spot_img
spot_img

ಬಸನವಹಳ್ಳಿಯ ಶ್ರೀ ಅಂಜನೇಯ ದೇವಸ್ಥಾನದ ವೈಭವ

Must Read

- Advertisement -

ಭಾನುವಾರ ಬೆಳಿಗ್ಗೆ ಬಸವನಹಳ್ಳಿಯಿಂದ ಸಹೋದರ ಸ್ವಾಮಿ ಪೋನ್ ಮಾಡಿ ಅಣ್ಣ, ನಮ್ಮೂರಿನಲ್ಲಿ ನೂತನವಾಗಿ ಶ್ರೀ ಆಂಜನೇಯ ದೇವಸ್ಥಾನವನ್ನು ಕೋಟಿ ವೆಚ್ಚದಲ್ಲಿ ಕಟ್ಟಿದ್ದಾರೆ. ಇವತ್ತು ನಾಳೆ ದೇವಸ್ಥಾನ ಉದ್ಘಾಟನೆ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದೆ. ಬನ್ನಿ ಎಂದನು. ‘ಇದೇನೋ ಸ್ವಾಮಿ, ಇಂದಿನ ಕಾರ್ಯಕ್ರಮಕ್ಕೆ ಇಂದೆಯೇ ಹೇಳುತ್ತಿರುವೆಯೆಲ್ಲಾ, ನೆನ್ನೆ ಮೊನ್ನೆ ಹೇಳಿದ್ದರೆ ಹೊರಡಲು ಸಿದ್ಧತೆ ಮಾಡಿಕೊಳ್ಳಬಹುದಿತ್ತು..’ ಎಂದೆ.

ಏನು ಸಿದ್ಧತೆ ಮಾಡಿಕೊಳ್ಳಬೇಕು ನೀನು, ಪಂಚೆ ಬಿಚ್ಚಿಟ್ಟು ಪ್ಯಾಂಟ್ ಧರಿಸಿ ಹೊರಟುಬರುವುದಕ್ಕೂ ಸಿದ್ಧತೆ ಬೇಕಂತೆ..? ನಕ್ಕನು. ನಾನು ನಗಲಿಲ್ಲ..ಸರಿ, ಆಯ್ತಪ್ಪ ಬರ್ತಿನಿ ಎಂದೆ.

ಬಸವನಹಳ್ಳಿ ನಮ್ಮ ದೊಡ್ಡಮ್ಮನವರ ಊರು. ಅವರ ಹೆಸರು ಮಾತ್ರ ಸಣ್ಣಮ್ಮ. ಬಸವನಹಳ್ಳಿ ಹಾಸನ ಜಿಲ್ಲೆಯ ಅಂಚಿನ ಗ್ರಾಮ. ನಾನು ಬಾಲ್ಯದ ಶಾಲೆಯ ರಜೆ ದಿನಗಳನ್ನು ಹೆಚ್ಚಾಗಿ ಇಲ್ಲಿಯೇ. ಹೀಗಾಗಿ ದೇವಸ್ಥಾನ ನೋಡುವ ನೆಪದಲ್ಲಿ ಊರು ಬಂಧು ಬಳಗವನ್ನು ನೋಡಿ ಬರಬೇಕೆಂಬ ಆಸೆಯಲ್ಲಿ ಹೊರಟೆ. ಬಸವನಹಳ್ಳಿಗೆ ನೇರ ಬಸ್ ಮಾರ್ಗವಿಲ್ಲ. ಅರಕಲಗೊಡು ತಾಲ್ಲೂಕಿನ ಈ ಗ್ರಾಮಕ್ಕೆ ಪ್ರಯಾಣ ಸಬೇಕೆಂದರೆ ಕಾಳೇನಹಳ್ಳಿಯಲ್ಲಿ ಇಳಿದು ಎರಡು ಕಿ.ಮೀ ನಡೆಯಬೇಕು ಇಲ್ಲವೇ ಕೇರಳಾಪುರದಲ್ಲಿ ಇಳಿದು ಇಲ್ಲಿಂದಲೂ ಎರಡೂವರೆ ಕಿ.ಮೀ. ನಡೆಯಬೇಕು. ಇವೆಲ್ಲಾ ತಿಳಿದಿದ್ದ ನಾನು ಸ್ವಾಮಿಗೆ ಕೇರಳಾಪುರಕ್ಕೆ ಬೈಕ್ ತೆಗೆದುಕೊಂಡು ಬಾ ಎಂದಿದ್ದೆ. 

- Advertisement -

ನಾನು ಗೊರೂರಿನಲ್ಲಿದ್ದಾಗ್ಗೆ ನಾವು ಅರಕಲಗೊಡು ಮಾರ್ಗ ಕೇರಳಾಪುರಕ್ಕೆ ಪ್ರಯಾಣ ಸುತ್ತಿದ್ದೆವು. ಕಾಳೇನಹಳ್ಳಿ ಸ್ಟೇಜ್ ಪಾಯಿಂಟ್ ಆದರೂ ನಾವು ಕೇರಳಾಪುರದಲ್ಲೇ ಇಳಿದು ಬಸವನಹಳ್ಳಿಗೆ ನಡೆದೇ ಹೋಗುತ್ತಿದ್ದೆವು. ಆಗೆಲ್ಲಾ ಆಟೋಗಳಿರಲಿಲ್ಲ. ಈಗ ಹಾಸನದಿಂದ ಹೊರಡಬೇಕಾಗಿದ್ದರಿಂದ ಆದಷ್ಟು ಹತ್ತಿರದ ಮತ್ತು ಬಸ್‍ಗಳ ವ್ಯವಸ್ಥೆ ಇರುವ ಮಾರ್ಗ ಹೊಳೆನರಸೀಪುರ.  ಕೇರಳಾಪುರಕ್ಕೆ ಬಸ್ ಹೊರಟು ನಿಂತಿತ್ತು. ಸಾಮಾನ್ಯವಾಗಿ ಕುಪ್ಪೆ ಮಾರ್ಗ ಈ ಹಿಂದೆ ಕೇರಳಾಪುರಕ್ಕೆ ಪ್ರಯಾಣ ಸಿದ್ದೆ. ನಾನು ಹತ್ತಿದ ಬಸ್ ಹಳ್ಳಿಮೈಸೂರು ಸೋಮನಹಳ್ಳಿ ಮಾರ್ಗ ಕೇರಳಾಪುರ ತಲುಪಿತು. ಹಳ್ಳಿ ಮಾರ್ಗಗಳ ಸಂಪರ್ಕ ರಸ್ತೆಗಳೆಲ್ಲಾ ಸಾಕಷ್ಟು ಅಭಿವೃದ್ಧಿ ಹೊಂದಿವೆ. ಹಳ್ಳಿಗಳಿಗೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಿದರೆ ರೈತಾಪಿ ಬದುಕಿಗೆ ನೆರವಾಗುತ್ತದೆ. ಅಲ್ಲಿಯ ವಿದ್ಯಾರ್ಥಿಗಳಿಗೆ ನಗರಗಳಿಗೆ ಓದಲು ಬರುವುದಕ್ಕೆ ಮತ್ತು ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ನಗರಗಳಿಗೆ ಬರಲು ಇದರಿಂದ ಅನುಕೂಲವಾಗುತ್ತದೆ. ವಿಲೇಜ್ ರೂಟ್ ಲಾಸ್ ಎಂದು ಕೆಎಸ್‍ಆರ್‍ಟಿಸಿ ಚಿಂತಿಸಬಾರದಷ್ಟೇ.!  ಬಸವನಹಳ್ಳಿ ಸಾಕಷ್ಟು ದೊಡ್ಡ ಗ್ರಾಮವೇ. ಇಲ್ಲಿಗೆ ಕೇರಳಾಪುರದಿಂದ ಬಸ್ ಬಿಟ್ಟರೆ ಅದು ಬಸವನಹಳ್ಳಿ ಹಾಯ್ದು ಬಸವಾಪಟ್ಟಣ ತಲುಪಬಹುದು. ಅದಕ್ಕೆ ಟಾರ್ ರಸ್ತೆ ಆಗಬೇಕಿದೆ. ಇದು ಬಳಸು ರಸ್ತೆಯಾದರೂ ಈ ರೂಟ್‍ನಲ್ಲಿ ಬಸ್ ಓಡಾಡಿದರೆ ಖಂಡಿತ ರೈತರಿಗೆ ಅನುಕೂಲವಾಗುತ್ತದೆ. ರಾಮನಾಥಪುರ ಡಿಪೋ ಈ ಬಗ್ಗೆ ಚಿಂತಿಸಬೇಕಿದೆ.

ಬಸವನಹಳ್ಳಿ ಬದುಕಿನ ಸಮೃದ್ಧಿಗೆ ಊರಿನಲ್ಲಿರುವ ಬೃಹತ್ ಕೆರೆಯ ಪಾತ್ರವೇ ಮಹತ್ವದ್ದು. ಇದು ತುಂಬಾ ವಿಶಾಲವಾದ ಕೆರೆ. ಎಷ್ಟು ಎಕರೆ ವಿಸ್ತೀರ್ಣವೋ ಗೊತ್ತಿಲ್ಲ ಆದರೆ ಯಾವತ್ತೂ ಬತ್ತಿದ್ದು ನನಗೆ ಗೊತ್ತಿಲ್ಲ. ಈ ಕೆರೆಗೆ ಕಾವೇರಿ ನದಿಗೆ ಕಟ್ಟೇಪುರದಲ್ಲಿ ಕಟ್ಟಿರುವ ಚಿಕ್ಕ ಬ್ಯಾರೇಜ್ ಅಣೆಕಟ್ಟೆಗೆ ಜೋಡಿಸಿರುವ ಕಾಲುವೆಯ ಸಂಪರ್ಕವಿದೆ. ಮೈಸೂರು ಸಂಸ್ಥಾನದ ಕೃಷ್ಣರಾಜ ಒಡೆಯರ್‍ರವರ ಆಳ್ವಿಕೆಯಲ್ಲಿ ಕ್ರಿ.ಶ.1752ರಲ್ಲಿ ಕಟ್ಟೇಪುರ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ಈ ಅಣೆಕಟ್ಟೆಯ ಎಡದಂಡೆ ಮತ್ತು ಬಲದಂಡೆ ನಾಲೆಯಿಂದ ಅರಕಲಗೊಡು ಕೆ.ಆರ್.ನಗರ ತಾಲ್ಲೂಕಿನ 9 ಸಾವಿರ ಎಕರೆ ವಿಸ್ತೀರ್ಣ ನೀರಾವರಿಗೊಳಪಡುತ್ತದೆ. ಒಂದು ನಾಲೆ ಕೊಣನೂರು ರಾಮನಾಥಪುರ ಬಸವಾಪಟ್ಟಣ ಮೂಲಕ ಸಾಗಿ ಪಶುಪತಿಯವರೆಗೆ ಹರಿದರೆ ಇನ್ನೊಂದು ನಾಲೆ ರುದ್ರಪಟ್ಟಣ ಮೂಲಕ ಸಾಗಿ ಹನಸೋಗೆಯವರೆಗೆ ಹರಿಯುತ್ತದೆ. ಕಟ್ಟೇಪುರ ನಾಲೆ 14.5 ಮೈಲಿ ಉದ್ದ ರಾಮನಾಥಪುರ ನಾಲೆ 19 ಮೈಲಿ ಉದ್ದವಿದೆ. ನಾನು ಗೊರೂರಿನಲ್ಲಿ ಚಿಕ್ಕವನಿದ್ದಾಗ ಈ ಕೆರೆ ಬೇಟೆಯಾದರೆ ರಾಮಣ್ಣ ಮೀನು ತಂದುಕೊಡುತ್ತಿದ್ದರು. ಅದು ಈಗ ಸಿಗುವ ದೊಡ್ಡ ಗಾತ್ರದ ಕಾಟ್ಲ ಮೀನಲ್ಲ. ಕುಚ್ಚು  ಮೀನು. ಅದರ ರುಚಿಯೇ ಬೇರೆ. ಅಂದಿನ ದಿನಗಳಲ್ಲಿ ನಾವು ಬಸವನಹಳ್ಳಿಗೆ ಹೋದಾಗೆಲ್ಲಾ ದೊಡ್ಡಮ್ಮ ಬೆಳಿಗ್ಗೆ ಬೇಗನೇ ಎದ್ದು ಹೋಗಿ ಮೀನು ತಂದು ಉಜ್ಜಿ ಸಾರು ಮಾಡಿ ತಿಂಡಿಗೆ ರಾಗಿ ರೊಟ್ಟಿ ಜೊತೆಗೆ ತಿನ್ನಲು ಕೊಡುತ್ತಿದ್ದರು. ಈಗಿನಂತೆ ಆಗ ಅಕ್ಕಿ ಅಷ್ಟು ಸುಲಭವಾಗಿ ಬಡವರಿಗೆ ದಕ್ಕುತ್ತಿರಲಿಲ್ಲ.   

ನಾನು ಬಸವನಹಳ್ಳಿ ತಲುಪುವ ಹೊತ್ತಿಗೆ ಸರಿಯಾಗಿ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಬಂದರು. ಅವರ ಭಾಷಣ ಕೇಳಲು ಜನ ಕಾತರಿಸಿದ್ದರು. ಮೂರು ಗಂಟೆಯಾದರೂ ಅವರು ಬಂದು ಹೋಗುವವರೆಗೆ ಯಾರಿಗೂ ಊಟ ಬಡಿಸಿರಲಿಲ್ಲ. ನಾನು ತಡವಾಗಿ ಹೋದರೂ ಮೊದಲ ಪಂಕ್ತಿಯಲ್ಲೇ ಭಾಷಣ ಕೇಳಿ ಊಟ ಮುಗಿಸಿದೆ. ಊರಿನಲ್ಲಿ ಅದ್ಧೂರಿ ಸಡಗರ ಸಂಭ್ರಮ ಮನೆ ಮಾಡಿತ್ತು. ಸಾವಿರಾರು ಜನ ಸೇರಿದ್ದರು.  ಊರಿನ ವಾಸಿಗಳು ತಮ್ಮ ಬಂಧು ಬಳಗವನ್ನು ಆಹ್ವಾನಿಸಿ ಊರು ರಂಗೇರಿತ್ತು. ಕೋಟಿ ರೂ. ವೆಚ್ಚದ ಶ್ರೀ ಆಂಜನೇಯ ದೇವಸ್ಥಾನ ಊರಿಗೆ ಶೋಭೆ ತಂದಿದೆ. ನನಗೆ ಊರಿನಲ್ಲಿರುವ ಹಳೆಯ ಬಸವಣ್ಣನ ಗುಡಿಯನ್ನು ನೋಡುವ ಕುತೂಹಲ.! ಈ  ಹಿಂದೆ ನಾನು ನೋಡಿದಾಗ ಪಾಳು ಬಿದ್ದ ಗುಡಿಯಾಗಿದ್ದು ಈಗ ಇದನ್ನು ನೂತನವಾಗಿ ಅಭಿವೃದ್ಧಿಗೊಳಿಸಲಾಗಿದೆ. 

- Advertisement -

 ನಾನು ಹಿಂದೊಮ್ಮೆ ‘ನಮ್ಮರ್ನಾಗೆ ನಾವೊಂದು ನಾಟಕವ ಆಡ್ಸಿದ್ರೇ? ಎಂದು ಕಥೆ ಬರೆದಿದ್ದೆ. ಅದು ‘ನನ್ನ ಬದುಕು ಸಂತೆ ಬಂಡಿ’ ಕಥಾ ಸಂಕಲನದಲ್ಲಿದೆ. ಅದರ ಮೊದಲ ಎರಡು ಪ್ಯಾರಾ ಹೀಗಿದೆ.

ಆ ಊರಿಗೆ ಬಸ್ ಬಾರದಿದ್ದರೂ ಆ ಊರಿಗೆ ಬಸ್ನಳ್ಳಿ ಎಂದೇ ಹೆಸರು. ಆ ಊರಿನ ಹೆಬ್ಬಾಗಿಲಿನಲ್ಲಿ ಒಂದು ಬಸವನ ಗುಡಿಯಿದೆ. ಇದರಿಂದಾಗಿಯೇ ಆ ಊರಿಗೆ ಬಸವನಹಳ್ಳಿ ಎಂಬ ಹೆಸರು ನಾಮಾಂಕಿತವಾಗಿ ಜನರ ಆಡು ಮಾತಿನಲ್ಲಿ ಬಸ್ನಳ್ಳಿ ಆಗಿದೆ ಎಂದು ಆ ಊರಿನ ಶಾಲಾ ಮುಖ್ಯೋಪಾಧ್ಯಾಯ ಕೆರೆ ಮುಗುಳೂರು ಸಣ್ಣನ್ ಸಂಶೋಧಿಸಿದ ವಿಷಯ.

ಬಸವನಹಳ್ಳಿಯ ಬಸವನ ಗುಡಿಯಲ್ಲಿ ಊರಿನ ದನಕರುಗಳು ರಾತ್ರಿ ರೆಸ್ಟ್ ತೆಗೆದುಕೊಳ್ಳುತ್ತಿವೆ. ಅರ್ಥಾತ್ ಪಾಳು ಬಿದ್ದ ಬಸವನಗುಡಿ ಊರೊಟ್ಟಿನ ದನದ ಕೊಟ್ಟಿಗೆಯಾಗಿದೆ..

2011ರಲ್ಲಿ ಈ ಕಥಾ ಸಂಕಲನ ಪ್ರಕಟವಾಗಿದೆ. ಅದಕ್ಕೂ ಹಿಂದೆಯೇ ಈ ಕಥೆ ಬರೆದಿದ್ದು. ಕಥೆಯ ಸಾರಂಶ ಇಷ್ಟೇ. ಊರಿನ ಕೆಲ ಹುಡುಗರು ದಾನ ವೀರ ಶೂರಕರ್ಣ ಎಂಬ ಪೌರಾಣಿಕ ನಾಟಕ ಕಲಿಯಬೇಕೆಂದು ಇಚ್ಚಿಸಿ ಹೆಸರಾಂತ ನಾಟಕದ ಮೆಷ್ಟ್ರು ಸಂಗಪ್ಪ ದಾಸರನ್ನು ಕರೆಸಿ ಅವರು ಮೂರು ತಿಂಗಳು ಇಲ್ಲಿಯೇ ವಾಸ್ತವ್ಯ ಮಾಡಿ ನಾಟಕ ಕಲಿಸುತ್ತಲೇ ಊರಿನ ಬಸವಣ್ಣನ ದೇವಸ್ಥಾನವನ್ನು ಅಭಿವೃಧ್ದಿ ಮಾಡಿಸುತ್ತಾರೆ. ಅಷ್ಟೇ ಅಲ್ಲದೇ ಊರಿನಲ್ಲಿ ಐಕಮತ್ಯ ಸಾಧಿಸಿ ಊರಿನ ಪ್ರಗತಿಗೆ ತಮ್ಮದೇ ಪಾತ್ರ ನಿರ್ವಹಿಸುತ್ತಾರೆ. ಅಂದು ನಾನು  ಬರೆದ ಈ ಕಥೆಯ ಆಶಯ ಇಂದು ನೆನಸಾಗಿದೆಯೆಲ್ಲಾ ಎಂದು ಆಶ್ಚರ್ಯವಾಯಿತು. ಇಂದು ಹಳ್ಳಿ ಹಳ್ಳಿಗಳಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರವಾಗುತ್ತಿದೆ. ನಾನು ಪ್ರಯಾಣ ಸಿದ ಹಾದಿಯಲ್ಲಿ ಇದನ್ನು ಕಂಡೆನು. 

ಕರ್ನಾಟಕ ಸಾಂಸ್ಕೃತಿಕ ಇತಿಹಾಸದಲ್ಲಿ ಹೊಯ್ಸಳರ ಕಾಲ ಅನೇಕ ದೃಷ್ಟಿಕೋನದಿಂದ ವಿಶಿಷ್ಟವಾಗಿದೆ. ಕ್ರಿ.ಶ.1000ರಿಂದ 1346ವರೆಗೆ ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದರು. ಈ ಮನೆತನದ ಅರಸರು ಭಾರತೀಯ ಸಾಂಸ್ಕೃತಿಕ ಶ್ರೇಷ್ಠತೆಯ ಎಲ್ಲಾ ಅಂಶಗಳನ್ನು ಕನ್ನಡ ನೆಲದಲ್ಲಿ ಪೋಷಿಸಿ ಬೆಳೆಸಿದರು. ಹಳ್ಳಿಗಳಲ್ಲಿ ಕೆರೆಗಳನ್ನು ನಿರ್ಮಿಸಿ ಜನರ ಬದುಕಿಗೆ ದಾರಿದೀಪ ತೋರಿದರು. ನನ್ನ (ಗೊರೂರು ಅನಂತರಾಜು) ಹಾಸನ ತಾಲ್ಲೂಕು ದೇವಾಲಯಗಳ ದರ್ಶನ ಕೃತಿಯಲ್ಲಿ ಎಸ್.ಲಲಿತರವರು ದರ್ಶನದಲ್ಲಿ ಕಂಡಂತೆ.. ಬರೆದ ಸಾಲುಗಳು ‘ ನೀರು ನಮ್ಮ ಬದುಕಿಗೆ ಅಗತ್ಯವಾಗಿ ಬೇಕಾದುದರಿಂದ ನಮ್ಮ ಹಿರಿಯರು ನದಿ ತೀರಗಳಲ್ಲಿ ಅಥವಾ ಕೆರೆ ಕಟ್ಟೆಗಳ ಸಮೀಪದಲ್ಲಿ ಪಟ್ಟಣಗಳನ್ನು ನಿರ್ಮಿಸಿ ವಾಸಿಸುವ ಅಭ್ಯಾಸವನ್ನು ಹೊಂದಿದ್ದರು. ಊರೆಂದರೆ ಅಲ್ಲಿ ನದಿ ಕೆರೆಯೊಂದಿಗೆ ದೇವಾಲಯ ಇರುವುದು ಕಡ್ಡಾಯವೆನಿಸಿತ್ತು. ಇದಕ್ಕೆ ಸಾಕ್ಷಿಯೆಂಬಂತೆ ಇಂದಿಗೂ ನಮ್ಮ ದೇಶದ ಪುರಾತನ ನಗರ, ಪಟ್ಟಣಗಳು ನದಿಗಳ ಸಮೀಪವಿದ್ದು ಅಲ್ಲಿನ ದೇವಾಲಯಗಳು ಪ್ರಸಿಧ್ದಿಯನ್ನು ಪಡೆದಿವೆ. ನಮ್ಮ ಧಾರ್ಮಿಕ ನಂಬಿಕೆಯ ತಳಹದಿಯಾಗಿ ದೇವಾಲಯಗಳು ನಿರ್ಮಾಣಗೊಂಡಿವೆ. ಅವು ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವ ತಾಣಗಳೂ ಆಗಿವೆ ಎನ್ನುವುದು ನಮ್ಮ ಪಾಲಿಗೆ ಹೆಗ್ಗಳಿಕೆಯ ವಿಷಯವೇ ಆಗಿದೆ. ನಮ್ಮ ಭಾರತವನ್ನು ದೇವಾಲಯಗಳ ದೇಶವೆನ್ನಬಹುದು. ನಮ್ಮ ದೇವಾಲಯಗಳನ್ನು ಮತ್ತು ಅವುಗಳ ರಚನೆಯನ್ನು ವಿದೇಶಿಯರು ಬೆರಗುಗಣ ್ಣನಿಂದ ನೋಡಿ ಮೆಚ್ಚಿದ್ದಾರೆ ಎಂದರೆ ಅದಕ್ಕೆ ಕಾರಣ ಅವುಗಳ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಾಯ ನೀಡಿದವರು ಮತ್ತು ಕೆತ್ತಿದ ಶಿಲ್ಪಿಗಳು. ನಮ್ಮ ಪುರಾಣಗಳಲ್ಲಿ ವರ್ಣಿಸಿದಂತೆ ಮೂರ್ತಿಗಳನ್ನು ನಿರ್ಮಿಸುತ್ತ ನಮ್ಮ ಮನದಲ್ಲಿ ದೇವರ ಅಸ್ತಿತ್ವವನ್ನು ಮೂಡಿಸುವ ಶಿಲ್ಪಿಗಳು ಕುಶಲಕರ್ಮಿಗಳು ಅಭಿನಂದನೀಯರು. ಒಂದು ಅಡಿಗಿಂತ ಹೆಚ್ಚು ಎತ್ತರವಾಗಿರುವ ವಿಗ್ರಹಗಳನ್ನು ಮನೆಗಳಲ್ಲಿಟ್ಟುಕೊಳ್ಳದೆ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವುದು ಶಾಸ್ತ್ರಸಮ್ಮತವಾಗಿದೆ. ಹೀಗಾಗಿ ದೊಡ್ಡಗಾತ್ರದ ಪ್ರತಿಮೆಗಳು ದೇವಾಲಯಗಳಲ್ಲಿ ಪೂಜಿಸಲ್ಪಡುತ್ತವೆ. 

ನಮ್ಮ ಕರ್ನಾಟಕದ ಪ್ರತಿಯೊಂದು ನಗರ ಮತ್ತು ಗ್ರಾಮಗಳಲ್ಲೂ ದೇವಾಲಯಗಳಿವೆ. ಎಲ್ಲಿ ನೋಡಿದರೂ ಊರಿಗೊಂದು ಹನುಮನ ಮತ್ತು ಗ್ರಾಮದೇವತೆಯ ದೇವಾಲಯವಿದ್ದು ಊರನ್ನುಕಾಯುವವನು ಹನುಮಪ್ಪ ಮತ್ತು ಊರಿನ ಎಲ್ಲರನ್ನೂ ಕಾಪಾಡುವವಳು ಶಕ್ತಿ ದೇವತೆಯೆನಿಸಿದ ಗ್ರಾಮದೇವತೆ ಎನ್ನುವ ನಂಬಿಕೆ ಜನರ ಮನದಲ್ಲಿ ಬೇರೂರಿದೆ. ಕರ್ನಾಟಕವನ್ನಾಳಿದ ಅನೇಕ ರಾಜವಂಶಗಳು ನಮ್ಮ ಆಳ್ವಿಕೆಯ ಕಾಲದಲ್ಲಿ ವಿಶೇಷ ಶೈಲಿಯಲ್ಲಿ ದೇವಾಲಯಗಳನ್ನು ನಿರ್ಮಿಸಿ ತಮ್ಮ ಹೆಸರನ್ನು ಶಾಶ್ವತಗೊಳಿಸಿದ್ದಾರೆ. ನಮ್ಮ ಹಾಸನ ಜಿಲ್ಲೆಯಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಅನೇಕ ದೇವಾಲಯಗಳು ತಮ್ಮತ್ತ ನೋಡಿದವರಿಗೆ ಹೊಯ್ಸಳರ ಅರಸರ ಶೌರ್ಯ ಸಾಹಸದ ಕಥೆಗಳನ್ನು ಹೇಳುತ್ತ ಕಲಾ ಶ್ರೀಮಂತಿಕೆಯನ್ನು ಪ್ರದರ್ಶಿಸುವಂತೆ ನಿಂತಿವೆ.


ಗೊರೂರುಅನಂತರಾಜು, ಹಾಸನ. 

ಮೊ: 9449462879

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, 

ಹಾಸನ-573201

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group