ಸಿಂದಗಿ: ಸ್ವಚ್ಛತೆ ಸ್ವಸ್ಥ ಬದುಕಿನ ಅರಿವು ಪ್ರತಿಯೊಬ್ಬರ ಸಾಮಾಜಿಕ ಕಾಳಜಿಯಾಗಬೇಕು ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಸ್ವಯಂ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ನಬಿರಸೂಲ್ ಉಸ್ತಾದ್ ಕರೆ ನೀಡಿದರು.
ಪಟ್ಟಣದ ಶ್ರೀ ಚನ್ನವೀರ ಸ್ವಾಮೀಜಿ ಪ್ರೌಢಶಾಲಾ ಆವರಣದಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಮಾಡಬಾರದೆಂದು ನಾವು ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಕೆಲ ಅಂಗಡಿಗಳಲ್ಲಿ, ಬಟ್ಟೆ ಅಂಗಡಿಗಳಲ್ಲಿ ದಿನಸಿ ಅಂಗಡಿ, ನಮಗೆ ಗೊತ್ತಿಲ್ಲದ ಹಾಗೆ ಬಳಕೆ ಮಾಡುತ್ತಿರುವುದು ಬೇಸರದ ಸಂಗತಿ.
ದಯಮಾಡಿ ಯಾರು ಕೂಡ ಬಳಸದೇ ನಮ್ಮ ಜೊತೆ ಸಹಕರಿಸಿದರೆ ಮುಂದಿನ ಪೀಳಿಗೆಗೆ ಆರೋಗ್ಯಕರ ವಾತಾವರಣ ಉಂಟು ಮಾಡಬಹುದು. ಆರೋಗ್ಯಕ್ಕೆ ಮಾರಕವಾಗುವ ವಸ್ತುಗಳನ್ನು ಈಗಲೇ ನಿಷೇಧ ಮಾಡಲು ಪಣ ತೊಡುವಂತೆ ಸಹಕಾರ ಕೋರಿದರು. ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದರೆ ಮೊದಲ ಸಲ ಒಂದು ರೀತಿಯ ದಂಡ, ಎರಡನೇ ಬಾರಿ ಅವರೆ ಮತ್ತೆ ಪ್ಲಾಸ್ಟಿಕ್ ಬಳಸುವುದು ಕಂಡು ಬಂದರೇ ಹೆಚ್ಚಿನ ದಂಡ ವಿಧಿಸುವುದಾಗಿ ಎಚ್ಚರಿಸಿದರು. ಈ ಅಭಿಯಾನದ ಯಶಸ್ಸಿಗೆ ನಗರದ ನಾಗರಿಕರು ಕೈಜೋಡಿಸಿ, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಇನ್ನೋರ್ವ ಕಿರಿಯ ಆರೋಗ್ಯ ನಿರೀಕ್ಷಕಿ ಇಂದುಮತಿ ಮಣೂರ, ಅನೀಲ ಚೌರ, ಶಾಲೆಯ ಮುಖ್ಯಗುರು ಜಿ.ಜಿ.ಬಿರಾದಾರ, ಎಮ್.ಬಿ. ಅಲ್ದಿ, ಮಂಜುನಾಥ್ ತಳವಾರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.