ಬೈಲಹೊಂಗಲ: ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಸನ್ 2023-24ನೇ ಸಾಲಿನ ಶಾಲಾ ಸಂಸತ್ ಚುನಾವಣೆ ವಿಶಿಷ್ಟ ರೀತಿಯಲ್ಲಿ ನಡೆಯಿತು.
ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ನೈಜ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿಯೇ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಅಧಿಸೂಚನೆ, ನಾಮಪತ್ರ ಸಲ್ಲಿಕೆ, ಪರಿಶೀಲನೆ, ಪ್ರಚಾರ, ಮತದಾನ, ಮತ ಎಣಿಕೆ ಹೀಗೆ ಎಲ್ಲ ಹಂತಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
ವಿದ್ಯಾರ್ಥಿಗಳನ್ನೇ ಚುನಾವಣಾ ಸಿಬ್ಬಂದಿಯನ್ನಾಗಿಸಿ ತರಬೇತಿ ನೀಡಿ ಕರ್ತವ್ಯ ನಿರ್ವಹಿಸುವಂತೆ ತರಬೇತಿ ನೀಡಲಾಗಿತ್ತು. ಚುನಾವಣಾ ತಂತ್ರಾಂಶ ಬಳಸಿ ಮೊಬೈಲ್‌ನ್ನು ಮತಯಂತ್ರದಂತೆ ಬಳಸಿ ಮತದಾನದ ಸಂಪೂರ್ಣ ಪ್ರಕ್ರಿಯೆಯನ್ನು ತಂತ್ರಜ್ಞಾನದ ಮೂಲಕ ನಡೆಸಲಾಯಿತು. ಪಿಆರ್‌ಒ, ಎಪಿಆರ್‌ಒ, ಪಿಒ, ಪೋಲಿಸ್, ಮತ ಎಣಿಕೆ ಮೇಲ್ವಿಚಾರಕ, ಚುನಾವಣಾ ಏಜೆಂಟ್ ಹುದ್ದೆಗಳಲ್ಲಿ ಮಕ್ಕಳು ಆಸಕ್ತಿ ಹಾಗೂ ಹುರುಪಿನಿಂದ ಕಾರ್ಯ ನಿರ್ವಹಿಸಿದರು. ಒಟ್ಟು 9 ಸ್ಥಾನಗಳಿಗೆ 30 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶೇ.96ರಷ್ಟು ಮತದಾನವಾಯಿತು.
ಫಲಿತಾಂಶ ಹೊರಬಿದ್ದಂತೆ ಗೆದ್ದ ಮಕ್ಕಳು ಖುಷಿಯಿಂದ ಸಂಭ್ರಮಿಸಿದರು. ಶಿಕ್ಷಕರಾದ ಜೆ.ಆರ್.ನರಿ, ಪಿ.ಎಸ್.ಗುರುನಗೌಡರ, ಎಸ್.ವಿ.ಬಳಿಗಾರ, ಆರ್.ಸಿ.ಸೊರಟೂರ, ಎಚ್.ವಿ.ಪುರಾಣಿಕ, ವೀರೇಂದ್ರ ಪಾಟೀಲ, ಅಡುಗೆ ಸಹಾಯಕರಾದ ಮಹಾದೇವಿ ಸೊಗಲದ, ಗಂಗವ್ವ ಅಳಗೋಡಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಚುನಾವಣಾಧಿಕಾರಿಯಾಗಿ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ, ಸಹಾಯಕ ಚುನಾವಣಾಧಿಕಾರಿಯಾಗಿ ಚುನಾವಣಾ ಸಾಕ್ಷರತಾ ಕ್ಲಬ್ ನೋಡಲ್ ಶಿಕ್ಷಕರಾದ ಎಸ್.ಬಿ.ಭಜಂತ್ರಿ ಕಾರ್ಯ ನಿರ್ವಹಿಸಿದರು.