ಸಿಂದಗಿ: ಉಪಚುನಾವಣೆಯಲ್ಲಿ ಅಡಳಿತಾರೂಢ ಸರಕಾರವೇ ಚುನಾವಣಾ ಕಣಕ್ಕಿಳಿದು ಮತದಾರರಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ತಳವಾರ ಸಮುದಾಯಕ್ಕೆ ಎಸ್‍ಟಿ ಸರ್ಟಿಫಿಕೇಟ್ ನೀಡುವ ಆಶ್ವಾಸನೆ ನೀಡುವ ಮೂಲಕ ಚುನಾವಣೆ ಆಯೋಗವನ್ನು, ಪೊಲೀಸ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ದುಡ್ಡಿನ ಹೊಳೆ ಹರಿಸಿ ಮತಗಳನ್ನು ಖರೀದಿಸಿದ್ದು ಇದು ಬಿಜೆಪಿ ಅಭ್ಯರ್ಥಿಯ ಗೆಲುವಲ್ಲ ದುಡ್ಡಿನ ಗೆಲುವಾಗಿದೆ ಎಂದು ಉಪಚುನಾವಣೆಯ ಅಭ್ಯರ್ಥಿ ಅಶೋಕ ಮನಗೂಳಿ ಕುಟುಕಿದರು.
ಪಟ್ಟಣದ ಆನಂದ ಚಿತ್ರಮಂದಿರದ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 20 ದಿನಗಳಿಂದ ಚುನಾವಣಾ ಪ್ರಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕಾಯಾಧ್ಯಕ್ಷರಾದ ಆರ್.ದ್ರುವನಾರಾಯಣ, ಈಶ್ವರ ಖಂಡ್ರೆ, ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತ್ರಾಯಗೌಡ ಪಾಟೀಲ, ಯು.ಟಿ.ಖಾದರ, ಜಮೀರಹ್ಮದಖಾನ, ರಹೀಂಖಾನ, ಮಾಜಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯ ನಾಯಕರು ಹಗಲಿರುಳು ಎನ್ನದೇ ನನ್ನ ಸಲುವಾಗಿ ಶ್ರಮಿಸಿದ ಎಲ್ಲ ನಾಯಕರಿಗೆ ಅಭಿನಂದನೆಗಳು. ಇಂದಿನ ಅಧಿಕಾರಾವಧಿಯಲ್ಲಿನ ಸಾಧನೆಗಳನ್ನು ಹಾಗೂ ನಮ್ಮ ತಂದೆಯವರ ಸಾಧನೆಗಳನ್ನು ಮುಂದಿಟ್ಟು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದೆ ಅದಕ್ಕೆ ಕಳೆದ 4-5 ಚುನಾವಣೆಗಳಲ್ಲಿ 18-20 ಸಾವಿರ ಮತ ನೀಡಿದ್ದರು.ಈ ಸಲ ನನಗೆ ಸುಮಾರು 63 ಸಾವಿರ ಮತಬಾಂಧವರು ಮತ ನೀಡಿದ್ದು ನನ್ನ ಸ್ವಾಭಿಮಾನದ ಗೆಲುವಾಗಿದೆ. ಮತದಾರ ಪ್ರಭುಗಳು ಹೆಚ್ಚಿನ ಬಲ ನೀಡಿದ್ದಾರೆ ಮುಂದಿನ ನ್ಯೂನತೆಗಳನ್ನು ತಿದ್ದಿಕೊಳ್ಳಲು ಮತದಾರರು ನೀಡಿದ ಈ ತೀರ್ಪಿಗೆ ತಲೆ ಬಾಗಲೇಬೇಕು ಸಹಕರಿಸಿದ ಎಲ್ಲ ಮತಪ್ರಭುಗಳಿಗೆ ಕಾರ್ಯಕರ್ತರಿಗೆ ಅಭಿನಂದಿಸುತ್ತೇನೆ ಎಂದರು.
ಚುನಾವಣೆಯಲ್ಲಿ ಸೋತರು ಸಹ ಮುಂದಿನ ಜಿಪಂ, ತಾಪಂ ಚುನಾವಣೆಗಳನ್ನು ಸದೃಢವಾಗಿ ಎದುರಿಸಲು ಭೂತ್ ಮಟ್ಟದ ಕಾರ್ಯಕರ್ತರ ಸಲಹೆ ಹಾಗೂ ಜಿಲ್ಲೆಯ ಎಲ್ಲ ನಾಯಕರ ಸಲಹೆ ಪಡೆದು ಭೂತಮಟ್ಟದ ಸಂಘಟನೆ ಮಾಡುವ ಮೂಲಕ ಎಲ್ಲ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾರ್ವತ್ರಿಕ ಚುನಾವಣೆಗೆ ಸನ್ನದ್ಧರಾಗುತ್ತೇವೆ ಎಂದು ಮನಗೂಳಿ ಅಭಿಮತ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷದಿಂದ ಆಯ್ಕೆಯಾದ ರಮೇಶ ಭೂಸನೂರ ಅವರಿಗೆ ಅಭಿನಂದನೆಗಳು ಅವರು 30 ವರ್ಷದ ಅನುಭವ ಹಾಗೂ ಆಡಳಿತ ಸರಕಾರ ಬಿಜೆಪಿ ಇರುವುದರಿಂದ ಹಿಂದಿನ ಅವಧಿಯಲ್ಲಿ ಮಂಜೂರಾದ ರೂ. 36 ಕೋಟಿ ವೆಚ್ಚದ ಕಡಣಿ ಬ್ರೀಜ್, ಆಲಮೇಲ ತಾಲೂಕಿಗೆ ರೂ 92 ಕೋಟಿ ವೆಚ್ಚದ ತೋಟಗಾರಿಕೆ ಕಾಲೇಜು ಪು;ನರಸ್ಥಾಪನೆ, ಆಲಮೇಲಕ್ಕೆ ಮೂಲಭೂತ ಸೌಕರ್ಯಗಳಿಗಾಗಿ ಅನುದಾನ ಸಮೇತ ಮಂಜೂರು ನೀಡಬೇಕು. ಪ್ರಸ್ತಾವನೆ ಸಲ್ಲಿಸಲಾಗಿದ್ದ ಆರ್‍ಟಿಓ ಆಪೀಸ, ಪುರಸಭೆಗೆ ಯೋಜನಾ ಪ್ರಾಧಿಕಾರ ಮಂಜೂರು ಪಡಿಸಬೇಕು. ಸಿಂದಗಿ ಪಟ್ಟಣದಲ್ಲಿ ಟೆಂಡರ ಹಂತದಲ್ಲಿರುವ ರೂ 10 ಕೋಟಿ ವೆಚ್ಚದ ಮಿನಿವಿಧಾನಸೌಧ ಕಾಮಗಾರಿ, ಸೇರಿದಂತೆ ನೆನೆಗುದಿಗೆ ಬಿದ್ದಿರುವ ಹತ್ತು ಹಲವಾರು ಯೋಜನೆಗಳನ್ನು ಪ್ರಾರಂಭಿಸಬೇಕು ಮುಂದಿನ ಎಲ್ಲ ಕಾರ್ಯಕ್ರಮಗಳಿಗೆ ವಿರೋಧ ಪಕ್ಷದಲ್ಲಿದ್ದು ಸಹಕಾರ ನೀಡುತ್ತೇವೆ ಎಂದು ಹೇಳಿದರು.
ನೀತಿ ಸಂಹಿತೆ ಉಲ್ಲಂಘನೆ; ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಆಲಮೇಲ ಪ್ರಚಾರ ಸಭೆಯಲ್ಲಿ ಆಲಮೇಲ ತಾಲೂಕಿಗೆ ಮೂಲಭೂತ ಸೌಕರ್ಯಕ್ಕಾಗಿ, ತೋಟಗಾರಿಕಾ ಕಾಲೇಜು ಪುನರ್ ಸ್ಥಾಪನೆಗೆ ಮುಖ್ಯಮಂತ್ರಿಗಳಿಗೆ ಪತ್ರ ನೀಡಿದ್ದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಆದಾಗ್ಯೂ ಚುನಾವಣಾ ಆಯೋಗ ಜಾಣಕುರುಡುತನ ಪ್ರದರ್ಶಿಸಿದೆ ಆ ಪತ್ರದಲ್ಲಿ ಉಲ್ಲೇಖಿಸಿದ ಎಲ್ಲ ಕಾರ್ಯಕ್ರಮಗಳನ್ನು ಅನುದಾನ ಸಮೇತ ಮಂಜೂರಿಸಬೇಕು ಎಂದು ಆಗ್ರಹಿಸಿದರು.
ಚಿಕ್ಕಸಿಂದಗಿ ಗ್ರಾಮದಲ್ಲಿ ಚಿಮ್ಮಲಗಿ ಏತನೀರಾವರಿ ಕಾಮಗಾರಿಯ ಟೆಂಡರ ಆಗಿದೆ ಆದಾಗ್ಯೂ ಬೇಗ ಪ್ರಾರಂಭಕ್ಕೆ ಟೆಂಡರ ಕರೆಯಲು ಸೂಚನೆ ನೀಡುತ್ತೇನೆ ಎಂದು ಹೇಳಿದ್ದು ಹಾಸ್ಯಾಸ್ಪದ ಎಂದರು.
ದಸಂಸ ಜಿಲ್ಲಾ ಸಂ ಸಂಚಾಲಕ ವೈ.ಸಿ.ಮಯೂರ ಮಾತನಾಡಿ, ತಳವಾರ ಸಮುದಾಯವನ್ನು ಎಸ್‍ಟಿ ಸೇರ್ಪಡೆಗಾಗಿ ದಿ. ವಿಠ್ಠಲ ಹೆರೂರ, ಆರ್.ಬಿ.ಚೌಧರಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಶಿವಾಜಿ ಮೆಟಗಾರರು ಸೇರಿದಂತೆ ಸಮುದಾಯದ ಅನೇಕ ಮುಖಂಡರು 30-40 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ ಅದಕ್ಕೆ ಮನ್ನಣೆ ದೊರಕಿಲ್ಲ. ಆದರೆ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾನಸಿಕ, ನೈತಿಕ ಗೆಲುವಾಗಿದೆ. ತಳವಾರ ಸಮುದಾಯವನ್ನು ಸೆಳೆಯಲು ಚುನಾವಣೆಯ ನೀತಿ ಸಂಹಿತಿ ಉಲ್ಲಂಘಿಸಿ 8 ದಿನಗಳಲ್ಲಿ ಎಸ್‍ಟಿ ಸರ್ಟಿಫಿಕೇಟ್ ನೀಡುವ ಆಶ್ವಾಸನೆ ನೀಡಿ ಈ ಉಪ ಚುನಾವಣೆಯಲ್ಲಿ ಬಿಜೆಪಿಯ ಅನೈತಿಕ ಗೆಲುವಾಗಿದೆ. ನ,. 8ರ ಒಳಗೆ ಎಸ್‍ಟಿ ಸರ್ಟಿಫಿಕೇಟ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲು ಹಿಂಜೆರಿಯುವುದಿಲ್ಲ ಎಂದು ಎಚ್ಚರಿಸಿದ ಅವರು ಬಿಜೆಪಿ ಅಭ್ಯರ್ಥಿ ಗೆದ್ದರೆ ಹಿಂದೂತ್ವ ಗೆದ್ದಂತೆ ಎಂದು ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲರು ಹಾಗೂ ನಾಯಕಕರು ದುಡ್ಡಿನ ಹೊಳೆ ಹರಿಸಿ ಅಲ್ಪಸಂಖ್ಯಾತರ ಮತಗಳನ್ನು ಖರೀದಿಸಿ ಗೆದ್ದಿದ್ದು ನಿಜವಾಗಲೂ ಹಿಂದೂತ್ವ ಆಗಿದ್ದರೆ ಅಲ್ಪಸಂಖ್ಯಾತರ ತ್ಯಜಿಸಿ ಇನ್ನೊಮ್ಮೆ ಚುನಾವಣೆಗೆ ಬನ್ನಿ ಎಂದು ಸವಾಲೆಸೆದರು.
ಈ ಸಂದರ್ಭದಲ್ಲಿ ಸಂತೋಷ ಹರನಾಳ, ರವಿರಾಜ ದೇವರಮನಿ, ರಾಜಶೇಖರ ಕೂಚಬಾಳ, ಅಶೋಕ ಬಿಜಾಪುರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ವರದಿ: ಪಂಡಿತ್ ಯಂಪೂರೆ, ಸಿಂದಗಿ