ಬೀದರ – ಗಡಿ ಜಿಲ್ಲೆಯ ಬೀದರ್ ನಲ್ಲಿ ನಿನ್ನೆ ಬ್ರಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ನಡೆದ ಗಲಾಟೆ ಇಡೀ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ತುರ್ತುಚಿಕಿತ್ಸಾ ಘಟಕದ ಒಳಗೆ ಯಾರಿಗೂ ಪರವಾನಿಗೆ ಇರುವುದಿಲ್ಲ. ಬಾಗಿಲಿಗೆ ಒಬ್ಬ security card ನೇಮಕ ಮಾಡಿರುತ್ತಾರೆ ಆದರೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಗ್ಯಾಂಗನ್ನು ಯಾರೂ ತಡೆಯಲಿಲ್ಲವೆ ಅಥವಾ ತಡೆದರೂ ಕೇರ್ ಮಾಡದೆ ದುಷ್ಕರ್ಮಿಗಳು ಒಳಗೆ ನುಗ್ಗಿದರೆ ಎಂಬ ಬಗ್ಗೆ ತಿಳಿಯಬೇಕಾಗಿದೆ.
ಒಳಗೆ ಹೋಗಿದ್ದ ಗ್ಯಾಂಗ್ ಹಲ್ಲೆ ಮಾಡುತ್ತಿದ್ದ ರಭಸಕ್ಕೆ ಅಲ್ಲಿ ಪಕ್ಕದಲ್ಲಿ ಎರಡು ಮೂರು ಬೆಡ್ ಮೇಲಿನ ರೋಗಿಗಳು ಭಯಪಟ್ಟು ಹೊರಗೆ ಒಡಿ ಬಂದಿದ್ದಾರೆ. ಜೊತೆಯಿದ್ದವರು ಭಯಪಟ್ಟು ನೋಡುತ್ತಾ ನಿಲ್ಲುವಂತಾಗಿದೆ. ಅದರಲ್ಲಿ ಯಾರಾದರೂ ಹೃದ್ರೋಗಿಗಳು ಇದ್ದರೆ ಗತಿಯೇನು ಎಂಬ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ ರೋಗಿಗಳ ಕುಟುಂಬದವರು ಜಿಲ್ಲಾ ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದು ಕಡೆ ಈ ಪ್ರಕರಣದಲ್ಲಿ ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ವೈಫಲ್ಯವೂ ಕಂಡುಬಂದಿದೆ ಎಂದು ಹೇಳಬಹುದು. ಎರಡು ಗ್ಯಾಂಗ್ ಗಳ ಮಧ್ಯೆ ಮೊದಲು ಗಲಾಟೆ ಮಾಡಿಕೊಂಡಿದ್ದ ಗ್ಯಾಂಗ್ ಸದಸ್ಯ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರೂ ಪೊಲೀಸ್ ಇಲಾಖೆ ಯಾಕೆ ಅಲರ್ಟ್ ಆಗಲಿಲ್ಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದು ಇದು ಸಂಪೂರ್ಣ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಎನ್ನಲಾಗುತ್ತಿದೆ. ಅಲ್ಲದೆ ಜನರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂಬುದಕ್ಕೆ ಮೇಲಿಂದ ಮೇಲೆ ನಡೆಯುತ್ತಿರುವ ಇಂಥ ಗಲಾಟೆಗಳೇ ಸಾಕ್ಷಿ.
ಈ ಎರಡು ಗ್ಯಾಂಗ್ ಮಧ್ಯೆ ಒಂದು ವರ್ಷದಿಂದ ಹಳೆಯ ವೈಷಮ್ಯ ಹೊಗೆಯಾಡುತ್ತಿದ್ದ ಹಿನ್ನೆಲೆಯಲ್ಲಿ ನಿನ್ನೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿಯಾದ ಘಟನೆ ಬೀದರ್ ನಗರದ ಓಲ್ಡ್ ಸಿಟಿಯ ಮನೀಯಾರ್ ತಾಲೀಮ್ ನಲ್ಲಿ ನಡೆದಿದೆ.ಓಲ್ಡ್ ಸಿಟಿಯ ಕಾಂಗ್ರೆಸ್ ಮುಖಂಡ ಫಿರೋಜ್ ಖಾನ್ ಹಾಗೂ ಎಂ ಡಿ ರೌಫ್ ಎಂಬ ಎರಡು ಗುಂಪುಗಳ ಮಧ್ಯೆ ಮಾರಾಮಾರಿಯಾಗಿದೆ… ಫಿರೋಜ್ ಖಾನ್ ಗುಂಪು ಎಂ ಡಿ ರೌಫ್ ಗೆ ಚಾಕುವಿನಿಂದ ಹಲ್ಲೆ ಮಾಡಿದ್ದು ಸ್ಥಿತಿ ಗಂಭೀರವಾಗಿದ್ದು ಈ ವೇಳೆ ಫಿರೋಜ್ ಖಾನ್ ಮಗ ಅಪ್ಸರ್ಖಾನ್ ಮೇಲೂ ಹಲ್ಲೆ ಮಾಡಲಾಗಿದೆ… ಚಾಕುವಿನಿಂದ ಹಲ್ಲೆ ಮಾಡಿದಾಗ ಬ್ರೀಮ್ಸ್ ಅಸ್ಪತ್ರೆಗೆ ಓಡಿ ಬಂದ ಎಂಡಿ ರೌಫ್ ಮತ್ತು ಫಿರೋಜ್ ಖಾನ್ ಗುಂಪುಗಳ ಮಧ್ಯೆ ಬ್ರೀಮ್ಸ್ ಅಸ್ಪತ್ರೆಯಲ್ಲೂ ಮತ್ತೆ ಮಾರಾಮಾರಿಯಾಗಿದ್ದು ಈ ವೇಳೆ ಖಾರದ ಪುಡಿ ಎರಚಿದ್ದಾರೆ ಎನ್ನಲಾಗಿದೆ… ಎಂಡಿ ರೌಫ್ ಸ್ಥಿತಿ ಗಂಭೀರವಾಗಿದ್ದು ಬ್ರೀಮ್ಸ್ ನಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗಾಗಿ ಹೈದ್ರಾಬಾದಿಗೆ ರವಾನೆಯಾಗಿದ್ದು ಈ ಕುರಿತು ನ್ಯೂ ಟೌನ್ ಪೋಲಿಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ಮಾಡಿದ್ದಾರೆ.
ಇನ್ನಾದರೂ ಜಿಲ್ಲಾ ಪೊಲೀಸ್ ಇಲಾಖೆ ಬೀದರ ನಲ್ಲಿ ಪುಡಿ ರೌಡಿಗಳ ಗ್ಯಾಂಗ್ ಗೆ ಹೇಗೆ ಕಡಿವಾಣ ಹಾಕಬಹುದು ಎಂಬುದನ್ನು ಕಾದನೋಡಬೇಕು ಬೀದರ ಜಿಲ್ಲೆಯ ಸಾರ್ವಜನಿಕರು ಯಾವುದೇ ಭಯವಿಲ್ಲದೇ ಓಡಾಡುವಂಥ ವಾತಾವರಣ ನಿರ್ಮಾಣ ಮಾಡುವುದು ಪೊಲೀಸರ ಜವಾಬ್ದಾರಿಯಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ