ಬೆಂಗಳೂರು – ಶಿಕ್ಷಕರು ಕಛೇರಿಗಳಿಗೆ ಅಲೆದಾಟ ತಪ್ಪಿಸಿ ಬೋಧನಾ ಸಮಯದಲ್ಲಿ ಹೊರಹೋಗದಂತೆ ಮಾಡಲು ಬಿ.ಇ.ಒ ಕಛೇರಿ ಮತ್ತು ಉಪ ನಿರ್ದೇಶಕರ ಕಛೇರಿಯ ಎಲ್ಲಾ ಕೆಲಸಗಳಿಗೆ ಆನ್ಲೈನ್ ವ್ಯವಸ್ಥೆ ಅಳವಡಿಸಿಕೊಂಡು ಶಿಕ್ಷಕರು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಕಛೇರಿ ವ್ಯವಹಾರ ಮಾಡುವಂತೆ ಹಾಗೂ ಸಂಬಂಧಿಸಿದ ದಾಖಲೆಗಳು ಕಛೇರಿಗಳಿಂದ ದೂರಕುವಂತೆ ವ್ಯವಸ್ಥೆಮಾಡಲು ಸೂಕ್ತಕ್ರಮ ಕೈಗೊಳ್ಳಬೇಕು ಹಾಗೂ ಶಿಕ್ಷಣ ಇಲಾಖೆಯ ಅಶಿಸ್ತಿನ ಮತ್ತು ಆಗೌರವ ತೋರುವ ರೀತಿ ಶಿಕ್ಷಕರನ್ನು ಸಂಬಳ ಪಡೆಯುವ ಕಾರಕೂನರಂತ ನಡೆಸಿಕೊಳ್ಳುವ ವ್ಯವಸ್ಥೆ ಕೂಡಲೇ ಬದಲಾವಣೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ತಳವಾರ ಸಾಬಣ್ಣ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರನ್ನು ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ ಸಭಾಪತಿಗಳಿಗೆ ಪತ್ರವೊಂದನ್ನು ಬರೆದಿರುವ ಅವರು ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿ, ಉಪನಿರ್ದೇಶಕರ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಗಳಲ್ಲಿ ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದಿದ್ದಾರೆ.
ಸಮಾಜದಲ್ಲಿ ಶಿಕ್ಷಕರಿಗೆ ಅತ್ಯುನ್ನತ ಸ್ಥಾನ ಪುರಾಣ, ವೇದಗಳ ಕಾಲದಿಂದಲೇ ಇದೆ. ನಮ್ಮ ಪೂರ್ವಜರ ಹಾಗು ನಾಗರಿಕತೆಯ ಕಾಲದಿಂದಲೂ ಶಿಕ್ಷಕರಾಗಿ ಕೆಲಸ ಮಾಡುವವರಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ನಮ್ಮ ಸಮಾಜವನ್ನು ಹಾಗು ನಮ್ಮ ದೇಶವನ್ನು ಕಟ್ಟಲು ಶಿಕ್ಷಕರ ಪಾತ್ರ ಅತ್ಯುನ್ನತವಾದ ಪಾತ್ರ ಎಂದು ನಮಗೆಲ್ಲರಿಗೂ ತಿಳಿದಿರುವ ವಿಷಯ, ಆದರೆ ಈಗಿನ ನಮ್ಮ ಶಿಕ್ಷಣ ಇಲಾಖೆಯ ಕಛೇರಿಗಳಲ್ಲಿ ಅವರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ತಮ್ಮ ಎಲ್ಲಾ ಕೆಲಸಗಳಿಗಾಗಿ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ, ಉಪನಿರ್ದೇಶಕರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಗಳಿಗೆ ಹೋಗಬೇಕಾಗಿರುವುದು ಸಾಮಾನ್ಯ. ನಮ್ಮ ರಾಜ್ಯದ ಎಲ್ಲಾ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಗಳಲ್ಲಿ ಮತ್ತು ಉಪ ನಿರ್ದೇಶಕರ ಕಛೇರಿಗಳಲ್ಲಿ ತಮ್ಮದೇ ಇಲಾಖೆಯ ತಮ್ಮ ಕೆಲಸಕ್ಕಾಗಿ ಬಂದರೆ ಕುಳಿತುಕೊಳ್ಳಲು ಕುರ್ಚಿಗಳನ್ನು ಹಾಕುವ ಸೌಜನ್ಯವೂ ಇಲಾಖೆಗೆ ಇಲ್ಲ. ಶಿಕ್ಷಕರು ಹೊರಗೆ ಅಪರಿಚಿತರಂತೆ ಇಲ್ಲವೇ ಭಯದಿಂದ ಅಪರಾಧಿಗಳಂತೆ ನಿಂತುಕೊಂಡು ಕಾಯಬೇಕು. ಕೇತ್ರ ಶಿಕ್ಷಣಾಧಿಕಾರಿಗಳ ಮತ್ತು ಉಪ ನಿರ್ದೇಶಕರ ಕಛೇರಿ ಕೋಣೆಯ ಒಳಗೆ ಹೋದರೆ ಕುಳಿತುಕೊಳ್ಳಲು ಹೇಳಿ ಮಾತನಾಡಿಸುವ ಕ್ರಮವನ್ನು ಇಲ್ಲಿಯವರೆಗೆ ರಾಜ್ಯದ ಅನೇಕ ಶಿಕ್ಷಣ ಇಲಾಖೆಯ ಕಛೇರಿಗಳಲ್ಲಿ ಅನುಸರಿಸುತ್ತಿಲ್ಲ ಎಂದು ಶಿಕ್ಷಕರು ಆರೋಪಿಸುತ್ತಿದ್ದಾರೆ.
ಕಛೇರಿಗಳಲ್ಲಿರುವ ಇತರ ಸಿಬ್ಬಂದಿಗಳು ಕಛೇರಿ ಅಧೀಕ್ಷಕರಿಂದ ಹಿಡಿದು ‘ಡಿ’ ದರ್ಜೆ ನೌಕರರು ಸಹ ಶಿಕ್ಷಕರು ಹೋದಾಗ ಇವರಿಗೆ ಗೌರವ ಕೊಡುವ ರೂಢಿಯೇ ಇಲ್ಲ. ಅಲ್ಲಿ ಹಾಕಲಾಗಿರುವ ಕುರ್ಚಿಗಳಲ್ಲಿ ಆರಾಮವಾಗಿ ಕುಳಿತಿರುತ್ತಾರೆ. ಬಂದ ಶಿಕ್ಷಕರು ಅವರ ವಿಭಾಗಕ್ಕೆ ಸಂಬಂಧಿಸಿದ ಕ್ಲರ್ಕ್ ಇಲ್ಲವೇ ಅಟೆಂಡರ್ ಇಲ್ಲವೇ ‘ಡಿ’ ದರ್ಜೆ ನೌಕರನ ಮುಂದೆ ನಿಂತುಕೊಂಡೇ ತಮ್ಮ ಕೆಲಸಗಳನ್ನು ಮಾಡಿಸಿಕೊಡಲು ಕೇಳಿಕೊಳ್ಳಬೇಕು. ಇಂದು ನಾವು ಶಿಕ್ಷಣಾಧಿಕಾರಿ, ಉಪ ನಿರ್ದೇಶಕರು, ಕ್ಲರ್ಕ್ ಇಲ್ಲವೇ ಅಟೆಂಡರ್ ಇಲ್ಲವೇ ‘ಡಿ’ ದರ್ಜೆ ನೌಕರರು ಆಗಿದ್ದೇವೆ ಎಂದರೆ ಅದಕ್ಕೆ ಒಬ್ಬ ಉತ್ತಮ ಶಿಕ್ಷಕರು ಕಾರಣ ಎಂಬುದನ್ನು ಅವರು ಮರೆತಂತಿದೆ ಅಲ್ಲದೆ ಕಛೇರಿಗಳಲ್ಲಿ ಶೌಚಾಲಯದ ಬಾಗಿಲ ಮೇಲೆ “ಕಛೇರಿ ಸಿಬ್ಬಂದಿಗೆ ಮಾತ್ರ” ಎಂದು ನಾಮಫಲಕ ಹಾಕಿರುತ್ತಾರೆ. ಹಾಗಾದರೆ ಅಲ್ಲಿಗೆ ತಮ್ಮ ಕೆಲಸಕ್ಕಾಗಿ ಹೋಗುವ ಶಿಕ್ಷಕರು, ವಿಶೇಷವಾಗಿ ಮಹಿಳಾ ಶಿಕ್ಷಕರು ಯಾವ ಶೌಚಾಲಯವನ್ನು ಬಳಸಬೇಕು? ಇದಲ್ಲದ ಶಿಕ್ಷಕರಿಗೆ ಅಗತ್ಯವಿರುವ ದಾಖಲೆಗಳು ಇತರ ಅರ್ಜಿಗಳ ವಿಲೇವಾರಿಗಳನ್ನು ಸರಿಯಾದ ಸಮಯಕ್ಕೆ ನೀಡದೆ ಅನೇಕ ಸಲ ಕಛೇರಿಗೆ ಅಲೆದಾಡುವಂತೆ ಮಾಡುತ್ತಿರುವುದು ಸಾಮಾನ್ಯವಾಗಿ ಶಿಕ್ಷಕರು ಶಾಲೆ ಸಮಯದಲ್ಲಿ ತಮ್ಮ ಬೋಧನಾ ಕೆಲಸ ಬಿಟ್ಟು ಆಗಾಗ ಕಛೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲಾಖೆಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕಾದರೆ ಶಿಕ್ಷಕರು ಹಣ ನೀಡಬೇಕಾಗಿರುವುದು ಇನ್ನು ತುಂಬಾ ಖೇದಕರ ವಿಷಯವಾಗಿದೆ ಎಂದು ಅವರು ವಿವರಣೆ ನೀಡಿದ್ದು, ಈ ಎಲ್ಲ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಶಿಕ್ಷಣ ಸಚಿವರು ಶಿಕ್ಷಕರಿಗೆ ಯೋಗ್ಯ ಗೌರವ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಡಾ. ತಳವಾರ ಸಾಬಣ್ಣ ಆಗ್ರಹಿಸಿದ್ದಾರೆ.