spot_img
spot_img

ಬಾಗುವುದರಲ್ಲಿಯ ಖುಷಿ ಬೀಗುವುದರಲ್ಲಿ ಇಲ್ಲ

Must Read

- Advertisement -

ಅರಳುವ ಹೂಗಳು ತಮ್ಮನ್ನು ಇತರರು ಹೊಗಳಲಿ ಎಂದು ಎಂದೂ ಬಯಸುವುದಿಲ್ಲ. ಮೊಗ್ಗುಗಳು ಹಿಗ್ಗಿನಿಂದ ಹಿಗ್ಗುತ್ತವೆ. ನಮ್ಮನ್ನೂ ಹಿಗ್ಗಿನಿಂದ ಹಿಗ್ಗಿಸುತ್ತವೆ. ಹಿಗ್ಗಿನಿಂದ ಹಿಗ್ಗಿದ ಹೂಗಳು ತಮ್ಮ ಅಂದ ಚೆಂದದ ಕುರಿತು ಹೇಳಿಕೊಂಡು ಬೀಗುವುದಿಲ್ಲ. ಇತರರೊಂದಿಗೆ ಹೋಲಿಸಿಕೊಂಡು ಬೀಗುವುದಿಲ್ಲ. ಆದರೆ ನಾವು ನಮ್ಮನ್ನು ಇತರರು ಮೆಚ್ಚಲಿ. ಬೆನ್ನು ತಟ್ಟಲಿ ಎಂದು ಸದಾ ಹಂಬಲಿಸುತ್ತೇವೆ. ಮತ್ತೊಬ್ಬರಿಂದ ಪ್ರಶಂಸಿಸಲ್ಪಡಬೇಕು. ನಮ್ಮ ಹೆಚ್ಚುಗಾರಿಕೆಯನ್ನು ಹೆಚ್ಚು ಹೆಚ್ಚಾಗಿ ಹೇಳಿಕೊಳ್ಳಬೇಕು ಎನ್ನುವ ಬಯಕೆ ಮಾನವ ಸಹಜ. ಆದರೆ, ಅದೇ ಒಂದು ಹಪಹಪಿಯಾದರೆ ಅವಮಾನ ಅನುಭವಿಸಬೇಕಾಗುತ್ತದೆ ಎಂಬುದು ನಾ ಈಗ ಹೇಳ ಹೊರಟಿರುವ ಕಥೆಯಿಂದ ಸ್ಪಷ್ಟವಾಗುತ್ತದೆ.

ಒಂದು ಚಿಕ್ಕ ಮನೆಯ ಪಕ್ಕದಲ್ಲಿ ಒಂದು ಗುಡ್ಡವಿತ್ತು. ಗುಡ್ಡವು ಚಿಕ್ಕ ಮನೆಯನ್ನು ಕಂಡು, ‘ನೋಡು, ನಾನು ಎಷ್ಟು ಎತ್ತರ!’ ಎಂದು ಬೀಗುತ್ತಿತ್ತು. ಮನೆಯೂ ಕೂಡ ಗುಡ್ಡದ ಭವ್ಯತೆಯನ್ನು ವರ್ಣಿಸುತ್ತಿತ್ತು. ಒಂದು ಸಾರಿ ಒಬ್ಬ ಸನ್ಯಾಸಿ ಹಿಮಾಲಯದ ಸಹ್ಯಾದ್ರಿ ಪರ್ವತಗಳನ್ನಿಳಿದು ಗುಡ್ಡವಿದ್ದಲ್ಲಿಗೆ ಬಂದ. ಗುಡ್ಡ ಕೇಳಿತು, ‘ಮಹಾತ್ಮರೇ, ನನ್ನಷ್ಟು ಎತ್ತರದವರನ್ನು ಎಲ್ಲಿಯಾದರೂ ನೋಡಿರುವಿರಾ?ಎಂದು ಅದಕ್ಕೆ ಸನ್ಯಾಸಿ ಹೇಳಿದ.’ಇಲ್ಲ, ನಿನ್ನಷ್ಟೇ ಎತ್ತರದ ಗುಡ್ಡವನ್ನು ಎಲ್ಲಿಯೂ ನೋಡಲಿಲ್ಲ. ಆಶ್ಚರ್ಯದಿಂದ ಗುಡ್ಡ ಕೇಳಿತು. ’ಎಲ್ಲಿ ಆ ಬೃಹತ್ತಾದ ಬೆಟ್ಟಗಳು?’ ’ಇದೋ ಇಲ್ಲಿಯೇ ನಿನ್ನ ಹಿಂದೆಯೇ.’ ಎಂದು ಸನ್ಯಾಸಿ ಹೇಳಿದ. ಆ ಬೃಹದಾಕಾರದ ಬೆಟ್ಟಗಳನ್ನು ನೋಡುವುದೇ ತಡ ಗುಡ್ಡದ ತಲೆ ಕೆಳಗಾಗಿತ್ತು. ಗುಡ್ಡದ ಭ್ರಮೆ ಆಗ ಬೆಟ್ಟಕ್ಕೆ ತಗುಲಿತ್ತು. ‘ನನ್ನಷ್ಟು ಎತ್ತರ ಈ ಪ್ರಪಂಚದಲ್ಲಿ ಯಾರಿದ್ದಾರೆ?’ ಎಂದು ಅದು ಅಹಂಕರಿಸಿತು. ಅಲ್ಲೇ ಇದ್ದ ಸನ್ಯಾಸಿಗಳು ‘ಸ್ವಲ್ಪ ಮೇಲೆ ನೋಡು ತಿಳಿಯುತ್ತದೆ.’ ಎಂದರು. ಬೆಟ್ಟ ಒಲ್ಲದ ಮನಸ್ಸಿನಿಂದಲೇ ನೋಡಿತು. ಅಲ್ಲಿ ಅನಂತ ಆಗಸದಲ್ಲಿ ಲಕ್ಷಾಂತರ ಮೇಘಗಳು ತೇಲುತ್ತಿದ್ದವು. ಅದನ್ನು ಕಂಡು ಬೆಟ್ಟವು ಗುಡ್ಡದಂತೆ ಮನದಲ್ಲೇ ನಾಚಿ ಮೌನ ತಳೆಯಿತು! ‘ಮೇಘಗಳಿಂದ ಸೋಲಿಸಲ್ಪಡುವವರೆಗೆ ಬೆಟ್ಟವು ಚಿಕ್ಕ ಗುಡ್ಡವನ್ನು ಅವಹೇಳನ ಮಾಡುತ್ತಿರುತ್ತದೆ.‌’ ಎನ್ನುವ ಆಂಗ್ಲ ನಾಣ್ಣುಡಿ ನಿಜಕ್ಕೂ ಅರ್ಥಪೂರ್ಣ. ನಾವೇ ಶ್ರೇಷ್ಟರೆಂದು ಬೀಗುವ ಭಾವ ಮುಖ್ಯವಲ್ಲ. ಹಣ್ಣಾದ ಬಾಳೆ ಗಿಡವು ಫಲವನ್ನು ಇತರರು ಪಡೆದುಕೊಳ್ಳಲಿ ಎಂದು ತಾನೇ ಬಾಗುತ್ತದೆ. ಹಾಗೇ ನಾವೂ ಬಾಗುವುದನ್ನು ಕಲಿತುಕೊಳ್ಳಬೇಕು.

ಯಾರಾದರೂ ಯಾರನ್ನಾದರೂ ಹೊಗಳಬಹುದು. ಅದು ಸುಲಭ. ಆದರೆ ಸರಿಯಾದ ವ್ಯಕ್ತಿಯನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಹೊಗಳುವುದು ಸುಲಭವಲ್ಲ. ಸ್ವಪ್ರಶಂಸೆ ಇಲ್ಲವೇ ಮೆಚ್ಚುಗೆಗೆ ಹಪಹಪಿಸಿದರೆ ಮತ್ತೊಬ್ಬರ ಅಗತ್ಯಗಳನ್ನು ಪೂರೈಸುವುದರ ಮೇಲೆ ಗಮನ ಹರಿಸಲಾಗುವುದಿಲ್ಲ.‌ ನಮ್ಮ ಶಕ್ತಿಗಳನ್ನು ಸದುಪಯೋಗ ಪಡಿಸಿಕೊಳ್ಳಲೂ ಆಗುವುದಿಲ್ಲ. ನಮ್ಮ ಅವಗುಣಗಳು ನಮಗೆ ಕಾಣದಾಗಿ ಬಿಡುತ್ತವೆ. ಬೇರೆಯವರ ಮೆಚ್ಚುವರೋ ಬಿಡುವರೋ ಅದು ಗೌಣ. ನಾವು ನಮ್ಮ ಬಲಾಬಲಗಳನ್ನು ತಿಳಿದು ವರ್ತಿಸಬೇಕು. ನಮ್ಮಿಂದ ಸಹಾಯ ಪಡೆದ ಜನರು ನಮ್ಮನ್ನು ಪ್ರಶಂಸಿಸುತ್ತಿಲ್ಲ ಎಂದು ಬೇಸರಿಸುವುದೂ ಉಂಟು. ನೆರವು ಬೇಕೆಂದಾಗ ಮಾತ್ರ ನಾವು ನೆನಪಾಗುತ್ತೇವೆಂದು ಆಕ್ಷೇಪಿಸುವುದೂ ಉಂಟು. ಕತ್ತಲೆಯಾದಾಗ ಮಾತ್ರ ಹಣತೆಯನ್ನು ಅರಿಸಿ ಹೋಗುತ್ತೇವೆ. ಹಾಗೆಯೇ ಜನರೂ ಕೂಡ ಕಷ್ಟದಲ್ಲಿದ್ದಾಗ ಸಹಾಯ ಯಾಚಿಸುತ್ತಾರೆ.

- Advertisement -

ಶಿವರಾಮ ಕಾರಂತರು ಹೇಳಿದಂತೆ,’ ಎಷ್ಟೇ ಗಟ್ಟಿ ಮನುಷ್ಯನಾಗಿರಲಿ, ಹೊಗಳಿಕೆ ಕಿವಿಗೊಟ್ಟನೆಂದರೆ ಬಲಿ ಬೀಳುತ್ತಾನೆ.ಸ್ವಯಂ ಪ್ರಶಂಸೆಯಿಂದ ಬೀಗುವುದಕ್ಕಿಂತ ಮಾಡುವ ಕೆಲಸವನ್ನು ಪೂಜಿಸಿದರೆ ಪ್ರಶಂಸೆಯ ಸುರಿಮಳೆ ನಾವಿದ್ದಲ್ಲಿಗೆ ತಾನಾಗಿಯೇ ಅರಸಿ ಬರುತ್ತದೆ. ಒಂದು ಸ್ಪಷ್ಟ, ಪ್ರಶಾಂತ ಜೀವನಕ್ಕೆ ಬೇಕಾದ ಕೌಶಲ್ಯಗಳನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ.ಹಾಗಾದರೆ ತಡವೇಕೆ ಬೀಗುವುದನ್ನು ಬಿಡೋಣ ಬಾಗುವುದನ್ನು ಕಲಿಯೋಣ. ಹೂಗಳಂತೆ ಅರಳಿ, ಬಾಳೆಯಂತೆ ಬಾಗಿ ಬದುಕಿನ ಸವಿಯನು ಸವಿಯೋಣವಲ್ಲವೇ?


ಜಯಶ್ರೀ ಅಬ್ಬಿಗೇರಿ, ಬೆಳಗಾವಿ 9449234142

- Advertisement -

1 COMMENT

Comments are closed.

- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group