ಮುನವಳ್ಳಿ: ಅಧ್ಯಯನ ಒಂದು ವೃತವಿದ್ದಂತೆ. ವಿದ್ಯಾರ್ಥಿಗಳು ವೃತಾಧಾರಕರಾಗಿ ಅಧ್ಯಯನ ಮಾಡಿದರೆ ಜೀವನದಲ್ಲಿ ಎಂತಹ ಮಹತ್ಕಾರ್ಯವನ್ನಾದರೂ ಸಾಧಿಸಬಹುದುಎಂದು ಧಾರವಾಡದ ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ಡಾ.ವೀಣಾ ಬಿರಾದಾರ ಅಭಿಪ್ರಾಯಪಟ್ಟರು.
ಅವರು ಮುನವಳ್ಳಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲ್ಪಟ್ಟ “ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ?” ವಿಷಯ ಕುರಿತು ಉಪನ್ಯಾಸ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಂದೊಂದು ಅದಮ್ಯ ಶಕ್ತಿ ಇರುತ್ತದೆ. ನಿಮ್ಮಲ್ಲಿರುವ ಶಕ್ತಿಯ ಬಗ್ಗೆ ನಿಮಗೆ ನಂಬಿಕೆ ಬೇಕು.ಅದನ್ನೆ ಆತ್ಮ ವಿಶ್ವಾಸ ಎಂದು ಕರೆಯುತ್ತಾರೆ. ವಿನಾಕಾರಣ ಹಾಳು ಹರಟೆ ಹೊಡೆಯಬಾರದು.ಅದು ನಿಮ್ಮ ಏಕಾಗ್ರತೆಗೆ ಭಂಗ ತರುತ್ತದೆ.ಅರ್ಥ ಮಾಡಿಕೊಂಡು ಪುನಃ ಪುನಃ ಓದುವುದನ್ನು, ಬರೆಯುವುದನ್ನು ರೂಢಿಸಿಕೊಳ್ಳಿ.ಅಲ್ಪ ವಿಶ್ರಾಂತಿ ಇರಲಿ. ಓದಿನಷ್ಟೆ ಬರವಣಿಗೆಯೂ ಮುಖ್ಯ.ಪರೀಕ್ಷೆಯ ಬಗ್ಗೆ ವಿನಾಕಾರಣ ಭಯ ಪಡಬಾರದು.ಭಯ ನಿಮ್ಮನ್ನು ನಿಶಕ್ತಿಗೊಳಿಸುತ್ತದೆ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ ಸಂಚಾಲಕ ವೀರಣ್ಣ.ಒಡ್ಡೀನ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆ ಸಮಿಪಿಸುವಾಗ ಸಮಯದ ಸದ್ಬಳಕೆ ಮಾಡಿಕೊಂಡು ಓದಬೇಕು.ಬದ್ಧತೆ ಛಲದೊಂದಿಗೆ ಅಧ್ಯಯನ ಮಾಡಿದರೆ ಸಾಧಕರಾಗಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ಸುಧಾ ಜೋಶಿ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘ ಕಳೆದ ೩ ವರ್ಷಗಳಿಂದ ಎಸ್.ಎಸ್.ಎಲ್.ಸಿ ಮಕ್ಕಳ ಫಲಿತಾಂಶ ಸುಧಾರಣೆಗೆ ವಿನೂತನ ಯೋಜನೆ ರೂಪಿಸಿದ್ದು ಅಭಿನಂದನೀಯ. ವಿದ್ಯಾರ್ಥಿಗಳಿಗೆ ನಿಶ್ಚಿತ ಗುರಿ ಇದ್ದರೆ ಹೆಚ್ಚು ಅಂಕ ಗಳಿಸಲು ಸಾಧ್ಯ.ಸುಮ್ಮನೇ ಓದದೇ ಮನನ ಮಾಡಿಕೊಂಡು ಓದಬೇಕುಎಂದು ಹೇಳಿದರು.
ಎಸ್.ಡಿ.ಎಮ್.ಸಿ ಉಪಾಧ್ಯಕ್ಷರಾದ ಮಲ್ಲೇಶಪ್ಪ ತಾಂದಳೆ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಂವಾದದೊಂದಿಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೆರವೇರಿಸಲಾಯಿತು.
ಎನ್.ಎಸ್. ಕಾರಬಾರಿ ಸ್ವಾಗತಿಸಿದರು, ಎಸ್. ವ್ಹಿ. ಹಾವೇರಿ ನಿರೂಪಿಸಿದರು.ದುಂಡಪ್ಪ ಬಡಿಗೇರ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್.ಆರ್.ನಾವಿ, ಎಸ್.ಆರ್.ಕರಡಿ, ಕೆ.ಎಲ್. ರಾಧಾ, ಜೆ.ಎಸ್. ಬಳಿಗಾರ, ವ್ಹಿ.ಎಸ್. ಹಿರೇಮಠ, ಯು.ಕೆ.ಕಂಬಾಳಿಮಠ, ಬಿ.ಎ. ಹಳೇಜೋಳ, ಮರ‍್ನಾಳ, ಭಜಂತ್ರಿ, ಎಸ್.ಜಿ. ರಾಠೋಡ ಸೇರಿದಂತೆ ಸಿಬ್ಬಂದಿಗಳು ಇದ್ದರು.