ಸಿಂದಗಿ: ಪರಿಸರ ರಕ್ಷಣೆಯಲ್ಲಿ ಹಿಂದುಳಿದಿದ್ದರಿಂದ ವಿಜಯಪುರ ಜಿಲ್ಲೆ ಬರದ ನಾಡು ಎಂದೇ ಪ್ರಖ್ಯಾತಿ ಪಡೆದಿದೆ ಅದನ್ನು ಅಳಿಸಿ ಹಾಕಲು ವಿಶ್ವಬಂಧು ಪರಿಸರ ಬಳಗ ಕಂಕಣಬದ್ದವಾಗಿ ನಿಂತಿದೆ ಅವರಿಗೆ ಎಲ್ಲರ ಸಹಕಾರ ದೊರೆತಿದ್ದಾದರೆ ಊರಿಗೊಂದು ವನ ಮನೆಗೊಂದು ಮರ ಎನ್ನುವ ಧ್ಯೇಯ ವಾಕ್ಯಕ್ಕೆ ಕೈ ಜೋಡಿಸಿದಂತಾಗುತ್ತದೆ ಎಂದು ಎಚ್.ಡಿ.ಎಫ್.ಸಿ ಬ್ಯಾಂಕ ಉಪ ವ್ಯವಸ್ಥಾಪಕಿ ಸವಿತಾ ಅನಿಲ ನಾಯಕ ಹೇಳಿದರು.
ಪಟ್ಟಣದ ಬಸ್ ಡೀಪೋ ಸರ್ಕಾರಿ ಉರ್ದು ಹಾಗೂ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಶ್ವಬಂಧು ಪರಿಸರ ಬಳಗದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ 33ನೇ ವಾರದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನಿಗೆ ಅನ್ನ ನೀರು ಇಲ್ಲದಿದ್ದರು ಕೂಡಾ ಬದುಕಬಹುದು ಆದರೆ ಆಕ್ಸಿಜನ್ ಇರದೆ ಬದುಕಲು ಅಸಾಧ್ಯ ಕಾರಣ ಪರಿಸರ ನಮಗೆ ಗಾಳಿ-ಬೆಳಕು ನೀಡಿ ಸ್ವಚ್ಛ-ಸುಂದರ ಬದುಕಲು ಅವಕಾಶ ಕೊಡುತ್ತದೆ ಅಂತಹ ಪರಿಸರವನ್ನು ರೂಪಿಸಲು ಗಿಡ-ಮರಗಳನ್ನು ಬೆಳೆಸುವ ಮಹತ್ತರ ಜವಾಬ್ದಾರಿ ಯುವಕರು ಮತ್ತು ವಿದ್ಯಾರ್ಥಿಗಳ ಮೇಲಿದೆ ಎಂದರು.
ಅಫಜಲ್ಪುರ ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕಿ ಅನಿತಾ ಶಹಾಪುರ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಗಡಿಬಿಡಿ ಜೀವನ ನಡೆಸಲು ಮುಂದಾಗಲು ರಾಸಾಯನಿಕ ರಸಗೊಬ್ಬರ ಬಳಕೆಯಿಂದ ಭೂಮಿಯ ಸತ್ವ ದಿನದಿನಕ್ಕೆ ಕುಲುಷಿತಗೊಂಡು ವಿಷಪೂರಿತ ಮಣ್ಣಿನಲ್ಲಿ ಬೆಳೆದ ಬೆಳೆಗಳಿಂದ ಅಪೌಷ್ಠಿಕ ಆಹಾರ ಉತ್ಪಾದನೆ ಮಾಡುತ್ತಿದ್ದೇವೆ ಅಲ್ಲದೆ ಗಿಡ-ಮರಗಳ ನಾಶ ಮಾಡಿ ಇಂದು ಆಕ್ಸಿಜನ್ ಕೊರತೆಯಾಗಿ ಮಹಾಮಾರಿಯಂತಹ ರೋಗಕ್ಕೆ ತುತ್ತಾಗುತ್ತಿದ್ದೇವೆ ಕಾರಣ ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಭೂಮಿಯ ಫಲವತ್ತತೆ ಹೆಚ್ಚಿಸುವದರೊಂದಿಗೆ ಪರಿಸರ ರಕ್ಷಣೆಗೆ ಮುಂದಾಗಬೇಕಾದ ಅನಿವಾರ್ಯತೆ ಬಂದೊದಗಿದೆ ಅರಣ್ಯ ಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕಾಗಿದೆ ಎಂದರು.
ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ಧಲಿಂಗ ಚೌಧರಿ ಮಾತನಾಡಿ, ಮಕ್ಕಳ ಜನ್ಮ ದಿನದಂದು ಸಾವಿರಾರು ರೂಪಾಯಿ ಖರ್ಚು ಮಾಡಿ ಮರೆತುಬಿಡುವ ಪಾಲಕರಾದ ನಾವು ಮಕ್ಕಳ ಜನ್ಮ ದಿನದಂದು ಪ್ರತಿ ವರ್ಷಕ್ಕೊಂದು ಸಸಿನೆಟ್ಟು ಹುಟ್ಟುಹಬ್ಬವನ್ನು ಸಾರ್ಥಕಗೊಳಿಸಬೇಕು. ಶಾಲೆಯ ಮಕ್ಕಳು ತಾವು ನೆಟ್ಟ ಸಸಿಗಳ ಬುಡದಲ್ಲಿ ಊಟ ಮಾಡಿದಾಗೊಮ್ಮೆ ಕೈತೊಳೆದುಕೊಂಡರೂ ಸಾಕು. ಸಸ್ಯಗಳು ಬೆಳೆದು ಹೆಮ್ಮರವಾಗಿ ನೆರಳು, ಗಾಳಿ, ಹೂವು, ಹಣ್ಣುಗಳನ್ನು ಕೊಟ್ಟು ನಮ್ಮನ್ನು ಪೋಷಿಸುತ್ತವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಬಾಬು ಯಾದವ, ಕೆಬಿಎಲ್ ಎಸ್ ಮುಖ್ಯಗುರುಮಾತೆ ಎಸ್.ಎ.ಬಳೂಂಡಗಿ, ಉರ್ದು ಸಿಆರ್ಪಿ ಎಂ.ಎಚ್.ಮಣೂರ, ಎಸ್‍ಎ.ದೊಡಮನಿ, ಬಿ.ಎಂ.ನಾಟೀಕಾರ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.
ಶಿಕ್ಷಕಿ ಕೆ.ಎಚ್.ಜಂಬಲದಿನ್ನಿ ಪ್ರಾರ್ಥಿಸಿದರು. ಉರ್ದು ಶಾಲೆಯ ಮುಖ್ಯಗುರು ಝಡ್.ಎಸ್ ಮನಿಯಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಯಬಣ್ಣ ದೇವರಮನಿ ನಿರೂಪಿಸಿದರು. ಪತ್ರಕರ್ತ ಪಂಡಿತ ಯಂಪೂರೆ ವಂದಿಸಿದರು.