ಇತ್ತೀಚೆಗೆ ಕೃಷಿ ಸಾಹಿತ್ಯ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ದಿ.ವಿ.ಎಸ್.ಹಂಜಿಯವರ ‘ಕಬ್ಬು; ರೈತರ ಕಾಮಧೇನು’ ಎನ್ನುವ ಪುಸ್ತಕ ಹೊಸ ಭರವಸೆಯನ್ನು ಮೂಡಿಸಿದೆ.
ಕಬ್ಬು ರೈತ ಬದುಕಿನ ಭಾಗವಾಗಿರುವಾಗ ಅದನ್ನು ಆಶ್ರಯಿಸಿ ಬದುಕುತ್ತಿರುವ ಕುಟುಂಬಗಳಿಗೆ ಈ ಪುಸ್ತಕ ವರದಾನವಾಗಿದೆ. ಕಬ್ಬಿನ ಬಗ್ಗೆ ಅದರ ಹುಟ್ಟಿನಿಂದ ಹಿಡಿದು ಮೌಲ್ಯವರ್ಧನೆಯವರೆಗೆ ಸವಿಸ್ತಾರವಾಗಿ ಹಂಜಿಯವರು ಬರೆದಿರುವರು. ಈ ಪುಸ್ತಕದ ಹಿಂದೆ ಅವರ ಹಲವಾರು ವರ್ಷದ ಅನುಭವದ ಸಾರವಿದೆ.
ಸುಸ್ಥಿರ ಕೃಷಿಗೆ ಕಬ್ಬನ್ನು ಹೇಗೆಲ್ಲಾ ಉಪಯೋಗಿಸುವುದು ಎನ್ನುವದನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಈ ಬೆಳೆಯಲ್ಲಿ ಅಂತರಬೆಳೆಯಾಗಿ ಹಲವು ಬೆಳೆಗಳನ್ನು ಬೆಳೆಯಬಹುದು,ಸಾಲಿನಿಂದ ಸಾಲಿಗೆ ಅಂತರ,ಇಳುವರಿ ಹೇಗೆ ಪಡೆಯಬಹುದು,ವಿವಿಧ ಮಣ್ಣುಗಳಲ್ಲಿ ಇದರ ಇಳುವರಿ ನೀರಿನ ಬಳಕೆ ಹೀಗೆ ಹಲವು ಮಜಲುಗಳನ್ನು ತಿಳಿಸಿದ್ದಾರೆ. ಸ್ವತಃ ಊರೂರು ಅಲೆದಾಡಿ ನೈಜ ಸ್ಥಿತಿಯನ್ನು ಬಳಸಿಕೊಂಡಿದ್ದಾರೆ.
ಇದರಿಂದ ಕೃತಿಯ ಮಹತ್ವ ಹೆಚ್ಚಿದೆ.ಇನ್ನು ಕಬ್ಬಿನ ಬೆಳೆಯ ವಿವಿಧ ತಜ್ಞರನ್ನು ಯಶಸ್ವಿ ರೈತರನ್ನು ಸಂದರ್ಶನ ಮಾಡಿ ಅವರ ಪ್ರಯೋಗಗಳನ್ನು ದಾಖಲೆ ಮಾಡಿದ್ದಾರೆ.ಕಬ್ಬನ್ನು ಮೌಲ್ಯವರ್ಧನೆ ಮಾಡಿ ಬೆಲ್ಲ ಹಾಗೂ ಪುಡಿ ಬೆಲ್ಲವನ್ನು ಮಾಡುವ ವಿಧಾನಗಳನ್ನು ತಿಳಿಸಿದ್ದಾರೆ.ಯಶಸ್ವಿ ಕೃಷಿಕರಾದ ಶಂಕರ ಲಂಗಟಿ, ಕಲ್ಲಪ್ಪ ನೇಗಿನಹಾಳ,ರವೀಂದ್ರ ಸಿದ್ನಾಳ, ಜ್ಯೋತಿ ಕಳ್ಳಿಮನಿ, ವೆಂಕಟೇಶ ಮೂಲಿಮನಿ ಈರಣ್ಣ ಇಟಗಿಯವರ ಯಶೋಗಾಥೆಗಳನ್ನು ವಿವರಿಸಿದ್ದಾರೆ.ಕಬ್ಬಿನ ಬೆಳೆಗೆ ಸಾವಯವದಲ್ಲಿ ಹೇಗೆ ಗೊಬ್ಬರಗಳನ್ನು ಕಂಡುಕೊಳ್ಳಬೇಕು ಎನ್ನುವುದನ್ನು ತಿಳಿಸಿದ್ದಾರೆ.
ಕುಳೆಯ ನಿರ್ವಹಣೆ ಹಾಗೂ ಕಳೆಯ ನಿಯಂತ್ರಣ ತಂತ್ರಗಳು ದಾಖಲಾಗಿವೆ. ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ನೀರಾವರಿ ಉತ್ತಮ ಇರುವ ಕಡೆಯಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತಿದೆ. ಕೂಲಿಕಾರರ ಕೊರತೆಯನ್ನು ನೀಗಿಸಲು ಹೆಚ್ಚಾಗಿ ಬೆಳೆಯುತ್ತಿದ್ದು ಪ್ರಮುಖ ಆದಾಯದ ಮೂಲವಾಗಿದೆ. ಕರ್ನಾಟಕದ ನಾನಾ ಕಡೆ ಕಬ್ಬನ್ನು ಬೆಳೆಯಲಾಗುತ್ತಿದೆ.
ಈ ನಿಟ್ಟಿನಲ್ಲಿ ವಿ.ಎಸ್.ಹಂಜಿಯವರು ಹಲವಾರು ವರ್ಷ ಕಬ್ಬು ವಿಸ್ತರಣಾಧಿಕಾರಿಯಾಗಿ ಹಲವು ಸಕ್ಕರೆ ಕಾರ್ಖಾನೆಗಳಲ್ಲಿ ಸೇವೆ ಸಲ್ಲಿಸಿರುವದರಿಂದ ಅಪಾರ ಅನುಭವನ್ನು ದಾಖಲು ಮಾಡಲು ಸಾಧ್ಯವಾಗಿದೆ. ಕಬ್ಬಿನ ಬೆಳೆ ಲಾಭದಾಯಕವಾಗಿ ಬದುಕಿಗೆ ನೆರವಾಗಬಲ್ಲದು ಎಂದು ಪುಸ್ತಕ ವಿವರಣೆ ನೀಡುತ್ತದೆ. ಜೊತೆಗೆ ಸಣ್ಣ ಹಿಡುವಳಿದಾರರಿಗೆ ಹಾಗೂ ದೊಡ್ಡ ಹಿಡುವಳಿದಾರ ಕೃಷಿಕರಿಗೆ ಹೇಗೆಲ್ಲಾ ಕಬ್ಬನ್ನು ಬೆಳೆಯಬಹುದು ಎನ್ನುವ ವಿವಿಧ ಮಜಲುಗಳನ್ನು ನಿರೂಪಿಸಿದ್ದಾರೆ.
ಈ ಪುಸ್ತಕ ಇದೇ ಶನಿವಾರ ೧೦ ಗಂಟೆಗೆ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಬಿಡುಗಡೆಯಾಗಲಿದೆ. ಸರಳವಾಗಿ ಎಲ್ಲರೂ ಓದಬಲ್ಲ ಪುಸ್ತಕವನ್ನು ಸಂಜಯ ಪ್ರಕಾಶನ ಹಲಶಿ ಇವರು ಪ್ರಕಾಶಿಸಿದ್ದಾರೆ. ಓಮೇಗಾ ಆಪ್ಸೆಟ್ ಮುದ್ರಣ ಕಾರ್ಯವನ್ನು ಮಾಡಿದ್ದಾರೆ. ಇದರ ಬೆಲೆ ೨೦೦ ರೂಪಾಯಿ. ಆಸಕ್ತರು ಸಂಪರ್ಕ ಮಾಡಬಹುದು ೯೯೮೦೮೭೧೭೧೭
ವಿನೋದ ರಾ ಪಾಟೀಲ, ಚಿಕ್ಕಬಾಗೇವಾಡಿ.