ಹನ್ನೆರಡನೆಯ ಶತಮಾನದ ಕಲ್ಯಾಣ ನಾಡಿನ ಬಸವಾದಿ ಶರಣರು ಸಾರ್ವಕಾಲಿಕ ಸಮತೆ ಸಾರುವ ಕಾಯಕ ದಾಸೋಹ ತತ್ವಗಳ ಅಡಿಯ ಮೇಲೆ ಲಿಂಗಾಯತ ಎಂಬ ಹೊಸ ಧರ್ಮದ ವೈಚಾರಿಕ ಸಿದ್ಧಾಂತವನ್ನು ಜಗತ್ತಿಗೆ ಕೊಟ್ಟರು .
ಅಷ್ಟಾವರಣಗಳು -ತತ್ವಕ್ಕೆ ಸೀಮಿತವಾದ ಸಂಕೇತಗಳು.ಗುರು ಲಿಂಗ ಜಂಗಮ ರುದ್ರಾಕ್ಷಿ ವಿಭೂತಿ ಮಂತ್ರ ಪಾದೋದಕ ಪ್ರಸಾದ ಎಂಬ ಎಂಟು ಅವತರಣಿಕೆಗಳು ಭೌತಿಕ ವಸ್ತುಗಳಲ್ಲ ಪಂಚ ಮಹಾಭೂತಗಳ ಒಂದೊಂದು ತತ್ವ ಮಾತ್ರ.
ಇದನ್ನು ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿ
ಕಾಯದೊಳು ಗುರು ಲಿಂಗ ಜಂಗಮ. ದಾಯತವನರಿಯಲ್ಕೆ ಸುಲಭೋ ಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |ದಾಯದೋರಿ ಸಮಸ್ತ ಭಕ್ತ ನಿ ಕಾಯವನು ಪಾವನವ ಮಾಡಿದ ರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ|| ಚಾಮರಸ ( ಪ್ರಭು ಲಿಂಗ ಲೀಲೆ ).
ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.
ಸನಾತನದಲ್ಲಿ ಗುರು ಸರ್ವ ಶ್ರೇಷ್ಠ ಅವನಿಂದಲೇ ಮುಕ್ತಿ ದಾರಿ ತೋರುವ ನಿಜ ಗುರು ಹರನಿಗಿಂತಲೂ ಶ್ರೇಷ್ಠ ಇಂತಹ ಅನೇಕ ಕಲ್ಪನೆಗಳು ಬಸವಣ್ಣನವರು ಕಿತ್ತೊಗೆದು ,ದೀಪದಿಂದ ದೀಪ ಹಚ್ಚುವ ಪರಿಕಲ್ಪನೆ ಅಥವಾ ಗುರು ತನ್ನ ಕಾರ್ಯ ನಿರ್ವಹಿಸಿ ತಾನು ಶಿಷ್ಯನಲ್ಲಿ ಒಂದಾಗಿ ತಾನು ಗುರು ಆತ ಶಿಷ್ಯ ಎಂಬ ಬೇರೆ ಭಾವವನ್ನು ಸಂಪೂರ್ಣ ಕಳೆದು ಕೊಳ್ಳುತ್ತಾನೆ
ಶರಣರು ತಾನು ಮತ್ತು ಶಿವ ಒಂದು ಎಂದು ಸಾಧಿಸಿದ ಮೊದಲ ಪುರುಷರು.ಉಭಯ ಭಾವವನ್ನು ಎಲ್ಲಿಯೂ ಪ್ರತಿಪಾದಿಸದೆ ಅಂತಹ ಸಂದೇಹ ಗೊಂದಲಗಳನ್ನು ಕಿತ್ತು ಹಾಕಿದರು. ಮನುಷ್ಯ ತಾನು ತನ್ನ ಸುತ್ತಲಿನ ಜೀವ ಜಾಲದ ಚೈತನ್ಯವನ್ನು ಚಿತ್ಕಳೆಯನ್ನು ನಿರಾಕಾರದ ಶಿವನ ಪರಿಕಲ್ಪನೆಯನ್ನು ಸಾಕಾರ ಗೊಳಿಸಿ ,ಮತ್ತೆ ನಿರಾಕಾರದ ನಿರುಪಾಧಿಕ ತತ್ವದ ಆಧ್ಯಾತ್ಮಿಕ ಪಯಣಕ್ಕೆ ಕರೆದೊಯ್ಯುವುದೇ ಶರಣ ಮಾರ್ಗ.
ಜಂಗಮ ಪದ ಶರಣರು ಸಮಾಜವೆಂತಲೂ ತತ್ವ ನಿಷ್ಠ ಸಾಧಕರೆಂತಲೂ ಸಮಷ್ಟಿ ಎಂತಲೂ ಬಳಸಿ ಲಿಂಗವೇ ಜಂಗಮ ಎಂದೆನ್ನುತ್ತಾ ವ್ಯಕ್ತಿ ಸಮಷ್ಟಿಯ ಸಂಬಂಧಗಳನ್ನು ಗಟ್ಟಿಗೊಳಿಸಿದ್ದಾರೆ. ಬಸುರಿಗೆ ಮಾಡಿದ ಸುಖ ದುಃಖಗಳು ಶಿಶುವಿಗೆ ಮೂಲ ಎಂದು ಹೇಳಿ ಬಸುರಿ -ಇದು ಜಂಗಮ ಪರಿಕಲ್ಪನೆ ,ಶಿಶು ಭಕ್ತನಾಗುತ್ತಾನೆ .
ಜಗತ್ತಿನಲ್ಲಿ ಸಾಂಸ್ಥಿಕರಣವನ್ನು ಧಿಕ್ಕರಿಸಿ ಕಾವಿ ಕಾಷಾಯಾಂಬರವನ್ನು ಲಾಂಛನವನ್ನು ವೇಷ ಭೂಷಣವನ್ನು ತಿರಸ್ಕರಿಸಿದ ಶರಣರ ತತ್ವಗಳನ್ನು ಇಂದು ಬಹುತೇಕ ಮಠಾಧೀಶರು ಸಮಾಧಿಗೊಳಿಸಿ ತಮ್ಮ ತಮ್ಮ ವ್ಯಾಪಾರ ವಹಿವಾಟು ಮಾಡುತ್ತ್ತಾ ಮಠಗಳನ್ನು ಹಣ ಮಾಡುವ ಕೇಂದ್ರಗಳನ್ನಾಗಿ ಮಾಡಿದ್ದು ದುರಂತವೇ ಸರಿ.
ಹದಿನಾರನೆಯ ಶತಮಾನದಲ್ಲಿ ಶೈವೀಕರಣ ವೀರಶೈವೀಕರಣವು ಲಿಂಗಾಯತ ಸಾಹಿತ್ಯ ವಚನಗಳಲ್ಲಿ ಸೇರ್ಪಡೆಗೊಂಡು ಆಚರಣೆ ಜಪ ತಪ ಪೂಜೆ ಅರ್ಚನೆಗಳನ್ನು ವೃದ್ಧಿಸಿ ಲಿಂಗಾಯತ ತತ್ವಗಳನ್ನು ಸಂಪೂರ್ಣವೈದಿಕಗೊಳಿಸಿ ಸನಾತನ ವ್ಯವಸ್ಥೆಗೆ ಒತ್ತೆ ಇಟ್ಟರು ನಮ್ಮ ಕಾವಿ ಮತ್ತು ಶ್ವೇತ ವಸ್ತ್ರಧಾರಿಗಳು .
ಅಷ್ಟಾವರಣಗಳು ತತ್ವಗಳು -ಲಿಂಗವು ಅರಿವಿನ ಕುರುಹು ಅರಿವಿನೊಂದಿಗೆ ನಡೆಸುವ ಅನುಸಂಧಾನವೇ ಶಿವಯೋಗ. ಲಿಂಗ ಪೂಜೆಯಲ್ಲ.ಇದನ್ನೇ ನಿಜಗುಣ ಶಿವಯೋಗಿಗಳು
” ಮಾತು ಮನದಿಂದ ಅತ್ತತ್ತ ಮೀರಿದ ಸಾತಿಶಯ ನಿರುಪಡಿತ ಲಿಂಗವೇ ಜ್ಯೋತಿ ಬೆಳಗುತಿದೆ” ಎಂದಿದ್ದಾರೆ. ಅಂದರೆ ಲಿಂಗವು ಉಪಾದಿತ ವಸ್ತುವಲ್ಲ.
ಇದೆ ರೀತಿ ಮಂತ್ರವು ಕೂಡ ವ್ಯಕ್ತಿಗತವಾಗಿ ಮನಸ್ಸನ್ನು ಪ್ರಾಣ ದೇಹದೊಂದಿಗೆ ಸಮ್ಮಿಳನಗೊಳಿಸುವ ಉದ್ದೇಶದಿಂದ ಅಕ್ಷರ ಮೂಲಕ ವಾಯುಗುಣವನ್ನು ಭಕ್ತ ಅವಲಂಬಿಸುತ್ತಾನೆ. ಅಷ್ಟಾವರಣಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ಚರ್ಚಿಸಬೇಕು. ಮಂತ್ರವು ಬಸವಾಕ್ಷರವಾಗಿರಬೇಕೆಂದು ಸಿದ್ಧರ್ಮ ಶರಣರು ಹೇಳಿದಾಗ ಓಂ ನಮಃ ಶಿವಾಯ ಎಂಬುದು ಸರಿಯೇ ಎಂದು ಕೇಳುವುದು ಯಾವ ನ್ಯಾಯ ?
ಭಕ್ತರಲ್ಲಿ ಅನೇಕ ಸಂಶಯಗಳು ಉಂಟಾಗುತ್ತವೆ ನಮ್ಮ ಗುರುಗಳೆನಿಸಿಕೊಂಡವರು ತಪ್ಪು ಮಾರ್ಗವನ್ನು ತೋರಿದರು ಪಾಪ ಅವರ ಅಜ್ಞಾನ ಅಧ್ಯಯನದ ಕೊರತೆ.
ಲಿಂಗಾಯತ ಧರ್ಮದಲ್ಲಿ ಇಲ್ಲದ ದಾಸ್ಯತ್ವವನ್ನು ತಂದು ಭಕ್ತರನ್ನು ಗುಲಾಮರನ್ನಾಗಿ ಮಾಡಿದರು ಆಧುನಿಕ ಅಕ್ಕ ಮಾತೆ ಸ್ವಾಮಿ ಶರಣರು .
ಇದೆ ರೀತಿ ಪಂಚಾಚಾರಗಳನ್ನು ಅರಿತುಕೊಳ್ಳಬೇಕು. ಪಂಚಾಚಾರಗಳು ಸಿವಿಲ್ ಕೋಡ್ . ನಾಗರೀಕ ಸಮಾಜದ ನೀತಿ ಸಂಹಿತೆಗಳು. ಷಟಸ್ಥಲಗಳನ್ನು ಕೂಡ ಆತ್ಮ ವಿಕಾಸವನ್ನು ಹಂತ ಹಂತವಾಗಿ ಪಡೆಯುತ್ತ ಭಕ್ತನೇ ಶಿವನಾಗುವ ವಿಧಾನವನ್ನು ಹಾಕಿಕೊಟ್ಟಿದ್ದಾರೆ ಶರಣರು.
ಆದರೆ ನಮ್ಮ ಮಠಾಧೀಶರು ಸ್ವಾಮಿಗಳು ಅಕ್ಕನವರು ಜಾತ್ರೆ ಉತ್ಸವ ಹಬ್ಬಗಳನ್ನು ಮಾಡುತ್ತಾ ಜನರನ್ನು ಮೌಢ್ಯತೆಗೆ ತಳ್ಳುತ್ತಾರೆ ಇದು ದುರಂತವೋ ದುರ್ದೈವವೋ ?
ಶರಣ ತತ್ವವು ಇಂದು ಸೋಲಲು ಅದರ ಜೊತೆಗೆ ಪರ್ಯಾಯವಾಗಿ ಬೆಳೆದ ಸಾಂಸ್ಥಿಕರಣದ ಸಂಪ್ರದಾಯಗಳೇ ಕಾರಣ.
ಬಸವ ಭಕ್ತರಲ್ಲಿ ನನ್ನ ವಿನಂತಿ ವಚನಗಳಲ್ಲಿ ಎಲ್ಲವೂ ದೊರೆಯುತ್ತದೆ.ಶ್ರೇಣೀಕೃತವಲ್ಲದ ಮುಕ್ತ ಸಮಾಜದ ಪರಿಕಲ್ಪನೆ ನೀಡಿ .ಆಧ್ಯಾತ್ಮಿಕ ಸಾಮಾಜಿಕ ಆರ್ಥಿಕ ನೈತಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸಮಗ್ರ ಬದಲಾವಣೆ ಬಯಸಿದರು ಶರಣರು. ನೋವಿನ ಸಂಗಾತಿಯಂದರೆ ಬಸವಾದಿ ಶರಣರು ವಿರೋಧಿಸಿದ ಮೌಢ್ಯತೆಗಳನ್ನು ನಾವಿಂದು ಮಠಗಳ ಆಶ್ರಮ ಪ್ರತಿಷ್ಠಾನಗಳ ಮೂಲಕ ಮೌಲ್ಯಗಳೆಂದು ಮೆರೆಯುತ್ತಿದ್ದು ಬಸವ ತತ್ವಕ್ಕೆ ಅಪಾರವಾದ ದ್ರೋಹ ಮಾಡುತ್ತಿದ್ದೇವೆ. ಇನ್ನಾದರೂ ವಚನಗಳ ಪಚನ ಮಾಡಿಕೊಂಡು ಅಧ್ಯಯನಶೀಲತೆಗೆ ಆಧ್ಯತೆ ಕೊಡುವುದು ನಮ್ಮ ಕರ್ತವ್ಯವೆಂದು ಭಾವಿಸೋಣ. ಬನ್ನಿ ಬಸವಣ್ಣನವರು ಕಟ್ಟಿದ ಕಲ್ಯಾಣವನ್ನು ಮತ್ತೆ ಸ್ಥಾಪಿಸೋಣ ಕಾವಿ ಖಾದಿ ಹೊರೆತು ಪಡಿಸಿ.
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ