ ಮುಗಿಸಿ ಶಾಲೆಗೆ ಆಗಮಿಸಿದ ಮಕ್ಕಳು ಸ್ನೇಹಿತರೊಂದಿಗೆ ಬೆರೆತು ಖುಷಿಪಟ್ಟರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಸುನೀಲ ಭಜಂತ್ರಿ, ಶಿವಾನಂದ ಬಳಿಗಾರ, ಶ್ರೀಪಾಲ ಚೌಗಲಾ, ವಿ.ಎಂ. ಕುರಿ, ಎಂ.ಬಿ. ಹೊಂಗಲ, ಅಡುಗೆ ಸಹಾಯಕರಾದ ಮಹಾದೇವಿ ಸೊಗಲದ, ಗಂಗವ್ವ ಅಳಗೋಡಿ ಹಾಗೂ ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಪಾಲಕರು ಹಾಜರಿದ್ದರು. ವಿದ್ಯಾರ್ಥಿನಿ ಸಾಕ್ಷಿ ನಾಗಣ್ಣವರ ಕಾರ್ಯಕ್ರಮ ನಿರ್ವಹಿಸಿದರು.