spot_img
spot_img

ದೋರನಹಳ್ಳಿ ಕಟ್ಟಾಯ ದೇವಿರಮ್ಮ ಕರಿಬೀರೇಶ್ವರ ದೇವಸ್ಥಾನಗಳು

Must Read

- Advertisement -

ಮೊನ್ನೆ ಭಾನುವಾರ ಸೋನೆ ಮಳೆ ಸುರಿಯುತ್ತಿತ್ತು. ಅವತ್ತು ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಲಾಭವನದಲ್ಲಿ ಇತ್ತು. ಉದ್ಘಾಟನಾ ಕಾರ್ಯಕ್ರಮಕ್ಕೆ ನಾನೂ ಓರ್ವ ಅತಿಥಿ ಆಗಿ ಹೋಗಿದ್ದೆನು. ಖ್ಯಾತ ಚಿತ್ರಕಲಾವಿದರು ಕೆ.ಟಿ.ಶಿವಪ್ರಸಾದ್ ದೀಪ ಹಚ್ಚಿ ಉದ್ಘಾಟಿಸುತ್ತಿದ್ದರು. ಆ ವೇಳೆಗೆ ಹೋದೆ. ನನ್ನ ಕೈಗೂ ಮೇಣದಬತ್ತಿ ಬಂತು.

ಭಾಷಣ ನಂತರ ಮಕ್ಕಳಿಗೆ ಬಹುಮಾನ ವಿತರಿಸಿ ಕಲಾಭವನ ಒಳಹೋದೆ ಸಿಗರನಹಳ್ಳಿ ಚಂದ್ರಶೇಖರ್ 10 ದಿನ 10 ಪೌರಾಣಿಕ ನಾಟಕೋತ್ಸವ ಏರ್ಪಡಿಸಿ ಅಂದು 9ನೇ ದಿನ ರಾಮಾಯಣ ನಡೆದಿತ್ತು. ತಂಡ ಬೇಲೂರಿನದು. ನಾನು ಕೆಲಹೊತ್ತು ನಾಟಕ ವೀಕ್ಷಿಸಿದೆ. ಅತ್ತ ಸ್ಟೇಜ್‍ನಲ್ಲಿ ದಶರಥ ಸತ್ತು ಪರದೆ ಕೆಳಗೆ ಇಳಿಯಲು ಇತ್ತ ಪ್ರೇಕ್ಷಕರು ಒಬ್ಬೊಬ್ಬರಾಗಿ ಹೊರಬಂದರು. ಆಗ ಲಂಚ್ ಅವರ್. ಊಟದ ವ್ಯವಸ್ಥೆಯೂ ಇದೇ ಎಂದರು ಪುಣ್ಯಾತರು. ಊಟ ಮಾಡಿ ನಾಟಕ ನೋಡುವುದು ಹೊಸತು. ಊಟ ಬಂದಿರಲಿಲ್ಲ. ಹೊರಗೆ ನವಿಲುಹಳ್ಳಿ ವಾಸು ಸಿಕ್ಕರು. ‘ಸಾರ್, ಕಟ್ಟಾಯದ ಹತ್ತಿರ ದೇವಸ್ಥಾನ ಜಾತ್ರೆಗೆ ಹೊರಟಿದ್ದೇವೆ ಬರ್ತೀರಾ ಎಂದರು. ನಾನಾದರೂ ಯಾವುದೋ ಮಾರಿ ಜಾತ್ರೆ ಇರಬಹುದು. ಬರೆಯಲು ಏನಾದರೂ ಹೊಸ ವಿಷಯ ಸಿಗಬಹುದು ಎಂದುಕೊಂಡು ‘ಸರಿ ನಡೆಯಿರಿ ವಾಸು.. ಎಂದು ಬೊಲೊರೋ ಜೀಪ್ ಹತ್ತಿದೆ.

ನಮ್ಮೊಂದಿಗೆ ನಾಟಕದ ಮೇಷ್ಟ್ರು ಗಾಡೇನಗಳ್ಳಿ ವೀರಭದ್ರಾಚಾರ್, ನಟ ತೇಜೂರು ಸ್ವಾಮಿ ಇದ್ದರು. ಜೀಪ್‍ನ ಹಾದಿ ಸವೆದಂತೆ ನಟರ ಅಭಿನಯದ ಪರಾಮರ್ಶೆ ನಡೆದಿತು. ನಾನು ನಾಟಕದ ಮೇಷ್ಟ್ರಿಗೆ ನಿಮ್ಮ ಪರಿಚಯ ಲೇಖನ ಮಾಡುವ ಮಾಹಿತಿ ನೀಡಿ ಎಂದೆ. ಈ ಪೆನ್ ಡ್ರೈವ್‍ನಲ್ಲಿ ಎಲ್ಲಾ ಇದೇ ಒಮ್ಮೆ ನೋಡಿ ಎಂದರು. ಪೆನ್ನಲ್ಲೇ ಬರೆದು ಕೊಳ್ಳುತ್ತೇನೆ. ನಾಳೆ ಕಲಾಭವನದಲ್ಲಿ ಸಿಕ್ಕಿ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದೆ. ಸರಿ ಎಂದರು ವೀರಭದ್ರಾಚಾರ್.

- Advertisement -

ಜೀಪ್ ಗೊರೂರು ಮಾರ್ಗ ಹೊರಟು ಕಟ್ಟಾಯ ಬಳಿ ಶೆಟ್ಟಿಹಳ್ಳಿ ಕಡೆಗೆ ತಿರುಗಿತು. ನಾಲ್ಕೈದು ಕಿ.ಮೀ. ನಂತರ ದೋರನಹಳ್ಳಿ ಕಡೆಗೆ ಹೊರಳಿತು. ಅದೊಂದು ಮರಗಿಡ ಹೊಲ ತೋಟಗಳ ಹಸಿರು ಪರಿಸರದ ಪ್ರಶಾಂತ ತಾಣ. ಈ ನಡುವೆ ನೆಲೆಗೊಂಡಿವೆ ದೇವಿರಮ್ಮ, ಅರಕತ್ತಿಯಮ್ಮ ಮತ್ತು ಕರಿಬೀರೇಶ್ವರ ದೇವಾಲಯಗಳು. ಇಳಿಜಾರು ಪ್ರದೇಶದಲ್ಲಿ ಎರಡು ಗುಡಿಗಳು. ಅವು ಅರಕತ್ತಿಯಮ್ಮ ಮತ್ತು ಕರಿಬೀರೇಶ್ವರ. ಮೇಲ್ಬಾಗ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ದೇವಿರಮ್ಮ ದೇವಸ್ಥಾನ. ಇನ್ನೂ ಕೆಳಗೆ ಭಕ್ತಾದಿಗಳು ಅಡಿಗೆ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುವಂತೆ ಓಪನ್ ಶೆಡ್. ಅಲ್ಲಿ ಭಕ್ತಾದಿಗಳು ಅಡಿಗೆ ಮಾಡಿಕೊಂಡು ಊಟಕ್ಕೆ ಕುಳಿತ್ತಿದ್ದರು. ದೇವಸ್ಥಾನ ಮುಂಭಾಗ ವಾಹನಗಳನ್ನು ನಿಲ್ಲಿಸಲು ತಕ್ಕಮಟ್ಟಿಗೆ ಜಾಗ ಇತ್ತು. ಅಲ್ಲಿ ಜೀಪ್ ನಿಲ್ಲಿಸಿ ಖಾಸಗಿ ಒಡೆತನದ ಚೌಲ್ಟ್ರಿ ಕಡೆ ಹೊರಟವು. ಅಲ್ಲೊಂದು ಮದುವೆ ಸಮಾರಂಭಕ್ಕೆ ಜನ ತುಂಬಾ ಸೇರಿದ್ದರು. ಈಗಾಗಲೇ ಪ್ರಸಿದ್ಧಿಗೆ ಬಂದಿರುವ ಹಾಸನ ತಾ. ಪುರದಮ್ಮ, ಅರಕಲಗೂಡು ತಾ. ಅರಸಿಕಟ್ಟೆಯಮ್ಮ ಕೇರಳಾಪುರ ಸಮೀಪದ ಒಡಿನಾಳಮ್ಮ ದೇವತೆಗಳಂತೆ ಇದು ಒಂದು ಶಕ್ತಿ ದೇವತೆ. ಹಾಗಂತೆ ಬೋರ್ಡ್ ಕೂಡ ಇತ್ತು. ನಿಧಾನಗತಿಯಲ್ಲಿ ಇಲ್ಲೂ ಅಭಿವೃದ್ಧಿ ಸಾಗಿತ್ತು.

ನಾವು ಹೋಗಿದ್ದು ಮದುವೆಗೆ ಅಲ್ಲ. ವಾಸು ಅವರ ಮಿತ್ರರು ಗಂಗರ ಗ್ರಾಮದ ಶಶಿಕುಮಾರ್ ಏರ್ಪಡಿಸಿದ್ದ ದೇವರಿಗೆ ಹರಕೆ ಒಪ್ಪಿಸಿದ ನಾನ್ ವೆಜ್ ಊಟಕ್ಕೆ. ಹಂದಿ, ಕುರಿ, ಕೋಳಿಗಳ ಒಪ್ಪಿಸಿ ಹರಕೆ ತೀರಿಸುವ ಪರಿಪಾಠ ಇಲ್ಲೂ ಇದೆ. ನಾವು ಊಟ ಮುಗಿಸಿ ಕರಿಬೀರೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಅರ್ಚಕರು ಧರ್ಮರಾಜ್ ಅವರನ್ನು ಮಾತನಾಡಿಸಿದೆವು.

ದೇವಸ್ಥಾನ ಸಂಬಂಧಿಸಿದ ಪೂರ್ವಚರಿತ್ರೆ ಯಾವೂದು ಅರ್ಚಕರಿಗೆ ತಿಳಿದಿರಲಿಲ್ಲ. ಅವರ ತಂದೆ ದೇವಯ್ಯನವರು ಪೂಜಕರಾಗಿ ಅದನ್ನೇ ಇವರು ಮುಂದುವರಿಸಿಕೊಂಡು ಬಂದಿದ್ದಾರೆ. ಉಳಿದಿದ್ದು ಅವರಿಗೆ ಏನೂ ತಿಳಿಯದಂತೆ.! ನಾನು ಗೊರೂರಿನಲ್ಲಿ 45 ವರ್ಷ ವಾಸವಿದ್ದರೂ ನನಗೂ ಈವರೆಗೂ ಏನೂ ತಿಳಿದಿರಲಿಲ್ಲ. ಹೊಸ ನೋಟ ಹೊಸ ಅನುಭವ. ಈ ಗುಡಿ ದೇಗುಲಗಳ ಅಕ್ಕಪಕ್ಕ ಒಂದು ಒಂದೂವರೆ ಕಿ.ಮೀ. ಅಂತರದಲ್ಲಿ ಕಟ್ಟಾಯ ಮುದ್ದನಹಳ್ಳಿ ದೋರನ ಹಳ್ಳಿಗಳಿವೆ. ಈ ಗ್ರಾಮದವರು ಸಮಿತಿ ರಚಿಸಿಕೊಂಡು ದೇಗುಲ ಪರಿಸರ ಅಭಿವೃದ್ಧಿ ಮಾಡುತ್ತಿರುವ ವಿಚಾರ ತಿಳಿಯಿತು. ಮದುವೆ ಆಗದವರು ಮಕ್ಕಳಿಗಾಗಿ ಹರಕೆ ಹೊತ್ತವರು ತಮ್ಮ ಬಯಕೆಗಳು ಈಡೇರಿದಂತೆ ಇಲ್ಲಿಗೆ ಹರಕೆ ತೀರಿಸಲು ಬರುತ್ತಾರೆ. ಹರಕೆಯಂತೆ ಗಂಡು ಅಥವಾ ಹೆಣ್ಣು ಗೊತ್ತಾದವರು ಇಲ್ಲಿಗೆಯೇ ಬಂದು ಮದುವೆ ಕಾರ್ಯ ನೆರವೇರುವುದು ಉಂಟಂತೆ.! ಮಿಕ್ಕಂತೆ ಶುಕ್ರವಾರ ಭಾನುವಾರ ಹರಕೆ ತೀರಿಸುವವರು ಹೆಚ್ಚಾಗಿ ಬರುತ್ತಾರೆಂದು ಅರ್ಚಕರು ತಿಳಿಸಿದರು.

- Advertisement -

ಊಟ ಮುಗಿಸಿ ಮತ್ತೆ ಹಾಸನದ ಕಡೆಗೆ ದೋರನಹಳ್ಳಿ ಮಾರ್ಗ ಹೊರಟೆವು. ಇದೇ ಹಾಸನಕ್ಕೆ ಹತ್ತಿರದ ಮಾರ್ಗವಾಗಿತ್ತು. ಜೀಪು ದೋರನಹಳ್ಳಿ ದುಂಡನಾಯಕನಹಳ್ಳಿ ಶಂಕರನಹಳ್ಳಿ ಮಾರ್ಗ ಹಾಸನಕ್ಕೆ ಬಂದು ಮತ್ತೆ ಕಲಾಭವನ ಹೊಕ್ಕವು. ದಾರಿಯಲ್ಲಿ ವಾಸು ‘ ಆ ಕಡೆ ನೋಡಿ ಅದು ಮಲ್ಲಿಗೆವಾಳು.. ಎಂದರು.

ಹಾಸನದ ಹೇಮ ಗಂಗೋತ್ರಿಯಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಎಂ.ಎಸ್.ಶೇಖರ್ ಅವರ ಊರು ಮಲ್ಲಿಗೆವಾಳು ಇದೇನಾ ಎಂದೆ. ಹೌದು ಅವರೀಗ ಮೈಸೂರು ವಾಸಿ.
ನಾಟಕದಲ್ಲಿ ರಾಮ ವನವಾಸಕ್ಕೆ ಹೊರಟಿದ್ದ. ಅವನ ಹುಡುಕಿ ಭರತ ಶತ್ರುಜ್ಞರು ಹೊರಟ ಹೊತ್ತಿಗೆ ನಾವು ಕಲಾಭವನದಲ್ಲಿದ್ದರು. ಭರತನ ಪಾತ್ರದಲ್ಲಿ ನಿವೃತ್ತ ಡಿವೈಎಸ್‍ಪಿ ಚಿನ್ನಸ್ವಾಮಿಯವರು ತಮ್ಮ ಹಾಡು ಅಭಿನಯಕ್ಕೆ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ರಾಮ ಲಕ್ಷ್ಮಣ ಘೋರ ಶೂರ್ಪನಖಿಯ ಕಾಟ. ವೃತ್ತಿ ಕಲಾವಿದೆಯ ದ್ವಂದರ್ಥದ ಮಾತು. ‘ವಾಸು ನಾನು ಬರ್ತೀನಿ.. ಎಂದು ಎದ್ದು ಹೊರಟೆ. ‘ನಾನು ರಾವಣನ ದರ್ಬಾರ್ ನೋಡಿ ಬರುವೆ.. ಎಂದು ವಾಸು ಅಲ್ಲೇ ಉಳಿದರು.

ಗೊರೂರು ಅನಂತರಾಜು
ಮೊ: 9449462879.
ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ತತ್ವಬೋಧನೆಗೆ ಮಠಗಳು ಸಿದ್ಧವಾಗಬೇಕು – ಬಿಇಓ ಯಡ್ರಾಮಿ

ಸಿಂದಗಿ: ಆರ್ಥಿಕ ಸಬಲತೆಯ ಮಠಗಳಾಗದೇ ತತ್ವಭೋಧನೆಗೆ ಮಠಗಳು ಸಿದ್ಧವಾಗಬೇಕು. ಶಾಲೆಗಳಲ್ಲಿ ಶಿಸ್ತು ಮತ್ತು ಶಿಕ್ಷಣ ಕಲಿಯಬಹುದು ಮಠಗಳಿಂದ ಆಧ್ಯಾತ್ಮಿಕತೆ ಮತ್ತು ಸಂಸ್ಕಾರ ಸಿಗುವುದು ಅಲ್ಲದೆ ವಿದೇಶಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group