ಸಿಂದಗಿ: ಮೊಹರಂ ಹಬ್ಬವನ್ನು ಎಲ್ಲ ಸಮಾಜದವರು ಭಾವೈಕ್ಯತೆಯಿಂದ ಆಚರಣೆ ಮಾಡಿ, ಶಾಂತಿಗೆ ಭಂಗ ತರುವ ಚಟುವಟಿಕೆಗಳಲ್ಲಿ ತೊಡಗಿದವರ ಮೇಲೆ ಪೊಲೀಸ್ ಪ್ರಕರಣ ದಾಖಲಾದರೆ, ಅವರು ಸರ್ಕಾರಿ ಅಥವಾ ಖಾಸಗಿ ನೌಕರಿಯಿಂದ ವಂಚಿತವಾಗಬೇಕಾಗುತ್ತದೆ. ಎಂದು ಸಿಪಿಐ ಡಿ. ಹುಲುಗಪ್ಪ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡ ಮೊಹರಂ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಬಾಂಧವರು ಒಗ್ಗಟ್ಟಾಗಿ ಶಾಂತಿ-ಸೌಹಾರ್ದದಿಂದ ಆಚರಿಸಬೇಕು ಅಂತಹುದಕ್ಕೆ ಆಸ್ಪದ ಕೊಡಬೇಡಿ. ದೇವರು ಪ್ರತಿಷ್ಠಾಪನಾ ಮಂಡಳಿಯವರು ಸಾಧ್ಯವಾದಷ್ಟು ಜನ ಜಂಗುಳಿ ಸೇರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಪಿ.ಎಸ್.ಐ ಭೀಮಪ್ಪ ರಬಕವಿ ಮಾತನಾಡಿ, ಎಲ್ಲ ನಾಯಕರನ್ನು ಒಂದುಗೂಡಿಸಿ ಹೊಂದಾಣಿಕೆ ಮಾಡಬೇಕೆನ್ನುವ ಉದ್ದೇಶವನ್ನು ಹೊಂದಿದೆ. ಮೊಹರಂ ಆಚರಣೆ ಎಂದರೆ ಹಿಂದೂ ಮುಸ್ಲಿಂರ ಮಧ್ಯೆ ಸೌಹಾರ್ದತೆಯ ಬೆಳೆಸುವ ಹಬ್ಬವಾಗಿದೆ. ಆಚರಣೆ ಸಂದರ್ಭದಲ್ಲಿ ಯಾರಾದರೂ ಕೋಮು ಗಲಭೆ ಎಬ್ಬಿಸುವ ಸುಳಿವು ಸಿಕ್ಕರೆ ಅಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಸ್ಲಿಂ ಸಮಾಜದ ಮುಖಂಡರು ಎಂ.ಎ.ಖತೀಬ ಮಾತನಾಡಿದ ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಹಬ್ಬ ಆಚರಣೆಗಳು ನಡೆಯುತ್ತವೆ. ಇವೆಲ್ಲವೂ ಸಂಪ್ರದಾಯ, ನಂಬಿಕೆ ಮತ್ತು ಶ್ರದ್ಧಾ ಭಕ್ತಿಯಿಂದ ಆಚರಿಸುವ ಹಬ್ಬಗಳಾಗಿವೆ. ತಮ್ಮ ಸಂಸ್ಕೃತಿ, ಸಂಪ್ರದಾಯಕ್ಕೆ ತಕ್ಕಂತೆ ಜನತೆ ಹಬ್ಬ ಆಚರಿಸಿ ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ. ನಾವು ಆಚರಿಸುವ ಹಬ್ಬಗಳಲ್ಲಿ ಭಾವೈಕ್ಯತೆ ಪ್ರತಿಬಿಂಬಿಸುವ ಹಲವು ಹಬ್ಬಗಳಿವೆ. ಅದರಲ್ಲಿ ಮೊಹರಂ ಹಬ್ಬಕ್ಕೆ ಮೊದಲ ಸ್ಥಾನ. ಈ ಹಬ್ಬವನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಧರ್ಮೀಯರು ಆಚರಿಸುವುದು ವಿಶೇಷವಾಗಿದೆ.
ಮೊಹರಂ ಹಬ್ಬ ಕೇವಲ ಹಬ್ಬವಾಗಿರದೆ ಹಿಂದೂ ಮುಸ್ಲಿಂ ಭಾವೈಕ್ಯತೆ ಪ್ರತೀಕವಾಗಿದೆ. ಪುರಾತನ ಕಾಲದಿಂದಲೂ ಮೊಹರಂ ಹಬ್ಬವನ್ನು ಭಾವೈಕ್ಯತೆ, ಸಹೋದರತೆಯಿಂದ ಆಚರಿಸಲಾಗುತ್ತಿದೆ ಎಂದರು,
ಪುರಸಭೆ ಸದಸ್ಯ ರಾಜಣ್ಣಿ ನಾರಾಯಣಕರ, ಮಾತನಾಡಿದ ಗ್ರಾಮೀಣ ಪ್ರದೇಶಗಳಲ್ಲಿ ಮೊಹರಂ ಹಬ್ಬವು ಒಂದು ವಿಶಿಷ್ಟವಾದ ಸಾಂಸ್ಕೃತಿಕ ಆಚರಣೆಯಾಗಿದೆ. ಇಂದಿಗೂ ಹಳ್ಳಿಗಳಲ್ಲಿ ಎಲ್ಲಾ ಸಮುದಾಯದ ಜನರ ಬಾಂಧವ್ಯವನ್ನು ಮೊಹರಂ ಹಬ್ಬ ಗಟ್ಟಿಗೊಳಿಸಿದೆ. ಇದು ಭಾರತೀಯ ಸಂಸ್ಕೃತಿಯಲ್ಲಿ ಕಂಡು ಬರುವ ವಿಶಿಷ್ಟ ಆಚರಣೆಯಾಗಿದೆ ಶಾಂತಿ ಮತ್ತು ಧರ್ಮದ ಉಳಿವಿಗಾಗಿ ಹೋರಾಡಿ ಮಡಿದ ಪ್ರವಾದಿ ಮೊಹಮದ್ ಪೈಗಂಬರರ ಮೊಮ್ಮಕ್ಕಳಾದ ಹಜರತ್ ಹಸನ್ ಮತ್ತು ಹುಸೇನರ ನೆನಪಿಗಾಗಿ ಮೊಹರಂ ಹಬ್ಬ ಆಚರಿಸಲಾಗುತ್ತದೆ. ಹಬ್ಬಕ್ಕೆ ಒಂದು ಇತಿಹಾಸ ಹಾಗೂ ಧಾರ್ಮಿಕ ಹಿನ್ನೆಲೆಯಿದೆ. ಮೊಹರಂ ಹಬ್ಬದಿಂದ ಇಸ್ಲಾಂ ಧರ್ಮೀಯರ ವರ್ಷ ಪ್ರಾರಂಭವಾಗುತ್ತದೆ ಎಂಬ ಪ್ರತೀತಿಯಿದೆ. ಇದು ಮೊಹಮದಿಯರಿಗೆ ಹೊಸ ವರ್ಷವಿದ್ದಂತೆ. ಈ ತಿಂಗಳ ಹತ್ತನೇ ದಿನ ಮೊಹರಂ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಜತ ತಾಂಬೆ ಮಾತನಾಡಿ, ಹಿಂದೂ ಮುಸ್ಲಿಂ ಬಾಂಧವ್ಯ ಗ್ರಾಮೀಣ ಪ್ರದೇಶದಲ್ಲಿ ಮೊಹರಂ ಹಬ್ಬವನ್ನು 10 ದಿನಗಳ ಕಾಲ ಸಂಭ್ರಮದಿಂದ ಆಚರಿಸುತ್ತಾರೆ. ಹಿಂದೂ ಮುಸ್ಲಿಂ ಎಂಬ ಬೇಧ-ಭಾವವಿಲ್ಲದೆ ಎಲ್ಲರೂ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅನೇಕ ಕಡೆ ಹಿಂದೂಗಳೇ ಪೂಜೆ ಸಲ್ಲಿಸುತ್ತಾರೆ. ಮೊಹರಂ ಹಬ್ಬದ ಸಂದರ್ಭದಲ್ಲಿ ಭಕ್ತಾದಿಗಳು ನಾನಾ ಹರಕೆಗಳನ್ನು ನೆರವೇರಿಸುತ್ತಾರೆ ಎಂದರು.
ಈ ವೇಳೆ ಶರಣಯ್ಯ ಮಠ, ಮಾಜಿ ಪುರಸಭೆ ಅಧ್ಯಕ್ಷ ಜಾಕಿರ್ ಮಕಂದಾರ, ಪರಶುರಾಮ ಮಣೂರ,ಪುರಸಭೆ ಸದಸ್ಯ ಭೀಮು ಕಲಾಲ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.