ಸಿಂದಗಿ: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ರೈತರ ಬೆಳೆಗಳ ಪರಿಹಾರಕ್ಕೆ ಕೂಡಲೇ ಸರಕಾರ ಸ್ಪಂದಿಸುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷದ ವತಿಯಿಂದ ತಹಶೀಲ್ದಾರ ಸಂಜೀವಕುಮಾರ ದಾಸರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಹಂಗರಗಿ ಮಾತನಾಡಿ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕೇಂದ್ರ ಮತ್ತು ರಾಜ್ಯ ಸರಕಾರದ ಕಾರ್ಪೋರೇಟ್ ನೀತಿಯಿಂದಾಗಿ ಗಗನಕ್ಕೆ ಮುಟ್ಟಿದ ಪೆಟ್ರೋಲ್,ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಯಿಂದ ಕಂಗೆಟ್ಟ ಜನತೆಗೆ ಒಂದು ವಾರದಿಂದ ಸುರಿದ ಮಹಾಮಳೆಯಿಂದ ರೈತರ ಬದುಕು ಬೀದಿಗೆ ಬಂದಂತಾಗಿದೆ. ಮಳೆ ಗಾಳಿಯಿಂದ ಕಬ್ಬು, ಹತ್ತಿ, ತೊಗರಿ ನೆಲಸಮವಾಗಿವೆ. ಟೊಮ್ಯಾಟೊ, ಮೆಣಸಿನಕಾಯಿ ಮತ್ತು ಇನ್ನಿತರ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಈ ಕೂಡಲೆ ಸರಕಾರ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ಇದೆ ಸಂದರ್ಭದಲ್ಲಿ ಗೊಲ್ಲಾಳಪ್ಪಗೌಡ ಪಾಟೀಲ, ಡಾ.ರಾಜಶೇಖರ ಸಂಗಮ ಮತ್ತು ಸಲೀಂ ಜುಮನಾಳ ಮಾತನಾಡಿ, ಈ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳಿಂದ ಬೆಳೆ ಸಮೀಕ್ಷೆ ಮಾಡಿ ರೈತರ ನೆರವಿಗೆ ಬರಬೇಕು ಮನವಿಗೆ ಸ್ಪಂದಿಸದಿದ್ದರೆ ರೈತರ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸಿದ್ದನಗೌಡ ಪಾಟೀಲ, ಪ್ರಕಾಶ ಹಿರೇಕುರುಬರ, ಜುಲ್ಪಿಕರ ಅಂಗಡಿ, ಶಿವಣ್ಣ ಕೊಟಾರಗಸ್ತಿ, ಬಸವರಾಜ ಪಾಟೀಲ, ಪ್ರಭು ದುದ್ದಗಿ, ದಾದಾಪೀರ ಅಂಗಡಿ, ಬಾಬು ಮರ್ತೂರ, ಆಸೀಪ ಆಂದೇಲಿ, ಯಾಕೂಬ ಜಮಾದಾರ, ಬಾಬು ಕರ್ಜಗಿ, ಸಂತೋಷ ಪಾಟೀಲ ಚಾಂದಕವಟೆ, ಧರೇಪ್ಪ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.