ಮೂಡಲಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಮೂಡಲಗಿ ಯೋಜನಾ ಕಛೇರಿ ವ್ಯಾಪ್ತಿಯ ಖಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಪೂಜ್ಯ ಖಾವಂದರ ಆಶಯದಂತೆ ರೂ.05 ಲಕ್ಷಗಳ ಅನುದಾನದ ಡಿ.ಡಿ ವಿತರಣೆ ಮಾಡಲಾಯಿತು.
ಜಿಲ್ಲಾ ನಿರ್ದೇಶಕರಾದ ಕೇಶವ ದೇವಾಂಗ ಹಾಗೂ ಮೂಡಲಗಿ ಯೋಜನಾ ಕಛೇರಿಯ ಯೋಜನಾಧಿಕಾರಿಗಳಾದ ದೇವರಾಜ್ ರವರು ದೇವಸ್ಥಾನಗಳ ಅಭಿವೃದ್ಧಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರಿಗೆ ಅನುದಾನದ ಡಿ.ಡಿಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ನಿರ್ದೇಶಕರಾದ ಕೇಶವ ದೇವಾಂಗರವರು, ಶ್ರದ್ಧಾಕೇಂದ್ರಗಳು ಮಾನವನಲ್ಲಿ ಧನಾತ್ಮಕ ವಿಕಲ್ಪಗಳನ್ನು ಮೂಡಿಸುವ ನಿಟ್ಟಿನಲ್ಲಿ ಮಾನವನ ಮನಸ್ಸನ್ನು ಜಾಗೃತಗೊಳಿಸುವಲ್ಲಿ ಹಾಗೂ ಮಾನವನಲ್ಲಿ ಅಧ್ಯಾತ್ಮ ಭಾವನೆ ಮೂಡಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವ ಶಕ್ತಿಕೇಂದ್ರಗಳಾಗಿವೆ ಎಂದು ಅಭಿಪ್ರಾಯಪಟ್ಟರು. ಪ್ರತಿಯೊಬ್ಬ ವ್ಯಕ್ತಿಯು ಶ್ರದ್ಧಾಕೇಂದ್ರಗಳನ್ನು ನಿರ್ಮಿಸುವುದಷ್ಟೇ ಅಲ್ಲದೇ ಉತ್ತಮ ರೀತಿಯಲ್ಲಿ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು. ಯೋಜನಾಧಿಕಾರಿಗಳಾದ ದೇವರಾಜ್‍ರವರು, ಮೇಲ್ವಿಚಾರಕರಾದ ಶ್ರೀಮತಿ ಕಂದಗಲ್ ನೀಲಮ್ಮ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಹಣಮಂತ ಬಸಳಿಗುಂದಿ, ಹಾಗೂ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಕಮೀಟಿ ಸದಸ್ಯರು, ಸೇವಾಪ್ರತಿನಿಧಿಗಳು, ಒಕ್ಕೂಟ ಪದಾಧಿಕಾರಿಗಳು, ವಿವಿಧ ಸಂಘಗಳ ಸದಸ್ಯರು ಹಾಗೂ ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.