Homeಲೇಖನಪ್ರೇಮ ಪಯಣ : ಜೀವ ಹೂವಾಗಿದೆ ಭಾವ ಜೇನಾಗಿದೆ....

ಪ್ರೇಮ ಪಯಣ : ಜೀವ ಹೂವಾಗಿದೆ ಭಾವ ಜೇನಾಗಿದೆ….

ಪ್ರಿಯ ಮನೋಜ, ಜೀವ ಭಾವ ಎರಡೂ ನಿನ್ನಲ್ಲಿ ಲೀನವಾಗಿ ಹೃದಯ ವೀಣೆ ಹಿತವಾದ ಸಂಗೀತ ಮಿಡಿಯುತಿದೆ. ನನ್ನೆದೆಯ ಮಿಡಿತದ ರಾಗ ನಿನ್ನೆದೆಯ ದನಿಯನ್ನು ಪ್ರತಿಧ್ವನಿಸುತಿದೆ. ಒಲವಿನ ಬಯಕೆಗಳು ನೂರಾರು ಪ್ರೇಮದ ಸವಿಗನಸುಗಳ ಆಗರವನ್ನೇ ಸೃಷ್ಟಿಸಿವೆ. ನಿನ್ನ ಬಿಟ್ಟು ಈ ಜೀವಕೆ ಜೀವದುಸಿರು ಕಲ್ಪಿಸಿಕೊಳ್ಳುವುದು ಅಸಾಧ್ಯವೇ ಸರಿ. ನಿನ್ನ ಕಂಡರೆ ಸಾಕು ಈ ತನು ಮನ ತನ್ನಿಂದ ತಾನೆ ಅರಳುವುವು ಕಣೋ. ನಿನ್ನಾಸರೆ ಒಂದಿದ್ದರೆ ಸಾಕು ಬದುಕೆಲ್ಲ ಹಾಯಾಗಿರ್ತಿನಿ. ಕೂಡಿ ನಲಿಯುವ ಆಸೆ ಮನದಲ್ಲಿ ತುಂಬಿ ತನುವೆಲ್ಲ ಪುಳಕಿತವಾಗುತಿದೆ.

ಅಬ್ಬಬ್ಬಾ! ನಂಬಲಾಗದಷ್ಟು ಮೋಹಕ ಶಕ್ತಿಯಿದೆ ನಿನ್ನೀ ಒಲವಿಗೆ. ಪ್ರೀತಿಯ ಮಾಯಾ ಶಕ್ತಿಯ ಕುರಿತು ಅದೆಷ್ಟೋ ಜನರು ಹೇಳಿದರೂ ನಂಬಿರದ ನನಗೆ ಇದೀಗ ಅರಿವಾಗಿದೆ. ಎದುರಿಗೆ ನೀನಿಲ್ಲವಾದರೂ ನನ್ನನ್ನು ಬಾಚಿ ತಬ್ಬಿ ಮುದ್ದಾಡುವ ನಿನ್ನ ಬಿಂಬ ಕನ್ನಡಿಯಲ್ಲಿ ಮೂಡುವುದು. ನೀ ಬಾಚಿ ತಬ್ಬಿದೆ ರೀತಿಗೆ ನಾಚಿ ನಿಂತ ನನ್ನ ಕಂಡು ನನಗೆ ಸೋಜಿಗವೆನಿಸುತ್ತದೆ. ಅದೊಂದು ವಿಶೇಷ ಖುಷಿಯನ್ನು ಅನುಭವಿಸಿದ ಗಳಿಗೆ ತಿರುಗಿ ಮಾತನಾಡಿಸಿದರೆ ಅಲ್ಲಿ ನೀನಿರುವುದಿಲ್ಲ. ಒಳಗೊಳಗೆ ವಧುವಿನ ಶೃಂಗಾರ ಭೂಷಿತಳಾಗಿ ನಿನ್ನ ಬಳಿ ನಿಂದು ಜೊತೆ ಜೀವನ ನಡೆಸುವ ಸಿಹಿಯಾದ ಆಸೆ ಹೇಳಿದಂತೆ ಅನಿಸಿ, ನಿಂತಲ್ಲೇ ಕರಗಿ ಹೋಗುವೆ. ನನಗೇ ಗೊತ್ತಿಲ್ಲದಂತೆ ಉತ್ಸಾಹದ ಬುಗ್ಗೆಯೊಂದು ಮನದಲ್ಲಿ ಕುಣಿಯುವುದು. ಪ್ರೀತಿಯ ಹುಚ್ಚಾಟಗಳೇ ಹೀಗಿರುತ್ತವೆ ಅನಿಸುತ್ತದೆ.

‘ನೀ ನನ್ನ ಪಾಲಿನ ಮುದ್ದಿನ ಅರಗಿಣಿ ಸದಾ ಸವಿ ನುಡಿ.’ ಎಂದೆ ನೀನು.ಒಲವಿನಲ್ಲಿ ಒಂದಾಗಿಹ ಜೀವಕೆ ಕಂಗಳಲ್ಲೇ ವಂದನೆ ಹೇಳಿ, ಪ್ರೇಮದ ಈ ನೌಕೆಯು ಸುಖದ ತೀರವ ತಲುಪಲಿ ಎಂದೆ ನಾನು ಕಣ್ಣಗಲಿಸಿ. ಪ್ರೇಮದ ನಿಶೆಯಲಿ ತೂರಾಡುತ. ಮೈ ಮರೆತಿದ್ದೆ. ಹೊಸ ಗಾಳಿಯಲಿ ತೀರದ ದಾಹದ ದೂರದ ಹೃದಯಗಳನು ಒಗ್ಗೂಡಿಸಲಿ ಎಂದು ಈಗ ಜಪಿಸುತಿರುವೆ.

ಕ್ಷಣ ಕ್ಷಣವೂ ನಿನ್ನದೇ ಸವಿನೆನಪು. ನಿನ್ನೊಂದಿಗೆ ಕಳೆದ ಸವಿ ಗಳಿಗೆಗಳನು ನೆನೆಯಲೆಂದೇ ರಾತ್ರಿಗಳನು ಮೀಸಲಿಟ್ಟಿರುವೆ. ಬದುಕಿನ ಬಿಸಿ ಬಿಸಿ ಯೌವ್ವನವನ್ನು ಬದಿಗಿರಿಸಿ ಮಾತೃಭೂಮಿಯ ಸೇವೆಯಲಿ ಗಡಿಯಲ್ಲಿ ದೇಶದ ಜನತೆಯ ಜೀವ ರಕ್ಷಿಸಲು ಜೀವ ಮುಡುಪಿರಿಸಿದ ನಿನ್ನ ಬಗೆಗೆ ತುಂಬಿ ತುಳುಕುವಷ್ಟು ಅಭಿಮಾನ ನನಗೆ. ಇನಿಯ. ಎಲ್ಲಿರುವೆ ಏನೋ? ಹೇಗಿರುವೆ ಏನೋ? ಕಾಣುವ ಸಡಗರ ಈ ಕಂಗಳಿಗೆ. ಕೊರೆಯುವ ಚಳಿಯಲ್ಲಂತೂ ಬಳುಕುವ ಈ ಲತೆ ಬಿಟ್ಟು ಅದ್ಹೇಗೆ ಇರುವೆಯೋ ಏನೋ? ಎಂದು ನೋಯುವೆ. ನಿನ್ನ ಪ್ರತಿ ಯಾರೇ ಒಳಿತು ಮಾತನಾಡಿ ಮೆಚ್ಚಿಕೊಂಡರೆ ನನ್ನ ಪ್ರೀತಿ ಒಲೆಯ ಮೇಲಿನ ಹಾಲಿನಂತೆ ಉಕ್ಕುವುದು. ಗಡಿಯಲ್ಲಿ ನಿಂತ ನಿನ್ನ ಕೆಚ್ಚಿನ ಎದೆಯ ಬಡಿತ ಸಣ್ಣಗೆ ಕಿವಿಗೆ ಬಿದ್ದರೂ ಸಾಕು. ಮನಸ್ಸು ಸೋತು ಬಿಡುತ್ತದೆ. ತುಂಬಾ ಸಲುಗೆಯಲ್ಲಿ ನಿನ್ನೊಂದಿಗೆ ಮಾತನಾಡಿ ದೂರದಲ್ಲಿ ನಿಂತ ನಿನ್ನೆದೆಯಲ್ಲಿ ಬೆಚ್ಚನೆಯ ಭಾವ ತಕ್ಷಣಕ್ಕೆ ಮೂಡಿ ಬಿಡುತ್ತದೆ. ನಾಡಿನಲ್ಲಿರುವ ನನಗೆ ಪ್ರೀತಿಗೊಂದು ಹೆಗಲು ಬೇಕೆಂದು ಎನಿಸುತಿರುವಾಗ ಹೊಸತಾಗಿ ಬೆಸೆದ ಸಂಗಾತಿ ಬಿಟ್ಟು ಹೋದ ನಿನಗೆ ಹೇಗನಿಸಬೇಡ ಎಂದು ಹೃದಯ ಕುಗ್ಗುತ್ತದೆ. ಅರೆಗಳಿಗೆಯಲ್ಲಿಯೇ ನಿನ್ನ ದಿಟ್ಟತನದ ತ್ಯಾಗ ಸೇವೆ ನೆನೆದು ಮನಸ್ಸು ಖುಷಿಯಿಂದ ಪುಟಿದೇಳುತ್ತದೆ. ಬೆರೆತಿರುವ ಜೀವ ವಿರಹದ ನೋವು ಸಹಿಸುತ್ತಿದ್ದರೂ ಮನಸ್ಸು ಮತ್ತೆ ಮತ್ತೆ ನಿನ್ನನ್ನು ಮರೆಯದೇ ಕಣ್ಮುಂದೆ ತಂದು ನಿಲ್ಲಿಸುತ್ತಿದೆ.

ಮದುವೆಯಾಗಿ ನಾಲ್ಕೈ ದು ತಿಂಗಳು ಕಳೆದಿಲ್ಲ. ಕೈಗೆ ಹಾಕಿದ ಮೆಹಂದಿ ರಂಗು ಮಾಸುವಷ್ಟರಲ್ಲೇ, ‘ಜೀವಕ್ಕಿಂತ ಹೆಚ್ಚಾಗಿ ಪ್ರೀತ್ಸತಿನಿ ನಿನ್ನ.’ ಎಂದವಳನ್ನು ಬಿಟ್ಟು ಹೋದದ್ದು ನೆನೆಸಿದರೆ ನೀನಿರದ ಈ ಗಳಿಗೆ ಸಹಿಸಿಕೊಳ್ಳುವುದು ಕಷ್ಟವೆನಿಸುತ್ತದೆ. ಪ್ರಥಮ ಇರುಳಿನಲ್ಲಿ ಹೆಣ್ಣಿನ ಮನೋಸಹಜ ಹೆದರಿಕೆಯಲ್ಲಿದ್ದೆ. ಅದನ್ನು ಅರಿತಕೊಂಡ ಜಾಣ ನೀನು.ಮೆಲ್ಲನೇ ಬಳಿ ಬಂದೆ ಕೆಂಪು ದೀಪದ ಕೋಣೆಯಲ್ಲಿ ಘಮ ಹರಡಿಸಿದ್ದ ಮಲ್ಲಿಗೆಯ ಮಂಚದಲ್ಲಿ ಕೆಂಗುಲಾಬಿ ಹೂವಿನಿಂದ ಕೆನ್ನೆ ಸವರಿದೆ. ಅದೇ ನೆಪದಲ್ಲಿ ನನ್ನ ಮೈಯನ್ನು ಸೋಕಿದೆ. ನಿನ್ನ ಸ್ಪರ್ಷದ ರೀತಿಗೆ ಜೀವದ ವೀಣೆಯಲ್ಲಿ ಒಮ್ಮೆಲೇ ನೂರು ತಂತಿ ಮೀಟಿದಂಥ ಸುಖಾನುಭವ. ಅದೆಷ್ಟೋ ವರುಷಗಳಿಂದ ನಿನಗಾಗಿ ಕಾದಿಟ್ಟಿದ್ದ ತುಟಿಯ ಜೇನನು ಸವಿಯುವುದನು ಕಂಡು ದೇಹ ಮೆತ್ತಗಾಯಿತು. ತಿರುಗುವ ಸೊಂಟಕೆ ಕೈ ಹಾಕುತ,ತುಂಟಾಟದ ಮಾತುಗಳನ್ನಾಡುವ ನಿನ್ನ ರಸಿಕತನ ಕಂಡು ಸ್ವರ್ಗದಲ್ಲೇ ತೇಲಿದ ಅನುಭವ. ಅಧರಗಳು ಸ್ಪರ್ಧೆಗೆ ಬಿದ್ದವರಂತೆ ಒಂದನೊಂದು ಕಚ್ಚುವುದರಲ್ಲಿ ವ್ಯಸ್ತವಾಗಿದ್ದನ್ನು ಕಂಡು ಬೆಚ್ಚಿ ಬೆರಗಾದೆ. ಬೆರಗಾದ ಸ್ಥಿತಿಗೆ ಎದೆಯ ಸೀಳಿನಲ್ಲಿ ಬೆವರು ಹರಿಯಿತು. ಅಂದು ನನ್ನೆದೆಯ ಮೇಲೆ ನೀ ಕಚ್ಚಿ ಮಾಡಿದ ಗಾಯದ ಕಲೆ ಇನ್ನೂ ಗುರುತು ಉಳಿಸಿದೆ. ಈ ಗಾಯದ ಕಲೆ ನೂರು ನೂರು ತರಹದ ವಿರಹದ ನೋವು ತರಬಹುದೆಂದು ನಿರೀಕ್ಷಿಸಿಯೇ ಇರಲಿಲ್ಲ. ನಿಜಕ್ಕೂ ನಿನಗೂ ನನ್ನನ್ನು ಬಿಟ್ಟು ಇರಲಿಕ್ಕಾಗುವುದಿಲ್ಲ. ಅಂತ ನನಗೆ ಗೊತ್ತು. ನಮ್ಮೀರ್ವರ ಪ್ರೀತಿಯಾಚೆಗೆ ತಾಯಿ ಭಾರತಾಂಬೆಯ ಸೇವೆ ಮಿಗಿಲಾದುದು ಆದ್ದರಿಂದ ಏರುತ್ತಿರುವ ಯೌವ್ವನ ಏನೇ ಹೇಳಿದರೂ ನೀನು ಮಾಡುತ್ತಿರುವುದೇ ಸರಿ ಎಂದು ಬುದ್ಧಿ ಮನಸ್ಸಿಗೆ ಬುದ್ದಿ ಹೇಳುತ್ತದೆ.

ನೀನು ನನಗಿಂತ ಒಂದು ಹಿಡಿ ಹೆಚ್ಚೇ ಪ್ರೀತಿಸ್ತಿಯಾ ಆದರೆ ಎಲ್ಲ ಬಾರಿಯೂ ಅದನ್ನು ಹೇಳೋಕೆ ಆಗದೇ ಮನದಲ್ಲಿ ಪರಿತಪಿಸುತ್ತಿಯಾ.ಮನಸ್ಸನ್ನು ಸಂಭಾಳಿಸುವುದು ನನಗಿಂತ ನಿನಗೆ ಚೆನ್ನಾಗಿ ಗೊತ್ತಿದೆ. ಗಿಣಿಗೆ ಹೇಳಿದಂತೆ ಹೇಳಿದರೂ ಈ ಹೆಣ್ಣು ಜೀವಕೆ ಅಷ್ಟು ಸುಲಭವಾಗಿ ತಲೆಗೆ ಹೋಗುತ್ತಿಲ್ಲ. ನಿನ್ನ ತೋಳ ತೆಕ್ಕೆಯಲ್ಲಿ ಬಿದ್ದು ಹಾಯಾಗಿ ನರಳಿದ ಇರುಳಗಳ ನೆನೆ ನೆನೆದು ಪ್ರತಿ ರಾತ್ರಿ ಮೈಯೆಲ್ಲ ಕಂಪಿಸುತ್ತದೆ. ಆಕಾಶ ದೀಪದಂತಿರುವ ನೀನು ಮರೆಯಾದ ದಿನದಿಂದ ಈ ಜೀವ ಸೋಲುತಿದೆ. ಜೀವನ ಸುಂದರಗೊಳಿಸುವ ಮಧುರ ಸಂಬಂಧ ನಿನ್ನದು. ಜೀವ ಕೊಟ್ಟ ಮಾತೃ ಭೂಮಿಗೀಗ ಎಷ್ಟು ಸಮಯ ಎತ್ತಿಟ್ಟರೂ ಸಾಲದು. ಗೆಳೆಯ ನಿನ್ನಿಂದ ಒಲವಿನ ಮೆಸೇಜ್ ಸಿಕ್ಕದೇ ಏನೆಲ್ಲವನ್ನೂ ಕಳೆದುಕೊಂಡಂತೆ ಒದ್ದಾಡುತ್ತಿದ್ದೇನೆ. ಕೆಲಸದ ನಡುವೆ ಒಂದಿಷ್ಟೇ ಇಷ್ಟು ಬಿಡುವು ಮಾಡಿಕೊಂಡು ನಿನ್ನ ಬಯಕೆಯ ಬಳ್ಳಿಗೆ ಒಂದೇ ಒಂದು ಹೂ ಮುತ್ತನು ಅಲ್ಲಿಂದಲೇ ಗಾಳಿಯಲ್ಲಿ ತೇಲಿಸಿ ಬಿಡು.

ನಿನ್ನ ಪ್ರೀತಿಯ ಹೂವಿಗೆ ನಿನ್ನನು ಪಡೆದಂಥ ಭಾವ ಜೀವ ತುಂಬುವುದು.’ಜೀವ ಹೂವಾಗಿದೆ ಭಾವ ಜೇನಾಗಿದೆ ಬಾಳು ಹಾಡಾಗಿದೆ ನಿನ್ನ ಸೇರಿ ನಾನು.’ ಎಂದು ಗುನುಗುನುಸಿತ ಕಾಲ ಕಳೆದು ಬಿಡುವೆ. ನೀ ತರುವ ವಸಂತ ಮಾಸದ ಒಲವಿನವರೆಗೂ ಕಾಯುವೆ. ಇಂತಿ ನಿನ್ನ ಮನದನ್ನೆ ಮನಸ್ವಿ….

ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨

RELATED ARTICLES

1 COMMENT

Comments are closed.

Most Popular

error: Content is protected !!
Join WhatsApp Group