Homeಸುದ್ದಿಗಳುಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಸನ್ 2025-26ನೇ ಸಾಲಿನ ಶಾಲಾ ಸಂಸತ್ ಚುನಾವಣೆ ವಿಶಿಷ್ಟ ರೀತಿಯಲ್ಲಿ ನಡೆಯಿತು.

ವಿದ್ಯಾರ್ಥಿಗಳಿಗೆ ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ನೈಜ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿಯೇ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಅಧಿಸೂಚನೆ, ನಾಮಪತ್ರ ಸಲ್ಲಿಕೆ, ಪರಿಶೀಲನೆ, ಚಿಹ್ನೆಗಳ ಹಂಚಿಕೆ, ಪ್ರಚಾರ, ಮತದಾನ, ಮತ ಎಣಿಕೆ ಹೀಗೆ ಎಲ್ಲ ಹಂತಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.

ವಿದ್ಯಾರ್ಥಿಗಳನ್ನೇ ಚುನಾವಣಾ ಸಿಬ್ಬಂದಿಯನ್ನಾಗಿಸಿ ತರಬೇತಿ ನೀಡಿ ಕರ್ತವ್ಯ ನಿರ್ವಹಿಸುವಂತೆ ಮಾರ್ಗದರ್ಶನ ನೀಡಲಾಗಿತ್ತು. ಪಿಆರ್‌ಒ, ಎಪಿಆರ್‌ಒ, ಪಿಒ, ಪೋಲಿಸ್, ಮತ ಎಣಿಕೆ ಮೇಲ್ವಿಚಾರಕ, ಚುನಾವಣಾ ಏಜೆಂಟ್ ಹುದ್ದೆಗಳಲ್ಲಿ ಮಕ್ಕಳು ಆಸಕ್ತಿ ಹಾಗೂ ಹುರುಪಿನಿಂದ ಕಾರ್ಯ ನಿರ್ವಹಿಸಿದರು. ಒಟ್ಟು 9 ಸ್ಥಾನಗಳಲ್ಲಿ ಒಬ್ಬರು ಅವಿರೋಧವಾಗಿ ಆಯ್ಕೆಯಾದ್ದರಿಂದ ಉಳಿದ 8 ಸ್ಥಾನಗಳಿಗೆ 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶೇ.93ರಷ್ಟು ಮತದಾನವಾಯಿತು.

ಫಲಿತಾಂಶ ಹೊರಬಿದ್ದಂತೆ ಗೆದ್ದ ಮಕ್ಕಳು ಖುಷಿಯಿಂದ ಸಂಭ್ರಮಿಸಿದರು. ಶಿಕ್ಷಕರಾದ ಜೆ.ಆರ್.ನರಿ, ಪಿ.ಎಸ್.ಗುರುನಗೌಡರ, ಎಸ್.ವಿ.ಬಳಿಗಾರ, ಎಚ್.ವಿ.ಪುರಾಣಿಕ, ವೀರೇಂದ್ರ ಪಾಟೀಲ, ಎಸ್.ಬಿ.ಸಾಳುಂಕೆ, ಎಸ್.ಡಿ.ಎಂ.ಸಿ ಪದಾದಿಕಾರಿಗಳಾದ ವಿನಾಯಕ ಬಡಿಗೇರ, ರಮೇಶ ಸೂರ್ಯವಂಶಿ, ರಾಮಲಿಂಗಪ್ಪ ಮೆಕ್ಕೇದ, ರವೀಂದ್ರ ಮನಗುತ್ತಿ, ಜವಾನರಾದ ಜೆ.ಐ. ಅಳಗೋಡಿ, ಅಡುಗೆ ಸಹಾಯಕರಾದ ಮಹಾದೇವಿ ಸೊಗಲದ, ಗಂಗವ್ವ ಅಳಗೋಡಿ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಚುನಾವಣಾಧಿಕಾರಿಯಾಗಿ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ, ಸಹಾಯಕ ಚುನಾವಣಾಧಿಕಾರಿಯಾಗಿ ಚುನಾವಣಾ ಸಾಕ್ಷರತಾ ಕ್ಲಬ್ ನೋಡಲ್ ಶಿಕ್ಷಕಿಯರಾದ ಎಂ.ಎನ್.ಕಾಳಿ ಕಾರ್ಯ ನಿರ್ವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group