ಬೀದರ – ಸಿರಿವಂತರ ಮದುವೆಗೆ ಆಮಂತ್ರಿತರಂತೆ ಹೋಗಿ ನಯವಾಗಿ ಕಳ್ಳತನ ಮಾಡಿದ ವಂಚಕಿಯೊಬ್ಬಳನ್ನು ಸಿಸಿಟಿವಿ ಫುಟೇಜ್ ಆಧಾರದಿಂದ ಬೀದರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಮದುವೆ ಸಮಾರಂಭಗಳಲ್ಲಿ ವ್ಹೈಟ್ ಆಗಿ ಕಾಣಿಸಿಕೊಂಡು ಮನೆಯಲ್ಲಿ ಬ್ಲಾಕ್ ಆಗಿ ಇರುತ್ತಿದ್ದ ಬ್ಲಾಕ್ ಆ್ಯಂಡ್ ವ್ಹೈಟ್ ಆಂಟಿಯ ಕತೆಯಿದು.
ಬೀದರನ ನವದೆಗೇರಿ ಬಡಾವಣೆ ನಿವಾಸಿಯಾಗಿರುವ ಸಂತೋಷಿ ಎಂಬ ಮಹಿಳೆ ಸಿರಿವಂತರ ಮನೆಯ ಮದುವೆ ಸಾಯಿ ಪುಷ್ಪಾಂಜಲಿ ಕಲ್ಯಾಣ ಮಂಟಪಕ್ಕೆ ಚೆನ್ನಾಗಿ ಸಿಂಗರಿಸಿಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೋಗಿ ನಯವಾಗಿ ಕೋಣೆಯ ಒಳಹೊಕ್ಕು ಕಳ್ಳತನ ಮಾಡಿ ಚಾಲಾಕಿಯಂತೆ ಹೊರ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಅದರ ಆಧಾರದ ಮೇಲೆ ಬೀದರ ಪೊಲೀಸರು ೨೪ ತಾಸಿನಲ್ಲಿ ಬಂಧಿಸಿ ಅವಳಿಂದ ೩.೮೦ ಲಕ್ಷ ರೂ. ಕಿಮ್ಮತ್ತಿನ ೭೬ ಗ್ರಾಂ ಬಂಗಾರ ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯ ನೇತೃತ್ವದಲ್ಲಿ ಪೊಲೀಸ್ ಅಧೀಕ್ಷಕ ಡೆಕ್ಕಾ ಕಿಶೋರ್ ಬಾಬು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣವರ, ಬೀದರ ಪೊಲೀಸ್ ಉಪಾಧೀಕ್ಷ ಕೆ ಎಮ್ ಸತೀಶ ಇವರೆಲ್ಲ ಇದ್ದು ಬೀದರ ನಗರ ಪೊಲೀಸ್ ವೃತ್ತ ನಿರೀಕ್ಷಕ ಕಪಿಲ್ ದೇವ್, ಪಿಎಸ್ ಐ ಗಳಾದ ರಾಜಪ್ಪ ಮುದ್ದಾ, ಶಿವಪ್ಪ ಮೇಟಿ, ಶ್ರೀಮತಿ ತಸ್ಲೀಮ್ ಸುಲ್ತಾನಾ ಹಾಗೂ ಸಿಬ್ಬಂದಿಗಳಾದ ಎಎಸ್ಐ ವಿಶ್ವನಾಥ, ನಿಂಗಪ್ಪ, ಭರತ್, ಶರಣಪ್ಪ, ವಿಷ್ಣು, ಶೇಖ್ ಮೋದೀನ್, ಸುನೀಲ ರಾಠೋಡ ಪಾಲ್ಗೊಂಡಿದ್ದರು.
ಈ ಬ್ಲ್ಯಾಕ್ ಆ್ಯಂಡ್ ನಯವಂಚಕಿಯ ಕರಾಮತ್ತು ನೋಡಿ ಎಲ್ಲರಿಗೂ ದಿಗ್ಭ್ರಮೆಯಾಗಿದ್ದು ಇವಳ ಚಾಲಾಕಿತನ ಇನ್ನೂ ಏನೇನು ಇವೆ ಎಂಬುದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
ವರದಿ: ನಂದಕುಮಾರ ಕರಂಜೆ, ಬೀದರ