spot_img
spot_img

ಶ್ರಾವಣ ಮಾಸ

Must Read

spot_img
- Advertisement -

ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕೃತಿಯ ದೇಶ. ಇಲ್ಲಿ ತನ್ನದೇ ಆದ ಧಾರ್ಮಿಕ ಆಚರಣೆಗಳು ವೃತ ನೇಮಾದಿಗಳು ಜರುಗುವ ಮೂಲಕ ದೈವೀ ಆರಾಧನೆ ಜರುಗುತ್ತಿದ್ದು ಇಲ್ಲಿನ ಧರ್ಮಕ್ಕೆ ಮೂರು ನೆಲೆಗಳು

  1. ಮೂಲಭೂತ ತತ್ವಗಳ ಅಥವ ಸಿದ್ದಾಂತದ ನೆಲೆ
  2. ಆ ತತ್ವಗಳನ್ನು ಜನಸಾಮಾನ್ಯಕ್ಕೆ ನಿರೂಪಿಸುವ ಪೌರಾಣಿಕ ನೆಲೆ.
  3. ಆ ತತ್ವ ಸಿದ್ದಿಗಾಗಿ ಕಲ್ಪ ಅಂದರೆ ವಿಧಿ=ನಿಷೇಧಗಳನ್ನೊಳಗೊಂಡ ನಿತ್ಯ ನೈಮಿತ್ತಿಕ ಕರ್ಮಗಳ ಶ್ರದ್ದಾಪೂರ್ಣ ಆಚರಣೆ.

ವ್ರತಗಳು ಉತ್ಸವಗಳು ಎಂಬ ಉಭಯ ಅಂಗಗಳನ್ನೊಳಗೊಂಡ ಹಿಂದೂ ಹಬ್ಬಗಳ ಮತ್ತು ಪವಿತ್ರ ದಿನಗಳ ಆಚರಣೆಯನ್ನು ವಿಧಿಸಿರುವುದು ಮಾನವ ಚೇತನ ಅನಿತ್ಯವಾದ ಲೌಕಿಕ ಸ್ತರದಿಂದ ನಿತ್ಯವಾದ ಪಾರಮಾರ್ಥಿಕ ಸ್ತರಕ್ಕೆ ಏರುವುದಕ್ಕಾಗಿಯೇ.

ನಮ್ಮ ಪ್ರಾಚೀನ ಮಹರ್ಷಿಗಳು ನಮ್ಮ ಪ್ರತಿಯೊಂದು ಹಬ್ಬಕ್ಕೂ ಖಗೋಳಿಕ ನಿತ್ಯ ಸತ್ಯಗಳ ಪ್ರೇರಕಾಂಶಗಳನ್ನು ಸಮ್ಮಿಲಿತಗೊಳಿಸಿದ್ದಾರೆ ಇದರಿಂದ ಚರಾಚರ ಜಗತ್ತಿನ ಸೂತ್ರದ ಕೊಂಡಿಯನ್ನು ಸುಂದರವಾಗಿ ಹೆಣೆದಿದ್ದಾರೆ ಎನ್ನಬಹುದು.

- Advertisement -

ಕನ್ನಡದ ಕಾವ್ಯಾನಂದರು ತಮ್ಮ ವಚನೋದ್ಯಾನದಲ್ಲಿ ಹೀಗೆ ಹೇಳಿರುವರು.

ತಂತಿಗಳಲ್ಲಿ ಸುನಾದವಿದೆ

ಸೋರೆ ದಂಡಿಗಳಿಗೆ ಬಿಗಿದಾಗ ಮಾತ್ರ

- Advertisement -

ಚರ್ಮದಲ್ಲಿ ಸುನಾದವಿದೆ

ವಾದ್ಯಗಳ ಮೈಗಳಿಗೆ ಬಿಗಿದಾಗ ಮಾತ್ರ

ಬಿಲ್ಲಿನಲ್ಲಿ ಬಾಣ ಬಿಡುವ ಶಕ್ತಿಯಿದೆ

ನಾರಿನಿಂದ ಬಿಗಿದಾಗ ಮಾತ್ರ

ನನ್ನಲ್ಲಿಯೂ ನಿನ್ನರಿವ ಶಕ್ತಿಯಿದೆ

ನಿನ್ನಡಿಗಳಿಗೆ ನನ್ನ ಬಿಗಿದಾಗ ಮಾತ್ರ

ಹೀಗೆ ಪರಮಾತ್ಮನ ಪಾದಾರವಿಂದಗಳಲ್ಲಿ ನಮ್ಮನ್ನು ನಾವು ಬಿಗಿದುಕೊಂಡು ಆರಾಧಿಸಲು ಹಬ್ಬ ಹರಿದಿನಗಳೂ ಅತ್ಯಂತ ಸಹಾಯಕವಾಗಿವೆ ಎನ್ನಬಹುದು. ಅದರಲ್ಲೂ ಶ್ರಾವಣ ಮಾಸ ಪ್ರಾರಂಭವಾಯಿತೆಂದರೆ ಸಾಲು ಸಾಲು ಹಬ್ಬ ಹರಿದಿನಗಳನ್ನು ತನ್ನೊಡಲೊಳಗೆ ಅಡಗಿಸಿಕೊಂಡು ಬಿಚ್ಚಿಡುತ್ತಾ ಇಡೀ ಮಸ ವಿಶಿಷ್ಟಪೂರ್ಣ ಆಚರಣೆಯೊಂದಿಗೆ ಸಾಗುವುದು.

ಕಾರಹುಣ್ಣಿಮೆ ಹಬ್ಬಗಳ ಕರಕೊಂಡು ಬಂತು ಹೋಳಿ ಹುಣ್ಣಿಮೆ ಹೊಯ್ದುಕೊಂಡು ಹೋಯ್ತು ಎಂಬ ಹಿರಿಯರ ನುಡಿ ಎಷ್ಟು ಸತ್ಯ. ವೈಶಾಖದ ಬಿಸಿಲ ಬೇಗೆಯಿಂದ ತಂಪಿನೆಡೆಗೆ ಮೋಡಗಳನ್ನು ನೋಡುತ್ತಾ ಮಳೆಯಾದೊಡನೆ ಬೀಜ ಬಿತ್ತುವ ತವಕದಿಂದ ರೈತ ಇರುವಾಗ ಮಳೆಮೋಡಗಳ ಮೂಲಕ ಬರುವುದು ಶ್ರಾವಣ ಮಾಸ, ಇದನ್ನು ವರಕವಿ ಬೇಂದ್ರೆ 

ಶ್ರಾವಣಾ ಬಂತು ಕಾಡಿಗೆ ಬಂತು ನಾಡಿಗೆ

ಬಂತು ಬೀಡಿಗೆ; ಶ್ರಾವಣಾ ಬಂತು

ಕಡಲಿಗೆ ಬಂತು ಶ್ರಾವಣಾ ಕುಣಿದಾಂಗ ರಾವಣಾ

ಕುಣಿದಾವ ಗಾಳಿ ಬೈರವನ ರೂಪ ತಾಳಿ

ಎಂದು ಹೇಳುವ ಮೂಲಕ ಶ್ರಾವಣದ ವೈಭವವನ್ನು ಹಾಡಿ ಹೊಗಳಿದ್ದಾರೆ. ಶ್ರಾವಣ ಮಾಸ ಎಂದರೆ ಏನೋ ಒಂದು ರೀತಿಯ ರೋಮಾಂಚನ ಉಂಟಾಗುತ್ತದೆ. ಆಸ್ತಿಕರ ಪಾಲಿನ ಆನಂದ ಚೇತನ ಸ್ವರೂಪವಾಗಿದೆ ಈ ಮಾಸ. ಈ ಮಾಸದಲ್ಲಿ ಪ್ರತಿದಿನವೂ ಪುಣ್ಯದಿನ, ವ್ರತ, ಪೂಜೆ, ನಾಡಹಬ್ಬ, ಪುಣ್ಯ ಆರಾಧನೆ ಏನಾದರೂ ನಿತ್ಯ ನಿರಂತರವಾಗಿರುತ್ತವೆ, ಏನೇ ಮಾಡಿದರೂ ಶ್ರಾವಣ ಮಾಸದಲ್ಲಿ ಮಾಡು ಒಳ್ಳೆಯದಾಗುತ್ತದೆ ಎಂಬ ರೂಢಿಯುಂಟು.ಈ ಮಾಸ ಪೂರ್ತಿ ಮನೆಯ ಮುಂಭಾಗಿಲಿನಲ್ಲಿ ತೋರಣ ಹಸಿರಾಗಿರುತ್ತದೆ. ದೇವರ ಮಂಟಪದಲ್ಲಿ ನಂದಾದೀಪ ಬೆಳಗುತ್ತಿರುತ್ತದೆ. ಮುತ್ತೈದೆಯರು ಮಂಗಳ ರೂಪಿಣಿಯರಾಗಿ ಕಂಗೊಳಿಸುತ್ತ ಹಬ್ಬವನ್ನು ಶೃದ್ಧೆ, ಭಕ್ತಿ, ಉತ್ಸಾಹದಿಂದ ಆಚರಿಸುತ್ತಾರೆ.

ಸರ್ವ ಹಬ್ಬಗಳ ಸಮನ್ವಯ ಸಂಯೋಗ ಮಾಸ ಶ್ರಾವಣ ಮಾಸ ಆಷಾಢ ಮಾಸದಲ್ಲಿ ಸಂಪ್ರದಾಯದ ಪ್ರಕಾರ ದೂರ ಆಗಿರುವ ದಂಪತಿಗಳು ಒಂದಾಗುತ್ತಾರೆ, ಅತ್ತೆ=ಸೊಸೆ, ಮಾವ=ಅಳಿಯ ಸೇರುವ ಮಾಸವಿದು. ಹಾಗಾದರೆ ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು ಹೇಗಿವೆ ನೋಡಿ ಕಾರಹುಣ್ಣಿಮೆ ಮುಗಿದು ರೈತಾಪಿಗಳು ಸಡಗರದಿಂದ ಪೂಜಿಸುವ ಮಣ್ಣೆತ್ತಿನ ಅಮವಾಸೆ ಮಣ್ಣಿನಿಂದ ಎತ್ತುಗಳನ್ನು ಮಾಡಿ ಅದರ ಮುಂದೆ ಒಂದು ಚಿಕ್ಕ ಗ್ವಾದಲಿ (ಮೇವು-ನೀರು ಹಾಕಲು) ಮಾಡಿ ಪೂಜಿಸುವ ಹಬ್ಬ ಮಣ್ಣೆತ್ತಿನ ಅಮವಾಸೆ.

ಮಣ್ಣನ್ನೇ ನಂಬಿ ಮಣ್ಣಿಂದ ಬದುಕೇನ

ಮಣ್ಣೆನಗೆ ಮುಂದೆ ಹೊನ್ನ ಅಣ್ಣಯ್ಯ

ಮಣ್ಣೇ ಲೋಕದಲಿ ಬೆಲೆಯಾದ್ದು

ಎಂದು ಹುಟ್ಟಿನಿಂದ ಚಟ್ಟದವರೆಗೂ ಮಣ್ಣ ಜೊತೆಗೆ ನಮ್ಮ ಬದುಕಿನಲ್ಲಿ ಆ ಮಣ್ಣಿನಿಂದ ಆರಂಭವಾಗುವ ಮಣ್ಣೆತ್ತು ಅಮವಾಸೆಯ ನಂತರ ಶ್ರಾವಣ ಮಾಸದಲ್ಲಿ ಬರುವ ಪ್ರತಿಯೊಂದು ಹಬ್ಬಗಳೂ ಮಣ್ಣಿನ ನಂಟನ್ನು ಹೊಂದಿವೆ. ಮಣ್ಣಿಂದ ಗೌರಿಯ ಮಾಡುವುದಾಗಲಿ. ನಾಗ ಮೂರ್ತಿ ಪೂಜಿಸುವುದಾಗಲಿ. ಗುಳ್ಳವನ ಪೂಜೆಯೊಳಗೊಂಡು ಭಾದ್ರಪದ ಮಾಸದವರೆಗೂ ಅಂದರೆ ಗಣಪತಿ ಮೂರ್ತಿ ಕೂಡ ಮೊದಲಿನಿಂದಲೂ ಮಣ್ಣಿನಿಂದ ಮಾಡುವ ಮೂಲಕ ಮಣ್ಣ ಪೂಜಿಸುವ ಬದುಕು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮೈದಳೆದಿದೆ.

  1. ಪ್ರತಿ ಸೋಮವಾರ ವಿಶೇಷ ಶ್ರಾವಣ ಸೋಮವಾರ ಆಚರಣೆ
  2. ಮಂಗಳಗೌರಿ ವ್ರತ
  3. ನಾಗಚತುರ್ಥಿ/ಪಂಚಮಿ
  4. ಬಸವ ಪಂಚಮಿ
  5. ಶುಕ್ರಗೌರಿ ಪೂಜ
  6. ವೈಷ್ಣವ ಶ್ರಾವಣ ಶನಿವಾರದ ಪೂಜೆ
  7. ಅಂಗಾರಕ ಜಯಂತಿ
  8. ಶ್ರೀ ವರಮಹಾಲಕ್ಷ್ಮೀ ವ್ರತ
  9. ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ
  10. ಗಾಯತ್ರಿ ಆರಾಧನೆ
  11. ಉಪಾಕರ್ಮ
  12. ಶ್ರೀ ಕೃಷ್ಣ ಜನ್ಮಾಷ್ಟಮಿ
  13. ರಕ್ಷಾಬಂಧನ
  14. ಸಿರಿಯಾಳ ಷಷ್ಠಿ

ಹೀಗೆ ಎಲ್ಲ ಹಿಂದೂ ಹಬ್ಬಗಳು ಆಚರಿಸಲ್ಪಡುವುದು ಈ ಶ್ರಾವಣ ಮಾಸದಲ್ಲಿಯೇ. ಅಬ್ಬ. ಎಷ್ಟೊಂದು ಹಬ್ಬಗಳು ಬೇರೆ ಯಾವ ಮಾಸದಲ್ಲಿಯೂ ಸಹ ಶ್ರಾವಣದ ಸಂಭ್ರಮ ಮತ್ತು ಇಷ್ಟೊಂದು ಹಬ್ಬಗಳ ಆಚರಣೆ ಇರುವುದಿಲ್ಲ. 

ಶ್ರಾವಣಾ ಬಂತು ಘಟ್ಟಕ್ಕೆ ರಾಜ್ಯ ಪಟ್ಟಕ್ಕೆ

ಬಾನ ಮಟ್ಟಕ್ಕೆ

ರ‍್ಯಾವ ಮುಗಿಲು ರವಿ ಕಾಣೆನು ಹಾಡೆ ಹಗಲು

ಎನ್ನುವ ವರಕವಿ ಬೇಂದ್ರೆ ಗುಡುಗು ಮಿಂಚು, ಮೇಘಾವಳಿ ಭಾರತದ ಭೂಮಿಕೆಯ ಮೇಲೆ ಆಗುವ ಅಗಾಧವನ್ನು ಕುರಿತು ಈ ಕವಿತೆಯಲ್ಲಿ ಚಿತ್ರಿಸಿರುವರು. ಇಲ್ಲಿ ಜೀವರಾಶಿಗಳ ಜೀವನ ಚೈತನ್ಯವಾಗಿದೆ ಭಾರತದ ವಿವಿಧ ಪ್ರದೇಶಗಳ ಜನರು ಇದನ್ನು ಆಯಾ ಭಾಗದಲ್ಲಿ ತಮ್ಮದೇ ರೀತಿಯಲ್ಲಿ ಆಚರಿಸುತ್ತಾರೆ. ಹಿಮಾಚಲ ಪ್ರದೇಶದಲ್ಲಿರುವ “ದಖರೈವ”ಎಂಬ ಹೆಸರಿಂದ ಕಾಳಿಕಾಮಾತೆಯನ್ನು ಪೂಜಿಸುವ ಮೂಲಕ ಆಚರಿಸಿದರೆ ಪಂಜಾಬಿನವರು “ತಿಯಾನ್ ಬಾಗಿ”ಎಂದು ಉತ್ತರಪ್ರದೇಶದಲ್ಲಿ”ಸಾವನ್. ಕಾಶ್ಮೀರದಲ್ಲಿ “ರುಥಾ”ನೃತ್ಯವನ್ನು ಮಾಡುತ್ತ ಆಚರಿಸುತ್ತಾರೆ.

ಬೆಟಗೇರಿ ಕೃಷ್ಣಶರ್ಮರ ನಲ್ವಾಡುಗಳಲ್ಲಿ “ಶ್ರಾವಣ” ಕುರಿತು ವಿಭಿನ್ನ ಶೈಲಿಯಲ್ಲಿ ವರ್ಣಿಸಲಾಗಿದೆ. ಇದನ್ನು ಗೀತರೂಪಕದಲ್ಲಿ ಬಿಂಬಿಸಲಾಗಿದ್ದು ಆಷಾಢಮಾಸದ ಕೊನೆಯ ದಿನ ರಾತ್ರಿಯ ಕೊನೆಯ ಯಾಮದ ಆರ್ಧ ಭಾಗ ಕಳೆಯುವದರೊಂದಿಗೆ ಮುಂಜಾವಿನ ಕೋಳಿಗಳ ಕೂಗಿನೊಂದಿಗೆ ಆರಂಭವಾಗುವ 

ಏಳು ಶ್ರಾವಣ ರಾಜ

ಏಳು ಭೂವನದೋಜ

ಏಳು ಜೀವನತೇಜ ಕಾಲಸುರಭೂಜ

ಪಡುಹಗಲು ನಿನಗೆಂದೆ ಪಡೆದಿಹುದು ಜಡಿಮೋಡ

ನಡುಬಾನಿಗವನು ಎಳೆತರುವರಾರೋ

ಎನ್ನುವ ಮೂಲಕ ಆರಂಭವಾಗುವ ಶ್ರಾವಣಗೀತೆ ಶ್ರಾವಣದ ಆಗಮನ ಕೃಷಿಕರ ಮನದಲ್ಲಿ, ನದಿದೇವತೆಗಳ ಮನದಲ್ಲಿ, ವಿವಿಧ ಹೂವುಗಳಲ್ಲಿ, ಹೊಸದಾಗಿ ವಿವಾಹವಾದ ಯುವತಿಯು ತನ್ನ ಗೆಳತಿಯೊಡನೆ ತವರು ಮನೆಯ ಹಂಬಲದ ಇಚ್ಛೆ ವ್ಯಕ್ತಪಡಿಸುವ ರೀತಿ, ತನ್ನ ಸಹೋದರಿಯನ್ನು ತವರಿಗೆ ಕರೆತರಲು ಬರುವ ಅಣ್ಣನ ಭಾವನೆಗಳನ್ನು, ನಿರೂಪಕನೊಡನೆ ಶ್ರಾವಣದ ಸಂವಾದರೂಪದಲ್ಲಿ ಮೂಡಿ ಬಂದಿಹುದು ಇದರಲ್ಲಿನ ಪಂಚಮಿ ಹಬ್ಬಾ ಉಳಿತವ್ವ ನಾಕ ದಿನಾ, ಅಣ್ಣ ಬರಲಿಲ್ಲ ಯಾಕೋ ಕರೀಲಾಕ ಎಂಬ ಹಾಡು ಇಂದಿಗೂ ಗ್ರಾಮೀಣ ಜನರ ನಾಲಿಗೆಯಲ್ಲಿ ನಲಿದಾಡುತ್ತಿದೆ.

ಶ್ರಾವಣ ಮಾಸದ ಸೋಮವಾರ:

ಶ್ರಾವಣ ಮಾಸ ಆರಂಭವಾಯಿತೆಂದರೆ ವಿಶೇಷವಾಗಿ ಶಿವನ ಆಲಯಗಳಲ್ಲಿ ಭಕ್ತಿ ಪೂರ್ವಕವಾಗಿ ಬಿಲ್ವಪತ್ತಿಯನ್ನು ಶಿವಭಕ್ತರು ಅರ್ಪಿಸುವ ಮೂಲಕ ಪ್ರತಿ ಸೋಮವಾರ ಓಂ ನಮಃ ಶಿವಾಯ ಎನ್ನುವ ಮಂತ್ರೋಚ್ಛಾರಣೆಯೊಂದಿಗೆ ಶ್ರಾವಣ ಸೋಮವಾರ ಆಚರಿಸುವುದು ರೂಢಿಯಲ್ಲುಂಟು, ಅಷ್ಟೇ ಅಲ್ಲದೇ ಕೊನೆಯ ಸೋಮವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅನ್ನಸಂತರ್ಪಣೆ ಜರುಗಿಸುವ ಸತ್ಸಂಪ್ರದಾಯ ಉತ್ತರಕರ್ನಾಟಕ ಭಾಗದಲ್ಲಿದೆ. ಅಷ್ಟೇ ಅಲ್ಲ ಸಿಹಿ ತಿಂಡಿತಿನಿಸುಗಳನ್ನು ಕಟ್ಟಿಕೊಂಡು ಕೆರೆಯ ದಂಡೆಗೋ, ನದಿ ದಡಕ್ಕೋ ದೇವಾಲಯಕ್ಕೋ ಹೋಗಿ ಅಲ್ಲಿ ಎಲ್ಲರೂ ಆಡುತ್ತ ಹರಟುತ್ತ ಸಂತೋಷ ಅನುಭವಿಸುವ “ಅಲ್ಲೀಕೇರಿ” ಎಂಬ ಹೆಸರಿನ ಕಾರ್ಯಕ್ರಮವೂ ಶ್ರಾವಣ ಸೋಮವಾರದಂದು ಜರಗುತ್ತದೆ.

ಪುರಾಣ ಕಾಲದಲ್ಲಿ ಸಮುದ್ರ ಮಂಥನವಾದ ಸಂದರ್ಭದಲ್ಲಿ ಅಮೃತಕ್ಕಾಗಿ ದೇವತೆಗಳು ಮತ್ತು ದಾನವರು ಕಾದಾಡುತ್ತಿದ್ದರು. ಆಗ ೧೪ ಬೇರೆ ಬೇರೆ ರತ್ನಗಳು ಮೇಲೆದ್ದಯ ಬರುತ್ತವೆ. ಹದಿಮೂರು ರತ್ನಗಳನ್ನು ದೇವತೆಗಳು ಮತ್ತು ದಾನವರು ಹಂಚಿಕೊಳ್ಳುತ್ತಾರೆ.ಉಳಿದ ಒಂದು ರತ್ನವೇ ಹಾಲಾಹಲ. ಇಡೀ ಪೃಥ್ವಿಯನ್ನು ನಾಶಮಾಡುವ ಶಕ್ತಿಯಿರುವ ಹಾಲಾಹಲವನ್ನು ಶಿವನು ಕುಡಿಯುತ್ತಾನೆ. ಆಗ ಅದನ್ನು ಕಂಡ ಪಾರ್ವತಿ ಅದು ಶರೀರವನ್ನು ಪ್ರವೇಶಿಸುವ ಮೊದಲೇ ಶಿವನ ಗಂಟಲನ್ನು ಒತ್ತಿ ಹಿಡಿಯುತ್ತಾಳೆ. ಕಾರಣ ಆಗ ಆ ವಿಷವು ಶಿವನ ಗಂಟಲಲ್ಲಿ ಉಳಿದುಕೊಳ್ಳುತ್ತದೆ. ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗುತ್ತದೆ.ಅದಕ್ಕೆ ಶಿವನನ್ನು ನೀಲಕಂಠ ಎಂದು ಕರೆದಿರುವರು. ಜಗತ್ತಿನ ಉಳಿವಿಗಾಗಿ ಪರಶಿವನು ವಿಷವನ್ನು ಕುಡಿದದ್ದು ಶ್ರಾವಣ ಮಾಸದಲ್ಲಿ ಆದ ಕಾರಣ ಈ ಮಾಸದಲ್ಲಿ ಶಿವನ ಆರಾಧನೆಯನ್ನು ಪ್ರತಿ ಸೋಮವಾರ ವೈಶಿಷ್ಟö್ಯ ಪೂರ್ಣವಾಗಿ ೧೦೮ ಬಿಲ್ವಪತ್ರೆಗಳನ್ನು “ಓಂ.ನಮಃ ಶಿವಾಯ” ಎಂದು ಹೇಳುತ್ತ ಏರಿಸುವರು.ಅಷ್ಟೇ ಅಲ್ಲದೇ ಶಿವ ದೇವಾಲಯಗಳಲ್ಲಿ ಲಕ್ಷ ಬಿಲ್ವೋತ್ಸವ ಕಾರ್ಯಕ್ರಮಗಳನ್ನು ಕೂಡ ಸಂಘಟಿಸಿರುವರು.

ಮಂಗಳ ಗೌರಿ ವ್ರತ:

ಶ್ರಾವಣ ಮಾಸದ ಮೊದಲ ಮಂಗಳವಾರದ ಪುಣ್ಯ ದಿನದಿಂದ ನಾಲ್ಕು ಮಂಗಳವಾರ ಮಂಗಳಗೌರಿ ವ್ರತನ್ನು ಮಾಡುತ್ತಾರೆ ಹೊಸದಾಗಿ ಮದುವೆ ಆಗಿರುವ ಹೆಣ್ಣು ಮಕ್ಕಳು ತವರು ಮನೆಗೆ ಬಂದು ಶ್ರದ್ದೆ ಮತ್ತು ಭಕ್ತಿಯಿಂದ ಮಂಗಳಗೌರಿ ವ್ರತವನ್ನು ಮಾಡುವ ಮೂಲಕ ಮಾಂಗಲ್ಯಭಾಗ್ಯ, ಸಂಸಾರದ ಕ್ಷೇಮ, ಪತಿಯ ಆಯುಸ್ಸು, ಆರೋಗ್ಯ, ಐಶ್ವರ್ಯ, ಕೀರ್ತಿಯು ವೃದ್ದಿಸಲೆಂದು ಸಂಕಲ್ಪದಿಂದ ಈ ವ್ರತ ಮಾಡಿ ಪ್ರತಿ ವಾರವೂ ಸಹ ಮುತ್ತೈದೆಯರಿಗೆ ಬಾಗಿನ ಕೊಡುತ್ತಾರೆ. ಕೊನೆಯ ಮಂಗಳವಾರ ವ್ರತ ಮುಗಿದ ಮೇಲೆ ಮುತ್ತೈದೆಯರಿಗೆ ಭೋಜನದ ವ್ಯವಸ್ಥೆ ಮಾಡಿ ಪುನಃ ಬಾಗಿನ ಮತ್ತು ದಕ್ಷಿಣೆ ಕೊಡುವ ಮೂಲಕ ಆಚರಿಸುತ್ತಾರೆ.

ನಾಗ ಪಂಚಮಿ:

ನಾಗಾರಾಧನೆ ನಮ್ಮ ದೇಶದ ಚಾರಿತ್ರಿಕ ಇತಿಹಾಸದಲ್ಲಿ ಅಡಕವಾಗಿದೆ.ಮಹಾಭಾರತದಲ್ಲಿ ನಾಗ ಜನಾಂಗದ ಕಥೆ ಬರುತ್ತದೆ.ಅರ್ಜುನ ಉಲೂಪಿ ಎಂಬ ನಾಗಕನ್ಯೆಯನ್ನು ಮದುವೆಯಾಗಿದ್ದ ಮುಂದೆ ಕಾರಣಾಂತರಗಳಿಂದ ಅವರಲ್ಲಿ ವೈಷಮ್ಯ ಬರಲು ನಾಗರಾಜ ಪರೀಕ್ಷಿತನನ್ನು ಕಚ್ಚುತ್ತದೆ. ಪರೀಕ್ಷಿತನ ಮಗ ಜನಮೇಜಯನು ತನ್ನ ತಂದೆಯನ್ನು ಕೊಂದ ನಾಗ ಸರ್ಪದ ಜನಾಂಗವನ್ನೇ ನಾಶ ಮಾಡಲು ಸರ್ಪಯಾಗ ಮಾಡುತ್ತಾನೆ. ಆಗ ಆಸ್ತಿಕ ಋಷಿಯ ಮಧ್ಯಸ್ಥಿಕೆಯಿಂದಾಗಿ ಜನಮೇಜಯನ ಕೋಪ ಇಳಿಯಿತು.

ಈ ರೀತಿ ಮಹಾಭಾರತದ ಕಥೆಯಿಂದ ಮುಂದೆ ನಾಗ ಕುಲವನ್ನು ಪೂಜಿಸುವ ಪರಂಪರೆ ಬಂದಿದ್ದು.ಸರ್ಪವು ಶಿವನ ಕೊರಳಲ್ಲಿ ಆಭರಣವಾಗಿಯೂ.ವಿಷ್ಣುವಿನ ಹಾಸಿಗೆಯಾಗಿಯೂ. ಗಣಪತಿಯ ಹೊಟ್ಟೆಗೆ ಹಗ್ಗವಾಗಿಯೂ. ದೇವಾನುದೇವತೆಗಳಿಗೂ ಅನುಕೂಲಕರವಾಗುವ ಜೊತೆಗೆ ಮಾನವ ಜನಾಂಗಕ್ಕೂ ಪೂಜ್ಯನೀಯವಾದುದು.

ಪಂಚಮಿ ಹಬ್ಬ ಬಂದೀತವ್ವ

ಅಣ್ಣ ಬರಲಿಲ್ಲ ಕರೀಲಾಕ

ಎಂದು ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ತಮ್ಮ ಸಹೋದರ ಪಂಚಮಿ ಹಬ್ಬಕ್ಕೆ ಕರೆದುಕೊಂಡು ಹೋಗಲು ಬರುವಿಕೆಯ ನಿರೀಕ್ಷೆಯನ್ನು ನಮ್ಮ ಜನಪದರು ಬಲು ಸೊಗಸಾಗಿ ಹೇಳಿರುವರು.ಅಷ್ಟೇ ಅಲ್ಲ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಜೋಕಾಲಿ ಜೀಕುತ್ತ

ಜೀಕೋಣ ಬನ್ನಿ ಜೋಕಾಲಿ

ಜೀವನದ ಅಮರ ಜೋಕಾಲಿ

ಜೀಕೋಣ,ಜೀಕೋಣ,ಜೀಕೋಣ ಬನ್ನಿ ಜೋಕಾಲಿ

ಎಂದು ಲಯಬದ್ದವಾಗಿ ಹಾಡುತ್ತ ಮನೆಯಲ್ಲಿ ಮಾಡಿಟ್ಟ ಉಂಡಿ ಅಳ್ಳಿಟ್ಟು.ತಂಬಿಟ್ಟು,ಕೊಬ್ಬರಿ ಮೆಲ್ಲುತ್ತ ಗಂಡನ ಮನೆಯ ಘಳಿಗೆಗಳನ್ನು ತಮ್ಮ ಗೆಳತಿಯರ ಮುಂದೆ ಹೇಳಿಕೊಳ್ಳಲು ಕೂಡ ಈ ಹಬ್ಬ ಒಂದು ನೆಪವಾಗಿಯೂ ಉಳಿದು ಬಂದಿದೆ. ಪಂಚಮಿ ಆಚರಣೆಯ ಹಿಂದೆಯೂ ಎರಡು ಕಥೆಗಳಿವೆ.

ಮೊದಲನೆಯ ಕಥೆಯು ಓರ್ವ ರೈತನದಾಗಿದ್ದು.ಆತ ಹೊಲದಲ್ಲಿ ರೆಂಟೆ ಹೊಡೆಯುವಾಗ ಆತನ ರೆಂಟೆಯ ಕುಳಕ್ಕೆ ಸಿಕ್ಕಿ ಹೊಲದಲ್ಲಿ ವಾಸವಿದ್ದ ಹಾವಿನ ಮರಿಗಳು ಸಾವನ್ನಪ್ಪುತ್ತವೆ. ನೋಡಲಾರದೇ ಅಚಾತರ‍್ಯವಾಗಿ ನಡೆದ ಈ ಘಟನೆ ಕಂಡು ಕೆರಳಿದ ಸರ್ಪ ಆತನ ಮನೆಯವರನ್ನೆಲ್ಲ ಕಚ್ಚಿ ಸಾಯಿಸುತ್ತದೆ.

ನಂತರ ಉಳಿದ ಅವನ ಮಗಳನ್ನು ಹುಡುಕಿಕೊಂಡು ಆಕೆಯ ಗಂಡನ ಮನೆಗೆ ಹೋಗುತ್ತದೆ.ಅಲ್ಲಿ ಅವಳು ಮಣ್ಣಿನ ನಾಗಪ್ಪನನ್ನು ಪೂಜಿಸಿ ಹಾಲೆರೆಯುತ್ತಿರುತ್ತಾಳೆ. ಅವಳನ್ನು ಕಂಡು ಹಾವಿನ ಸಿಟ್ಟು ತಣ್ಣಗಾಗಿ ನಡೆದ ಘಟನೆಗೆ ಪಶ್ಚಾತ್ತಾಪ ಪಟ್ಟು ಮತ್ತೆ ರೈತನನ್ನು ಅವನ ಮಕ್ಕಳನ್ನು ಬದುಕಿಸುತ್ತದೆ,ಅಂದಿನಿಂದ ಪ್ರತಿವರ್ಷ ರೈತ ಜನರು ಹೊಲದಲ್ಲಿಯ ಮಣ್ಣನ್ನು ತಂದು ಹಾವಿನ ಆಕಾರ ಮಾಡಿ ಹಾಲೆರೆಯುವ ಮೂಲಕ ನಾಗ ಪಂಚಮಿ ಆಚರಣೆಗೆ ಬಂದಿತೆಂಬುದು ಐತಿಹ್ಯ.

ಇನ್ನೊಂದು ಕಥೆಯಲ್ಲಿ ಓರ್ವ ಸಹೋದರ ತನ್ನ ತಂಗಿಯನ್ನು ಶ್ರೀಮಂತರ ಮನೆಗೆ ಕೊಟ್ಟಿರುತ್ತಾನೆ.ಅವನ ಕೆಟ್ಟ ದಾರಿದ್ರ್ಯದಿಂದ ಅವನಲ್ಲಿ ಕೆಟ್ಟ ಬುಧ್ಧಿ ಬೆಳೆದಿರುತ್ತದೆ. ತನ್ನ ತಂಗಿಯ ಮೇಲೆ ಅವಳ ಗಂಡನ ಮನೆಯವರು ಹಾಕಿರುವ ಬೆಳ್ಳಿ-ಬಂಗಾರದ ಒಡವೆಗಳನ್ನು ಕಂಡು ಅವುಗಳನ್ನು ದೋಚಲು ಸಂಚು ರೂಪಿಸುತ್ತಾನೆ. ತನ್ನ ತಂಗಿಯನ್ನು ನಾಗ ಪಂಚಮಿಗೆ ಕರೆಯಲು ಚಕ್ಕಡಿ ಹೂಡಿಕೊಂಡು ಅವಳ ಗಂಡನ ಮನೆಗೆ ಬರುತ್ತಾನೆ. ತಂಗಿಯನ್ನು ಕರೆದುಕೊಂಡು ದಾರಿಯಲ್ಲಿ ಬರುವಾಗ ಮಾರ್ಗಮಧ್ಯದಲ್ಲಿ ಚಕ್ಕಡಿ ನಿಲ್ಲಿಸಿ ಅವಳನ್ನು ಕಲ್ಲಿನಿಂದ ಜಜ್ಜಿ ಕೊಲ್ಲಲೆಂದು ಗಿಡದ ಬುಡದಲ್ಲಿಯ ಕಲ್ಲನ್ನು ತಗೆದುಕೊಳ್ಳಲು ಹೋಗುತ್ತಾನೆ ಆ ಕಲ್ಲಿನ ಬುಡದಲ್ಲಿದ್ದ ನಾಗರ ಹಾವು ಅವನನ್ನು ಕಚ್ಚುತ್ತದೆ.ಗಾಬರಿಯಿಂದ ಚೀರುತ್ತಾನೆ. ಅದನ್ನು ಕಂಡ ಅವನ ತಂಗಿ ಹಾವನ್ನು ಕಂಡು ಮಾರ್ಗ ಮಧ್ಯದಲ್ಲಿ ಯಾರೂ ಸಹಾಯಕ್ಕೆ ಬರದಿರುವುದನ್ನು ಕಂಡು ನಾಗ ದೇವನಲ್ಲಿ ಪ್ರಾರ್ಥನೆ ಮಾಡಿ ತನ್ನ ಸಹೋದರನನ್ನು ಬದುಕಿಲು ಬೇಡಿಕೊಳ್ಳುತ್ತಾಳೆ. ಅವಳ ಭಕ್ತಿ ಕಂಡ ನಾಗದೇವ ಅವನನ್ನು ಬದುಕಿಸುತ್ತಾನೆ. ಹೀಗೆ ಸಹೋದರತೆಯ ವಾತ್ಸಲ್ಯದ ನಾಗ ಪಂಚಮಿ ಇಂದಿಗೂ ಸಹೋದರರು ತಮ್ಮ ಸಹೋದರಿಯರನ್ನು ಕರೆದುಕೊಂಡು ಬಂದು ಹಬ್ಬ ಆಚರಿಸುವುದು ರೂಢಿಯಲ್ಲಿದೆ ಎಂಬುದನ್ನು ಜನಪದ ಕಥೆಗಳು ಈ ಹಬ್ಬದ ಮಹತ್ವವನ್ನು ಸಾರುತ್ತವೆ.

ನಾಗ ಚತುರ್ಥಿ:

ಪುರಾಣ ಕಾವ್ಯ ಮಹಾಕಾವ್ಯಗಳಲ್ಲಿ ನಾಗ=ಗರುಡರಿಗೆ ಸಂಬಂಧಿಸಿದ ಹಲವಾರು ಉಲ್ಲೇಖಗಳಿವೆ.ತೈತ್ತರೀಯದಲ್ಲಿ ನಾಗಪೂಜೆಗೆ ಸಂಬಂಧಿಸಿದ ಶ್ಲೋಕಗಳಿವೆ.ಭಾರತದ ಇತಿಹಾಸದಲ್ಲಿ ನಾಗಾ ಜನಾಂಗವಿರುವ ಒಂದು ಪ್ರಾಂತವೇ ಇದೆ.ನಾಗವಂಶೀಯರು ಕೇರಳ, ಆಸ್ಸಾಂ, ನಾಗಾಲ್ಯಾಂಡಗಳಲ್ಲಿದ್ದಾರೆ.

ಜನಮೇಜಯ ಮಹಾರಾಜನು ತಾನು ಮಾಡುತ್ತಿದ್ದ ಸರ್ಪಯಜ್ಞವನ್ನು ನಿಲ್ಲಿಸಿ ಮಹಾಭಾರತವನ್ನು ಕೇಳಲು ಪ್ರಾರಂಬಿಸಿದುದು ಈ ಶ್ರಾವಣ ಮಾಸದ ಶುದ್ದಪಂಚಮಿಯ ದಿನ.ಇಂಥ ದಿನವನ್ನು ನಾಗಪಂಚಮಿ ಎಂದು ನಾಗ ಮೂರ್ತಿಗೆ/ಹುತ್ತಕ್ಕೆ ಹಾಲೆರೆಯುವ ಮೂಲಕ ನಾಗ ಪಂಚಮಿಯನ್ನು ಈ ಶ್ರಾವಣ ಮಾಸದಲ್ಲಿ ಆಚರಿಸುವರು.ಇದನ್ನು ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ದಿನ ಆಚರಿಸುವರು.ಮೊದಲ ದಿನ ರೊಟ್ಟಿ ಪಂಚಮಿ ಎಂದು. ಮೊದಲ ಸಲ ಗಂಡನ ಮನೆಯಿಂದ ಮರಳಿದ ಯುವತಿಯರು ತಮ್ಮ ತಮ್ಮ ಗೆಳತಿಯರೊಟ್ಟಿಗೆ ಸೇರಿ ಗಂಡನ ಮನೆಯ ಉಭಯ ಕುಶಲೋಪರಿ ಹಂಚಿಕೊಳ್ಳುವರು.ನಂತರ ಸಜ್ಜಿರೊಟ್ಟಿ.ಜೋಳದ ರೊಟ್ಟಿ ಹೀಗೆ ವಿವಿಧ ಬಗೆಯ ರೊಟ್ಟಿ ಪಲ್ಯ ಮಾಡಿಕೊಂಡು ಒಬ್ಬರಿಗೊಬ್ಬರು ಸೇರಿ ತಿನ್ನುವ ಮೂಲಕ ರೊಟ್ಟಿ ಹಬ್ಬ ಮಾಡಿ ಎಲ್ಲರೂ ಒಟ್ಟಾಗಿ ಉಂಡಿ ಕಟ್ಟುವ ಮೂಲಕ ನಾಗಚೌತಿಯ ಸಂಭ್ರಮಕ್ಕೆ ಅಣಿಯಾಗುತ್ತಾರೆ. ನಾಗಚೌತಿಯಂದು ಎಲ್ಲರೂ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಅಳ್ಳಿಟ್ಟು.ಉಸುಳಿ ಮಾಡಿ ಉಂಡಿಗಳನ್ನು ಇಟ್ಟು ಮಣ್ಣಿನ ನಾಗಪ್ಪನಿಗೆ ಹಾಲು ಎರೆಯುವರು.

ದೇವರ ಪಾಲ

ದಿಂಡರ ಪಾಲ

ಅಪ್ಪನ ಪಾಲ

ಅಮ್ಮನ ಪಾಲ

ಅಕ್ಕನ ಪಾಲ

ಹೀಗೆ ಎಲ್ಲರ ಪಾಲು ಇರಲೆಂದು ನಾಗ ಮೂರ್ತಿಗೆ ಹಾಲು ಹೊಯ್ಯುವರು.ಮೂರನೆಯ ದಿನ ನಾಗ ಪಂಚಮಿ.ಅಂದರೆ ಮನೆಯ ಹೊರಗೆ ದೇವಾಲಯವೋ ಅರಳಿ ಕಟ್ಟೆಯ ಕೆಳಗಿರುವ ನಾಗಪ್ಪನ ಮೂರ್ತಿ ಅಥವ ಅಲ್ಲಿ ಎಲ್ಲಿಯೂ ಅನುಕೂಲ ಇಲ್ಲದವರು ಮನೆಯಲ್ಲಿ ಬೆಳ್ಳಿ ನಾಗಪ್ಪನಿಗೆ ಹಾಲು ಹೊಯುವ ಸಂಸ್ಕೃತಿ. ಅಂದು ಕೊಬ್ಬರಿ ಬಟ್ಟಲ ಹಿಚುಕಿ ಒಡೆದು ಹುತ್ತ ಮುರಿಯುವ ಸಂಪ್ರದಾಯ. ನಾಲ್ಕನೆಯ ದಿನ ವರ್ಷ ತೊಡಕು ಅಂದರೆ ಮಣ್ಣೆತ್ತಿನ ಅಮವಾಸೆ ದಿನ ಮಾಡಿದ್ದ ಮಣ್ಣಿನ ಮೂರ್ತಿಗಳನ್ನು ಈ ದಿನ ಹೊಲಕ್ಕೆ ಒಯ್ದು ಅಲ್ಲಿ ಅಂಬಲಿ ಚೆರಗ ಚೆಲ್ಲುವ ಮೂಲಕ ಅಂದರೆ ಆ ದಿನ ಏನಾದರೊಂದು ಹೊಸ ಕೆಲಸ ಮಾಡುವ ಮೂಲಕ ನಾಗಪಂಚಮಿ ಆಚರಿಸುವರು ಹೀಗೆ ಪಂಚಮಿಯನ್ನು ನಾಲ್ಕು ದಿನ ಆಚರಿಸುವ ಸಂಪ್ರದಾಯ ಉತ್ತರಕರ್ನಾಟಕದಲ್ಲಿದೆ.

ನಾಗ ಪಂಚಮಿಯ ಸಂದರ್ಭದ ಆಟಗಳು:

ನಾಗ ಪಂಚಮಿಯ ಸಂದರ್ಭ ಜೋಕಾಲಿ ಜೀಕುವುದು ಇಂದಿಗೂ ಹಳ್ಳಿಗಳಲ್ಲಿ ಬೆಳೆದು ಬಂದ ಸಂಪ್ರದಾಯ.ಜೀಕೋಣ ಬನ್ನಿ, ಜೋಕಾಲಿ. ಜೀವನದ ಅಮರ ಜೋಕಾಲಿ ಎಂದು ಹಾಡುವ ಹೆಣ್ಣು ಮಕ್ಕಳು ಗಿಡದ ಟೊಂಗೆಗೆ ಮನೆಯಲ್ಲಿ ಮಾಡಿಟ್ಟ ವಿವಿಧ ಉಂಡಿಗಳನ್ನು ದಾರಕ್ಕೆ ಕಟ್ಟಿ ಜೀಕು ಹೊಡೆದು ಅವುಗಳನ್ನು ಬಾಯಲ್ಲಿ ಕಚ್ಚುವ ಸ್ಪರ್ಧೆ ನಡೆಸುವರು.

ಯಾರು ಜೋರಾಗಿ ಜೀಕಿ ಉಂಡಿಯನ್ನು ಬಾಯಲ್ಲಿ ಕಚ್ಚಿ ಹಿಡಿಯುವರೋ ಅವರಿಗೆ ವಿವಿಧ ಉಂಡಿಗಳನ್ನು ಕೊಡುವರು.ಇನ್ನು ಗಂಡು ಮಕ್ಕಳು ಗಿಟಕ ಕೊಬ್ಬರಿ ದಾರದಿಂದ ಗಿಡದ ಟೊಂಗೆಗೆ ಕಟ್ಟಿ ಅದನ್ನು ಬಾಯಿಂದ ಕಚ್ಚಿ ತರುವ ಸ್ಪರ್ಧೆ ನಡೆಸುವರು. ಇಲ್ಲಿ ತಮ್ಮ ತಮ್ಮ ಯೋಗ್ಯತೆಯನುಸಾರ ಹಣ. ಒಡವೆ.ಇತ್ಯಾದಿ ಪಣಕ್ಕಿಡುವರು. ಇನ್ನೊಂದು ವಿಶೇಷತೆಯೆಂದರೆ ಪಂಚಮಿ ಸಂದರ್ಭ ಮಳೆರಾಯನ ಆಗಮನ ರೈತರಿಗೆ ತುಸು ಬಿಡುವು ಕೊಟ್ಟಿರುತ್ತದೆ. ಹೀಗಾಗಿ ರೈತರು ಲಿಂಬೆಕಾಯಿಯನ್ನು ತಮ್ಮ ಶಕ್ತಿಯನುಸಾರ ಕೆಲವು ಎಸೆತಗಳಲ್ಲಿ ದೂರ ಎಸೆಯುವ ಸ್ಪರ್ಧೆ ಆಯೋಜಿಸುತ್ತಾರೆ. ಅಂದರೆ ಎರಡು ಮೂರು ಎಸೆತಗಳಲ್ಲಿ ಯಾರು ಹೆಚ್ಚು ದೂರ ಎಸೆಯುವರೋ ಅವರಿಗೆ ಬಹುಮಾನ ನೀಡುವರು.

ಇನ್ನು ಯುವಕರು ಮೊಣಕಾಲು ಮುರಿ ಆಟವಾಡುವರು ಇಲ್ಲಿ. ಮೂರು ಕಂಬಗಳು ಅದು ವಿವಿಧ ಆಕಾರದಲ್ಲಿದ್ದು ಹಗ್ಗ,ಎತ್ತುಗಳಿಗೆ ಕೊರಳಿಗೆ ಬಿಗಿಯುವ ಚರ್ಮದ ಎಳೆ,ಚಕ್ಕಡಿಯ ಬೋರುಗಡೆ, ಗಟ್ಟಿಯಾದ ಕಲ್ಲುಗಳು,ಏಣಿಗೆ ಬಳಸುವ ಬಿದಿರುಗಳು ಹನ್ನೆರಡು ಬಳಸಿಕೊಂಡು ಏಣಿಯಾಕಾರದ ಗಡೆ ನಿರ್ಮಿಸಿರುವರು.

ಈ ಏಣಿಯನ್ನು ಏರುವ ಸಂದರ್ಭದಲ್ಲಿ ಶರೀರದ ಸಮತೂಕ ಕಾಯ್ದುಕೊಂಡು ಏರಲು ಅಣಿಯಾಗಬೇಕು ಕೈ ಹಿಡಿಯುವಾಗಲು ಕೂಡ ಎಚ್ಚರಿಕೆಯಿಂದ ಹಿಡಿದುಕೊಳ್ಳುವ ಜೊತೆಗೆ ಏಣಿಯ ಮೇಲೆ ಕಾಲು ಇಡುವಾಗ ಶರೀರದ ಭಾರ ಸಮಸ್ಥಿತಿಯಲ್ಲಿರುವಂತೆ ಇಟ್ಟುಕೊಳ್ಳಬೇಕು ಸ್ವಲ್ಪ ತಪ್ಪಿದರೂ ಆ ಏಣಿಯು ತಿರುವು ಮುರುವಾಗುತ್ತದೆ ಆಗ ಅದರ ಮೇಲಿದ್ದ ವ್ಯಕ್ತಿ ಕೆಳಗೆ ಬೀಳುವನು.

ನಿಜಕ್ಕೂ ಶಾರೀರಕ, ಹಾಗೂ ಮಾನಸಿಕ ಚಿತ್ತವನ್ನು ಕಾಯ್ದುಕೊಂಡು ಆಡುವ ಈ ಆಟ ಸೋಜಿಗವನ್ನುಂಟು ಮಾಡುತ್ತದೆ. ಇದಕ್ಕೆ ಗ್ರಾಮೀಣರು ಮೊಣಕಾಲು ಮುರಿ ಅಥವ ಮಿಂಡರ ಗಣಿ ಎಂದು ಬಳಸಿದ್ದು ಕೂಡ ಅಷ್ಟೇ ಅರ್ಥಪೂರ್ಣವಾಗಿದೆ. ಈ ಆಟವನ್ನು ಶರ್ಯತ್ತು ಕಟ್ಟುವ ಮೂಲಕ ಆಡುತ್ತಾರಂತೆ ಇಲ್ಲಿ ಗೆದ್ದವರಿಗೆ ಹಣದ ರೂಪದಲ್ಲೊ ವಸ್ತುಗಳ ರೂಪದಲ್ಲಿ ಅಲ್ಲಿ ಕೂಡಿದ ಎಲ್ಲರೂ ನಿರ್ಧರಿಸಿ ಕಣಕ್ಕಿಳಿಸಿ ತಮ್ಮವರು ಗೆಲ್ಲಲಿ ಎಂದು ಚೀರುತ್ತ ಶಿಳ್ಳೆ ಹಾಕುತ್ತ ಇಲ್ಲಿಯ ಮನರಂಜನೆಯನ್ನು ಸವಿಯುತ್ತಾರೆ, ಒಟ್ಟಾರೆ ನಾಗ ಪಂಚಮಿ ಹಬ್ಬ ಮಳೆಗಾಲದಲ್ಲಿ ಮಾನವನ ದೇಹ ಮಳೆಯಿಂದ ರಕ್ಷಿಸಿಕೊಂಡು ಆರೋಗ್ಯವಾಗಿರಲೆಂದು ಇಂತಹ ಸಂದರ್ಭದಲ್ಲಿ ಅಗತ್ಯವಾದ ಆಹಾರ ಸೇವಿಸಲು ಎಣ್ಣೆ ಪದಾರ್ಥಗಳು ಉಷ್ಣ ಪದಾರ್ಥಗಳಿಂದ ಉಂಡೆ.ಉಸುಳಿ, ಇತ್ಯಾದಿಗಳನ್ನು ಬೆಲ್ಲ.ಎಣ್ಣೆ, ಕೊಬ್ಬರಿ, ಕಡಲೆ,ಮಡಕೆ, ರವೆ, ಎಳ್ಳು, ಗಳಂತಹ ಪದಾರ್ಥಗಳನ್ನು ಬಳಸಿ ಮಾಡಿ ತಿನ್ನುವುದರಿಂದ ದೇಹಕ್ಕೆ ಉಷ್ಣತೆ ಪ್ರಾಪ್ತವಾಗಿ ಚಳಿ ಎದುರಿಸಲು ನಮ್ಮ ದೇಹ ಸನ್ನದ್ಧವಾಗುತ್ತದೆ ಎಂಬ ತತ್ವದಲ್ಲಿ ಪೂಜೆಯ ಜೊತೆಗೆ ಹಬ್ಬದ ಮಹತ್ವವನ್ನು ವೈಜ್ಞಾನಿಕ ಹಿನ್ನಲೆಯೊಂದಿಗೆ ಮಾಡಿರುವರು.

ಶ್ರಾವಣ ಶುಕ್ರವಾರ:

ಪ್ರತಿ ಶುಕ್ರವಾರ ಶುಕ್ರಗೌರಿ ವ್ರತವನ್ನು ಕೈಗೊಳ್ಳುವುದರಿಂದ ಸಂತಾನಪ್ರಾಪ್ತಿ ಹಾಗೂ ದೀರ್ಘಾಯುಷ್ಯನಾದ ಮಕ್ಕಳನ್ನು ಪಡೆದ ಕಥೆಗಳು ಈ ಪೂಜೆಯ ಕಥಾಶ್ರವಣ ಮಾಡುವುದರಿಂದ ತಿಳಿದು ಬರುತ್ತವೆ. ಜೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಈ ವೃತ ಮಾಡುತ್ತಾರೆ.

ಸಿರಿಯಾಳ ಷಷ್ಠಿ:

ಶ್ರಾವಣ ಶುದ್ದಷ್ಷಠಿಯು ಶಿವಭಕ್ತ ಸಿರಿಯಾಳನ ಸವಿನೆನಪಿನ ದಿನ. ಇವನೊಬ್ಬ ನಿಷ್ಠಾವಂತ ಭಕ್ತನಾಗಿದ್ದು ಈತನ ಕಥೆ ತೆಲಗು, ತಮಿಳು, ಮತ್ತು ಕನ್ನಡ ಶೈವ-ವೀರಶೈವದಲ್ಲಿ ಬಹುಮುಖವಾಗಿ ಕಾಣಿಸುತ್ತದೆ. ಗಂಡು ಮಕ್ಕಳನ್ನು ಹೆತ್ತ ತಾಯಿ ಈ ವ್ರತನ್ನು ಮಕ್ಕಳ ಆಯುಸ್ಸು, ಆರೋಗ್ಯ ಐಶ್ವರ್ಯ ಮತ್ತು ಕೀರ್ತಿಯ ಅಭಿವೃದ್ದಿಗಾಗಿ ಮಾಡುತ್ತಾರೆ. ಶ್ರಾವಣ ಮಾಸದ ಶುಕ್ಲಪಕ್ಷದ ಷಷ್ಠಿಯ ದಿವಸ ಈ ವ್ರತವನ್ನು ಮಾಡಲಾಗುತ್ತದೆ.

ಶ್ರಾವಣ ಶನಿವಾರ

ಶ್ರೀ ವೆಂಕಟೇಶಾಯ ಮಂಗಳಂ

ಶ್ರೀ ಶ್ರೀನಿವಾಸಾಯ ಮಂಗಳಂ

ಶ್ರೀ ನಾರಾಯಣಾ ಗೋವಿಂದಾ…ಗೋವಿಂದ

ಎಂದು ಹೇಳುತ್ತ ವೆಂಕಟಸ್ವಾಮಿ ಒಕ್ಕಲಿನವರು ನಾಮವನ್ನು ಧರಿಸಿ ಧಾರ್ಮಿಕ ಬಿಕ್ಷೆ ಬೇಡುವುದು ಈ ಶನಿವಾರ ದಿನದ ವಿಶೇಷ.  

ಉಪಾಕರ್ಮ:

ಶ್ರಾವಣ ಮಾಸದ ಶ್ರವಣ ನಕ್ಷತ್ರದಂದು ಅಶ್ವಲಾಯನ ಮತ ಆಪಸ್ಥಂಭ ಉಪಾರ‍್ಮ ವ್ರತಗಳು ಬರುತ್ತವೆ.ಈ ಉಪರ‍್ಮಗಳನ್ನು ಶಾಸ್ತ್ರೋಸ್ತ ಆಚರಿಸುವರು. ಬ್ರಾಹ್ಮಣ, ವೈಶ್ಯ, ಜೈನ, ದೇವಾಂಗ, ವಿಶ್ವಕಮ ಮೊದಲಾದ ಧರ್ಮದವರು ಉಪಾಕರ್ಮ ನಡೆಸುವರು. ಇದನ್ನು ಜನಿವಾರದ ಹಬ್ಬ ಎಂದೂ ಕರೆಯುವರು. ದೇವಾಲಯದಲ್ಲಿ ಸಾಮೂಹಿಕವಾಗಿ ಆಚರಿಸಲಾಗುತ್ತದೆ.

ನೂಲು ಹುಣ್ಣಿಮೆ:

ಶ್ರಾವಣ ಮಾಸದ ಹುಣ್ಣಿಮೆಗೆ ನೂಲು ಹುಣ್ಣಿಮೆ ಎಂದು ಹೆಸರು. ಈ ಪೌರ್ಣಿಮೆಯ ದಿನ ಅಥವಾ ಅದರ ಹಿಂದಿನ ಶುಕ್ರವಾರ ವರಮಹಾಲಕ್ಷ್ಮೀ ವ್ರತ ಬರುವುದು. ಮಾನವ ಜನಾಂಗದ ರ‍್ಯಾದೆಯ ರಕ್ಷಣೆಗೆ ಆಧಾರಭೂತವಾದುದು ಬಟ್ಟೆ ಈ ಬಟ್ಟೆಯನ್ನು ನೇಯುವ ಕಾಯಕದವರಾದ ದೇವಾಂಗವಂಶಿಕರು ಈ ದಿನ ನೂಲನ್ನು ಪೂಜೆ ಮಾಡುವ ಶ್ರೇಷ್ಟತೆಯು ಮಹತ್ವಪೂರ್ಣವಾದುದು.

ರಕ್ಷಾಬಂಧನ:

ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುವ ಈ ಹಬ್ಬವನ್ನು “ರಕ್ಷಾಬಂಧನ” “ರಕ್ಷಾ ಪೂರ್ಣಿಮೆ” “ನೂಲು ಹುಣ್ಣಿಮೆ” ಎಂದೆಲ್ಲಾ ಕರೆಯುವರು. ಈ ದಿನ ಸಹೋದರ ಸಹೋದರಿಯಯರು ತಮ್ಮ ಮಾನ ಪ್ರಾಣಗಳನ್ನು ಸದಾ ರಕ್ಷಿಸಿರೆಂದು ಮುಂಗೈಗೆ “ರೇಷ್ಮೆಯ ದಾರದ ಎಳೆ” ಗಳನ್ನು ಕಟ್ಟುತ್ತಾರೆ. ಉತ್ತರ ಭಾರತದಲ್ಲಿ ಇದು ಅತ್ಯಂತ ಜನಪ್ರೀಯವಾದ ಹಬ್ಬ, ಹಿಂದೆ ರಾಜ ಮಹಾರಾಜರ ಕಾಲದ ಯುದ್ದದ ಸಂದರ್ಭದಲ್ಲಿ ತಮ್ಮ ಪತಿಯ ಮಾನ ಪ್ರಾಣ ರಕ್ಷಣೆಯಾಗಲೆಂದು ಪತಿಗೆ ಶ್ರೀ ರಕ್ಷೆಯೆಂದು ರಕ್ಷಾ ಎಳೆಗಳನ್ನು ಕಟ್ಟುವ ವಾಡಿಕೆ ಇತ್ತು. ಇಂದು ರಾಖಿ ಕಟ್ಟುವ ಸಂಪ್ರದಾಯ ಸಹೋದರ ಸಹೋದರಿಯರಲ್ಲಿ ಇದೆ.

ಶ್ರೀ ರಾಘವೇಂದ್ರರ ಆರಾಧನೆ: 

ಶ್ರಾವಣ ಮಾಸದ ಕೃಷ್ಣಪಕ್ಷದ ಬಹುಳ ಬಿದಿಗೆಯ ಪುಣ್ಯದಿನದಂದು ಗುರು ಸಾರ್ವಭೌಮ ರಾಘವೇಂದ್ರರ ಆರಾಧನೆ ನಡೆಯುತ್ತದೆ. ಇದು ರಾಯರ ಮಠದಲ್ಲಿ ಮೂರು ದಿನಗಳ ಕಾಲ ಭಕ್ತಿ, ಶ್ರದ್ದೆ ಮತ್ತು ವೈಭವದಿಂದ ನಡೆಯುತ್ತದೆ. ರಾಯರು ಬೃಂದಾವನವನ್ನು ಸೇರಿದ ಪುಣ್ಯ ದಿನವನ್ನು ಮಧ್ಯಮ ಆರಾಧನೆ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ರಾಯರ ಎಲ್ಲಾ ಮಠಗಳಲ್ಲಿಯೂ ಭಕ್ತರಿಗೆ ಪ್ರಸಾದ ರೂಪವಾಗಿ ಅನ್ನ ಸಂತರ್ಪಣೆ ನಡೆಯುವುದು.

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ

ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ

ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ

ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ

ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸರ್ವೋತ್ಕೃಷ್ಟವಾದದ್ದು.

ದೇವಕಿ ಮತ್ತು ವಸುದೇವರು ಸೆರಮನೆಯಲ್ಲಿರುವಾಗ ಜನ್ಮ ತಳೆದ ಕೃಷ್ಣ. ತಂದೆ ವಸುದೇವ ತಾಯಿ ದೇವಕಿ. ಸಾಕು ತಂದೆ ನಂದರಾಜ. ಸಾಕು ತಾಯಿ ಯಶೋಧೆ. ಉಗ್ರಸೇನ ಮಹಾರಾಜ ಕೃಷ್ಣನ ಅಜ್ಜ. ರಾಕ್ಷಸನಾದ ಕಂಸ ಕೃಷ್ಣನ ಸೋದರಮಾವ. ಕಂಸನ ಮರಣ ಕೃಷ್ಣನಿಂದ ಆಯಿತು. ಶ್ರೀ ಮನ್ನಾರಾಯಣ ದಶಾವತಾರಗಳಲ್ಲಿ ಒಂಭತ್ತನೆಯ ಅವತಾರವೇ ಶ್ರೀ ಕೃಷ್ಣ. ಶ್ರಾವಣ ಮಾಸದ ರೋಹಿಣಿ ನಕ್ಷತ್ರದಲ್ಲಿ ಕೃಷ್ಣ ನ ಜನ್ಮವಾಯಿತು. ಈ ದಿನ ಕೃಷ್ಣ ಜನ್ಮಾಷ್ಟಮಿ ಆಚರಿಸುವರು. ಈ ದಿನ ಕೃಷ್ಟö್ನನನ್ನು ಪೂಜಿಸುವರು. ತಮ್ಮ ಮನೆಯ ಪೂಜಾ ಮಂಟಪವನ್ನು ರಸಭರಿತವಾದ ಹಣ್ಣು ಹೂವು ಕಾಯಿಗಳಿಂದ ಶೃಂಗರಿಸಿ ತಮ್ಮ ಮನೆಯ ಪೂಜಾ ಮಂಟಪದಿಂದ ಮನೆಯ ಬಾಗಿಲಿನ ಹೊಸ್ತಿಲಿನವರೆಗೂ ಹೆಜ್ಜೆ ಗುರುತುಗಳನ್ನು ಇಡುವರು. ಇದು ಬಾಲ ಕೃಷ್ಣನು ತಮ್ಮ ಮನೆಯೊಳಗೆ ಬರುವ ಸೂಚನೆ.

ಈ ದಿನ ಹದಿನೆಂಟು ಬಗೆಯ ವಿವಿಧ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯ ಮಾಡುವುದು ವಾಡಿಕೆ. ಅದರಲ್ಲಿ ಎಲಕ್ಕಿಯಿಂದ ತಯಾರಿಸಿದ ತಿನಿಸುಗಳಿಗೆ ವಿಶೇಷ ಪ್ರಾಧಾನ್ಯತೆ. ಶ್ರೀ ಕೃಷ್ಣನು ಹೊಂದಿರುವ ಕೊಳಲು, ನವಿಲುಗರಿ ಶಾಂತಿ ಸಮಯದಲ್ಲಾದರೆ ಧರ್ಮ ರಕ್ಷಣೆ ಸಮಯದಲ್ಲಿ ಸುದರ್ಶನ ಚಕ್ರವಿದೆ.

ಈ ದಿನದಂದು ಸಣ್ಣ ಪುಟ್ಟ ಹುದುಗರನ್ನು ಗೋವಿಂದ ಗೋಪಾಲ ಎಂದು ಕೃಷ್ಣನ ಅವತಾರದಲ್ಲಿ ಶೃಂಗರಿಸುವರು. ಹಾಲು ತುಂಬಿದ ಮಣ್ಣಿನ ಗಡಿಗೆಗಳನ್ನು ಹಗ್ಗಕ್ಕೆ ಕಟ್ಟಿ ಒಂದು ಎತ್ತರದಲ್ಲಿ ತೂಗು ಬಿಡುವರು. ಆ ಗಡಿಗೆಯಲ್ಲಿ ಬೆಣ್ಣೆ ಇಟ್ಟಿರುವರು. ಹುಡುಗರು ಪಿರಮಿಡ್ ಆಕಾರಕ್ಕೆ ಒಬ್ಬರ ಮೇಲೊಬ್ಬರು ನಿಂತು ಬಾಲಕೃಷ್ಣನು ಮಡಿಕೆಯನ್ನು ಮುಟ್ಟಿದ ರೀತಿಯಲ್ಲಿ ಮುಟ್ಟಿ ಒಡೆಯುವರು. ಮಡಿಕೆ ಒಡೆದವರಿಗೆ ಹಣದ ರೂಪದಲ್ಲಿ ವಸ್ತುಗಳ ರೂಪದಲ್ಲಿ ಬಹುಮಾನ ನೀಡುವರು. ಇನ್ನೂ ಕೆಲವಡೆ ಗಡಿಗೆಗೆ ಎಣ್ಣೆಯನ್ನು ಸವರಿರುತ್ತಾರೆ.

ಅಷ್ಟೇ ಅಲ್ಲ ಪಿರಮಿಡ್ ಆಕಾರದಲ್ಲಿ ನಿಂತಾಗ ಮೇಲೆ ಹತ್ತುವ ಗೋವಿಂದನ ವೇಷಧಾರಿಗೆ ನೀರನ್ನು ಎರಚುವರು. ಅವನು ಜಾರಿ ಕೆಳಗೆ ಬೀಳಲೆಂಬುದು ಈ ರೀತಿ ಮಾಡುವ ತಂತ್ರಗಳಲ್ಲಿ ಒಂದು ಇವುಗಳನ್ನು ದಾಟಿ ಗಡಿಗೆ ಒಡೆಯುವುದು ಕೂಡ ಸಾಹಸದ ಕಾರ್ಯವೇ. ಪುಟ್ಟ ಮಕ್ಕಳಿಗೆ ತಾಯಂದಿರು ಕೃಷ್ಣ ಮತ್ತು ರಾಧೆಯರ ವೇಷ ಹಾಕುವ ಮೂಲಕ ಬಾಲಕೃಷ್ಣ ರಾಧೆಯನ್ನು ಅವರ ರೂಪದಲ್ಲಿ ಕಂಡು ಸಂಭ್ರಮಿಸುವುದಲ್ಲದೇ ಅವರು ಅಳದಿರಲೆಂದು ಬಾಯಿಗೆ ಬೆಣ್ಣೆ ಒರೆಸುವರು. ಇದು ಮಕ್ಕಳಿಗೆ ಬೆಣ್ಣೆ ತಿನ್ನಿಸುವ ಕ್ರಿಯೆಯು ಕೂಡ.

ಶಾಲೆಗಳಲ್ಲಿ ಶ್ರೀ ಕೃಷ್ಣ ರಾಧೆಯರ ವೇಷಭೂಷಣ ಸ್ಪರ್ಧೆ ಈ ದಿನ ಜರುಗುತ್ತದೆ. ಉತ್ತಮ ವೇಷಭೂಷಣ ಹೊಂದಿದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಕೂಡ ನೀಡುವ ಮೂಲಕ ಕೃಷ್ಣನನ್ನು ಸ್ಮರಿಸುವ ಈ ದಿನ ನಾಡಿಗೆಲ್ಲ ಮಹತ್ವದ್ದಾಗಿದೆ. ಶ್ರೀ ಕೃಷ್ಣನ ಸ್ಮರಣೆಗಾಗಿ ವಿಷ್ಣುಸಹಸ್ರನಾಮ, ಭಗವದ್ಗೀತೆಗಳನ್ನು ಪಠಿಸುವ ಜೊತೆಗೆ ಅದರ ತಿರುಳನ್ನು ಹತ್ತು ಜನಕ್ಕೆ ತಿಳಿಸುವ ಮೂಲಕ ಶ್ರೀ ಕೃಷ್ಣನನ್ನು ಪೂಜಿಸುವುದು ಹಿರಿಯರು ವಯಸ್ಕರು ಮಾಡುವ ಕರ್ತವ್ಯಗಳಲ್ಲೊಂದಾಗಿದೆ.

ಈ ದಿನ ವಿವಾಹಿತ ಸ್ತ್ರೀಯರು ಉಪವಾಸ ಮಾಡುವ ಮೂಲಕ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವರು. ಬಾಲ್ಯದಲ್ಲಿ ಬೆಣ್ಣೆಯನ್ನು ತಿಂದಿರುವ ಕಾರಣ ನವನೀತನೆಂದು ಕರೆಸಿಕೊಳ್ಳುವ ಕೃಷ್ಣನನ್ನು ಅಚ್ಯುತ, ಅಸುರಾರಿ, ವಾಸುದೇವ, ನಂದಗೋಪಾಲ, ಕಾಲದೇವ, ಗಿರಿಧರ, ಗೋಪಾಲ, ವೇಣುಗೋಪಾಲ, ಗೋವಿಂದ, ಚಕ್ರಧಾರಿ, ದ್ವಾರಕಾಧೀಶ, ಜಗನ್ನಾಥ, ಜನಾರ್ಧನ, ಪತಿತಪಾವನ, ಪರಬ್ರಹ್ಮ, ಪಾಥಸಾರಥಿ, ಮಧುಸೂದನ, ಮಾಧವ, ಮುಕುಂದ, ಯೋಗೇಶ್ವರ, ಶ್ಯಾಮಸುಂದರ, ಹೃಷಿಕೇಶ, ಪುರುಷೋತ್ತಮ, ಸುದರ್ಶನ, ಮುರಳಿ, ಮುರಾರಿ, ಘನಶ್ಯಾಮ, ದಾಮೋದರ, ಪಾಂಡುರಂಗ, ಕೇಶವ, ವಿಠ್ಠಲ, ಶ್ರೀ ರಂಗನಾಥ ಶಕಟಸುರಭಂಜನ ಹೀಗೆ ವಿವಿಧ ಹೆಸರುಗಳಿಂದ ಕರೆಯುವರು.

ಶ್ರೀ ಕೃಷ್ಣನ ಬಾಲ್ಯದ ಅನೇಕ ರೋಚಕ ಕತೆಗಳು ಭಾಗವತದಲ್ಲಿವೆ. ಶಕಟಾಸುರ ವಧೆ. ಪೂತನಿಯ ವಧೆ. ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ, ಕಾಳಿಂಗ ಮರ್ಧನ, ಗೋವರ್ಧನ ಗಿರಿಯ ರಕ್ಷಣೆ ಈ ಕತೆಗಳಲ್ಲಿ ಮಹತ್ವವಾದವು. ಸೂರದಾಸರು, ಪುರಂದರದಾಸರು, ಕನಕದಾಸರು, ಮೀರಾಬಾಯಿ ಇವರೆಲ್ಲ ಕೃಷ್ಣನ ಭಕ್ತರಾಗಿದ್ದ ಕವಿವರ್ಯರು. ಇವರು ಕೃಷ್ಣನನ್ನು ಕುರಿತು ಅನೇಕ ಗೀತೆಗಳನ್ನು ಭಜನೆಗಳನ್ನು ರಚಿಸಿರುವರು.

ಗಾಯತ್ರಿ ಆರಾಧನೆ:

ಗಾಯತ್ರಿ ದೇವಿಯು ಭಗವಂತನ ಸ್ತರೀರೂಪ, ಭಗವಂತನನ್ನು ಜಗನ್ಮಾತೆಯ ರೂಪದಲ್ಲಿ ಉಪಾಸನೆ ಮಡುವುದರಿಂದ ಮಧುರಭಾವ ಉಂಟಾಗುತ್ತದೆಲ್ಲದೇ ಮಾತೃಪೂಜೆಯಿಂದ ಸಮಸ್ತ ನಾರೀ ರೂಪದ ಬಗೆಗೂ ಪವಿತ್ರತೆ ಸದಾಚಾರ ಸದ್ಬಾವಗಳು ಮೂಡುತ್ತವೆ. ಗಾಯತ್ರಿ ಮಂತ್ರವು ಸಕಲ ಸದ್ಬಕ್ತರಿಗೆ ಕಲ್ಪತರುವಾಗಿದೆ.

ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ

ಭರ್ಗೋ ದೇವಸ್ಯ ಧೀಮಹಿ

ಧಿಯೋ ಯೋ ನಃ

ಪ್ರಚೋದಯಾತ್

ಅಂದರೆ ಲೋಕದ ಪ್ರಾಣನಾದ ಸರ್ವವ್ಯಾಪಿಯಾದ ಆ ಪರಮಾತ್ಮನು ನಮ್ಮ ಬುಧ್ದಿಯನ್ನು ಪ್ರಚೋದಿಸಲಿ, ಪ್ರೇರಿಸಲಿ ಆ ಪವಿತ್ರದೇವನು ನಮ್ಮ ಜನರನ್ನು ಅವರ ಕರ್ಮಗಳನ್ನು ಸದಾ ಸನ್ಮಾರ್ಗದಲ್ಲಿ ಪ್ರವರ್ತಿಸುವಂತೆ ಪವಿತ್ರವಾದ ಪ್ರೇರಣೆಯನ್ನು ಕೊಡಲಿ ಎಂದು ಪ್ರಾರ್ಥಿಸುವುದಾಗಿದೆ. ಗಾಶಯತ್ರೀ ಮಂತ್ರವು ಒಂದು ರತ್ನಕೋಶವಿದ್ದಂತೆ ಈ ಮಹಾಮಂತ್ರದಲ್ಲಿ ೨೪ ಅಕ್ಷರಗಳುಂಟು ಪ್ರತಿ ಅಕ್ಷÀರಕ್ಕೆ ಒಂದೊಂದು ದೇವತೆಯಂತೆ ೨೪ ದೇವತೆಗಳನ್ನು ಜಪಿಸಿದ ಮಹಾಮಂತ್ರವಾಗುತ್ತದೆ. ಪ್ರಾಚೀನ ಋಷಿಮುನಿಗಳೆಲ್ಲರೂ ಈ ಮಂತ್ರದ ಮಹತ್ವವನ್ನು ಸಾಕ್ಷಾತ್ಕರಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಉತ್ಸವ ಪ್ರಿಯನಾದ ಮನುಷ್ಯರಲ್ಲಿ ವಾಕ್ಶುದ್ದಿ, ವಸನಶುದ್ದಿ, ಚಿತ್ತ ಶುದ್ದಿ, ದೇಹ ಶುದ್ದಿ, ವಾತಾವರಣ ಶುದ್ದಿ ಆತ್ಮ ಶುದ್ದಿ ಇವೆಲ್ಲಾ ಶ್ರಾವಣ ಮಾಸದಲ್ಲಿ ಆಗುತ್ತವೆ ಎಂದರೆ ತಪ್ಪಾಗಲಿಕ್ಕಿಲ್ಲ, ದಿನವೂ ಸ್ನಾನ ಮಾಡದವರು ಹಬ್ಬ ಹರಿದಿನಗಳಂದು ಸ್ನಾನ ಮಡುತ್ತಾರೆ ಇದರಿಂದ ದೇಹಶುದ್ದಿ, ಶುಭ್ರಬಟ್ಟೆ ಧರಿಸುತ್ತಾರೆ ಇದರಿಂದ ವಸನಶುದ್ದಿ, ಇನ್ನು ಕೆಟ್ಟ ಶಬ್ದಗಳನ್ನು ಆಡುವುದಿಲ್ಲ ದೇವರ ನಾಮ ನಾಲಿಗೆಯ ಜಪಿಸುವರು ಇದು ಚಿತ್ ಶುದ್ದಿ, ಇಂಥ ಕಾರ್ಯಗಳನ್ನು ಹೆಚ್ಚಾಗಿ ಜರುಗಿಸುವ ಶ್ರಾವಣ ಮಸ ಮಾನವರಲ್ಲಿ ಒಳ್ಳೆಯ ಬುದ್ದಿಯನ್ನು ಸಾತ್ವಿಕತೆಯನ್ನು ಹೆಚ್ಚಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ನಮ್ಮ ಪೂರ್ವಜರು ಹಬ್ಬದ ನೆಪದಲ್ಲಿ ಮಾಮೂಲಿ ಕೆಲಸಕ್ಕೆ ಬಿಡುವು ನೀಡುವ ಜೊತೆಗೆ ಎಲ್ಲ ಕಸುಬಿನವರಿಗೂ ಹುಮ್ಮಸ್ಸು ಇಮ್ಮಡಿ ಹೆಚ್ಚಿ ಮತ್ತೆ ಕಾರ್ಯಪ್ರವೃತ್ತರಾಗಲು ಪ್ರೇರಣೆ ಉಂಟಾಗುವಂತೆ ಆಯಾ ಕಾಲಮಾನಕ್ಕೆ ಪರಿಸರಕ್ಕೆ ತಕ್ಕಂತೆ ಹಬ್ಬಗಳನ್ನು ಯೋಜಿಸಿರುವುದು ವೈಜ್ಞಾನಿಕವಾಗಿಯೂ ಕೂಡ ಮಹತ್ವದ್ದಾಗಿದೆ. ಅಂತೆಯೇ ನಮ್ಮ ಭಾರತೀಯ ಸಂಸ್ಕೃತಿ ಜಾಗತಿಕ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಪಡೆದಿದೆ.


ವೈ.ಬಿ.ಕಡಕೋಳ

- Advertisement -
- Advertisement -

Latest News

ಪದವಿ ಕಾಲೇಜು ವಿದ್ಯಾರ್ಥಿಗಳ ಗುರುವಂದನೆ ಮಾದರಿ ಯಾದದ್ದು – ವೆಂಕಟೇಶ ಸೋನವಾಲ್ಕರ

ಮೂಡಲಗಿ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಗುರುವಂದನೆ ಕಾರ್ಯಕ್ರಮಗಳು ಅಲ್ಲಲ್ಲಿ ಸಾಕಷ್ಟು ಜರುಗುತ್ತಿರುತ್ತವೆ. ಆದರೆ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ಸೇರಿ ಗುರುವಂದನೆ ಮಾಡುತ್ತಿರುವುದು...
- Advertisement -

More Articles Like This

- Advertisement -
close
error: Content is protected !!
Join WhatsApp Group