ಮೂಡಲಗಿ; ತಗ್ಗು ದಿನ್ನೆಗಳ ನಡುವೆ ಮುಗಿದ ಸ್ವಾತಂತ್ರ್ಯ ಹಬ್ಬ

0
458

ಮೂಡಲಗಿ – ಕೋವಿಡ್ ದೆಸೆಯಿಂದಾಗಿ ಸರಳವಾಗಿ ಆಚರಿಸಲ್ಪಟ್ಟ ೭೫ ನೇ ಸ್ವಾತಂತ್ರ್ಯೋತ್ಸವ ಮೆರವಣಿಗೆ ಮೂಡಲಗಿ ನಗರದ ರಸ್ತೆಗಳ ತಗ್ಗು ದಿನ್ನೆಗಳ ನಡುವೆ ಯಶಸ್ವಿಯಾಗಿ ಸಂಪನ್ನವಾಯಿತು.

ಸ್ವಾತಂತ್ರ್ಯ ಸಿಕ್ಕು ೭೫ ವರ್ಷಗಳಾಗಿರುವ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಸಂಭ್ರಮ ಇತ್ತು ಆದರೆ ಕೊರೋನಾ ಮಹಾಮಾರಿಯ ಕಾರಣ ಎಲ್ಲಾ ಕಡೆಯೂ ಸರಳವಾಗಿ ಸಮಾರಂಭಗಳನ್ನು ಆಚರಿಸಬೇಕೆಂಬ ಸರ್ಕಾರದ ಆದೇಶವಿದ್ದ ಕಾರಣ ಶಾಲಾ ಫ್ರಭಾತ ಫೇರಿಗಳನ್ನು ನಿಷೇಧಿಸಲಾಗಿತ್ತು. ತಹಸೀಲ್ದಾರರು, ಪುರಸಭಾ ಅಧ್ಯಕ್ಷರು, ಮುಖ್ಯಾಧಿಕಾರಿಗಳನ್ನೊಳಗೊಂಡು ವಿವಿಧ ಇಲಾಖೆಗಳ ಅಧಿಕಾರಿಗಳು ಅದೇ ರಸ್ತೆಯಲ್ಲಿ ಪ್ರಭಾತಫೇರಿ ನಡೆಸಿ ಗಾಂಧಿ ಚೌಕ ತಲುಪಿದರು. ಆದರೆ ನಗರವನ್ನು ಇದ್ದುದರಲ್ಲಿಯೇ ಸ್ವಲ್ಪ ಸುಂದರಗೊಳಿಸಬಹುದಾದ ಅವಕಾಶವನ್ನು ಮೂಡಲಗಿ ತಾಲೂಕಿನ ಆಡಳಿತ ನಿರ್ಲಕ್ಷ್ಯ ಮಾಡಿತೆನ್ನಬಹುದು.

ಆ.೧೫ ರ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರರು ಸಾರ್ವಜನಿಕರಿಂದ ಸಲಹೆಗಳನ್ನು ಆಲಿಸಿದ ಸಂದರ್ಭದಲ್ಲಿ ಮೂಡಲಗಿ ನಗರದಲ್ಲಿನ ರಸ್ತೆಗಳ ತಗ್ಗುಗಳನ್ನು ತುಂಬಿ ಸಮತಟ್ಟು ಮಾಡಬೇಕೆನ್ನುವ ಸಲಹೆ ಬಂದಿತ್ತು. ಅದಕ್ಕೆ ತಾಲೂಕಾಡಳಿತ ಹಾಗೂ ಪುರಸಭೆ ಕೂಡ ಒಪ್ಪಿಕೊಂಡಿದ್ದವು. ಆದರೆ ಆಮೇಲೆ ಈ ವಿಚಾರವನ್ನು ನಿರ್ಲಕ್ಷಿಸಲಾಯಿತು.

ನಗರದ ಮಧ್ಯೆ ಹಳ್ಳದ ಸೇತುವೆಯಂತು ಹದಗೆಟ್ಟು ಹೈದರಾಬಾದ್ ಆಗಿದ್ದು ಸ್ವಲ್ಪ ಮಳೆಯಾದರೂ ಸಣ್ಣ ಪೂಲ್ ಮೇಲೆ ನೀರು ನಿಂತು ಕೆರೆಯಂತಾಗುತ್ತದೆ. ಎಲ್ಲ ವಾಹನಗಳೂ ದೊಡ್ಡ ಪೂಲ್ ಮೇಲೆಯೇ ಚಲಿಸತೊಡಗುತ್ತವೆ ಇದು ಇದ್ದೂ ಇಲ್ಲದಂತಾಗುತ್ತದೆ.

ಗೋಕಾಕ ರಸ್ತೆಯ ಸರ್ಕಾರಿ ಆಸ್ಪತ್ರೆಯವರೆಗೆ ಸಿಕ್ಕಾಪಟ್ಟೆ ತಗ್ಗುಗಳು, ದನದ ಪೇಟೆಗೆ ಹೋಗುವ ರಸ್ತೆ, ಇತ್ತ ಮಾರುಕಟ್ಟೆಗೆ ಹೋಗುವ ಡಬಲ್ ರಸ್ತೆ, ಸಂಗಪ್ಪಣ್ಣ ವೃತ್ತ, ಗಿರಣಿಯ ಹತ್ತಿರ, ಬಸವೇಶ್ವರ ವೃತ್ತ…..ಹೀಗೆ ಎಲ್ಲಿ ನೋಡಿದಲ್ಲಿ ರಸ್ತೆಗಳಲ್ಲಿ ತಗ್ಗುಗಳಾಗಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆದರೆ ಪುರಸಭೆ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿದೆ.

ಈಗ ಸ್ವಾತಂತ್ರ್ಯೋತ್ಸವ ಆಚರಣೆಯ ನೆಪದಲ್ಲಿ ಸ್ವಲ್ಪಾದರೂ ನಗರವನ್ನು ಸಿಂಗರಿಸಿದ್ದರೆ ಉತ್ಸವಕ್ಕೆ ಅರ್ಥ ಬರುತ್ತಿತ್ತು.