ಸಿಂದಗಿ: ನೂರು ಇನ್ನೂರು ವರ್ಷಗಳವರೆಗೆ ಬ್ರಿಟೀಷರ ಜೊತೆ ಹೋರಾಡಿ ಅನೇಕ ಮಹನೀಯರ ಮಹನೀಯರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಪಡೆಯುವಂತಾಗಿದೆ ಈ ಸಂಘರ್ಷದ ಇತಿಹಾಸವನ್ನು ಹೊಂದಿರುವ ಭಾರತಕ್ಕೆ ಉನ್ನತ ಪರಂಪರೆ ಇದೆ. ಹೋರಾಟದ ಮೂಲಕವೇ ಬ್ರಿಟೀಷರಿಗೆ ಸೂಕ್ತ ಉತ್ತರವನ್ನು ನೀಡುವ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿ ಸ್ವಾತಂತ್ರ್ಯವನ್ನು ತನ್ನದಾಗಿಸಿಕೊಂಡಿದೆ ನಾವುಗಳು ಅಂತಹ ಮಹನೀಯರ ಚಳವಳಿಯ ದೃಷ್ಟಾಂತಗಳನ್ನು ಮುಂದಿನ ಯುವ ಪೀಳೀಗೆಗೆ ಹೇಳುವ ಕಾರ್ಯ ಮಾಡಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಸಿಗುವ ಮುನ್ನ ನಮ್ಮ ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ವಿದ್ಯುತ್ ಪೂರೈಕೆ ಇರಲಿಲ್ಲ ಅಲ್ಲದೆ 1 ಲಕ್ಷ 23 ಸಾವಿರ ಹಳ್ಳಿಗಳಿಗೆ ರಸ್ತೆಗಳಿರಲಿಲ್ಲ. ಡಾ. ಅಂಬೇಡ್ಕರ ಅವರು ಬರೆದ ಸಂವಿಧಾನದಡಿಯಲ್ಲಿ 1957ರಲ್ಲಿ ಈ ಎಲ್ಲ ಹಳ್ಳಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಮತ್ತು ಈ ದೇಶವನ್ನು ಸಶಕ್ತವನ್ನಾಗಿ ಮಾಡುವಲ್ಲಿ ನಮ್ಮ ದೇಶವನ್ನಾಳಿದ ಪ್ರಧಾನ ಮಂತ್ರಿಗಳ ಶ್ಲ್ಯಾಘನೀಯ ಕಾರ್ಯಗಳು ಅವಿಸ್ಮರಣೀಯ ಎಂದು ಹೇಳಿದ ಅವರು, ಪಟ್ಟಣಕ್ಕೆ ಕುಡಿಯುವ ನೀರಿನ ಬವಣೆ ನೀಗಿಸಲು 24 ಗಂಟೆಗಳ ಕಾಲ ನೀರು ಪೂರೈಕೆ ಹಾಗೂ 2018ರಲ್ಲಿ ಆಲಮೇಲ ತಾಲೂಕಿಗೆ ಮಂಜೂರಿಯಾಗಿ ನೆನೆಗುದಿಗೆ ಬಿದ್ದಿರುವ ತೋಟಗಾರಿಕೆ ಕಾಲೇಜು, ಕಡಣಿ ಬ್ರಿಜ್ ಕಾಮಗಾರಿ ಮರು ಚಾಲನೆಗೆ ಕ್ರಮ ವಹಿಸಲಾಗಿದೆ ಅಲ್ಲದೆ ಸರಕಾರ 5 ಗ್ಯಾರಂಟಿಗಳನ್ನು ನೀಡುವ ಮೂಲಕ ನುಡಿದಂತೆ ನಡೆದುಕೊಂಡಿದೆ ಈ ಅವಧಿಯಲ್ಲಿ ಯಾವುದೇ ಜಾತಿ ರಾಜಕಾರಣ, ದ್ವೇಷ ರಾಜಕಾರಣ ಮಾಡದೇ ಈ ಮತಕ್ಷೇತ್ರ ಎಲ್ಲ ಹಳ್ಳಿಗಳ ಸವಾಂಗೀಣ ಅಭಿವೃದ್ಧಿ ಮಾಡುವ ಗುರಿ ಹೊಂದಿದ್ದೇನೆ ಕಾರಣ ತಾಲೂಕಿನ ಎಲ್ಲ ಅಧಿಕಾರಿಗಳು ಸರಕಾರದಲ್ಲಿ ಮಂಜೂರಾದ ಎಲ್ಲ ಯೋಜನೆಗಳನ್ನು ಕ್ಷೇತ್ರದ ಜನರಿಗೆ ಮುಟ್ಟಿಸುವಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ ಸಹಕರಿಸಿದಾಗ ಮಾತ್ರ ಪ್ರತಿಯೊಬ್ಬರಿಗೂ ಸರಕಾರದ ಯೋಜನೆಗಳು ತಲುಪಲು ಸಾಧ್ಯ ಎಂದರು.
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ಆಗಿದೆ. ಅಂತಹ ನಾಯಕರ ಘನತೆಗೆ ಗೌರವ ತರುವಂಥ ಕಾರ್ಯಗಳನ್ನು ನಾವೆಲ್ಲರೂ ಮಾಡೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಪ್ರೌಡಶಿಕ್ಷಣ ಮಂಡಳಿವತಿಯಿಂದ ಸರಕಾರಿ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿ 2023-24ನೇ ಸಾಲಿನ ಎಸ್. ಎಸ್ ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಹಣ ನೀಡಿ ಗೌರವಿಸಲಾಯಿತು.
ಧ್ವಜವಂದನೆ; ಶಾಸಕ ಅಶೋಕ ಮನಗೂಳಿ ಅವರು ಹಾಗೂ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಪಿಎಸ್‍ಐ ಬೀಮಪ್ಪ ರಬಕವಿ ಅವರು ತೆರೆದ ವಾಹನದಲ್ಲಿ ನಿಂತು ಸಾರ್ವಜನಿಕವಾಗಿ ಧ್ವಜವಂದನೆ ಸಲ್ಲಿಸಿ ವಿನೂತನ ಕಾರ್ಯಕ್ಕೆ ಚಾಲನೆ ನೀಡಿದರು.
ಜನಮನಸೆಳೆದ ಕವಾಯತ್:
ಕಾರ್ಯಕ್ರಮದಲ್ಲಿ ಪ್ರೇರಣಾ ಪಬ್ಲಿಕ್ ಶಾಲೆ, ಮಂದಾರ ಪ್ರಾಥಮಿಕ ಶಾಲೆ, ಜ್ಞಾನಭಾರತಿ ವಿದ್ಯಾಮಂದಿರ, ಸರಕಾರಿ ಆದರ್ಶ ವಿದ್ಯಾಲಯ, ಶ್ರೀ ಚೆನ್ನವೀರ ಸ್ವಾಮೀಜಿ, ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಬಾಲಕಿಯರ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಪಥಸಂಚಲನ ಹಾಗೂ ಕವಾಯತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.
ಸಿಪಿಐ ಡಿ.ಹುಲಗಪ್ಪ, ತಾಪಂ ಇಓ ಬಾಬು ರಾಠೋಡ, ಇಂಡಿ ಗ್ರೇಡ್ 2 ತಹಶೀಲ್ದಾರ ಧನಪಾಲ ಶೆಟ್ಟಿ ದೇವೂರ, ಕ್ಷೇತ್ರ ಶಿಕ್ಷಣಾಧಿಕಾರಿ ಐ.ಎಸ್.ಟಕ್ಕೆ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಕ ಎಸ್.ಬಿ. ಚೌಧರಿ ನಿರೂಪಿಸಿ ವಂದಿಸಿದರು.