spot_img
spot_img

Honnali: ಮೌನ ಮತ್ತು ಮುಗುಳ್ನಗೆ ನಮ್ಮ ಶಾಶ್ವತ ಆಭರಣಗಳು

Must Read

spot_img
- Advertisement -

(ಪ್ರವಚನ: ಬ್ರಹ್ಮಕುಮಾರಿ ಶೋಭಕ್ಕ ಅಕ್ಕನವರು )

ಹೊನ್ನಾಳಿ: ಒಂದು ತಿಂಗಳ ಕಾಲ ನಡೆಯುತ್ತಿರುವ ಶರಣರು ಕಂಡ ಶಿವ ಪ್ರವಚನದಲ್ಲಿ ಇಂದು “ಮೌನ ಮತ್ತು ನಗುವನ್ನು ಕುರಿತು ಬ್ರಹ್ಮಕುಮಾರಿನಿ ಶೋಭಕ್ಕ ಅವರು ಪ್ರವಚನ ನೀಡಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಜಗತ್ತಿನ 140 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಜಾತಿ ಧರ್ಮಗಳಿಗೆ ಅಂಟಿಕೊಳ್ಳದೆ ಮಾನವೀಯ ನೆಲೆಗಟ್ಟಿನಲ್ಲಿ ಸಕಲ ಜೀವಾತ್ಮರಿಗೆ ಲೇಸನೇ ಬಯಸುವ, ನಮ್ಮೆಲ್ಲರಿಗೂ ಒಬ್ಬನೇ ಆದ ಪರಮಾತ್ಮನ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮನುಷ್ಯನ ಜಂಜಾಟದ ಧಾವಂತ ಜೀವನದಲ್ಲಿ ಆತ್ಮ ಮತ್ತು ಪರಮಾತ್ಮನ ವ್ಯತ್ಯಾಸ, ಜೀವಾತ್ಮರಿಗೆ ಇರಬೇಕಾದ ಮೌಲ್ಯಗಳ ಬಗ್ಗೆ  ತಿಳಿಸುವ ಉದ್ದೇಶದಿಂದ “ಶರಣರು ಕಂಡ ಶಿವ” ಪ್ರವಚನದ ಮೂಲಕ ಪ್ರತಿದಿನ ಜನತೆಗೆ ಅರಿವಿನ ಶಿಕ್ಷಣ ನೀಡಲಾಗುತ್ತಿದೆ. 

- Advertisement -

ನಮ್ಮ ಜೀವನದಲ್ಲಿ ಮೌನ ಮತ್ತು ಮುಗುಳ್ನಗೆ ಇವೆರಡೂ ಅತ್ಯಂತ ಮಹತ್ವದ್ದಾಗಿದ್ದು ಅವುಗಳು ನಮಗೆ ಶಾಶ್ವತ ಆಭರಣಗಳಾಗಿವೆ. ನಾವು ಎಂತದೆ ಸಂದರ್ಭದಲ್ಲೂ ಸಹ ಶಾಂತಚಿತ್ತರಾಗಿದ್ದರೆ ನಮಗೆ ಬರುವ ಕಷ್ಟಗಳು ಸರಾಗವಾಗಿ ಮರೆಯಾಗುತ್ತವೆ. ಶಾಂತಚಿತ್ತದಿಂದ ಮಾತ್ರ ಶಾಂತಿ ನೆಲೆಸಲು ಸಾಧ್ಯ. ಅಲ್ಲದೆ ನಮ್ಮ ಆತ್ಮಕ್ಕೆ ನಗು ಮತ್ತು ಮುಗುಳ್ನಗೆ ಸೌಂದರ್ಯಗಳು. ಎಷ್ಟೇ ನೋವು, ತೊಂದರೆ, ಒತ್ತಡ ಇದ್ದರೂ ಸಹ ನಗು ನಗುತಾ, ಶಾಂತ ಸ್ವಭಾವದಿಂದ ಸ್ವೀಕರಿಸಿದಾಗ  ಅವುಗಳಿಂದ ಪಾರಾಗಬಹುದು. 

ಇಡೀ ಜಗತ್ತಿಗೆ ಬುದ್ಧನ ಮೌನ ಪಾಠ. ಅಂತೆಯೇ ಮೌನದ ಮಹತ್ವವನ್ನು ನಾವು ಅರಿತು ಪಾಲಿಸಬೇಕು. ಅಕ್ಬರನು ತನ್ನ  ಆಸ್ಥಾನದಲ್ಲಿ ಇರುವ ಅತ್ಯಂತ ಬುದ್ಧಿವಂತ ಬೀರಬಲ್ಲನಿಗೆ ಅವನ ಬುದ್ದಿಮತ್ತೆಗೆ ಕಾರಣವೇನೆಂದು ಕೇಳಿ, ಅವನ ತಂದೆಯನ್ನು ಭೇಟಿ ಮಾಡಿ ಕೇಳಲು ಹೋಗುತ್ತಾನೆ. ಆಗ ಬೀರಬಲ್ಲನ ತಂದೆ ಅಕ್ಬರನ ಯಾವುದೇ ಪ್ರಶ್ನೆಗೆ ಮೌನದಿಂದ ಮುಗುಳ್ನಗುತ್ತಾ ತಲೆ ಅಲ್ಲಾಡಿಸುತ್ತ ಪ್ರತಿಕ್ರಿಯಿಸುತ್ತಾನೆ. ಇದನ್ನರಿತ ಅಕ್ಬರನಿಗೆ ಗೊತ್ತಾಗುತ್ತದೆ ಮೌನ ಮತ್ತು ಮುಗುಳ್ನಗೆ ಎಷ್ಟು ಮಹತ್ವದ್ದಾಗಿದೆ ಎಂದು. ಈ ಜಗತ್ತಿನಲ್ಲಿ ನಾವು ಒಯ್ಯುವುದು ಏನೂ ಇಲ್ಲ, ಎಲ್ಲಾ ಇಲ್ಲೇ ಬಿಟ್ಟು ಹೋಗುವದು. ಇರೋವರೆಗೂ ಪ್ರಸನ್ನವದನರಾಗಿ ಇರಬೇಕು. ದೇವರುಗಳ ಹೆಸರು ಬರೆಯುವಾಗ ನಾವೆಲ್ಲ ಶ್ರೀ ಮಲ್ಲಿಕಾರ್ಜುನ ಪ್ರಸನ್ನ, ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಸನ್ನ ಅಂತ ಬರೆಯುವದಿಲ್ಲವೆ, ನೋಡಿ, ದೇವರುಗಳು ಸಹ ನಗು ನಗುತಾ ಇರುತ್ತವೆ ಅಂತಾದರೆ ನಾವೇಕೆ ಮುಗುಳ್ನಗೆಯ ಬೀರಬಾರದು.  ನಾವು ಸದಾ ಸುಖವಾಗಿ ಇರಬೇಕೆಂದರೆ ನಮ್ಮೊಳಗೆ ನಾವು ನಾನಾರೆಂದು ಅರಿತು  ಸುಮ್ಮನಿರಬೇಕು.

ಎಷ್ಟೋ ಜನ ಸೌಂದರ್ಯದ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುತ್ತಾರೆ. ಅದರಲ್ಲೂ ಕೆಲವು  ಹೆಣ್ಣು ಮಕ್ಕಳು. ಮುಖ ಸುಂದರವಾಗಿಲ್ಲ ಅಂತಾ ಏನೆಲ್ಲಾ ಕ್ರೀಮ್, ಪೌಡರ್ ಹಚ್ಚುತ್ತೇವೆ. ಆದರೆ ನಗುವಿನ ಮನಸು ಇದ್ದರೆ, ಮುಗುಳ್ನಗೆ ಇದ್ದರೆ, ಮಂದಹಾಸ ಇದ್ದರೆ ಮುಖ ಸುಂದರವಾಗಿಯೇ ಇರುತ್ತದೆ ಎಂಬ ಸತ್ಯ ಗೊತ್ತಿರುವುದಿಲ್ಲ. ನಾವು ಮಕ್ಕಳಾಗಿದ್ದಾಗ ಮುಗುಳ್ನಗೆ, ನಗು ಯಥೇಚ್ಚ ಇರುತ್ತೆ, ಆದರೆ ದೊಡ್ಡವರಾದಂತೆ ನಗು ಕಡಿಮೆಯಾಗುತ್ತಾ ಹೋಗುತ್ತೆ. ಅದಾಗಬಾರದು. ದಿನದಲ್ಲಿ ನನ್ನನ್ನು ನಾನು ಅವಲೋಕನ ಮಾಡಿಕೊಂಡರೆ ನಗುವಿನೊಂದಿಗೆ ಇರಲು ಸಾಧ್ಯ. ಎಷ್ಟು ಸಂಪತ್ತು ಕೂಡಿಟ್ಟರೇನು, ಮನಸಿಗೆ ನೆಮ್ಮದಿ ಇರದಿದ್ದರೆ ಅದು ವ್ಯರ್ಥ. ನಮಗೆ  ಯಾವುದೇ ಬಾಹ್ಯ ಕಾರಣದಿಂದ ನಗು ಆಗಬಾರದು. ಅದು ಯಾವಾಗಲೂ ನೀರಿನ ಬುಗ್ಗೆ ತರ ಸದಾ ನಮ್ಮೊಳಗೆ ಇರಬೇಕು. ಮುಖದ ಮೇಕಪ್ ಮಾಡಲು ಎಷ್ಟೆಲ್ಲ ಖರ್ಚು ಮಾಡುತ್ತೇವೆ. ಆದರೆ ಆ ಮುಖದಲ್ಲಿ ನಗು ಇರದಿರೆ ಆ ಸಾವಿರಾರು ಖರ್ಚು ಮಾಡಿದ ಸೌಂದರ್ಯ ವ್ಯರ್ಥ. ಹಾಗಾಗಿ ಮುಖಕ್ಕೆ ಸೌಂದರ್ಯವರ್ಧಕ ಹಚ್ಚುವದಕ್ಕಿಂತ ಮುಗುಳ್ನಗೆ, ನಗು ಮೊಗದ ನಮ್ಮದಾಗಬೇಕು. 

- Advertisement -

ನಗು ಬೇಕಾದರೆ ಸಿಟ್ಟು, ಕ್ರೋಧ, ಕೋಪ ತಾಪಗಳನ್ನು ಕಡಿಮೆ ಮಾಡುವ ಪ್ರಯತ್ನ ಬೇಕು. ಎಷ್ಟೋ ಬಾರಿ ದುಡುಕಿ, ಆ ನಂತರ ಅಯ್ಯೋ ಹೀಗಾಗಬಾರದಿತ್ತು ಅಂತ ಪರಿತಪಿಸುತ್ತಾರೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಅರಿವು ಸದಾ ಜಾಗೃತವಾಗಿರಬೇಕು. ನಮ್ಮನ್ನು ನಾವು ಶಾಂತವಾಗಿ ಇಟ್ಟುಕೊಳ್ಳಬೇಕು. ಮನದ ಮೌನ ಮತ್ತು ಮಾತಿನ ಮೌನ ನಮಗೆ ಬೇಕು. ಇತ್ತೀಚೆಗಂತೂ ಎಲ್ಲರ ಕೈಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಕೈಯಲ್ಲಿ ಮೊಬೈಲ್ ಇರಲಿ, ಬಿಡಲಿ, ಆದರೆ ಮುಖದಲ್ಲಿ ನಗುವಿರಲಿ ಎಂಬ ಮಾರ್ಮಿಕ ಒಳಗುಟ್ಟು ನಮಗೆ ಇರಲಿ. ಈ ಜಗತ್ತಿನಲ್ಲಿ ಮಾನವ ಯಾಕೆ ಶ್ರೇಷ್ಠ ಅಂದರೆ ನಮ್ಮಲ್ಲಿ ನಗು, ಮುಗುಳ್ನಗೆ ಇದೆ. ಮುಗುಳ್ನಗೆ ಎಂಬುದು ಕೊಟ್ಟಷ್ಟು ಇಮ್ಮಡಿ ಆಗುತ್ತದೆ. ನಾವು ನಗುತ ಇದ್ರೆ, ಮಕ್ಕಳು ನಗುತ ಇರ್ತಾರೆ. ಮಕ್ಕಳಲ್ಲಿ ನಾವು ಮೌಲ್ಯಗಳನ್ನು ಶಾಲೆಯ ಪಠ್ಯದಲ್ಲಿ ಮಾತ್ರ ಕೊಡಲು ಸಾಧ್ಯವಿಲ್ಲ, ನಮ್ಮ ನಿತ್ಯ ನಡೆ ನುಡಿಯಲ್ಲಿ ನೋಡಿ ಮಕ್ಕಳು ಕಲಿಯುತ್ತಾರೆಂಬ ಅರಿವು ನಮಗಿರಬೇಕು. ಭಗವಂತ ಎಲ್ಲದನ್ನೂ ನಮಗೆ ಅಧಿಕಾರ ಕೊಟ್ಟಿಲ್ಲ, ಯಾಕಂದ್ರೆ ನಾವು ನಮಗೆ ಬೇಕಂದಂತೆ ಮಾಡಿಕೊಳ್ಳುತ್ತೇವೆ. ಆಗ ಏನೆಲ್ಲಾ ಅವಘಡಗಳು ಆಗಬಹುದು. ಆದರೆ ಭಗವಂತ ಸದಾ ಮೌನ ಮತ್ತು ಮುಗುಳ್ನಗೆಗಳನ್ನು ಕೊಟ್ಟಿದ್ದಾನೆ. ನಾವು ಅವನ್ನು ಬಳಸಿಕೊಳ್ಳಬೇಕು ಅಷ್ಟೇ. ನಮಗೆ ಕರ್ಮಗಳ ಅರಿವು ಇದ್ದಾಗ ನಾವು ಸರಳವಾಗಿ ಇರುತ್ತೇವೆ. ಸರಳವಾಗಿ ಇರಲು ನಗು ಮೋಗ ಬೇಕು. ಹೀಗೆ ನಗು ಮತ್ತು ಮೌನ ಈ ಜಗತ್ತಿನಲ್ಲಿ ಬೆಲೆಕಟ್ಟಲಾಗದ ಆಭರಣಗಳು. ಅವನ್ನು ಭಗವಂತ ಕೊಟ್ಟಿದ್ದಾನೆ. ನಾವು ಬಳಸಿಕೊಂಡು ಪರಮಪಿತ ಪರಮಾತ್ಮನ ಕೃಪೆಗೆ ಪಾತ್ರರಾಗೋಣ. ಏನಂತೀರಾ..

ಪ್ರತಿನಿತ್ಯ ನಡೆಯುತ್ತಿರುವ ಪ್ರವಚನ ಇದೆ ತಿಂಗಳ 30 ಕ್ಕೆ ಸುಖ ಸಂಪನ್ನವಾಗಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪರಮಾತ್ಮನ ಕೃಪೆಗೆ ಪಾತ್ರರಾಗಲು ಹೊನ್ನಾಳಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಜ್ಯೋತಿ ಅಕ್ಕ ಅವರು ವಿನಂತಿ ಮಾಡಿದರು.


ಲೇಖನ:  ಸಂತೋಷ್ ಬಿದರಗಡ್ಡೆ

ಶಿಕ್ಷಕ ಸಾಹಿತಿ.

- Advertisement -
- Advertisement -

Latest News

ಕವನ : ಜೀವನ ಸತ್ಯ

 ಜೀವನ ಸತ್ಯ ಬೇವಿನ ಬೀಜವನ್ನು ನೆಟ್ಟರೆ ಬೇವು ಮಾತ್ರ ಬೆಳೆಯುತ್ತದೆ, ಸುಳ್ಳಿನ ನೆರಳಿನಲ್ಲಿ ಸತ್ಯ ಬೆಳೆಯುವುದಿಲ್ಲ. ಎಳ್ಳು ಬಿತ್ತಿದರೆ ಸಾಸಿವೆ ಬೆಳೆಯುವುದಿಲ್ಲ, ಕರ್ಮವೇ ಫಲ ಎಂದು ಜಗತ್ತು ಅರಿಯುವುದಿಲ್ಲ. ಕಲ್ಲಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group