ಸ್ವಾರ್ಥ, ತನ್ನತನ, ಸ್ವಹಿತಾಸಕ್ತಿ ಬಿಟ್ಟು ಸೇವೆಯಿಂದ ಸಂಘಟನೆ ಕಟ್ಟಿ :ಬಿ. ಹೆಚ್. ಮಾರದ ಅಭಿಮತ.
ಬೆಳಗಾವಿ – ರವಿವಾರ ದಿ. 31 ರಂದು ಬೆಳಗಾವಿ ನಗರದ ಮಹಾಂತೇಶ ನಗರದಲ್ಲಿರುವ ಹಳಕಟ್ಟಿ ಭವನದಲ್ಲಿ ‘ಶ್ರಾವಣ ಸತ್ಸಂಗ ಮತ್ತು ಉಪನ್ಯಾಸ ಕಾರ್ಯಕ್ರಮ’ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಿಂಗಾಯತ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ ಸಂಘಟನೆ ಕಟ್ಟುವುದು ಸಮಾಜ ಕಟ್ಟಲು ಹೊರತು ನಾವು ಬೆಳೆಯುವುದಕ್ಕಲ್ಲ. ಸಂಘಟನೆ ಬೆಳೆದರೆ ತಾನಾಗಿಯೇ ನಾವು ಬೆಳೆಯುತ್ತೇವೆ. ಸಮಾಜದವರು ಸತ್ಸಂಗಕ್ಕೆ ಬರಬೇಕು. ತುಳಿತಕ್ಕೊಳಗಾದ ಜನ ಮುಖ್ಯವಾಹಿನಿಗೆ ಸತ್ಸಂಗದಿಂದ ಬರಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ “ಸಂಘಟನೆ ಮತ್ತು ಸೇವೆ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಜಿ. ಎ.ಕಾಲೇಜಿನ ಉಪನ್ಯಾಸಕರಾದ ಬಿ.ಎಚ್.ಮಾರದ ರವರು ಮಾತನಾಡಿ ಸಂಘಟನೆಗೆ ಸೇವೆ ಮುಖ್ಯ. ನಿಸ್ವಾರ್ಥ, ಸೇವೆ ಮಾತ್ರ ಸಂಘಟನೆಯನ್ನು ಮುನ್ನಡೆಸ ಬಹುದು. ನಾವೆಲ್ಲರೂ ನಮಗೆ ಇರಲು ಮನೆ ಕಟ್ಟಿದರೆ ಅಣ್ಣ ಬಸವಣ್ಣನವರು ಎಲ್ಲರಿಗಾಗಿ ಮಹಾಮನೆ ಕಟ್ಟಿದರು.
ಈಗ ಸಂಘಟನೆಯನ್ನು ಕಟ್ಟಿ ನಾನು ಮುಖ್ಯ ಎನ್ನುತ್ತಿದ್ದಾರೆ. ಇಲ್ಲಿ ನಾನು ಮುಖ್ಯವಲ್ಲ ಸಂಘಟನೆ ಮುಖ್ಯ. ಸ್ವಾರ್ಥ, ತನ್ನತನ, ಸ್ವಹಿತಾಸಕ್ತಿ ಇರಬಾರದು. ನಿಸ್ವಾರ್ಥ ಸೇವೆ ಅಗತ್ಯ. ಸೇವೆಯ ಲಾಭ ತಕ್ಷಣಕ್ಕೆ ಆಗುವುದಿಲ್ಲ ಕಾಲಾಂತರದವರೆಗೆ ಅದರ ಗುರುತು ಉಳಿಯುತ್ತದೆ.
ಜಗತ್ತೇ ತೆರೇಸಾ ರವರಿಗೆ ಮದರ್ ಅನ್ನುತ್ತೆ. ಅದು ಅವರು ಮಾಡಿದ ಸೇವೆಯಿಂದ. ಇಂದು ಸಾಲುಮರದ ತಿಮ್ಮಕ್ಕ ಳಿಗೆ ಸಂಪುಟ ದರ್ಜೆಯ ಸ್ಥಾನಮಾನ ಸಿಕ್ಕಿದೆ. ಅದು ಆಕೆಯ ತ್ಯಾಗ ಮನೋಭಾವದ ಸೇವೆಯಿಂದ. ಅದೇ ರೀತಿ ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಕೆಲಸಮಾಡುತ್ತಿರುವ ಕಡೋಲಿ ಗ್ರಾಮದ ಪರಿಸರವಾದಿ, ಅನೇಕ ಗಿಡಮರಗಳನ್ನು ಬೆಳೆಸಿ ಅನೇಕ ಕೆರೆಗಳನ್ನು ಕಟ್ಟಿದ್ದಾರೆ. ಶಿವಾಜಿ ಕಾಗಣಿಕರ್ ಅವರಂತಹ ಸೇವೆ, ಬಾಬಾ ಅಮ್ಟೆ ಅವರಂತಹ ಸೇವೆ ನಿಜಕ್ಕೂ ಈಗ ಬರಬೇಕಾಗಿದೆ. ಕಿಂಕರತ್ವ ದಲ್ಲಿ ಶಂಕರತ್ವ ಕಾಣಬೇಕು. ನಾನು ಮಾಡಿದೆ ಎಂದು ಅನ್ನದೇ ಎಷ್ಟು ಸೇವೆ ಮಾಡಿದೆ ಎನ್ನುವುದು ಮುಖ್ಯ. ನಾವೆಲ್ಲರೂ ಸೋಹಮ್ ಅನ್ನದೇ ದಾಸೋಹಂ ಎನ್ನಬೇಕು. ಸೇವೆ ಮಾಡಿದವನು ಯಾವಾಗಲೂ ಸುಂದರವಾಗಿ ಕಾಣುತ್ತಾನೆ. ತಮ್ಮ ಸ್ವಂತ ಬೇಳೆ ಬೇಯಿಸಿಕೊಳ್ಳುವದಕ್ಕಾಗಿ ಸಂಘಟನೆ ಮಾಡಬೇಡಿ. ಸಂಘಟನೆಯಲ್ಲಿ ಎಲ್ಲಿ ಕೊರತೆಯಿದೆ ಅಲ್ಲಿ ನಿಸ್ವಾರ್ಥದಿಂದ ತ್ಯಾಗ ಮನೋಭಾವದಿಂದ ಕೆಲಸ ಮಾಡಿ ಎಂದರು.
ಇದೇ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ಕಳೆದ 18 ವರ್ಷಗಳಿಂದ ಅತ್ಯಂತ ಕ್ರಿಯಾಶೀಲರಾಗಿ ಸಂಘಟನೆಗಾಗಿ ದುಡಿಯುತ್ತಿರುವ ಸುರೇಶ ನರಗುಂದ ಮತ್ತು ಸದಾಶಿವ ದೇವರಮನಿ ರವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಮತ್ತು ಈ ತಿಂಗಳಲ್ಲಿ ಜನಿಸಿದ ಎಲ್ಲಾ ಶರಣ-ಶರಣೆಯರ ಜನ್ಮದಿನಾಚರಣೆಯನ್ನು ಸಾಮೂಹಿಕವಾಗಿ ಆಚರಿಸಲಾಯಿತು.
ಶರಣೆ ಶಾಂತಾ ಇಂಚಲ ದಾಸೋಹ ಸೇವೆ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ವಿ .ಕೆ.ಪಾಟೀಲ, ರಮೇಶ ಕಳಸಣ್ಣವರ, ಆನಂದ ಕರ್ಕಿ,ಶಶಿಭೂಷಣ ಪಾಟೀಲ, ಮಹಾದೇವಿ ಅರಳಿ,ಸುರೇಶ ನರಗುಂದ, ಎಮ್. ವೈ ಮೆಣಸಿನಕಾಯಿ, ಶಿವಾನಂದ ತಲ್ಲೂರ ಸೇರಿದಂತೆ ಸಂಘಟನೆಯ ಸದಸ್ಯರು ಮತ್ತು ಶರಣ-ಶರಣೆಯರು ಭಾಗಿಯಾಗಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸರ್ವರಿಂದ ಸಾಮೂಹಿಕ ವಚನ ಪ್ರಾರ್ಥನೆ ಮಾಡಲಾಯಿತು.
ಬಾಳಮ್ಮ ವಸ್ತ್ರದ ವಚನ ಗಾಯನ ಪ್ರಸ್ತುತಪಡಿಸಿದರು. ಸಂಗಮೇಶ ಅರಳಿ ಕಾರ್ಯಕ್ರಮವನ್ನು ನಿರ್ವಹಿಸಿ ನಿರೂಪಿಸಿದರು ಕೊನೆಯಲ್ಲಿ ವಚನ ಮಂಗಳ ದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.