ಮಕ್ಕಳ ಮಟ್ಟಕ್ಕೆ ಇಳಿದು ಸಂತಸದ ಕಲಿಕೆ ಉಂಟು ಮಾಡುವವರೇ ಉತ್ತಮ ಶಿಕ್ಷಕರು- ಎಂ.ಎಂ.ಸಿಂಧೂರ

0
517

ಯರಗಟ್ಟಿ: “ಶಿಕ್ಷಕರು ಎಲ್ಲ ಒತ್ತಡಗಳನ್ನು ಮೀರಿ ಬೋಧನೆಯಲ್ಲಿ ಲವಲವಿಕೆಯಿಂದ ತೊಡಗಿಸಿಕೊಂಡರೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಮಕ್ಕಳ ಮಟ್ಟಕ್ಕೆ ಇಳಿದು ಸಂತಸದ ಕಲಿಕೆ ಉಂಟುಮಾಡುವವರೇ ಉತ್ತಮ ಶಿಕ್ಷಕರು.

ಶಿಕ್ಷಕರಾಗಿರುವವರು ನಿರಂತರ ಅಭ್ಯಾಸ ಮಾಡುತ್ತ ಜ್ಞಾನಾರ್ಜನೆಯಲ್ಲಿ ತೊಡಗಬೇಕು” ಎಂದು ಉಪನಿರ್ದೇಶಕರು(ಅಭಿವೃದ್ಧಿ) ಮತ್ತು ಡಯಟ್ ಪ್ರಾಂಶುಪಾಲರಾದ ಎಂ.ಎಂ‌.ಸಿಂಧೂರ ಅಭಿಪ್ರಾಯಪಟ್ಟರು.ಅವರು ಯರಗಟ್ಟಿಯಲ್ಲಿ ಡಿ‌ಎಸ್.ಇ.ಆರ್‌.ಟಿ.ಬೆಂಗಳೂರು ಮತ್ತು ಡಯಟ್ ಬೆಳಗಾವಿ ವತಿಯಿಂದ ಸವದತ್ತಿ,ರಾಮದುರ್ಗ ಮತ್ತು ಬೈಲಹೊಂಗಲ ತಾಲೂಕಿನ ಶಿಕ್ಷಕರಿಗಾಗಿ ನಡೆಯುತ್ತಿರುವ 15 ದಿನಗಳ ಎಂಪ್ಟಿಪ್-1 ಆಂಗ್ಲಮಾಧ್ಯಮ ಶಿಕ್ಷಕರ ತರಬೇತಿಯಲ್ಲಿ ಮಾತನಾಡಿದರು.

ಈ ತರಬೇತಿಯನ್ನು ರಾಜ್ಯ ಸಂಪನ್ಮೂಲ ವ್ಯಕ್ತಿ ತಿಪ್ಪಾನಾಯ್ಕ.ಎಲ್ , ರಫೀಕ್ ಮುರಗೋಡ, ಲಲಿತಾ ನಾಯ್ಕೋಡಿ ನಡೆಸುತ್ತಿದ್ದು. ಮೂರು ತಾಲೂಕುಗಳ ಒಟ್ಟು 46 ಜನ ಶಿಕ್ಷಕರು ಭಾಗವಹಿಸಿದ್ದರು. ಸರಕಾರಿ ಶಾಲೆಗಳಲ್ಲಿ ಪ್ರಾರಂಭವಾಗಿರುವ ದ್ವಿಭಾಷಾ ತರಗತಿಗಳ ಶಿಕ್ಷಕರಿಗೆ ದಿ: 16-8-2021 ರಿಂದ 31-8-2021 ರವರೆಗೆ ಜರುತ್ತಿರುವ ಜಿಲ್ಲಾಮಟ್ಟದ ಈ ತರಬೇತಿಯಲ್ಲಿ ಡಯಟ್ ಉಪನ್ಯಾಸಕರಾದ ಶ್ರೀಮತಿ ಮಂಗಳಾ ಕೊರಗು, ಶ್ರೀ ಪಿ.ಆರ್.ಪಾಟೀಲ್, ಶ್ರೀ ವಸಂತಕುಮಾರ, ಶ್ರೀ ರವಿಕುಮಾರ ಜವಳೇಕರ, ಶ್ರೀ ವಿ.ಎಂ.ಮಗದುಮ್, ಮೊದಲಾದವರು ಸಂದರ್ಶನ ನೀಡಿ ತರಬೇತಿಯ ಮೇಲುಸ್ತುವಾರಿ ಮಾಡಿದರು.

ಈ ತರಬೇತಿಯಲ್ಲಿ 1ನೇ ವರ್ಗದ ಮಕ್ಕಳಿಗೆ ಇಂಗ್ಲೀಷಿನಲ್ಲಿ ಕಥೆ ಹೇಳುವ ವಿಧಾನ, ಪದ್ಯ ಬೋಧಿಸುವ ಪದ್ಧತಿ, ಆಟ ಮತ್ತು ಚಟುವಟಿಕೆಗಳ ಮೂಲಕ ಸುಲಭವಾಗಿ ಇಂಗ್ಲೀಷ್, ಗಣಿತ ಮತ್ತು ಪರಿಸರ ಅಧ್ಯಯನ ವಿಷಯಗಳನ್ನು ಮನದಟ್ಟು ಮಾಡುವ ಕೌಶಲವನ್ನು ಹೇಳಿಕೊಡಲಾಯಿತು.

ಶಿಕ್ಷಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಕಲಿಕೆ ಸಹಾಯಕವಾಗುವ ‘ಬೋಧನಾ-ಕಲಿಕೋಪಕರಣಗಳನ್ನು’ ತಯಾರಿಸಿ ಪ್ರಸ್ತುತಪಡಿಸಿದರು. ಗುಂಪಿನಲ್ಲಿ ಭಾಷಾ ಆಟಗಳನ್ನು ಆಡಿಸಿ ತರಗತಿ ಕೋಣೆಯಲ್ಲಿ ಅವುಗಳನ್ನು ಅಳವಡಿಸುವ ಬಗ್ಗೆ ಮನವರಿಕೆ ಮಾಡಿಸಲಾಯಿತು. ಆಡಿಯೋ-ವೀಡಿಯೋಗಳ ಸಹಾಯದಿಂದ ಮಕ್ಕಳ ಕಲಿಕೆ ಸಾಗುವಂತೆ ಎಲ್ಲ ಸಂಪನ್ಮೂಲವನ್ನು ಒದಗಿಸಲಾಯಿತು.

ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ ತಿಪ್ಪಾನಾಯ್ಕ.ಎಲ್ ಅವರು ನಿರೂಪಿಸಿದರು. ರಫೀಕ್ ಮುರಗೋಡ ಸ್ವಾಗತಿಸಿದರು. ಶ್ರೀಮತಿ ಲಲಿತಾ ನಾಯ್ಕೋಡಿ ವಂದಿಸಿದರು.