ಮೂಡಲಗಿ: ವಿದೇಶಿ ಮತಾಂಧರ ಆಕ್ರಮಣದಿಂದಾಗಿ ಭಾರತದ ದೇವಸ್ಥಾನಗಳು ಕಳೆದುಕೊಂಡ ವೈಭವದ ಮರುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಧಾರ್ಮಿಕ ಕ್ಷೇತ್ರಗಳ ಪುನರುತ್ಥಾನಕ್ಕಾಗಿ ಶರವೇಗದಲ್ಲಿ ಅಭಿವೃದ್ಧಿ ಮಾಡುತ್ತಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ಹೇಳಿದರು.
ರವಿವಾರ ಅ.30 ರಂದು ಮೂಡಲಗಿ ತಾಲೂಕಿನ ರಂಗಾಪೂರ ಗ್ರಾಮದ ಅಕ್ಕಡಿ ತೋಟದ ಶ್ರೀ ಭಾಗ್ಯವಂತಿದೇವಿ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದು ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಅಯೋಧ್ಯೆಯಲ್ಲಿ ಪೂರ್ಣ ವೇಗದಲ್ಲಿ ಭವ್ಯ ರಾಮಮಂದಿರದ ನಿರ್ಮಾಣ ಮಾಡಲಾಗುತ್ತಿದೆ. ದಿವ್ಯ ಕಾಶಿ ಭವ್ಯ ಕಾಶಿ ಕಾರಿಡಾರ್ ಮೂಲಕ ಕಾಶಿ ವಿಶ್ವನಾಥ ಮಂದಿರ ಜೀರ್ಣೋದ್ಧಾರವಾಗಿದೆ. ಸೋಮನಾಥ, ಕೇದಾರನಾಥ ಹಾಗೂ ಬದರಿನಾಥ ಜೋರ್ತಿಲಿಂಗಗಳು ಅಭಿವೃದ್ದಿಯಾಗುತ್ತಿವೆ. ಉಜ್ಜಯಿನಿಯಲ್ಲಿ ಮಹಾಕಾಲ್ ಕಾರಿಡಾರ ಯೋಜನೆಯ ಮೂಲಕ ಅಭಿವೃದ್ದಿಯಾಗುತ್ತಿವೆ ಎಂದರು.
ನಮ್ಮ ಗ್ರಾಮದಲ್ಲಿನ ದೇವಸ್ಥಾನಗಳ ಬಗ್ಗೆ ಗೌರವ ಇಟ್ಟುಕೊಂಡು ಈ ರೀತಿ ಜಾತ್ರೆಗಳನ್ನು ಮಾಡುತ್ತಿದ್ದೇವೆ, ಈ ಪರಂಪರೆ ಮುಂದುವರೆಯಬೇಕು ಮತ್ತು ಇದು ಆದರ್ಶ ಪರಂಪರೆಯಾಗಿ ಬೆಳೆಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಾಗೋಜಿಕೊಪ್ಪದ ಪೂಜ್ಯಶ್ರೀ ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ದುಂಡಪ್ಪ ಪಾಟೀಲ, ಆನಂದರಾವ ನಾಯಕ, ಮಹಾದೇವ ಮಸರಗುಪ್ಪಿ, ನಿಜಪ್ಪ ಮಸರಗುಪ್ಪಿ, ಹಣಮಂತ ಗೋಡಿಗೌಡರ, ಮಹಾದೇವ ಅಕ್ಕಡಿ, ಮಹಾದೇವ ನಿಪನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.