spot_img
spot_img

ಸಂವೇದನೆ; (ಪ್ರಾರ್ಥಿಸುವ ತುಟಿಗಳಿಗಿಂತ ನೀಡುವ ಕೈಗಳು ದೊಡ್ಡವು )

Must Read

- Advertisement -

ವೇದನೆ ಅಂದರೆ ಎಲ್ಲರಿಗೂ ಗೊತ್ತು. ಅದು ದೈಹಿಕವಿರಲಿ ಇಲ್ಲ ಮಾನಸಿಕ. ದೈಹಿಕ ವೇದನೆ ಅಪಘಾತ, ರೋಗ ಬಾಧೆಯಿಂದ, ಇನ್ನಿತರರ ಹೊಡೆತ, ಆಕ್ರಮಣದಿಂದ, ತಾನೇ ಬಿದ್ದು ಘಾಸಿ ಮಾಡಿಕೊಂಡು ಆದದ್ದು. ದೈಹಿಕ ವೇದನೆಯನ್ನು ಶುಶ್ರೂಷೆಯಿಂದ ಶಮನ ಮಾಡಿಕೊಳ್ಳಬಹುದು. ಆದರೆ ಕೆಲವೊಮ್ಮೆ ಸಾವಿನ ತನಕ ಅನುಭವಿಸಲು ಕೂಡಾ ಆಸ್ಪದ ಉಂಟು. ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ. What cannot be cured must be endured. ವಾಸಿ ಆಗದ ಕಾಯಿಲೆಯನ್ನು ಸಹಿಸಿಕೊಂಡು ಇರಬೇಕು.

ಆದರೆ ಮನೋವೇದನೆಯನ್ನು ಮಾತ್ರ ಸಹಿಸಿ, ನುಂಗಿ ಇರಬೇಕು. ಇಲ್ಲವೇ ಅದಕ್ಕೆ ಸೂಕ್ತ ಪ್ರತೀಕಾರ ಗೈದು ಲೆಕ್ಕತೀರಿಸಬಹುದು! ಅಂತಾದರೂ ಇದೆಲ್ಲ ಬೂದಿ ಮುಚ್ಚಿದ ಕೆಂಡದಂತೆ. ಪರಸ್ಪರ ವೈರತ್ವ ಮನದಲ್ಲಿ ಮನೆ ಮಾಡಿ ಮನಸಿನ ಶಾಂತಿ ಕಡದಲೂ ಬಹುದು.

ಆದರೆ ಇವೆರಡಕ್ಕೂ ಮೀರಿದ ಒಂದು ವೇದನೆ ಇದೆ. ಅದನ್ನು ಸಂವೇದನೆ ಎನ್ನುತ್ತೇವೆ. ಅಂದರೆ ಇತರರ ನೋವಿಗೆ ಸ್ಪಂದಿಸುವುದು. ಅವರ ಸ್ಥಾನದಲ್ಲಿ ನಾವಿದ್ದರೆ ಹೇಗೆ ಅವರ ನೋವನ್ನು, ಅದು ಶಾರೀರಿಕ ಇರಲಿ ಇಲ್ಲ ಮಾನಸಿಕ, ಅನುಭವಿಸುತ್ತಿದ್ದೆವು ಎಂಬುದೇ ಸಹತಾಪ ಇಲ್ಲವೇ ಸಂವೇದನೆ. ಒಂದು ರೀತಿಯಲ್ಲಿ “some ವೇದನೆ !”

- Advertisement -

ನಾವು ರಸ್ತೆ ಗುಂಟ ಸಾಗುವಾಗ ಅಕಸ್ಮಾತ್ ಒಂದು ಭೀಕರ ರಸ್ತೆ ಅಪಘಾತಕ್ಕೆ ಸಾಕ್ಷಿ ಆಗಬಹುದು. ಆ ಸಂದರ್ಭ ನೀವು ಹೇಗೆ ಪ್ರತಿಕ್ರಿಯೆಗೆ ಪಕ್ಕಾಗುತ್ತೀರಿ? ಮೊಬೈಲ್ನಲ್ಲಿ ಫೋಟೊ ತೆಗೆದು ವಾಟ್ಸಪ್ಪ್ ಮಾಡುವುದರಲ್ಲಿ ನಿರತ ರಾಗುತ್ತೀರೋ ಇಲ್ಲ ಆಂಬುಲೆನ್ಸ್ ಅಥವಾ ನಿಮ್ಮದೇ ವಾಹನದಲ್ಲಿ ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಹತ್ತಿರದ ಚಿಕಿತ್ಸಾಲಯಕ್ಕೆ ಸಾಗಿಸಲು ಪ್ರಯತ್ನ ಮಾಡುತ್ತೀರಾ?

ಬಡವನಿರಲಿ ಇಲ್ಲ ಶ್ರೀಮಂತ. ಮನಸ್ಸಿನ, ಹೃದಯದ ವೈಶಾಲ್ಯ ಮುಖ್ಯವಾಗುತ್ತದೆ.

ಇನ್ನೊಂದು ನಿದರ್ಶನ ಇಲ್ಲಿ ಸಮಂಜಸವಾಗಬಹುದು.

- Advertisement -

ಒಬ್ಬ ಹೆಸಾರಾಂತ ವೈದ್ಯ ವಿದೇಶದಲ್ಲಿ ಅದೊಂದು ಸೆಮಿನಾರಿಗೆ ಹೋಗಲು ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದ. ಅಷ್ಟರಲ್ಲೇ ವಿಮಾನ ಆಗಮಿಸಿ ಆತ ಒಳಗಡೆ ತೆರಳಿ ತನ್ನ ಆಸನದಲ್ಲಿ ಕುಳಿತ. ಅಂತೂ ವಿಮಾನ ಹಾರಿತು ಮೇಲಕ್ಕೆ. ಆದರೆ ಕೆಲವೇ ನಿಮಿಷಗಳಲ್ಲಿ ಸುರಿಯಿತು ಕುಂಭದ್ರೋಣ ಮಳೆ ಮತ್ತು ಚಂಡ ಮಾರುತ. ಪೈಲಟ್ ವಿಮಾನ ಹಾರಾಟ ಅಪಾಯಕರ ಎಂದು ತೀರ್ಮಾನಿಸಿ ಮುಂದಿನ ಬೇರೆ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಿ ಪ್ರಯಾಣಿಕರಲ್ಲಿ ಮನವಿ ಮಾಡಿದ “ಹವಾಮಾನ ಸುಧಾರಣೆ ಆದ ಬಳಿಕವೇ ಉಡ್ಡಾಣ”. ನಮ್ಮ ವೈದ್ಯರಿಗೆ ಅಂತೂ ಗಲಿಬಿಲಿ. ಮೂರು ತಾಸಿನಲ್ಲಿ ಅವರಿಗೆ ತನ್ನ ನಿಶ್ಚಿತ ಸ್ಥಳಕ್ಕೆ ತಲುಪುವ ಹಪಾಹಪಿ. ಆದರೆ ಹೇಗೆ ತಾನೇ ಸಾಧ್ಯ?ಅವರ ಸಹಪ್ರಯಾಣಿಕ ವೈದ್ಯರಿಗೆ ಒಂದು ಸಲಹೆ ನೀಡಿದ. ಅದೆಂದರೆ ಟ್ಯಾಕ್ಸಿ ಮಾಡಿ ಮೂರೇ ತಾಸಲ್ಲಿ ಅವರ ಗುರಿಸೇರಬಹುದು ಎಂಬುದಾಗಿ. ಅವರು ಹಾಗೆಯೇ ಒಂದು ಟ್ಯಾಕ್ಸಿ ಗೊತ್ತು ಮಾಡಿ ತಮ್ಮ ಪಯಣ ಮುಂದುವರೆಸಿದರು. ಮತ್ತೆ ಅವರಿಗೆ ಭಾರೀ ಮಳೆ ಎದುರಾಗಿ ರಸ್ತೆಯಲ್ಲಿ ಗುಡ್ಡ ಕುಸಿದು ಪಯಣಕ್ಕೆ ಅಡಚಣೆ ಆಯಿತು. ಇನ್ನು ಹೇಗಿದ್ದರೂ ತನಗೆ ಸೆಮಿನಾರ್ ನಲ್ಲಿ ಭಾಗವಹಿಸುವುದು ಕಷ್ಟ ಎಂದು ಬಗೆದು ಕಾರಿನಿಂದ ಕೆಳಗಿಳಿದು ಅಲ್ಲೆಲ್ಲಾದರೂ ಆಸರೆ ಇದೆಯೋ ಅಂತ ನೋಡಿದರೆ ಒಂದು ಹಳೆಯ ಮುರುಕಲು ಮನೆ ಕಂಡಿತು.ಆತ ಅಲ್ಲಿಗೆ ತೆರಳಿ ಬಾಗಿಲು ತಟ್ಟಿದ. ಓರ್ವ ಮುದುಕಿ ಮುಗುಳ್ನಗುತ್ತಾ ಒಳಗೆ ಬರಲು ಆಮಂತ್ರಿಸಿದಳು. ಅತಿಥಿಗೆ ಒಳ್ಳೆಯ ಮಜ್ಜಿಗೆಯನ್ನು ಕುಡಿಯ ಕೊಟ್ಟು ಕೆಲವು ಹಣ್ಣುಗಳನ್ನು ತಿನ್ನಲು ಕೊಟ್ಟಳು. ಆತನಿಗೆ ಸೆಮಿನಾರ್ ಮರೆತು ಅಜ್ಜಿಯ ಸತ್ಕಾರದ ರೀತಿ ಮೆಚ್ಚುಗೆ ಆಯಿತು. ಹಾಗೆಯೇ ಮಂಚದಲ್ಲಿ ಮಲಗಿದ ಸಣ್ಣ ಹುಡುಗನತ್ತ ಗಮನ ಹೋಯಿತು. ಆತ ಅಜ್ಜಿಯ ಬಳಿ ಕೇಳಿದಾಗ ಅವಳೆ0ದಳು ” ಆತ ನನ್ನ ಮೊಮ್ಮಗ. ಅವನ ಹೆತ್ತವರು ಗತಿಸಿ ಹೋದ ಕಾರಣ ಆತನಿಗೆ ನನ್ನದೇ ಆರೈಕೆ. ಅವನಿಗೆ ಅದೇನೋ ವಾಸಿ ಆಗದ ಕಾಯಿಲೆ. ನಗರದಲ್ಲಿ ಯಾರೋ ಗೋವಿಂದ ಭಟ್ಟ ಡಾಕ್ಟ್ರು ಇದ್ದಾರಂತೆ. ಅವರು ಶುಶ್ರೂಷೆ ಮಾಡಿದರೆ ಸರಿ ಹೋಗುತ್ತೆ ಎಂದು ನನಗೆ ಮಾಹಿತಿ ನೀಡಿದ್ದರು. ಆದರೆ ನನ್ನ ಬಳಿ ಅಷ್ಟೆಲ್ಲ ದುಡ್ಡು ಇಲ್ಲ. ಮತ್ತೆ ಅವರಲ್ಲಿ ಹೋದರೆ ಅವರು ಕೂಡಲೇ ಚಿಕಿತ್ಸೆ ಮಾಡುತ್ತಾರೋ ಎಂಬುದು ಗೊತ್ತಿಲ್ಲ. ನನಗೆ ಎಷ್ಟು ಹಣಕಾಸು ಜೋಡಿಸಿ ಒಯ್ಯಬೇಕೆಂದು ಗೊತ್ತಿಲ್ಲ.

ಅನ್ನುವಾಗ ವೈದ್ಯರು ತಾನೇ ಗೋವಿಂದ ಭಟ್ಟ ಡಾಕ್ಟ್ರು ಎಂದು ಹೇಳಿದರು! ಇದನ್ನು ಕೇಳಿದ ಆ ಮುದುಕಿ ತನ್ನ ಮೊಮ್ಮಗನನ್ನು ಹೇಗಾದರೂ ಚಿಕಿತ್ಸೆ ಮಾಡಿ ಇತರ ಮಕ್ಕಳಂತೆ ಕುಣಿದು ಕುಪ್ಪಳಿಸುವಂತೆ ಮಾಡಿದರೆ ದೇವರು ನಿಮಗೆ ಖಂಡಿತ ಒಳ್ಳೆಯದನ್ನು ದಯಪಾಲಿಸುತ್ತಾನೆ ಎಂದು ಒ0ದೇ ಉಸಿರಲ್ಲಿ ಹೇಳಿದಳು. ಆಗ ಆ ವೈದ್ಯರು ನುಡಿದರು: “ನೋಡಮ್ಮ ನಿನ್ನ ಪ್ರಾರ್ಥನೆ ಫಲಿಸಲು ನನ್ನನ್ನು ದೇವರು ಸ್ವತಃ ಏನಕೇನ ಪ್ರಕಾರೇಣ ನಿನ್ನ ಮನೆಗೆ ಕರೆ ತಂದರು. ನಿನ್ನ ನಿಸ್ವಾರ್ಥ ಭಕ್ತಿಗೆ ದೇವರು ಖಂಡಿತಾ ಒಲಿಯುತ್ತಾನೆ.

ನೀನು ನಾಡಿದ್ದು ಮಂಗಳೂರು ನಗರದ ನನ್ನ ಆಸ್ಪತ್ರೆಗೆ ಬಾ. ನನ್ನ ವಿಳಾಸದ ಕಾರ್ಡ್ ತಗೋ. ನಿನಗೆ ಕರೆತರಲು ನಾನು ಆ ದಿನ ಟ್ಯಾಕ್ಸಿ ಕಳಿಸಿಕೊಡುವೆ”.

ಬಳಿಕ ಗಾಳಿ ಮಳೆ ಶಮನಗೊಂಡು ಡಾಕ್ಟ್ರು ತಾವು ಬಂದ ಕಾರಿನಲ್ಲೇ ಹಿಂದಿರುಗಿದರು.

ಆ ಬಳಿಕ ಡಾಕ್ಟ್ರು ಹೇಳಿದ ದಿನ ತನ್ನ ಮೊಮ್ಮಗನನ್ನು ಕರೆದುಕೊಂಡು ಕಾರಿನಲ್ಲಿ ಆಸ್ಪತ್ರೆಗೆ ತೆರಳಿದಳು.

ಕೊನೆಗೆ ಚಿಕ್ಕಾಸಿನ ವೆಚ್ಚ ಇಲ್ಲದೇ ಮಗುವಿಗೆ ಚಿಕಿತ್ಸೆ ಲಭಿಸಿ ಮಗು ಗುಣವಾಗಿ ಅಜ್ಜಿಯ ಜತೆ ಊರಿಗೆ ಹಿಂದಿರುಗಿತು. ಹಾಗಿದ್ದರೆ ಸಹತಾಪ, ಸಂವೇದನೆ ಅಂದರೆ ನೋವಾದವನಿಗೆ ನಾವು ಮಾಡುವ ಬಾಯುಪಚಾರ ಮಾತ್ರ ಅಲ್ಲ. ಅದು ಮತ್ತೊಬ್ಬರ ಕಣ್ಣಿನಿಂದ ನೋಡುವುದು, ಮತ್ತೊಬ್ಬರ ಕಿವಿಯಾಗಿ ಕೇಳುವುದು, ಮತ್ತೊಬ್ಬರ ಹೃದಯ ಬಡಿತ ನಮ್ಮ ಹೃದಯದ ಬಡಿತವಾಗಿಸುವುದು. ಆಂಗ್ಲ ಭಾಷೆಯಲ್ಲಿ ನುಡಿದಂತೆ “Stepping into the other’s shoes”. ನಮ್ಮ ಕೈಲಾದ ಸೇವೆ ವೆಚ್ಚವಿಲ್ಲದೆ ಕೂಡಾ ಮಾಡಲು ಸಾಧ್ಯ. ಅದು ಕಷ್ಟದಲ್ಲಿ ಇರುವ ವ್ಯಕ್ತಿಗೆ ಸಾಂತ್ವನಮಾಡುವುದೂ ಸೇರಿದಂತೆ. ನಮಗೆ ದೇವರು ಖರ್ಚಿಗೆ ಸ್ವಲ್ಪ ಹೆಚ್ಚೇ ಕೊಡಮಾಡಿದರೆ ಅದರಲ್ಲಿ ಒಂದಿಷ್ಟು

“ನ ಮಮ” ಅನ್ನುತ್ತ ದಾನಪಾತ್ರರಿಗೆ ಕೈ ಎತ್ತಿ ಕೊಡುವುದು ಅಪೇಕ್ಷಣೀಯ. ಅದು ಸಲ್ಲಬೇಕಾದಲ್ಲಿ ಸಂದರೆ ನಮಗೂ ತೃಪ್ತಿ, ಸಿಕ್ಕವನಿಗೂ. ಆದರೆ ಕೈ ಎತ್ತಿ ಕೊಡುವ ಉದಾರತೆ ಶ್ರೀಮಂತರಲ್ಲಿ ಮತ್ತು ಬಡವರಲ್ಲಿ ಒಂದೇ ರೀತಿ ಇರಬೇಕಿಲ್ಲ. ನವಕೋಟಿ ನಾರಾಯಣ ಹೇಗೆ ಪುರಂದರದಾಸನಾದ ಎನ್ನುವುದು ಎಲ್ಲರಿಗೂ ಗೊತ್ತು. ಅದಕ್ಕೆ ಹೇಳಿದ್ದು ಕೊಟ್ಟು ಕೆಟ್ಟವರಿಲ್ಲ. ಕೊಟ್ಟಷ್ಟೂ ನಮಗೆ ಬಡ್ಡಿ ಸಹಿತ ಹಿಂದೆ ಬರುತ್ತದೆ ಎನ್ನುವುದು ನಿಚ್ಚಳ.

ಯಾರೂ ಲೆಕ್ಕ ಇಡುವ ಅಗತ್ಯವಿಲ್ಲ. ದೇವರು ನಿಮ್ಮ ಖಾತೆಗೆ ಜಮಾ ಮಾಡುತ್ತಾನೆ ಎನ್ನುವುದನ್ನು ಮರೆಯಬೇಡಿ.

ಪರರ ಕಷ್ಟಕ್ಕೆ ಧನ ಇದ್ದೇ ಸ್ಪ0ದಿಸ ಬೇಕಿಲ್ಲ. ಅದು ಶುಶ್ರೂಷೆ ಮೂಲಕ, ನಡೆಯಲಾಗದ ಮುದುಕನಿಗೆ/ ಕುರುಡನಿಗೆ ರಸ್ತೆ ದಾಟಿಸುವುದು ಕೂಡಾ ಸಂವೇದನೆಯ ಕಾರ್ಯ. ಈ ಲೇಖಕನ ಪರಿಚಯದ ಒಬ್ಬರು ತಮ್ಮ ಮನೆಯಿಂದ ಸುಮಾರು 4 – 5 ಕಿ. ಮೀ. ದೂರದ ವೃದ್ಧಾಶ್ರಮ ಒ0ದಕ್ಕೆ ಎರಡು ತಿಂಗಳಿಗೊಮ್ಮೆ ಹೋಗಿ ಅಲ್ಲಿರುವ ವಯಸ್ಸಾದ ಹಲವರೊಂದಿಗೆ ಒಂದೆರಡು ಗಂಟೆಗಳ ಕಾಲ ಮಾತನಾಡಿ ಬರುತ್ತಾರೆ. ಇಲ್ಲಿ ಆಶ್ರಮವಾಸಿಗಳು ಇವರಿಂದ ಯಾವುದೇ ಧನಸಹಾಯವಾಗಲಿ ಇತರ ಕೆಲಸವನ್ನು ಅಪೇಕ್ಷಿಸುವುದಿಲ್ಲ. ಕೇವಲ ಅವರ ಜೊತೆ ಒಂದಷ್ಟು ಸಮಯ ಕಳೆಯಲು ಬರುತ್ತರಲ್ಲಾ ಎನ್ನುವುದೇ ಅವರಿಗೆ ಸಂತೋಷ. ಇದು ನಿಸ್ವಾರ್ಥ ಸಹತಾಪದ ಒಂದು ಜೀವಂತ ಉದಾಹರಣೆ.

ರಾಜಸ್ಥಾನದ ಜಯಪುರದಿಂದ ಕಾಲಿಲ್ಲದವರಿಗೆ ಬರಿಯ 2500 ರೂಪಾಯಿ ವೆಚ್ಚದಲ್ಲಿ ಕಾಲು ಪೂರೈಸುವ ಡಾ. ಪ್ರಮೋದ್ ಕರೆನ್ ಅವರದ್ದು ಕೂಡ ಇದೇ ರೀತಿಯ ಸ್ಪಂದನೆ. ಆದಷ್ಟೂ ಕಡಿಮೆ ವೆಚ್ಚದಲ್ಲಿ, ಸಾರ್ವಜನಿಕರ ಸಹಕಾರದಿಂದ, ಯಾವುದೇ ಲಾಭದ ಆಸೆ ಇಲ್ಲದೆ ಈ ಕೆಲಸ ದೇಶದ ತುಂಬೆಲ್ಲ ತನ್ನ ಪ್ರಭಾವ ಬೀರಿದೆ. ಜೈಪುರ್ ಕಾಲು ಅಂದರೆ ಎಲ್ಲರಿಗೂ ಗೊತ್ತು. ಅದೇ ರೀತಿಯಲ್ಲಿ ಮುಂಬೈ ಟಾಟಾ ಕ್ಯಾನ್ಸರ್ ಆಸ್ಪತ್ರೆಗೆ ದೇಶದಾದ್ಯಂತ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಹೆಚ್ಚಿನವರು ಕೂಳಿಗೂ ಗತಿ ಇಲ್ಲದವರು. ಇವರೊಂದಿಗೆ ಆಸರೆಯಾಗಿ ಅವರ ಸಂಬಂಧಿಕರು ಕೂಡ ಬರುತ್ತಾರೆ. ಇವರಿಗೆಲ್ಲ ಆಕಾಶವೇ ಸೂರು. ನಾರಾಯಣ ಸೇವಾ ಸಂಸ್ಥಾನದಿಂದ ಉಚಿತ ಊಟ ತಿಂಡಿ ಸರಬರಾಜು ಅವ್ಯಾಹತವಾಗಿ ಸಾಗುತ್ತದೆ. ಅದೇ ರೀತಿ ಚೆನ್ನೈ ನಗರದಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಊಟದ ಪೊಟ್ಟಣ ಹಂಚುವ ಒಬ್ಬ ಕಾಯಕ ಯೋಗಿ ಇದ್ದಾನೆ ನಾರಾಯಣ ಕೃಷ್ಣನ್. ಆತನ ಬಳಿ ಮಣಗಟ್ಟಲೆ ಹಣದ ಸಂಗ್ರಹವೇನಿಲ್ಲ. ಆದರೆ ಆತ ಸಾರ್ವಜನಿಕರಿಂದ, ಹೋಟೆಲುಗಳಿಂದ ಅನ್ನಾಹಾರದ ವ್ಯವಸ್ಥೆ ಮಾಡಿ ಪೊಟ್ಟಣ ತಯಾರಿಸಿ ನಿರ್ದಿಷ್ಟ ಸಮಯಕ್ಕೆ ಅದನ್ನು ನಿರ್ಗತಿಕರಿಗೆ ಅವರಿದ್ದಲ್ಲಿ ತಲುಪಿಸುತ್ತಾನೆ. ಆತನಿಗೆ ಅಮೆರಿಕಾದ CNN ವಾಹಿನಿ 2014ರಲ್ಲಿ ವರ್ಷದ 10 ವಿಶಿಷ್ಟ ಸಾಧಕರಲ್ಲಿ ಒಬ್ಬನೆಂದು ಆಯ್ಕೆ ಮಾಡಿತು.

ದೇಶದ ತುಂಬೆಲ್ಲ ನಿರ್ಗತಿಕರಿಗೆ, ಮಾನಸಿಕ ರೋಗಿಗಳಿಗೆ ಊಟ ತಿಂಡಿ, ಆವಾಸ ,ಚಿಕಿತ್ಸೆ ನೀಡುವ ಅದೆಷ್ಟೋ ಸಂಸ್ಥೆಗಳು ತೊಡಗಿದ್ದು ದೊಡ್ಡ ಮಟ್ಟದಲ್ಲಿ ಹಣವಿದ್ದೇನಲ್ಲ. ಕೈಯಲ್ಲಿ ಒಂದಿಷ್ಟು ಹಣ, ಜತೆಗೆ ಸಾರ್ವ ಜನಿಕ ದೇಣಿಗೆ ಇಂದಲೇ ಇವುಗಳ ಹುಟ್ಟು.

ಕನ್ಯಾನದ ಭಾರತ ಸೇವಾಶ್ರಮದ ಸ್ಥಾಪಕ ದಿವಂಗತ ಧೀರೇಂದ್ರನಾಥ ಭಟ್ಟಾಚಾರ್ಯ ಪೂರ್ವ ಬ0ಗಾಳದಿಂದ ಬ0ದ ನಿರಾಶ್ರಿತ. ಮಂಜೇಶ್ವರದಲ್ಲಿ ನೂರಾರು ಮಂದಿ ಮಾನಸಿಕರೋಗಿ ಅಲೆಮಾರಿಗಳಿಗೆ ಹೊಸ ಜೀವನ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಾರಂಭ ಮಾಡಿದ್ದು ಓರ್ವ ರಿಕ್ಷಾ ಚಾಲಕ ಸಹೋದರ ಜೋಸೆಫ್ ಕ್ರಾಸ್ತಾ. ಮಂಜೇಶ್ವರದ ಬಳಿ ದೈಗೊಳಿ ಎಂಬ ಕುಗ್ರಾಮದಲ್ಲಿ ಸಾಯಿಬಾಬಾ ಅವರ ಪ್ರೇರಣೆಯಿಂದ ಇಂತಹದ್ದೇ ಮಾನಸಿಕ ಕಾಯಿಲೆಯಿಂದ ಬಳಲಿ ಮನೆಮಠ ಬಿಟ್ಟು ಬೀದಿಬದಿಯ ತಿಪ್ಪೆಯಿಂದ ಕೊಳೆತ ತ್ಯಾಜ್ಯ ಆಹಾರ ತಿಂದು ಹೊಟ್ಟೆ ಹೊರೆಯುವ ಮ0ದಿಗೆ ಈಗ ಸಾಯಿನಿಕೇತನದ ಆಯುರ್ವೇದ ವೈದ್ಯ ದಂಪತಿ ಡಾ. ಉದಯಕುಮಾರ್ ಹಾಗೂ ಡಾ ಶಾರದಾ ದಂಪತಿ ತಮ್ಮ ಶಕ್ತಿ ಮೀರಿ ಚಿಕಿತ್ಸೆ ನೀಡುತ್ತಾ ಅವರಿಗೆಲ್ಲ ಸಾಮಾನ್ಯ ಜೀವನ ಸಾಗಿಸುವ ಮಹತ್ಕಾರ್ಯದಲ್ಲಿ ನಿರತರು. ಆದರೆ ಯಾವುದೇ ಸರಕಾರಿ ಅನುದಾನ ಸಂಸ್ಥೆಗೆ ಲಭಿಸುವುದಿಲ್ಲ. ಸಾರ್ವಜನಿಕರ ಬೆಂಬಲ ಸದಾ ಒಂದಲ್ಲ ಒಂದು ರೀತಿಯಲ್ಲಿ ಹರಿದು ಬರುತ್ತಿರುವುದು ಆ ವೈದ್ಯ ದ0ಪತಿಗಳ ನಿಸ್ವಾರ್ಥ ಪ್ರಾಮಾಣಿಕ ಸೇವೆಯನ್ನು ಗಮನಿಸಿ, ಗುರುತಿಸಿ ಮಾತ್ರ. ಇಂತಹ ಸಂಸ್ಥೆಗಳ ಖರ್ಚು ವೆಚ್ಚಕ್ಕೆ ಹಣ ಬೇಕು ನಿಜ. ಆದರೆ ಸಂವೇದನಾ ಶೀಲ ಮನಸ್ಸು ಇದೆಯಲ್ಲ ಅದಕ್ಕೆ ಸರಿಸಾಟಿ ಯಾವುದೂ ಇಲ್ಲ. ಇಂತಹ ಅನೇಕ ಸಂಸ್ಥೆಗಳು ದೇಶಾದ್ಯಂತ ಇರುವದಕ್ಕೆ ಕಾರಣ ಮಿಡಿಯುವ ಅಂತಃಕರಣ.

The Best way to live is to give without expectation.
The hands those help are better than the lips those pray .


(✍️ ಬಿ ನರಸಿಂಗ ರಾವ್, ಕಾಸರಗೋಡು)

- Advertisement -
- Advertisement -

Latest News

ಕವನ : ಹೀಗೇ ಒಮ್ಮೆ

ಹೀಗೇ ಒಮ್ಮೆ ____________ ಹೀಗೇ ಒಮ್ಮೆ ನಾನು ನೀನು ಅದೇ ಮರದ ನೆರಳಲಿ ಕುಳಿತು ಮಾತಾಡಬೇಕಿದೆ ನೆನಪಿಸಿಕೊಳ್ಳಬೇಕಿದೆ ಮತ್ತೆ ಹಳೆಯ ಕ್ಷಣಗಳ ಹಂಚಿಕೊಂಡ ಕಥೆ ಕವನ ಮಾತು ಚರ್ಚೆ ಸಂವಾದ ನಗೆ ಪ್ರೀತಿಯ ಸವಿಯ ಸವಿಯಬೇಕಿದೆ. ಆಗ ನಮ್ಮಿಬ್ಬರ ಮಧ್ಯೆ ಮೆರೆದ ಆದರ್ಶಗಳ ಮೆಲುಕು ಹಾಕಬೇಕಿದೆ ಅಂದು ಮಳೆಯಲ್ಲಿ ತಪ್ಪನೆ...
- Advertisement -

More Articles Like This

- Advertisement -
close
error: Content is protected !!
Join WhatsApp Group