spot_img
spot_img

ರಾಜಗಾಂಭಿರ್ಯದ ಹೆಜ್ಜೆಗಳು…

Must Read

- Advertisement -

ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿರುವ ತಾಲೂಕಾ ಕೇಂದ್ರ ಹುಕ್ಕೇರಿಗೂ‌ ನನಗೂ‌ ಭಾವನಾತ್ಮಕವಾದ ಸಂಬಂಧ‌ ಇದೆ. ನನ್ನ ತಾಯಿಯೂರು ಇದೇ ಹುಕ್ಕೇರಿ ತಾಲೂಕಿನ ಯಮಕನಮರಡಿ.‌ ಸಹಜವಾಗಿಯೇ ಮಾತೃತ್ವದ ಪರಿಛಾಯೆಗೆ ನನ್ನ ಮನಸ್ಸು ಒಳಪಡುವದು ಅಚ್ಚರಿಯೇನಲ್ಲ. ಇದರ ಜೊತೆಗೆ ಹುಕ್ಕೇರಿಯಲ್ಲಿ ನೆಲೆಸಿರುವ ದೇಶಪಾಂಡೆ ಕುಟುಂಬದ ನಂಟು ಅಷ್ಟೇ ಆತ್ಮೀಯಪೂರ್ಣವಾಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಆ ಕುಟುಂಬದ ಧೀಮಂತ ವ್ಯಕ್ತಿತ್ವದ ನಿಷ್ಠುರ ಪತ್ರಿಕಾ ವರದಿಗಾರರಾಗಿದ್ದ ದಿ. ಪ್ರಕಾಶ ದೇಶಪಾಂಡೆ ಅವರ ಆತ್ಮೀಯತೆಗೆ ಒಳಗಾಗದವರಿಲ್ಲ. ಸಾಹಿತ್ಯ, ಸಂಸ್ಕೃತಿ, ಕಲೆಗಳ ಪೋಷಕರಾಗಿ ಸಜ್ಜನ ಮತ್ತು‌ ಪ್ರಾಮಾಣಿಕತೆಯ ಪ್ರತೀಕವಾಗಿದ್ದ ಪ್ರಕಾಶ ದಾದಾ ಅವರ ಮೂಲಕ ಪರಿಚಯವಾದವರು ಹುಕ್ಕೇರಿಯ ನಿವಾಸಿ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಲೀಲಾ ರಜಪೂತ ಅವರು.

      ಶ್ರೀಮತಿ ಲೀಲಾ ರಜಪೂತ…ಹೆಸರೇ ಹೇಳುವಂತೆ ಲೀಲಾಜಾಲವಾಗಿ ತಮ್ಮ ವಾಕ್ ಚಾತುರ್ಯದಿಂದ ಜನಮಾನಸದಲ್ಲಿ ಮನೆ ಮಾತಾಗಿರುವರು. ದಿಟ್ಟ ನಿಲುವಿಗೆ ಹೆಸರಾದ ರಜಪೂತ ಖಾಂದಾನ್ ನ ರಾಜಪೂತಾನಿ ಆಗಿಯೂ ತಮ್ಮದೇ ಆದ ವಿಶಿಷ್ಟ ನಡೆ‌ನುಡಿ, ಖದರ್ ನ ಮೂಲಕ ಮಹಿಳಾ ಸಬಲೀಕರಣದ ರಾಯಭಾರಿಯಾಗಿ ಮಿಂಚಿದವರು ಶ್ರೀಮತಿ ಲೀಲಾ ಅವರು. ತುಂಬು ಕುಟುಂಬದ ಹೊಣೆಗಾರಿಕೆ ಜೊತೆಗೆ ಮನಸಾರೆ ಒಪ್ಪಿ ಆಯ್ಕೆ ಮಾಡಿಕೊಂಡ ಬೋಧನಾ ವೃತ್ತಿಗೆ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸಿದ ಗುರುಮಾತೆ ಇವರು. ಲೀಲಾ ಅವರ ವೃತ್ತಿ ಬದುಕಿನ ಪುಟಗಳನ್ನು ತಿರುವಿ ಹಾಕಿ ನೋಡಿದಾಗ ನಮಗೆ ಕಾಣ ಸಿಗುವುದು ಕೇವಲ ಅಕ್ಷರವೆಂಬ ಹಸಿರು. ಗ್ರಾಮೀಣ ಮತ್ತು‌ ಗಡಿಭಾಗದ ಸಾವಿರಾರು‌ ಮಕ್ಕಳ ಅಕ್ಷರದ ಹಸಿವು ನಿಗಿಸಲು ತಮ್ಮನ್ನು ತಾವು ಶಿಕ್ಷಕ ವೃತ್ತಿಗೆ ಸಮರ್ಪಿಸಿಕೊಂಡ ಲೀಲಾ ಅವರ ಬೋಧನಾ ಸಾಮರ್ಥ್ಯ ಪ್ರಶಂಸನೀಯವಾಗಿದೆ. ಇವರ ಕಲಿಸುವಿಕೆಯ ಕುಶಲತೆಗೆ ತಲೆದೂಗದ ಮಕ್ಕಳಿಲ್ಲ ಎಂಬುದು ಅವರ ಸಹೋದ್ಯೋಗಿ ಶಿಕ್ಷಕ ವೃಂದ ಅಭಿಮಾನದಿಂದ ಹೇಳುವದಾಗಿದೆ. ಹೀಗೆ ಗುರುವಾಗಿ ಮಾತೃತ್ವದ ಭಾವದೊಂದಿಗೆ ಮಕ್ಕಳೊಂದಿಗೆ ಬೆರೆತು, ಒಡನಾಡಿ, ಕುಣಿದು, ನಲಿದು ಅವರೊಟ್ಟಿಗೆ ಮಕ್ಕಳಾಗಿಯೇ ಸಂಭ್ರಮಿಸಿದ ಲೀಲಾ ಅವರ ಈ ಗುಣಸ್ವಭಾವಕ್ಕೆ ಇಡೀ ಬೆಳಗಾವಿ ಜಿಲ್ಲೆಯ ಶಿಕ್ಷಣ ವ್ಯವಸ್ಥೆ ಹೆಮ್ಮೆ ಪಟ್ಟಿದೆ.

        ಶಿಕ್ಷಕ ವೃತ್ತಿಯನ್ನೇ ಅತಿ ಪವಿತ್ರವೆಂದು ಪರಿಭಾವಿಸುವ ಮೂಲಕ ತಮ್ಮೆಲ್ಲಾ ಕಷ್ಟಗಳನ್ನು ಶಾಲೆಗೆ ಹೋಗಿ ಮಕ್ಕಳನ್ನು ನೋಡುತ್ತಲೇ ಮರೆಯುತ್ತಿದ್ದ ರಜಪೂತ ಟೀಚರ್ ಅವರ ನಿಸ್ವಾರ್ಥ ಮನೋಭಾವಕ್ಕೆ ಶರಣು ಎನ್ನಲೇಬೇಕು. ದೇವಾಲಯಕ್ಕೆ ಹೋಗುವ ಅಗತ್ಯವಿಲ್ಲ ದೇವರಂತಿರುವ ಮಕ್ಕಳಿಗೆ ಬೋಧನೆ ಮಾಡಿದರೆ ಸಾಕು ಎಂಬ ನಂಬಿಕೆಯೊಂದಿಗೆ ಗುರುಸ್ಥಾನದ ಮೌಲ್ಯವನ್ನು ಹೆಚ್ಚಿಸಿದವರು. ಅನೇಕ ಶಿಷ್ಯೋತ್ತಮರಿಗೆ ಪಾಠದ ಜೊತೆಗೆ ಉತ್ತಮ ಆದರ್ಶ ಗುಣಗಳನ್ನು ತಿಳಿಸಿ, ದೇಶದ ಸತ್ಪ್ರಜೆಗಳಾಗಿ ರೂಪುಗೊಳ್ಳಲು ಕಾರಣವಾಗಿದ್ದಾರೆಂದು ಗುಣಗಾನ ಮಾಡುವ ಹಲವು ಪೋಷಕರ ಅಭಿಮಾನಕ್ಕೆ ಲೀಲಾ ಅವರು ಭಾಜನರಾಗಿರದ್ದಾರೆ.

- Advertisement -

      ಜಾಗತೀಕರಣದ ಪ್ರಭಾವ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆಯಲ್ಲಿ ಸೊರಗುತ್ತಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಲು ಲೀಲಾ ಅವರು ಶ್ರಮಿಸಿದ್ದಾರೆ. ಸಮಯ ಪ್ರಜ್ಞೆ, ಕಾರ್ಯಕ್ಷಮತೆ, ಕರ್ತವ್ಯ ನಿಷ್ಠೆಯ ಮೂಲಕ ಸರ್ಕಾರದ ಶಿಕ್ಷಣ ಇಲಾಖೆಯ ಮಾರ್ಗದರ್ಶಿಯಂತೆ ಹಗಲಿರುಳು ದುಡಿದು ಗ್ರಾಮೀಣ ಭಾಗದ ಕೆಲವು ಶಾಲೆಗಳನ್ನು ಉನ್ನತಿಕರಿಸಲು ವೈಯಕ್ತಿಕವಾಗಿ ಸಹಕರಿಸಿದ್ದಾರೆ. ಕರ್ತವ್ಯ ಅಂದರೆ ಕೇವಲ ಸಂಬಳಕ್ಕಾಗಿ ಅಲ್ಲ, ಸೇವೆ, ಬದ್ಧತೆ, ಕಳಕಳಿ, ವ್ರತ ಎಂಬಂತೆ ಅದನ್ನು ಸ್ವೀಕರಿಸಿ ಪ್ರಾಥಮಿಕ ಹಂತದ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಲೀಲಾ‌ ಗುರುಮಾತೆಯವರ ಸಾಧನೆ ಮೆಚ್ಚವಂತದ್ದಾಗಿದೆ. ಮಕ್ಕಳಲ್ಲಿ ಸ್ಪರ್ಧಾತ್ಮಕ ಪೂರಕ ವಾತಾವರಣ ನಿರ್ಮಿಸಿ ನಾಡಿಗೆ ಅಮೂಲ್ಯ ಮಾನವಸಂಪನ್ಮೂಲವನ್ನು ಕೊಡುಗೆಯಾಗಿ ನೀಡುವಲ್ಲಿ ಇವರ ಪಾತ್ರ ಹಿರಿದಾಗಿದೆ. ಲೀಲಾ ಟೀಚರ್ ಅವರಿಂದ ಗುಣಾತ್ಮಕ ಶಿಕ್ಷಣ, ಶಿಸ್ತುಬದ್ಧತೆಯ ದೀಕ್ಷೆ ಪಡೆದುಕೊಂಡ ಅನೇಕ ವಿದ್ಯಾರ್ಥಿಗಳು ಲೀಲಾ ಅವರನ್ನು ಮನಃಪೂರ್ವಕವಾಗಿ, ಅಂತಃಕರಣ, ಅಭಿಮಾನದಿಂದ ಗೌರವಿಸುವದನ್ನು ನೋಡುವುದು, ಕೇಳುವುದು ಒಂದು ವಿಶಿಷ್ಟ ಅನುಭಾವವೇ ಸರಿ. ಪಠ್ಯ ಶಿಕ್ಷಣದ ಜೊತೆಗೆ ಜೀವನ ಮೌಲ್ಯ ಮತ್ತು ಉತ್ತಮ ಸಂಸ್ಕಾರವನ್ನು ವಿಸ್ತರಿಸಿದ  ಕೀರ್ತಿ ಇವರಿಗೆ ಸಲ್ಲುತ್ತದೆ. ಮಾತು, ಸಹನೆ, ಯೋಜನೆ ಮನೆಗಿಂತಲೂ ಶಾಲೆ ಮತ್ತು ವಿದ್ಯಾರ್ಥಿಗಳ ಮೇಲಿನ ಅಪಾರ ಕಾಳಜಿ ಮತ್ತು ಸಮಾಜಮುಖಿ ಮನೋಭಾವದೊಂದಿಗಿನ ಅವರ ಮಾದರಿ ವ್ಯಕ್ತಿತ್ವ ಶಾಲೆ ಹಾಗೂ ಮಕ್ಕಳ ಅಭಿವೃದ್ಧಿಗೆ ಪ್ರೇರಣಾದಾಯಕವಾಗಿದೆ.

       ಶಿಕ್ಷಕ ವೃತ್ತಿಯ ಜೊತೆ ಜೊತೆಯಲ್ಲಿಯೇ ಸಾಹಿತ್ಯ, ಸಂಗೀತ, ಕಲೆ, ನೃತ್ಯ, ಗಾಯನ ಹೀಗೆ ಹಲವು ಆಯಾಮಗಳ ಮೂಲಕ ಒಡಲೊಳಗಿದ್ದ ಪ್ರತಿಭೆಯನ್ನು ಅನಾವರಣಗೊಳಿಸಿದ್ದು ಸಾಧನೆಯೇ ಸರಿ. ಅರವತ್ತರ ಹರೆಯದಲ್ಲು ತಮ್ಮ ಕವಿತ್ವದ ಮೂಲಕ ಇಪ್ಪತ್ತರ ತರುಣಿಯಾಗಿ ಕಂಗೊಳಿಸುವ ಲೀಲಾ ಅವರ ಸೃಜನಶೀಲತೆಗೆ ಸಾಕ್ಷಿ ಅವರ ಹಾಡುಗಾರಿಕೆ ಮತ್ತು ಕವಿತೆಗಳ ರಚನೆ. ಹಳೆಯ ಹಿಂದಿ, ಕನ್ನಡ ಸಿನಿಮಾ ಹಾಡುಗಳಿಗೆ ತಮ್ಮದೇ ಆದ ವಿಶಿಷ್ಟ ಕಂಠದಲ್ಲಿ ಪ್ರಸ್ತುತ ಪಡಿಸುವ ಕಲಾತ್ಮಕತೆ ವಿಭಿನ್ನವಾಗಿದೆ. ಸಾಹಿತ್ಯದ ಗೀಳು ಅಂಟಿಸಿಕೊಂಡು ಬದುಕಿನ ವಿವಿಧ ಮಜಲುಗಳನ್ನು, ಅನುಭವಗಳನ್ನು ಆಧಾರವಾಗಿರಿಸಿಕೊಂಡು ಹಲವು ಕವಿತೆಗಳನ್ನು ಬರೆದಿದ್ದಾರೆ. ಅವರು ಗೀಚಿದ ಕೆಲವು ಕವಿತೆಗಳಂತು ಓದುವಾಗ ಭಾವಪರವಶತೆಗೆ ಒಳಪಡಿಸುತ್ತವೆ. ಕವಿಯತ್ರಿಯಾಗಿ ಹಲವು ಸಮ್ಮೇಳನ, ಕವಿಗೋಷ್ಠಿಗಳಲ್ಲಿ ಕವನವಾಚನ ಮಾಡುವ ಮೂಲಕ ಕಾವ್ಯರಸಧಾರೆಯನ್ನು ಉಣಬಡಿಸಿದ್ದಾರೆ.

ಸುಖಿ ಕುಟುಂಬದ ಯಜಮಾನಿಯಾಗಿ, ಸೈನ್ಯಾಧಿಕಾರಿಯ ಪ್ರೀತಿಯ ಮಡದಿಯಾಗಿ, ಮಕ್ಕಳಿಗೆ ಅಕ್ಕರೆಯ ಅಮ್ಮನಾಗಿರುವ ಲೀಲಾ ಅವರು ಅತ್ಯುತ್ತಮ ಗೃಹಿಣಿಯೂ ಹೌದು. ಸ್ವಾಭಿಮಾನದ ಹೆಣ್ಣಾಗಿ ಕಷ್ಟಕಾರ್ಪಣ್ಯಗಳ ಮಧ್ಯೆಯೂ ಯಾರಿಗೂ ಕೈಚಾಚದ ಸಬಲೆಯಾಗಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಇವರು ರಜಪೂತ ಕುಟುಂಬದ ಅನ್ನಪೂರ್ಣೇಶ್ವರಿಯು ಆಗಿದ್ದಾರೆ. ಉತ್ತಮ ಬಾಂಧವ್ಯದ ಮೂಲಕ ವಸುದೈವ ಕುಟುಂಬ ಕಂ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಶ್ರೇಯ ಲೀಲಾ ಅವರಿಗೆ ಸಲ್ಲಬೇಕು.

- Advertisement -

ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತ ಮನೆ‌ ಮತ್ತು ಮನೆಗಳಲ್ಲಿಯ ಮನಗಳನ್ನು ಸಂಭಾಳಿಸುತ್ತ ವೃತ್ತಿಯಿಂದ ನಿನ್ನೆ ವಯೋನಿವೃತ್ತಿ ಹೊಂದಿರುವ ಲೀಲಾ ಅವರ ಮುಂದಿನ ಬದುಕು ಸುಖಮಯವಾಗಿರಲಿ. ರಾಜಗಾಂಭಿರ್ಯದ ನಡೆ ನುಡಿಯ ಮೂಲಕ ಸಮಾಜದಲ್ಲಿ ಇನ್ನಷ್ಟು ಉನ್ನತ ಸ್ಥಾನಮಾನಗಳನ್ನು ಗಳಿಸಿಕೊಳ್ಳುವತ್ತ ಅವರ ಹೆಜ್ಜೆಗಳು ಸಾಗಲಿ ಎಂದು ಶ್ರೀಮತಿ ಲೀಲಾ ರಜಪೂತ ಅವರ ಕಿರಿಯ ಮಿತ್ರನಾಗಿ ನಾನು ಶುಭ ಹಾರೈಸುತ್ತೇನೆ.


ರಾಘವೇಂದ್ರ ದೇಶಪಾಂಡೆ

ಹಂಪಿ, ವಿಜಯನಗರ

೦೧/೦೨/೨೦೨೪

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group