ಬೀದರನ ಭಾಲ್ಕಿಯಲ್ಲಿ ತಂದೆ – ಮಗನ ವಿಭಿನ್ನ ಹೋರಾಟ
ಬೀದರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜಿಲ್ಲೆಯ ಭಾಲ್ಕಿ ಕ್ಷೇತ್ರವು ಎರಡು ರೀತಿಯ ಪ್ರಕರಣಗಳಿಂದ ಸುದ್ದಿಗೆ ಗ್ರಾಸವಾಯಿತು.
ಒಂದು ಕಡೆ ರಾಜ್ಯ ಸರ್ಕಾರದ ವಿರುದ್ಧ ಯುವಕರ ಪ್ರತಿಭಟನೆಯ ಕೂಗು ಕೇಳಿ ಬರುತ್ತದೆ. ಇನ್ನೊಂದು ಕಡೆ ಇದೇ ಭಾಲ್ಕಿ ಕ್ಷೇತ್ರದಲ್ಲಿ ಕೆಲವು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಸದ್ದು ಮಾಡುತ್ತಿದೆ.
ಗಡಿ ಜಿಲ್ಲೆ ಬೀದರ್ ತಾಲ್ಲೂಕಿನ ಭಾಲ್ಕಿ ಕ್ಷೇತ್ರ ಈಗ ಭಾರಿ ಚರ್ಚೆಯಲ್ಲಿ ಇರುವ ಕ್ಷೇತ್ರವೆನಿಸಿದ್ದು ಭಾಲ್ಕಿಯಲ್ಲಿ ಖಂಡ್ರೆ ವರ್ಸಸ್ ಖಂಡ್ರೆ ಕುಟುಂಬದಲ್ಲಿ ನಡೆಯುತ್ತಿರುವ ಮಹಾಯುದ್ಧ.
ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಭಾಲ್ಕಿ ಕ್ಷೇತ್ರದಲ್ಲಿ ಒಂದೇ ದಿನದಲ್ಲಿ ಹಲವು ಗ್ರಾಮದಲ್ಲಿ ಗುದ್ದಲಿ ಪೂಜೆ ಮಾಡಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದರು.
ಇನ್ನೊಂದು ಕಡೆ ಈಶ್ವರ ಖಂಡ್ರೆ ಪುತ್ರ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು ಯುವಕರ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡು ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಭಾಲ್ಕಿ ಯಲ್ಲಿ ವಿಧ್ಯಾರ್ಥಿಗಳ ಜೊತೆ ಸೇರಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರು.
ಬಿಇ, ಎಂಬಿಎ, ಎಂಸಿಎ, ಬಿಫಾರ್ಮಸಿ ಇತ್ಯಾದಿ ಉನ್ನತ ಶಿಕ್ಷಣ ಪಡೆಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಕಳೆದ ಶೈಕ್ಷಣಿಕ ವರ್ಷದಿಂದ (2021-22, 2022-23) ವಿದ್ಯಾರ್ಥಿ ವೇತನ(ಸ್ಕಾಲರಶಿಪ್) ನೀಡದೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕುತ್ತು ತಂದಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಇಂದು ಭಾಲ್ಕಿಯಲ್ಲಿ ವಿದ್ಯಾರ್ಥಿಗಳ ಜೊತೆ ತೊಡಗಿಸಿಕೊಂಡು ಯುವಕರ ಸ್ನೇಹಿತ ಯುವ ಮುಖಂಡ ಸಾಗರ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಭಾಲ್ಕಿಯ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯು ಬಿ.ಕೆ.ಐ.ಟಿ ಕಾಲೇಜಿನಿಂದ ಪ್ರಾರಂಭಗೊಂಡು ತಹಸಿಲ್ ಕಚೇರಿಯವರೆಗೆ ಪಾದಯಾತ್ರೆ ಮುಖಾಂತರ ಬಂದು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸ್ಕಾಲರಶಿಪ್ ನಂಬಿಕೊಂಡು ಉನ್ನತ ಶಿಕ್ಷಣ ಪಡೆಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸ ಮುಂದುವರೆಸಲು ವಿದ್ಯಾರ್ಥಿ ವೇತನವನ್ನು (ಸ್ಕಾಲರಶಿಪ್) ಶೀಘ್ರ ಮಂಜೂರಾತಿ ಮಾಡಬೇಕೆಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಸಾಗರ ಈಶ್ವರ ಖಂಡ್ರೆ ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೀದರ ಜಿಲ್ಲಾದ್ಯಾಂತ ತಂದೆ ಮಗನ ಈ ನಡೆಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇಷ್ಟು ದಿವಸ ಶಾಂತವಾಗಿದ್ದ ಭಾಲ್ಕಿಯಲ್ಲಿ ದಿಢೀರನೆ ಗುದ್ದಲಿ ಪೂಜೆ ದಿಢೀರನೆ ಪ್ರತಿಭಟನೆ ವಿಚಿತ್ರವಾಗಿದೆ ಎಂದು ಸಾರ್ವಜನಿಕರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದ್ದು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಭಾಲ್ಕಿ ಕ್ಷೇತ್ರದ ಮತದಾರರು ಯಾರ ಕಡೆಗೆ ಒಲವು ತೋರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ