ಬೆಳಗಾವಿ: ನಾಡಿನ ಹಿರಿಯ ಕವಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ವಿಭೂಷಿತ ಡಾ. ಜಿನದತ್ತ ದೇಸಾಯಿ ಯವರು ಚುಟುಕು ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಕೈಗೊಂಡಿರುವವರು. ಅವರು ಡಾ. ವಿನಾಯಕ ಕೃಷ್ಣ ಗೋಕಾಕ ರ ಪರಮಶಿಷ್ಯರಾಗಿದ್ದು ಜಿಲ್ಲಾ ನ್ಯಾಯಾಧೀಶರಾಗಿ ನಾಡಿನ ಹಲವು ಕಡೆ ಸೇವೆ ಸಲ್ಲಿಸಿ ವೃತ್ತಿಗೆ ಘನತೆ ತಂದುಕೊಟ್ಟವರು. ನಿವೃತ್ತಿಯ ನಂತರ ಚುಟುಕು, ದೀರ್ಘ ಕವಿತೆಗಳನ್ನು ಬರೆದು ಹತ್ತಾರು ಸಂಕಲನಗಳನ್ನು ರಸಿಕರಿಗೆ ನೀಡಿ ಜನಮನ ಗೆದ್ದವರು. ನೀಲಾಂಜನ,ಮಧುಶಾಲಿನಿ, ಮಾಗಿ ಮುಂತಾದ ಸಂಕಲನಗಳು ವಿದ್ವಾಂಸರ ಗಮನ ಸೆಳೆದಿವೆ.
ಜಿನದತ್ತ. ದೇಸಾಯಿ ಯವರ ಸಾಹಿತ್ಯ ಸೇವೆಯನ್ನು ಗುರುತಿಸಿ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಶ್ರವಣಬೆಳಗೊಳದಲ್ಲಿ ಜರುಗಿದ ಜೈನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದವು ಅರಸಿ ಬಂದಿವೆ. ಇದೀಗ ಸೋಂದಾ ಜೈನ ಮಠದ “ಅಕಲಂಕ ಶ್ರೀ” ಗೌರವಕ್ಕೆ ಆಯ್ಕೆಯಾಗಿದ್ದು ಇದೇ ತಿಂಗಳ ೧೩ರಂದು ಸೋಂದಾ ಜೈನ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕರು ತಮ್ಮ ಶ್ರೀಮಠದಿಂದ ಪ್ರದಾನ ಮಾಡಲಿದ್ದಾರೆ. ಕಳೆದ ವರ್ಷ ಪ್ರಾರಂಭವಾದ ಈ ಪ್ರಶಸ್ತಿಯು ಖ್ಯಾತ ವಿದ್ವಾಂಸ ಡಾ. ಹಂಪನಾ ಅವರಿಗೆ ಸಂದಾಯವಾಗಿತ್ತು.
೯೦ನೆಯ ವಯಸ್ಸಿನ ಅಂಚಿನಲ್ಲಿರುವ ಜಿನದತ್ತ ದೇಸಾಯಿ ಯವರ ಮನೆಯಲ್ಲಿ ರಾಷ್ಟ್ರಕೂಟ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಗಾರ್ಗಿ,ಶ್ರೀ ಸದ್ಗುರು ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸುಣಗಾರ ಹಾಗೂ ಸಾಹಿತಿ ಡಾ.ಪಿ.ಜಿ.ಕೆಂಪಣ್ಣವರ ಜೊತೆಯಾಗಿ ಸನ್ಮಾನಿಸಿ ಶುಭಕೋರಿದರು.