ಸಿಂದಗಿ: ಮಕ್ಕಳ ಸಾಹಿತ್ಯ ಪ್ರೌಢಸಾಹಿತ್ಯದಷ್ಟೇ ಪರಿಪೂರ್ಣವಾದ ಸಾಹಿತ್ಯ. ಹೀಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿಗಳಲ್ಲಿ ಮಕ್ಕಳ ಸಾಹಿತ್ಯ ಪ್ರಶಸ್ತಿಗಳ ವಿಸ್ತಾರ ಹೆಚ್ಚಿಸಬೇಕು ಎಂದು ವಿದ್ಯಾಚೇತನ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕಾರ ಆಯ್ಕೆ ಸಮಿತಿ ಸದಸ್ಯ, ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ಹೇಳಿದರು.
ಪಟ್ಟಣದ ಕ್ರಿಯೇಟಿವ್ ಕಿಡ್ಸ್ ಹೋಮ್ ಸಭಾಭವನದಲ್ಲಿ ವಿದ್ಯಾಚೇತನ ಪ್ರಕಾಶನ, ಮಕ್ಕಳ ಕಲ್ಯಾಣ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬಾಲ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಬರೀ ಹಳೆಯದಕ್ಕೆ ಜೋತು ಬೀಳದೆ ಹೊಸತನ ಮೈಗೂಡಿಸಿಕೊಂಡು ಸಾಹಿತ್ಯ ರಚನೆ ಆಗಬೇಕು. ಇಂಥ ಮಕ್ಕಳ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಮಕ್ಕಳ ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಗಟ್ಟಿಯಾಗಿ ಉಳಿಯುವಂತೆ ಮಾಡುತ್ತದೆ ಎಂದು ತಿಳಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯ ಡಾ.ಚನ್ನಪ್ಪ ಕಟ್ಟಿ ಮಾತನಾಡಿ, ಸಾಹಿತ್ಯ ಕೃತಿಯನ್ನು ಪ್ರಶಸ್ತಿಗಾಗಿ ಬರೆಯುವುದಲ್ಲ. ಕೆಲವು ಸಂಘಟನೆಗಳು ಪ್ರಶಸ್ತಿ ನೀಡುವುದನ್ನು ಕೊಡುವ, ತೆಗೆದುಕೊಳ್ಳುವ ವ್ಯವಹಾರವನ್ನಾಗಿ ಮಾಡಿಕೊಂಡಿವೆ. ಪ್ರಶಸ್ತಿಗಳಿಂದು ಮಾರಾಟಕ್ಕಿವೆ. ಪ್ರಶಸ್ತಿ ನೀಡುವುದು ಒಂದು ರೀತಿಯಲ್ಲಿ ದೊಂಬರಾಟದಂತಾಗಿದೆ. ಲೇಖಕರು ಪ್ರಶಸ್ತಿಗೆ ಬೆನ್ನು ಬೀಳಬಾರದು ಎಂದು ಹೇಳಿದರು.
ಈಗೀಗ ಲೇಖಕರು ಪ್ರಶಸ್ತಿಗಾಗಿ ಬರಹ ಮುಂದುವರೆಸುವ ಹೊಸ ಟ್ರೆಂಡ್ ಬೆಳೆಯುತ್ತಲಿರುವುದು ದುರಂತ ಎಂದು ವಿಷಾದಿಸಿದ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ವಿವಿಧ ಪ್ರಕಾರಗಳಿಗೆ ಪ್ರಶಸ್ತಿ ನೀಡಬೇಕು ಎಂಬುದಾಗಿ ಮಕ್ಕಳ ಸಾಹಿತಿ ಪ.ಗು. ಸಿದ್ದಾಪುರ ಪ್ರಸ್ತಾಪಿಸಿರುವ ವಿಷಯ ಸಂಕೀರ್ಣ ಎನಿಸುತ್ತದೆ ಎಂದು ಡಾ.ಕಟ್ಟಿ ಹೇಳಿದರು.
ಸಾಹಿತ್ಯ ಪ್ರಶಸ್ತಿಗಳು ಪಾರದರ್ಶಕ ವಾಗಿ ಅರ್ಹವಾದ ಕೃತಿಗೆ ನೀಡಬೇಕು. ಇಲ್ಲದಿದ್ದರೆ ಪ್ರಶಸ್ತಿ ಗೌರವ ಹಾಳಾಗುತ್ತದೆ ಎಂದು ಅವರು ಸಲಹೆ ನೀಡಿದರು.
ಸಿಂದಗಿಯಲ್ಲಿ ರಾಜ್ಯಮಟ್ಟದ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕಾರ ಇದೊಂದು ಹೊಸ ಹೆಜ್ಜೆ ಎಂದು ವಿದ್ಯಾಚೇತನ ಪ್ರಕಾಶನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿಯ ಮಕ್ಕಳ ಸಾಹಿತಿ ಬಸವರಾಜ ಗಾರ್ಗಿ ಅವರ ಹಾಸ್ಟೆಲ್ ಮಕ್ಕಳ ಕಥೆಗಳು ಕಥಾ ಸಂಕಲನ ಹಾಗೂ ಸಿಂದಗಿಯ ಮಕ್ಕಳ ಸಾಹಿತಿ ಎಸ್.ಎಸ್.ಸಾತಿಹಾಳ ಅವರ ಹಾಡು ಕೋಗಿಲೆ ಹಾಡು ಕವನ ಸಂಕಲನಕ್ಕೆ ರಾಜ್ಯ ಮಟ್ಟದ ಬಾಲ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ತಲಾ 5 ಸಾವಿರ ರೂ. ರೂಪಾಯಿ ನಗದು, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಒಳಗೊಂಡಿದೆ.
ಪೂಜ್ಯಶ್ರೀ ಚನ್ನವೀರಸ್ವಾಮೀಜಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಜಯಶ್ರೀ ಕುಲಕರ್ಣಿ ಅವರಿಗೆ ಪ್ರಕಾಶನದ ವತಿಯಿಂದ ವಿಶೇಷ ಸನ್ಮಾನ ಜರುಗಿತು.
ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಚೇತನ ಪ್ರಕಾಶನ ಅಧ್ಯಕ್ಷ ಹ.ಮ.ಪೂಜಾರ ಆಶಯ ಭಾಷಣ ಮಾಡಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಡಾ.ಜಿ.ಎಸ್. ಭೂಸಗೊಂಡ, ಮಕ್ಕಳ ಕಲ್ಯಾಣ ಪ್ರತಿಷ್ಠಾನ ಅಧ್ಯಕ್ಷ ರಮೇಶ ಪೂಜಾರ, ಕಾರ್ಯಕ್ರಮ ಸಂಯೋಜಕ ಎಂ.ಎಂ. ಹೂಗಾರ, ರಾಜಶೇಖರ ಪೂಜಾರ, ವಿಜಯಕುಮಾರ ಪೂಜಾರ ವೇದಿಕೆ ಮೇಲೆ ಇದ್ದರು.
ಡಾ.ಎಂ.ಎಂ. ಪಡಶೆಟ್ಟಿ, ಶಿವಪ್ಪಣ್ಣ ಗೋಸಾನಿ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್. ಪಾಟೀಲ ಇಬ್ರಾಹಿಂಪೂರ, ಶಿವಾನಂದ ಕಲಬುರ್ಗಿ, ಪ್ರಕಾಶ ಚೌಧರಿ, ಶರಣು ಮಣೂರ, ಶಂಕರ ಕಟ್ಟಿಮನಿ, ಪಿ.ಎಂ. ಮಡಿವಾರ, ಡಾ.ಶರಣು ಜೋಗುರ, ಪ್ರಾಚಾರ್ಯೆ ಜೆ.ಸಿ. ನಂದಿಕೋಲ ಸೇರಿದಂತೆ ಸಾಹಿತ್ಯಾಸಕ್ತರು ಇದ್ದರು.
ರಾಚಪ್ಪ ಕೊಪ್ಪಾ ಸ್ವಾಗತಿಸಿದರು. ಎಸ್.ಕೆ. ಗುಗ್ಗರಿ ನಿರೂಪಿಸಿದರು. ಶಿವಕುಮಾರ ಶಿವಸಿಂಪಿಗೇರ ವಂದಿಸಿದರು.
ಸಾಹಿತ್ಯ ಕೃಷಿಯನ್ನು ಸಂಖ್ಯೆ ಯಿಂದ ಅಳೆಯಬಾರದು, ಸತ್ವ ಮುಖ್ಯ. ಆದರೆ ಇಂದು ಸಾಹಿತ್ಯ ಕೃತಿಗಳು ಸಂಖ್ಯೆಯಲ್ಲಿ ಜಾಸ್ತಿಯಾಗಿದ್ದರೂ ಸತ್ವಹೀನವಾಗಿವೆ.
-ಪ.ಗು. ಸಿದ್ದಾಪೂರ, ಮಕ್ಕಳ ಸಾಹಿತಿ, ಮುಳವಾಡ