Homeಸುದ್ದಿಗಳುಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಿಕೊಡಿ - ಸಿಡಿಪಿಓ ಯಲ್ಲಪ್ಪ ಗದಾಡಿ

ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಿಕೊಡಿ – ಸಿಡಿಪಿಓ ಯಲ್ಲಪ್ಪ ಗದಾಡಿ

ಮೂಡಲಗಿ ಬಾಲಕರ ಶಾಲೆಯ ಸಂಭ್ರಮದ ಪ್ರಾರಂಭೋತ್ಸವ

ಮೂಡಲಗಿ-  ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಮಕ್ಕಳಿಗೆ ಬಿಸಿಯೂಟ, ಉಚಿತ ಪುಸ್ತಕ, ಬಟ್ಟೆಗಳನ್ನು ಕೊಡುತ್ತಿದೆ. ಎಲ್ಲ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿಕೊಡಬೇಕು ಎಂದು ಮೂಡಲಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಯಲ್ಲಪ್ಪ ಗದಾಡಿ ಹೇಳಿದರು.

ಮೂಡಲಗಿಯ ಬಾಲಕರ ಮಾದರಿ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವದಲ್ಲಿ ಅವರು ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಈ ಶಾಲೆಯು ಶತಮಾನ ಕಂಡ ಶಾಲೆಯಾಗಿದ್ದು ಇನ್ನೂ ಅಭಿವೃದ್ಧಿ ಹೊಂದಲು ಶಾಲೆಯ ಸುಧಾರಣೆಗೆ ಎಲ್ಲ ಅಧಿಕಾರಿಗಳು, ಸಾರ್ವಜನಿಕರು ಕಂಕಣಬದ್ಧರಾಗಿ ಸಹಾಯ ಸಹಕಾರ ನೀಡಬೇಕು. ಗಂಡು ಮಕ್ಕಳ ಶಾಲೆಯಲ್ಲಿ ವರಾಂಡದಲ್ಲಿ ಪೇವರ್ಸ್, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸುವಂತೆ ತಾಲೂಕಾ ಅಧಿಕಾರಿಗಳಲ್ಲಿ ಮನವಿ ಮಾಡಿದರು

ಶಾಲೆಯ ಮುಖ್ಯೋಪಾಧ್ಯಾಯ ಸುರೇಶ ಕೋಪರ್ಡೆ ಮಾತನಾಡಿ, 1877 ರಲ್ಲಿ ಆರಂಭಗೊಂಡ ಮೂಡಲಗಿ ಸರಕಾರಿ ಕನ್ನಡ ಬಾಲಕರ ಮಾದರಿ ಶಾಲೆಯು ಅನೇಕ ಮಹನೀಯರ ಪ್ರಯತ್ನದಿಂದ ಬೆಳೆದು ನಿಂತಿದೆ. ಖಾಸಗಿ ಶಾಲೆಗಳ ಹಾವಳಿಯ ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಬೆಳೆಯಲು ಸಾರ್ವಜನಿಕರ ಹಾಗೂ ಎಲ್ಲಾ ಇಲಾಖೆಗಳ ಪ್ರೋತ್ಸಾಹ ಅವಶ್ಯಕವಾಗಿದೆ ಎಂದರು.

ಪುರಸಭಾ ಮುಖ್ಯಾಧಿಕಾರಿ ತುಕಾರಾಮ ಮಾದರ ಮಾತನಾಡಿ, ಎಲ್ಲರೂ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಾರೆ. ಯಾಕೆಂದರೆ ಅಲ್ಲಿ ವಾತಾವರಣ ಆಕರ್ಷಣೀಯವಾಗಿರುತ್ತದೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿಯೂ ಕೂಡ ಖಾಸಗಿ ಶಾಲೆಗಳಂತೆ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಆಗಮಿಸುವಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂದರು.

ಈ ಮುಂಚೆ ಶೃಂಗರಿಸಲಾದ ಎತ್ತಿನ ಬಂಡಿಯಲ್ಲಿ ಪುರಸಭೆಯಿಂದ ಮಕ್ಕಳನ್ನು ಕರೆತಂದ ತಾಲೂಕಾ ಅಧಿಕಾರಿಗಳು, ಸಾರ್ವಜನಿಕರು, ಶಿಕ್ಷಕ ಶಿಕ್ಷಕಿಯರು ಶಾಲಾ ಪ್ರವೇಶ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ಶಾಲಾ ಆರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.

ಸಮಾರಂಭದಲ್ಲಿ ಸಾಂಕೇತಿಕವಾಗಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಬಟ್ಟೆಗಳನ್ನು ವಿತರಿಸಲಾಯಿತು.
ವೇದಿಕೆಯ ಮೇಲೆ ತಹಶೀಲ್ದಾರ ಶಿವಾನಂದ ಬಬಲಿ, ಎಸ್ ಡಿ ಎಂ ಸಿ ಅಧ್ಯಕ್ಷ ಬಿಚ್ಚು ಝಂಡೇಕುರುಬರ, ನನ್ನುಸಾಬ ಜಾತಗಾರ, ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಎಫ್ ಜಿ ಚಿನ್ನನ್ನವರ, ರಮೇಶ ಗದಾಡಿ, ಮರೆಪ್ಪ ಮರೆಪ್ಪಗೋಳ, ಗಫಾರ ಡಾಂಗೆ, ಅನ್ವರ ನದಾಫ, ಖ್ವಾಜಾ ಅತ್ತಾರ ಆಸೀನರಾಗಿದ್ದರು.

ಶಿಕ್ಷಕ ಅಶೋಕ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯ ಸುರೇಶ ಕೋಪರ್ಡೆ ಸ್ವಾಗತಿಸಿ ವಂದಿಸಿದರು.
ಶಾಲಾ ಪ್ರಾರಂಭೋತ್ಸವದಲ್ಲಿ ಶಿಕ್ಷಕ, ಶಿಕ್ಷಕಿಯರು, ಸಾರ್ವಜನಿಕರು, ಮಕ್ಕಳು ಪಾಲಕರು ಸಂಭ್ರಮದಿಂದ ಪಾಲ್ಗೊಂಡರು

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group