ಹೊಸ ವರ್ಷ ಹೊಸತನ. ಹೊಸ ಗಂಧ ಹಾಸಿಹುದು ಹೊಸ ಬಂಧನ ಹೊಂಗನಸು ಬೇವು ಬೆಲ್ಲ. ಹೊಸ ದಿನವು ಹೊಸೆದಿಹುದು ಹೊಸ ಬಾಳ ಹೊಂಬೆಳಕು ಹೊಸ ಗೀತೆ ಹಾಡಾಗಿ ಸವಿಯ ಸೊಲ್ಲ…
ನಾಗಾಲೋಟದಂತ್ತೆ ಓಡುತ್ತಿರುವ ಇಂದಿನ ಜೀವನ ಶೈಲಿಗೆ ನಿಜವಾಗಿಯೂ ಚಿಕ್ಕ ಚಿಕ್ಕ ಬ್ರೇಕ್ ಅಂದರೆ ವಿರಾಮದ ಅಗತ್ಯ ಇದೆ.ಅದಕ್ಕೆ ತಾನೆ ನಮ್ಮ ಋತುವಿಗೆ ತಕ್ಕಂತೆ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳಿಗೆ ತಕ್ಕಂತೆ ಹಬ್ಬ ಹರಿದಿನಗಳ ಆಚರಣೆ ಮಾಡಲಾಗುತ್ತದೆ.
ನಮ್ಮ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆ ತರುವ ನಿಟ್ಟಿನಲ್ಲಿ ನಮ್ಮ ಉಡಿಗೆ ತೊಡಿಗೆ ಊಟ ಉಪಚಾರ ಪೂಜೆ ಪುನಸ್ಕಾರ ನಮ್ಮ ನಮ್ಮ ಸಂಪ್ರದಾಯದಂತೆ ಎಲ್ಲವೂ ಆಚರಣೆ ಮಾಡುತ್ತ ಬಂದಿದ್ದೇವೆ.
ಕೆಲಸದ ಒತ್ತಡ ಬಿಡುವಿಲ್ಲದ ಜೀವನ ಶೈಲಿಯಿಂದ ಸ್ಪಲ್ಪ ಬಿಡುವು ಮಾಡಿಕೊಳ್ಳಲೇಬೇಕು. ಹಬ್ಬ ಹರಿದಿನಗಳಲ್ಲಿ ಎಲ್ಲಿಲ್ಲದ ವಿಶೇಷತೆ ಇರುತ್ತದೆ. ಮನೆಯ ಮುಂದೆ ರಂಗೋಲಿ, ತಳಿರು ತೋರಣಗಳಿಂದ ಸಿಂಗರಿಸಿದ ಮನೆ, ವಿವಿಧ ಬಗೆಯ ಸಿಹಿ ತಿಂಡಿ,ಮನೆ ಹಾಗೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆ…. ಹೀಗೆ ಇಂತಹ ಸಂಭ್ರಮದ ಆಚರಣೆಗಳನ್ನು ಯಾವತ್ತು ಬಿಡಬಾರದು, ತಪ್ಪಿಸಿಕೊಳ್ಳಬಾರದು.
ಅದರಲ್ಲಿಯೂ ವಿಶೇಷವಾಗಿ ಯುಗಾದಿ ಹಬ್ಬ ಅಂದರೆ ಭಾರತೀಯರ ಪ್ರಕಾರ ಹೊಸ ವರ್ಷದ ಆರಂಭ… ಎಲ್ಲೆಲ್ಲೂ ಚಿಗುರೊಡೆದ ಗಿಡಮರಗಳು, ಮಾವು ಬೇವು ಹೊನ್ನೆ ತಾಳೆ…. ಹೀಗೆ ಗಿಡಮರಗಳು ಹೂ ಬಿಟ್ಟು ಪ್ರಕೃತಿಯ ಸೌಂದರ್ಯ ಘಮ್ ಎನ್ನುವ ಸೊಬಗು ನೀಡುತ್ತದೆ. ಹೊಸ ಯುಗದ ಆರಂಭ… ಹೊಸ ವರುಷ ಹೊಸ ಹರುಷದಿ ಆರಂಭ ಆಗುತ್ತದೆ.
ಯುಗಾದಿಯನ್ನು ಚಂದ್ರಮಾನ ಯುಗಾದಿ ಹಾಗೂ ಸೌರಮಾನ ಯುಗಾದಿ ಎಂಬ ಹೆಸರುಗಳಿಂದ ಕರೆಯಲ್ಪಡುತ್ತಾರೆ . ಚಂದ್ರನ ಚಲನೆಯನ್ನು ಅನುಸರಿಸಿ ಅದರ ತಿಥಿಯ ಅನುಸಾರ ನಡೆದುಕೊಳ್ಳುವುದು ಹಾಗೂ ಸೂರ್ಯನು ಮೇಷ ರಾಶಿಗೆ ಪ್ರವೇಶಿಸುವ ಸಮಯವನ್ನು ಸೌರಮಾನ ಯುಗಾದಿ ಎನ್ನುವರು.
ಇಲ್ಲಿ ವಿವಿಧ ಬಗೆಯ ಅಡುಗೆಗಳೊಂದಿಗೆ ಬೇವು ಬೆಲ್ಲದ ವಿಶೇಷವಿದೆ , ಬೇವು ಎಲ್ಲ ಹಣ್ಣುಗಳನ್ನು ಹಾಗೂ ಸಣ್ಣಗೆ ಹೆಚ್ಚಿದ ಮಾವಿನ ಕಾಯಿ ಹಾಗೂ ಬೇವಿನ ಮರದ ಹೂವುಗಳಿಂದ ಮಾಡಿದ ಪಾನಕ. ಬೇಸಿಗೆ ಬಿಸಿಲು ತಣಿಸುವ ಜೊತೆಗೆ ಸಿಹಿ ಕಹಿ ಹೊಂದಿರುವ ತಂಪಾದ ಪಾನಕದ ರುಚಿ ಅದ್ಭುತ…. ಶುದ್ಧ ದೇಶಿ ಪಾನಕ ಆರೋಗ್ಯಕ್ಕೂ ಒಳ್ಳೆಯದು.ಹಾಗೂ ಬೇವು- ಬೆಲ್ಲವನ್ನು ಸುಖ ದುಃಖ ಗಳಿಗೆ ಹೋಲಿಸಲಾಗಿದೆ. ಜೀವನದಲ್ಲಿ ಬರುವ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು. ಸಂತೋಷದ ಸಮಯದಲ್ಲಿ ಹಿಗ್ಗುವುದು ಹಾಗೂ ದುಃಖದ ಸಮಯದಲ್ಲಿ ಕುಗ್ಗುವದಕಿಂತ್ತ ಎರಡನ್ನೂ ಸಮ ಪ್ರಮಾಣದಲ್ಲಿ ಸ್ವೀಕರಿಸಿ, ನಮ್ಮ ದುಃಖ ದುಮ್ಮಾನಗಳಿಗೆ ಸೂಕ್ತ ಪರಿಹಾರ ಹುಡುಕಿಕೊಂಡು ಸಂತೋಷವಾಗಿ ಜೀವನ ಸಾಗಿಸುವ ಹಾಗೂ ಇನ್ನೊಬ್ಬರ ಸುಖ ದುಃಖಗಳಲ್ಲಿ ಭಾಗಿಯಾಗಿ ಒಳ್ಳೆಯ ಬಾಂಧವ್ಯ ಬೆಳೆಸುವ ಸಂದೇಶ ಯುಗಾದಿ ಹಬ್ಬ ನೀಡುತ್ತದೆ…….
ಈ ಯುಗಾದಿ ಹಬ್ಬ ನಿಮ್ಮೆಲ್ಲರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ತರಲಿ ಎಂದು ಆಶಿಸುತ್ತೇನೆ.
ನಿಮ್ಮೆಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು…..