ಬೆಂಗಳೂರು: ನಗರದ ಬನಶಂಕರಿ 3ನೇ ಹಂತದ ಹೊಸಕ್ಕೇರಿ ಹಳ್ಳಿಯ ಗ್ರಾಮಕ್ಕೆ ಸಮೀಪದಲ್ಲಿರುವ ಶ್ರೀ ದತ್ತ ಪೀಠದಿಂದ ಕೂಗಳತೆಯ ದೂರದಲ್ಲಿದೆ ಗುರುದತ್ತ ಬಡವಾಣೆ ಇಲ್ಲಿ ಸೆಪ್ಟೆಂಬರ್ 10 ರಂದು ಸಂಭ್ರಮದ ದಿಂದ ಬಡಾವಣೆಯ ನಿವಾಸಿಗಳು 17 ನೇ ವರ್ಷದ ಗಣೇಶೋತ್ಸವವನ್ನು ಆಚರಿಸಿದರು.
ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರಿಂದ ಪ್ರತಿಷ್ಠಾಪನೆಗೊಂಡ ಶ್ರೀ ಶಕ್ತಿ ಗಣಪತಿ ದೇವಾಸ್ಥಾನ ಇಲ್ಲಿ ಇದ್ದು ದೇವಾಲಯದ ಬಲ ಬದಿಯ ರಸ್ತೆಯಲ್ಲಿ
ಸುಂದರವಾದ ವೇದಿಕೆ ನಿರ್ಮಾಣ ಮಾಡಿ ಬೆಳಗ್ಗೆ 9 ಗಂಟೆಗೆ ಗಣಪತಿ ಪ್ರತಿಷ್ಠೆ ಪ್ರತಿಷ್ಠಾಪನೆ,ಮಹಾಮಂಗಳಾರತಿ ನೇವರಿಸಿ ವಿಜೃಂಭಣೆಯಿಂದ ಪೂಜೆ ಸಲ್ಲಿಸಲಾಯಿತು.
ಶ್ರೀ ಗುರುದತ್ತ ಬಡವಾಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ) ಅಧ್ಯಕ್ಷರು, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರರು ಆದ ಎಂ.ವಿ .ಪ್ರಸಾದ್ ಬಾಬು, ಮಾಜಿ ಕಾರ್ಪೊರೇಟರ್, ಮಂಜುನಾಥ್ ಮತ್ತು ರಾಯಚಂದ್ರಪ್ಪ, ವಿ.ಸಿ . ಚಂದ್ರು ಅವರು 17 ನೇ ವರ್ಷದ ಗಣೇಶೋತ್ಸವಕ್ಕೆ ಆಗಮಿಸಿ ಗಣಪತಿಯಲ್ಲಿ ಬಡಾವಣೆಯ ಸಮಸ್ತ ಅಭಿವೃದ್ಧಿ ಗೆ ಪ್ರಾರ್ಥನೆ ಸಲ್ಲಿಸಿ, ಬಡಾವಣೆಯ ಸಮಸ್ತ ನಾಗರೀಕರಿಗೆ ಶುಭ ಹಾರೈಸಿದರು.
ಅನ್ನ ಸಂತರ್ಪಣೆ:
ಬಡಾವಣೆಯ ಸಮಸ್ತ ಭಕ್ತರಿಗೂ ತೀರ್ಥ – ಪ್ರಸಾದ ವಿತರಿಸಿ ಮಧ್ಯಾಹ್ನ 12.30 ಕ್ಕೆ ಅನ್ನ ಸಂತರ್ಪಣೆ ನೆರವೇರಿತು. ಸಂಜೆ 5.30 ಕ್ಕೆ ಬಡವಾಣೆಯ ಮಕ್ಕಳು, ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.
ನೃತ್ಯ ರೂಪಕ:
ರಮೆ – ಉಮೆಯರು ಹರಿ – ಹರರನ್ನು ಮೂದಲಿಸುತ್ತಾ ಹೋಗುವ ಅದ್ಭುತ ವಿನೋದದ ಹೊಯ್ದಾಟ ಕಡೆಯಲ್ಲಿ ಹರಿಹರರ ಸಮ್ಮಿಲನವನ್ನು ತೋರಿದ ಪರಿಯೇ ಅದ್ಭುತ… ಈ ನೃತ್ಯ ರೂಪಕವನ್ನು ಸೊಗಸಾಗಿ ವಿದುಷಿ ಶ್ರೀಮತಿ ಮೇಘನಾ ಅಯಂಗಾರ್ ಹಾಗೂ ಶ್ರೀಮತಿ ನಂದಿನಿ ಪ್ರಿಯಾ ಅವರು ಪ್ರಸ್ತುತ ಪಡಿಸಿದರು.
ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರಿಂದ ಪ್ರತಿಷ್ಠಾಪನೆಗೊಂಡ ಶ್ರೀ ಶಕ್ತಿ ಗಣಪತಿಗೆ ಬೆಳ್ಳಿಯ ಕಿರೀಟ, ಮುಖವಾಡ, ಕವಚವನ್ನು ಧಾರಣೆ ಮಾಡಿ, ವಿಶೇಷ ಅಲಂಕಾರ ಮಾಡಿ, ಕಡುಬಿನ ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಲಾಯಿತು.
ರಾತ್ರಿ 7.30 ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಂತರ ಗಣಪತಿ ಮೆರವಣಿಗೆಯಲ್ಲಿ ತಮಟೆಯ ಸದ್ದಿಗೆ ಬಡಾವಣೆಯ ಸಮಸ್ತ ಭಕ್ತರು ಹಾಗೂ ಮಕ್ಕಳು ಹೆಜ್ಜೆ ಹಾಕಿ , ಗಣಪತಿ ವಿಸರ್ಜನೆ ಯೊಂದಿಗೆ 17 ನೇ ವರ್ಷದ ಗಣೇಶೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿತ್ತು.
ಸಕಲ ಇಷ್ಟಾರ್ಥದಾಯಕ ಶಕ್ತಿ ಗಣಪ ಬನಶಂಕರಿ 3ನೇ ಹಂತದ ಹೊಸಕ್ಕೇರಿ ಹಳ್ಳಿಯ ಗ್ರಾಮಕ್ಕೆ ಸಮೀಪದಲ್ಲಿರುವ ಶ್ರೀ ದತ್ತ ಪೀಠದಿಂದ ಕೂಗಳತೆಯ ದೂರದಲ್ಲಿದೆ ಗುರು ದತ್ತ ಬಡವಾಣೆಯಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಸ್ಥಾನ.
ಮುಂಜಾನೆಯ ಸೂರ್ಯ ಉದಯಿಸುವ ಹೊತ್ತಿನಲ್ಲಿ ಶಾಂತ ವಾತಾವರಣ, ಹಕ್ಕಿಗಳ ಕಲರವದ ನಡುವೆ ಭಕ್ತಾದಿಗಳಿಗೆ ಭಗವಂತನ ದಿವ್ಯದರ್ಶನ ಮಾಡಿದ ಧನ್ಯತಾ ಭಾವ.
ನಾಲ್ಕು ಕೈಗಳನ್ನು ಹೊಂದಿ, ಬಲ ಬದಿಯ ಎರಡು ಪಾಶ-ಅಂಕುಶಗಳನ್ನು ಹಾಗೂ ಮತ್ತೆರಡು ಕೈಗಳಲ್ಲಿ ಭಕ್ತರ ಇಷ್ಟಾರ್ಥಗಳನ್ನು ಸಿಂಧೂರ ವರ್ಣದ ಸ್ವಾಮಿ ನೆರವೇರಿಸುತ್ತಿದ್ದಾನೆ.
ಗಣಪತಿಯ ಎಡ ಪಾರ್ಶ್ವದಲ್ಲಿ ಶಕ್ತಿ ದೇವಿ ಆಸೀನಳಾಗಿದ್ದಾಳೆ. ಅಭಯ ಮುದ್ರೆ, ಅಂಕುಶ(ಸೃಣೀ), ಪಾಶವನ್ನು ಧರಿಸಿ, ಮತ್ತೊಂದು ಕೈಯಿಂದ ಶಕ್ತಿಯನ್ನು ಗಣಪ ಆಲಂಗಿಸಿಕೊಂಡಿದ್ದಾನೆ.
ಶಕ್ತಿ ಗಣಪತಿಯು ಸೂರ್ಯಾಸ್ತದ ನಸುಗೆಂಪು ವರ್ಣದವನಾಗಿ, ಶಕ್ತಿಯು ಹಸಿರು ಬಣ್ಣವನ್ನು ಹೊಂದಿದ್ದಾಳೆ.
ಇಂದ್ರಿಯಗಳ ನಿಯಂತ್ರಣವನ್ನು ಸಾಧಿಸಿ ಇಚ್ಛಿತ ಕೆಲಸದ ಮೆಲೆ ಏಕಾಗ್ರತೆ ಕೇಂದ್ರಿಕರಿಸಲು ಶಕ್ತಿ ಗಣಪತಿಯ ಆರಾಧನೆಯು ಉಪಯುಕ್ತವೆಂದು ಪರಿಗಣಿಸಲಾಗಿದೆ.
ಮುದ್ಗಲ ಪುರಾಣದಲ್ಲಿ 32 ಗಣಪತಿಯ ಬಗ್ಗೆ ಉಲ್ಲೇಖವಿದೆ. ಇದರಲ್ಲಿ ಶಕ್ತಿ ಗಣಪತಿ ಕೂಡ ಒಂದು. ಶಕ್ತಿಯೆಂದರೆ ಪಾರ್ವತಿ ದೇವಿಯ ಅಂಶವಿರುವಂತಹ ದೇವತೆ. ಆ ಶಕ್ತಿ ದೇವತೆಯನ್ನು ಎಡ ಬದಿಯ ತೊಡೆಯ ಮೇಲೆ ಕುಳ್ಳಿರಿಸಿರುವ ಗಣಪನೇ ಶಕ್ತಿ ಗಣಪ. ಶಕ್ತಿ ಗಣಪತಿಯನ್ನು ಉಪಾಸನೆ ಮಾಡುವುದರಿಂದ ಸಕಲ ಜೀವಿಗಳಲ್ಲಿ, ಶಕ್ತಿ ಪರಾಕ್ರಮ ಪ್ರಾಪ್ತಿಯಾಗುತ್ತದೆ. ಇಷ್ಟಾರ್ಥದಾಯಕ, ವಿಘ್ನಗಳನ್ನು ಪರಿಹರಿಸುವ ಅಭೀಷ್ಟಗಳನ್ನು ನೀಡುವ ಹಾಗೂ ನಮ್ಮಲ್ಲಿ ನವ ಚೈತನ್ಯ, ಶಕ್ತಿ ತುಂಬುವ ಭಗವಂತನೇ ಶ್ರೀ ಶಕ್ತಿ ಗಣಪತಿ. ಶ್ರೀ ಶಕ್ತಿ ಗಣಪತಿ ನಾಲ್ಕು ಭುಜಗಳಿಂದ ಕೂಡಿದ್ದವನಾಗಿದ್ದಾನೆ. ಕೆಂಪು, ಸ್ವರ್ಣ, ನೀಲಿ, ಬಿಳಿ, ಪಿಂಗಳ ಕೂಡಿದಂತೆ ಸಿಂಧೂರ ವರ್ಣದವನಾಗಿದ್ದಾನೆ.
ಮಾಧ್ವ ಸಂಪ್ರದಾಯದಲ್ಲಿ ಗಣಪತಿಯನ್ನು ವಿಶ್ವಂಭರ ಮೂರ್ತಿ ಎಂದು ಕರೆಯಲಾಗುತ್ತದೆ.
ಬರಹ: ಅನಂತ ಕಲ್ಲಾಪುರ,
ಛಾಯಾ ಚಿತ್ರಕೃಪೆ: ಧನುಷ್, ಕನ್ನಡಿಗ