ಮನುಜಮತ ವಿಶ್ವಪಥ ಎಂದು ಸಾರಿದ ಕುವೆಂಪು ಕೇವಲ ಕರ್ನಾಟಕ ಭಾರತಕ್ಕೆ ಮಾತ್ರ ಸೀಮಿತವಲ್ಲ ವಿಶ್ವಕ್ಕೆ ವ್ಯಾಪಿಸಿಕೊಂಡವರು. ಅವರ ಚಿಂತನೆಗಳನ್ನು ನಾವು ವೈಚಾರಿಕತೆ ಮತ್ತು ವಿಜ್ಞಾನದ ನೆಲೆಯಲ್ಲಿ ನೋಡಬೇಕು. ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎನ್ನುತ್ತಲೇ ಸಾಮಾನ್ಯರು ಅಸಾಮಾನ್ಯರು ಎಂಬ ಕಲ್ಪನೆಗಳನ್ನು ತೆಗೆದು ಸರ್ವರಿಗೂ ಸಮಬಾಳು, ಸಮಪಾಲು ಎಂಬ ನಿಲುವು ಹೊಂದಿದ್ದರು. ಕುವೆಂಪುರನ್ನು ಭೂತ ವರ್ತಮಾನ ಭವಿಷ್ಯಕ್ಕೂ ಅನ್ವಯಿಕೊಂಡು ಅಧ್ಯಯನ ಮಾಡಿದರೆ ಕುವೆಂಪು ನಮಗೆ ಕಾಲಾತೀತ ಕವಿಯಾಗಿ ಕಾಣುತ್ತಾರೆ ಎಂದು ಸಾಹಿತಿ ಹಳ್ಳಿ ವೆಂಕಟೇಶ ಹೇಳಿದರು.
ಅವರು ಸಣ್ಣಮಲ್ಲಮ್ಮನವರ ಮೀನಾಕ್ಷಿ ಗಿರಿರಾಜ್ ಟ್ರಸ್ಟ್ ನ ‘ಮನುಜಮತ ವೇದಿಕೆ’ ಏರ್ಪಡಿಸಿದ್ದ ಕುವೆಂಪು ವಿಚಾರ ಗೋಷ್ಠಿ, ಕವನ ವಾಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಸೇವಕರು ಜೆ. ಓ. ಮಹಾಂತಪ್ಪ ಸಮಾಜದ ಮುಖ್ಯ ವಾಹಿನಿಯಲ್ಲಿ ಬದುಕುವ ನಾವುಗಳು ಬಡವರು ನಿರ್ಗತಿಕರ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಸಾಹಿತ್ಯ ಸೇವೆ ಸಮಾಜ ಸೇವೆ ಒಂದೇ ನಾಣ್ಯದ ಎರಡು ಮುಖಗಳು ಎಂದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಕುವೆಂಪು ಒಂದು ಆಲದ ಮರ. ಅವರ ನೆರಳಲ್ಲಿ ನಮ್ಮದು ಅಳಿಲು ಸೇವೆ. ಅವರ ಸರಳ ಬದುಕು ನಮಗೆ ಮಾರ್ಗದಶಿ೯. ಸಾಹಿತ್ಯ ಬರೆಯುವುದಕ್ಕೆ ಮುಖ್ಯವಾಗಿ ಓದುವದೂ ಬೇಕಾಗುತ್ತದೆ. ನಾವು ಏನನ್ನು ಓದದೇ ಸಾಹಿತ್ಯವನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರೊ. ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅವರು ನನ್ನ ತಾಯಿ ಮತ್ತು ಹೆಂಡತಿಯಿಂದ ನನಗೆ ಸಮಾಜ ಸೇವೆ ಮಾಡುವ ಜವಾಬ್ದಾರಿ ಬಂದಿತು. ಅದನ್ನು ನಾನು ಇಂಥ ವೇದಿಕೆಗಳ ಮೂಲಕ ಮುಂದುವರಿಸುತ್ತಿದ್ದೇನೆ. ಕುವೆಂಪು ಅಂತಹ ಮಹಾಚೇತನರನ್ನು ನೆನೆದುಕೊಳ್ಳುವುದು ಯುವಕರಿಗೆ ಕುವೆಂಪು ಸಂದೇಶಗಳನ್ನು ಮುಟ್ಟಿಸುವುದು ನಮ್ಮ ಜವಾಬ್ದಾರಿ ಎಂದರು.
ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿ ರೂಪಾ ಕೆ, ಈ ಸುದ್ದಿ ವಾಹಿನಿಯ ಗಿರಿಜಾ, ಸಾಹಿತಿ ಗೊರೂರು ಅನಂತರಾಜು, ಜೆ. ಓ. ಮಹಾಂತಪ್ಪರನ್ನು ಸನ್ಮಾನಿಸಲಾಯಿತು. ಕು.ಶುಭಶ್ರೀ ಪ್ರಾರ್ಥನೆ ಮಾಡಿ ಜಬೀವುಲ್ಲಾ ಬೇಗ್ ಸ್ವಾಗತಿಸಿದರು. ಪ್ರಾಧ್ಯಾಪಕ ಉಲ್ಲಾಸ್ ಆರಾಧ್ಯ ನಿರೂಪಿಸಿದರು.