ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ ಶಕ್ತಿಗೆ ಧರ್ಮ ಸತ್ಯ ಜ್ಞಾನವಿರಬೇಕು.
ಇಲ್ಲಿ ತನ್ನ ಸಂಸಾರದ ಜೊತೆಗೆ ಸಮಾಜವೂ ಇದೆ ಎಂಬ ಅರಿವು ಇರಬೇಕು. ಹೊರಗಿನ ರಾಜಕೀಯಕ್ಕೆ ಸಹಕರಿಸಲು ಹಣ ಬೇಕು. ಒಳಗಿನ ರಾಜಯೋಗಕ್ಕೆ ಜ್ಞಾನ ಬೇಕು. ಒಳಗೆ ಜ್ಞಾನ ಇಲ್ಲದೆ ಹೊರಗೆ ರಾಜಕೀಯ ನಡೆಸಿದರೆ ಅಜ್ಞಾನದ ಅಂಧಕಾರ. ಭಾರತದಲ್ಲಿ ದುಡಿಯುವ ಮಹಿಳೆಬೇರೆ, ಗೃಹಿಣಿ ಬೇರೆ.
ಒಬ್ಬರು ದುಡಿದು ಹಣತಂದು ಜೀವನ ನಡೆಸಿದರೆ, ಮನೆಯೊಳಗಿನ ಗೃಹಿಣಿ ಮನೆಯಲ್ಲಿಯೇ ದುಡಿದು ತನ್ನ ಸಂಸಾರದ ಆರೋಗ್ಯ ನೋಡಿಕೊಂಡು ಪತಿವ್ರತೆಯಾಗಿರುತ್ತಾಳೆ. ಇದರಲ್ಲಿ ಕೆಲವರಷ್ಟೇ ಧರ್ಮದ ದಾರಿ ಹಿಡಿದರೆ, ಹಲವರಿಗೆ ಈ ಅರಿವಿಲ್ಲದೆ ನಡೆದಾಗಲೆ ಅಪಸ್ವರ ಹೆಚ್ಚಾಗುತ್ತದೆ. ಇದು ಕೇವಲ ಪತ್ನಿಯರ ಸಮಸ್ಯೆಯಲ್ಲ. ಪುರುಷರಿಗೆ ಧಾರ್ಮಿಕತೆಯ ಅರಿವಿಲ್ಲವಾದರೆ ಪ್ರಯೋಜನವಿಲ್ಲ.
ಇದಕ್ಕೆ ಒಂದೇ ಪರಿಹಾರ ಶಿಕ್ಷಣದಲ್ಲಿ ಭಾರತೀಯ ಶಿಕ್ಷಣ ಜಾರಿಗೊಳಿಸಿ ಇಬ್ಬರಿಗೂ ಧರ್ಮಜ್ಞಾನ ನೀಡುವುದಾಗಿದೆ ಇದರಲ್ಲಿಯೂ ರಾಜಕೀಯ ಬೇಕೆ? ಹಿಂದಿನ ಕಾಲದಲ್ಲಿದ್ದಂತೆ ಇಂದು ಸ್ತ್ರೀ ಅಬಲೆಯಲ್ಲ, ಅಸಹಾಯಕಳಲ್ಲ, ಅವಿದ್ಯಾವಂತಳಲ್ಲ,ಬಡವಳಲ್ಲ ಆದರೂ ಶಾಸ್ತ್ರ ಸಂಪ್ರದಾಯ, ಧರ್ಮ ಸತ್ಯದ ಪರ ನಿಂತು ಸಂಸಾರವನ್ನು ನಡೆಸಲು ಪತಿವ್ರತೆಯಾಗಿದ್ದರೂ ಕೆಲವೆಡೆ ಅತಿಯಾದ ಆಚಾರ ವಿಚಾರದಿಂದ ಕುಗ್ಗಿ ಹೋಗಿರುವುದು ಸತ್ಯ.
ಕೆಲವರಂತೂ ವಿರೋಧಿಸುತ್ತಾ ಮನೆ ಬಿಟ್ಟು ಹೊರ ನಡೆದಿರೋದು ಅತಿಯಾದ ವೈಜ್ಞಾನಿಕ ಜ್ಞಾನವಿರಬಹುದು. ಮಾನವ ಸಮಾನತೆ ವಿಚಾರದಲ್ಲಿ ಸಹಕರಿಸುವಾಗ ಸ್ತ್ರೀ ಯ ಭೌತಿಕ ಆಸ್ತಿಯನ್ನು ಪರಿಗಣಿಸುವುದರಿಂದ ಇತ್ತೀಚಿನ ದಿನಗಳಲ್ಲಿ ಹೊರಗಿನಿಂದ ಬಂದವಳು ತವರುಮನೆಯ ಆಸ್ತಿ ಜೊತೆ ಗಂಡನ ಮನೆ ಆಸ್ತಿ ಪಡೆದು ಇನ್ನಷ್ಟು ಸಂಪಾದನೆಗಾಗಿ ನೌಕರಿ ಹಿಡಿದಿರುವಾಗ ಪತಿವ್ರತೆ, ಧರ್ಮಪತ್ನಿಯಂತೆ ಇರಬೇಕೆಂದು ಪುರುಷ ಬಯಸೋದರಲ್ಲಿ ಯಾವುದೇ ಧರ್ಮವಿಲ್ಲ. ಅರ್ಥವೂ ಇಲ್ಲ. ಇರಲು ಸಾಧ್ಯವೆ ಇಲ್ಲ.
ಕಾರಣ ಋಣ ಸಂಬಂಧವನ್ನು ಹಣದಿಂದ ತೀರಿಸೋ ಬದಲು ಜ್ಞಾನದಿಂದ ತೀರಿಸಬೇಕಿತ್ತು. ವಿಜ್ಞಾನ ಇಬ್ಬರಿಗೂ ವ್ಯವಹಾರ ಜ್ಞಾನಹೆಚ್ಚಿಸಿ ಕೊಟ್ಟು ಪಡೆಯೋದರಲ್ಲಿಯೇ ಜೀವನ ಮುಗಿಯುತ್ತಿದೆ. ಹಣದಿಂದ ಎಲ್ಲವೂ ಸಾಧ್ಯ ಎಂದಾಗಿದ್ದರೆ ಇಂದು ಎಷ್ಟೋ ಉದ್ಯೋಗಸ್ಥ ಸ್ತ್ರೀ ಪುರುಷರಲ್ಲಿ ಭಿನ್ನಾಭಿಪ್ರಾಯ ಇರುತ್ತಿರಲಿಲ್ಲ. ವಿಚ್ಛೇದನ ಹೆಚ್ಚಾಗುತ್ತಿರಲಿಲ್ಲ. ಹಾಗಾದರೆ ಎಲ್ಲದ್ದಕ್ಕೂ ಕಾರಣವೆ ಜ್ಞಾನವಿಲ್ಲದ ಶಿಕ್ಷಣದ ಪ್ರಭಾವ. ವೈಜ್ಞಾನಿಕ ಚಿಂತನೆಗೂ ಇತಿಮಿತಿಗಳಿದೆ ಮಿತಿಮೀರಿದರೆ ಅಜ್ಞಾನವೇ ಹೆಚ್ಚುತ್ತದೆ.
ಭೂಮಿ ಋಣ ಎಂದರೆ ಸ್ತ್ರೀ ಋಣ. ಸ್ತ್ರೀ ಎಂದರೆ ಶಕ್ತಿ. ಜೀವಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಜೀವವನ್ನು ಹಿಂಸೆ ಮಾಡಿದರೆ ಜೀವಾತ್ಮನಿಗೆ ಮುಕ್ತಿ ಸಿಗುವುದೆ? ಹಾಗೆ ಪ್ರಾಣ ಶಕ್ತಿಯೂ ಕೂಡ. ಇಂದಿಗೂ ಪತಿವ್ರತೆಯರಿದ್ದಾರೆ ಆದರೆ, ಗೃಹಿಣಿಯರಾಗಿರುವ ಕಾರಣ ಆರ್ಥಿಕವಾಗಿ ಸಬಲರಾಗದೆ ಹಿಂದುಳಿದವರಂತೆ ಕಾಣುತ್ತಾರೆ. ಅವರ ಸಾತ್ವಿಕ ಶಕ್ತಿಯಿಂದಲೇ ಸಂಸಾರ ನಡೆದಿರೋದಂತೂ ಸತ್ಯ.ಭಾರತ ಮಾತೆಯ ಜ್ಞಾನಶಕ್ತಿ ಭಾರತೀಯ ಸ್ತ್ರೀ ಯಲ್ಲಿದೆ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು