ಶಾರದಾವಿಲಾಸ ಪದವಿಪೂರ್ವ ಕಾಲೇಜು
ಸಮಷ್ಟಿ ವಾರ್ಷಿಕ ಕ್ರೀಡಾಕೂಟ – ೨೦೨೫ ಕ್ಕೆ ಚಾಲನೆ
ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಇಂದು (೦೪-೧೨-೨೦೨೫) ಸಮಷ್ಟಿ ವಾರ್ಷಿಕ ಕ್ರೀಡಾಕೂಟಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟುವಾದ ಎಂ.ಯೋಗೇಂದ್ರ ರವರು ಚಾಲನೆ ನೀಡಿ ಮಾತನಾಡುತ್ತಾ ಕ್ರೀಡಾ ಚಟುವಟಿಕೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು, ಇದರಿಂದ ಮನುಷ್ಯನ ಆರೋಗ್ಯ ಮತ್ತು ಮನಸ್ಸು ಚಟುವಟಿಕೆಯಿಂದ ಉಲ್ಲಾಸದಾಯಕವಾಗುತ್ತದೆ ಎಂದರು
ಅವರು ಪಠ್ಯ ಚಟುವಟಿಕೆಗಳ ಜೊತೆಗೆ ಸಹ ಪಠ್ಯ ಚಟುವಟಿಕೆಗಳಾದ ಕಬ್ಬಡಿ, ಖೋ ಖೋ, ಥ್ರೋಬಾಲ್, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಕ್ರಿಕೆಟ್ ಇತರ ಕ್ರೀಡಾ ಚಟುವಟಿಕೆಗಳಲ್ಲಿ ನಿಮಗೆ ಇಷ್ಟದ ಕ್ರೀಡೆಯಲ್ಲಿ ಪ್ರತಿನಿತ್ಯವೂ ಅಭ್ಯಾಸದಲ್ಲಿ ತೊಡಗಿಸಿಕೊಂಡಾಗ ಆರೋಗ್ಯವು ವೃದ್ಧಿಸುವುದರ ಜೊತೆಗೆ ಹೆಚ್ಚು ಕಾಲ ರೋಗದಿಂದ ದೂರವಿರಬಹುದು ಎಂದು ಅಭಿಪ್ರಾಯಿಸಿದರು.ಇಂದಿನ ವಿದ್ಯಾರ್ಥಿಗಳಾದ ನೀವು ಅರಿತು ಓದಿನ ಜೊತೆಗೆ ಕನಿಷ್ಠ ಒಂದು ಗಂಟೆಗಳ ಕಾಲ ನಿತ್ಯ ಕ್ರೀಡೆಯಲ್ಲಿ ಭಾಗವಹಿಸಬೇಕೆಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಶಾರದಾವಿಲಾಸ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ದಿನೇಶ್.ಆರ್ ರವರು ಮಾತನಾಡಿ ವಿದ್ಯಾರ್ಥಿ ಸಮುದಾಯ ಚಂಚಲ ಮನಸ್ಸನ್ನು ಬಿಟ್ಟು ಏಕಾಗ್ರತೆಯಿಂದ ತಮಗೆ ಇಷ್ಟವಾದ ಕ್ಷೇತ್ರಗಳಲ್ಲಿ ಸಾಧನೆ ತೋರುವಲ್ಲಿ ಮುಂದಾಗಬೇಕು. ಗುರಿ ಮುಟ್ಟುವವರೆಗೆ ಸತತ ಅಭ್ಯಾಸ ಮತ್ತು ಶ್ರಮ ಪಡಬೇಕೆಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಸಿ.ಕೆ.ಅಶೋಕ್‌ಕುಮಾರ್ ರವರು ವಿದ್ಯಾರ್ಥಿಗಳು ಪರಿಶ್ರಮಪಟ್ಟಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು, ಇದಕ್ಕೆ ತಕ್ಕ ಅಭ್ಯಾಸವೂ ಅಗತ್ಯ, ನಮ್ಮ ಗ್ರಂಥಾಲಯದಲ್ಲಿ ಸಿಗುವ ಪುಸ್ತಕಗಳನ್ನು ಓದಿ ಜ್ಞಾನವನ್ನು ಸಂಪಾದನೆ ಮಾಡುವುದರ ಜೊತೆಗೆ ಸಾಧನೆ ಮಾಡಬಹುದು ಎಂದರು. ಹಾಗೆಯೇ ಕ್ರೀಡಾಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ರಾಜ್ಯ ಮತ್ತು ದೇಶಕ್ಕೆ ಅತ್ಯುತ್ತಮ ಕ್ರೀಡಾಪಟುವಾಗಲು ಸಾಧ್ಯ ಎಂದು ತಿಳಿಸಿದರು.
ವೇದಿಕೆಯಲ್ಲಿ ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕರಾದ ಶಿವಶಂಕರ್.ಡಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ರಾಜೇಂದ್ರಪ್ರಸಾದ್ ಸ್ವಾಗತದೊಂದಿಗೆ ಅತಿಥಿಗಳನ್ನು ಪರಿಚಯಿಸಿದರೆ, ಕುಮಾರಿ ನಯನ ಪ್ರಾರ್ಥಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಮನೋಜ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರೆ, ಶಿವಶಂಕರ್.ಡಿ ರವರು ವಂದಿಸಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಅಂತರಾಷ್ಟ್ರೀಯ ಕ್ರೀಡಾಪಟು ಎಂ.ಯೋಗೇಂದ್ರ ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

