Homeಸುದ್ದಿಗಳುಡೊಳ್ಳಿನ ಹಾಡಕಿಯ "ಕರ್ನಾಟಕ ಕೋಗಿಲೆ"; ಶ್ರೀಶೈಲ ಇಂಗಳೇಶ್ವರ

ಡೊಳ್ಳಿನ ಹಾಡಕಿಯ “ಕರ್ನಾಟಕ ಕೋಗಿಲೆ”; ಶ್ರೀಶೈಲ ಇಂಗಳೇಶ್ವರ

ಕರ್ನಾಟಕ ಜಾನಪದ ಕಲೆಗಳಲ್ಲಿ ಡೊಳ್ಳಿನ ಪದಗಳು ಉತ್ತರ ಕರ್ನಾಟಕ ವಲಯದಲ್ಲಿ ಅನುಚಾನವಾಗಿ ನಡೆದುಕೊಂಡು ಬಂದಿರುವ ಕಲೆಯಾಗಿದೆ. ಜನರಲ್ಲಿ ಪುರಾಣಪುಣ್ಯ ಕಥೆಗಳು, ನೈತಿಕ ಮೌಲ್ಯಗಳು, ಭಕ್ತಿ, ಪುರಾಣಪುರುಷರ ಕಥೆಗಳು, ಆಧರಿಸಿ ಭಕ್ತಿ ಭಾವ ಮೂಡಿಸುವ ಜಾಗೃತಿಕಲೆ ಎಂದರೆ ತಪ್ಪಾಗಲಾರದು. ಮುಖ್ಯವಾಗಿ ಬೀರದೇವರ, ಮಾಳಿಂಗರಾಯ, ಪರಂಪರೆ ಆಧರಿತ ಪುರಾಣಗಳ ಕುರಿತು ಪದಗಳನ್ನು ಹೆಚ್ಚು ಹಾಡುವುದು ರೂಡಿ. ಇಂತಹ ಪರಂಪರೆಯಲ್ಲಿ “ಕರ್ನಾಟಕ ಕೋಗಿಲೆ” ಎಂದು ಹೆಸರು ಪಡೆದು ಕರ್ನಾಟಕ, ಮಹಾರಾಷ್ಟ್ರ, ಗೋವಾ ಮುಂತಾದ ರಾಜ್ಯಗಳಲ್ಲಿ “ಇಂಗಳೇಶ್ವರ ಶ್ರೀಶೈಲ” ಎಂದೆ ಖ್ಯಾತಿ ಪಡೆದಿದ್ದಾರೆ.

ಇವರು ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದವರು ತಂದೆ ಬಾಲಪ್ಪ ತಾಯಿ ಶರಣಪ್ಪ. ಇಬ್ಬರು ಅಣ್ಣಂದಿರು ಮಲ್ಲಪ್ಪ ಮತ್ತು ಶರಣಪ್ಪ, ಮಕ್ಕಳು ಬೀರಪ್ಪ, ಮಹೇಶ, ಉಮೇಶ. ಭಾಗಮ್ಮ ಅವರೊಂದಿಗೆ ವಿವಾಹಿತರಾದ ಇವರು ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎನ್ನುವಂತೆ ಬಾಳುತ್ತಿದ್ದಾರೆ.

ಹದಿನಾರು ವರ್ಷದವರಿದ್ದಾಗಲೇ ಬಿಜ್ಜರಗಿ ಸೋಮನಿಂಗ ಅವರ ಗರಡಿಯಲ್ಲಿ ಪಳಗಿ, ಇಂಡಿ ತಾಲೂಕಿನ ಹಿರೇಬೇವನೂರ ದೇವನೂರಿನಲ್ಲಿ ಮೊದಲ ಹಾಡಕಿ ಪ್ರಾರಂಭವಾಗಿ 48 ವರ್ಷಗಳಿಂದ ಮುಂದುವರೆದಿದೆ. 48 ವರ್ಷಗಳಲ್ಲಿ ಸಾವಿರಾರು ಊರುಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಡೊಳ್ಳಿನ ಪದಗಳು ಮೂಲಕ ಜನಮಾನಸದಲ್ಲಿದ್ದಾರೆ. ಯಾವುದೇ ಓದು ಬರಹ ಬಾರದ ಇವರು ಓದಿ ಹೇಳಿದ್ದನ್ನು ನೆನಪಿಟ್ಟುಕೊಂಡು ಸಾವಿರಾರು ಹಾಡುಗಳನ್ನು ದಣಿವರಿಯದೆ ನಿರರ್ಗಳವಾಗಿ ಡೊಳ್ಳಿನ ಪದಗಳನ್ನು ಹಾಡುತ್ತಾರೆ.

ಹತ್ತೊಂಬತ್ತರ ದಶಕದಲ್ಲಿ ಇವರ ಧ್ವನಿಸುರುಳಿಗಳು ಜನಮನವನ್ನು ಸೊರೆಗೊಂಡು ಇವರ ಧ್ವನಿಸುರುಳಿಗಾಗಿ ಕಾಯುತ್ತಿದ್ದರು. ಇವರ ಮೊದಲ ಡೊಳ್ಳಿನ ಹಾಡುಗಳ ಧ್ವನಿಸುರುಳಿ ಕ್ಯಾಸೆಟ್ “ಸಂಕದ ರಾಯನಗೌಡರು”. ಇಲ್ಲಿಯವರೆಗೆ 70 ಕ್ಯಾಸೆಟಗಳನ್ನು ಬಿಡುಗಡೆಗೊಳಿಸಿದ ಹೆಗ್ಗಳಿಕೆ ಇವರದು. “ರೊಕ್ಕ ಕೊಟ್ಟರೇನು ಹಡೆದ ತಾಯಿಸಿಗುವಳೇನೊ” ಡೊಳ್ಳಿನ ಪದ ನಾಡಿನಾದ್ಯಂತ ಜನಪ್ರಿಯತೆ ಪಡೆದು ದಾಖಲೆ ಸೃಷ್ಠಿಸಿತು. ಅವಿಶ್ರಾಂತವಾಗಿ 18 ದಿನಗಳವರೆಗೆ ಡೊಳ್ಳಿನ ಹಾಡುಗಳನ್ನು ಹಾಡಿದ ಕೀರ್ತಿ ಇವರದು. ಡೊಳ್ಳಿನ ಪದಗಳು ವಾದಿ ಪ್ರತಿವಾದಿಯಾಗಿ ಇವರ ಜೊತೆಯಲ್ಲಿ ಮನಗೂಳಿ ಯಲ್ಲಪ್ಪ ಮಾಸ್ತರ, ಸುರೇಶ್ ಕುಲಕರ್ಣಿ, ಹನುಮಂತಗೌಡ ಮಾಸ್ತರ, ಲಮಾಣಹಟ್ಟಿ ತುಕಾರಾ, ಸಂಗೋಗಿ ಮಹಾರಾಜರು, ಅರಟಾಳ ಕಲ್ಮೇಶ ಮುಂತಾದವರು ಇವರೊಂದಿಗೆ ಹಾಡಿದ್ದಾರೆ. ಉಮದಿಯ ಮಾನಸಿದ್ಧ ಇವರೊಂದಿಗೆ ಅತಿ ಹೆಚ್ಚು ಬಾರಿ ವಾದ-ಪ್ರತಿವಾದ ಮೇಳದಲ್ಲಿ ಹಾಡಿದ್ದಾರೆ. ಮದಗೊಂಡ ಮಹಾರಾಜರು, ಲಕ್ಷ್ಮಣ ಮಾಸ್ತರ, ಅರಟಾಳ ಕಲ್ಮೇಶ, ಬಳಗಾನೂರ ಮಹಾರಾಜರು, ರಾಯಪ್ಪ ಪೂಜಾರಿ, ನಾಗು ಬಾಗೇವಾಡಿ, ಪರಶು ಕರಡಿ ಮುಂತಾದವರು ಇವರಿಗೆ ಸಾಹಿತ್ಯ ರಚಿಸಿಕೊಟ್ಟ ಡೊಳ್ಳಿನ ಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

ಇವರು ಹಲವಾರು ಡೊಳ್ಳಿನ ಹಾಡಕಿ ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ. ಇವರ ಕಲೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಕೈಬೀಸಿ ಕರೆದಿದೆ. ಶ್ರೀ ಬೀರೇಶ್ವರ ಜಾತ್ರಾ ಸಮಿತಿ, ಬೊಮ್ಮನಜೋಗಿ “ಕರ್ನಾಟಕ ಕೋಗಿಲೆ ಕಂಠ ಪ್ರಶಸ್ತಿ” ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು “ಜಾನಪದ ಕೋಗಿಲೆ ಪ್ರಶಸ್ತಿ” ಶ್ರೀ ಬೀರಲಿಂಗೇಶ್ವರ ಸೇವಾ ಸಮಿತಿ, “ಸಂದ್ಬಾವನಾ ಪ್ರಶಸ್ತಿ” ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮುರಗುಂಡಿ ಹೀಗೆ ನೂರಾರು ಪ್ರಶಸ್ತಿಗಳು ಅವರ ಮುಡಿಗೇರಿವೆ. ಬಡತನದಲ್ಲಿ ನೋವುಗಳನ್ನು ಭಾವಿಸಿಕೊಂಡು ಸದಾ ಕ್ರಿಯಾಶೀಲರಾಗಿ ಇಂದಿಗೂ ಬಸವಳಿಯದೆ ಡೊಳ್ಳಿನ ಪದಗಳನ್ನು ಹಾಡುತ್ತಿದ್ದಾರೆ. ಇವರ ಕಲಾಸೇವೆಯನ್ನು ಕಂಡು ದಿನಾಂಕ 23.03 2022 ರಂದು ಸಂಜೆ ೪ ಘಂಟೆಗೆ ನಡೆಯಲಿರುವ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಬಸವನಬಾಗೇವಾಡಿಯ ವಿರಕ್ತಮಠದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು, ಬಸವನಬಾಗೇವಾಡಿ ವತಿಯಿಂದ ಗೌರವಿಸಲಾಗುತ್ತದೆ.


ಬ‌ಸವರಾಜ ಹಡಪದ
ಸಂಶೋಧನಾರ್ಥಿ
ರಾಣಿಚನ್ನಮ್ಮ ವಿಶ್ವವಿದ್ಯಾಲಯ,
ಬೆಳಗಾವಿ.

RELATED ARTICLES

Most Popular

error: Content is protected !!
Join WhatsApp Group