ಸಿಂದಗಿ: ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ ಅವಧಿಯಲ್ಲಿ ನಗರದ 50 ವರ್ಷಗಳ ಮುಂದಾಲೋಚನೆಯನ್ನಿಟ್ಟು ಮಂಜೂರುಗೊಂಡಿರುವ ರೂ.92 ಕೋಟಿ ವೆಚ್ಚದ ಒಳಚರಂಡಿ ಯೋಜನೆಯು ಕಾರ್ಯ ಭರದಿಂದ ನಡೆದಿದ್ದು ಅಟ್ಟುಕಟ್ಟಾಗಿ ನಿರ್ಮಾಣ ಕಾರ್ಯ ನಡೆಯಬೇಕು ಎಂದು ನಗರ ಸುಧಾರಣಾ ಸಮಿತಿ ಅಧ್ಯಕ್ಷ ಹಾಗೂ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಕಾರ್ಯದರ್ಶಿ ಶಿವಾನಂದ ತಾವರಕೇಡ, ಶ್ರೀಶೈಲ್ ಯಳಮೇಲಿ, ಶಾಂತು ರಾಣಾಗೋಳ, ಗುರುಪಾದ ಮಲ್ಲಾಡ, ಹಿರೇಮಠ ಆಗ್ರಹಿಸಿದರು.
ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಒಳಚರಂಡಿ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿ, ಈಗಾಗಲೇ ಪ್ರಮುಖ ಬಡಾವಣೆಗಳಲ್ಲಿ ಕಾರ್ಯ ಮುಂದುವರಿದಿದೆ. ಸುಮಾರು 2000 ಚೇಂಬರ್ ಗಳ ನಿರ್ಮಾಣ ಹಂತ ಮುಗಿದಿದೆ ಆದರೆ ಗುಣಮಟ್ಟದ ಬಗ್ಗೆ ಒಳಚರಂಡಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹೆಚ್ಚು ಗಮನ ಹರಿಸಬೇಕಿದೆ.
ಈ ಯೋಜನೆ ಸಿಂದಗಿ ನಗರದ ಜನರಿಗೆ ಅನುಕೂಲಕರವಾಗುತ್ತದೆ ಆದಕಾರಣ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೆ ಇಲಾಖೆ ಕೆಲಸವನ್ನು ಮುಂದುವರಿಸಬೇಕು ಅದೇ ರೀತಿ ಇನ್ನೂ 2200 ಚೇಂಬರ್ ಗಳ ನಿರ್ಮಾಣ ಚೆನ್ನಾಗಿ ಆಗಬೇಕೆಂದು ಒತ್ತಾಯಿಸಿದರು.