ಪ್ರಿಯ ಪ್ರಿಯಾ,
ಬೆನ್ನಿನ ತುಂಬ ದಟ್ಟನೆಯ ಕರಿಮೋಡ ಕವಿದಂತಿರುವ ಇಳಿಬಿಟ್ಟಿರುವ ಕೇಶರಾಶಿ, ರಂಭೆ ಊರ್ವಶಿಯರ ನಾಚಿಸುವ ಸುಂದರ ನೀಳ ಕಾಯ. ಬಳಕುವ ಬಳ್ಳಿಯಂತಿರುವ ನಡಿಗೆ ಪೂರ್ಣ ಹುಣ್ಣಿಮೆಯ ದಿನ ನಿನ್ನ ಬರುವ ಕಂಡು ಚೆಲುವ ಚಂದಿರ ಮೋಡಗಳ ಮರೆಯಲ್ಲಿ ನಾಚಿ ಮರೆಯಾದ.ನಮ್ಮಿಬ್ಬರ ಮಿಲನದ ವೇಳೆಗೆ ಅರೆಮುಖ ತೋರಿ ಮರೆಯಿಂದಲೇ ನೋಡಿ ನಸುನಕ್ಕ. ಅತಿ ಸಲುಗೆಯ ಮಧುರ ಬೆಸುಗೆಯ ಸಿಹಿ ಅಪ್ಪುಗೆಯ ಆ ಅಮೃತ ಘಳಿಗೆಗಳ ದಿನವೂ ನೆನೆಯದಿರಲಾರೆ. ಮ್ಯದು ಸ್ವಭಾವದ ನಿನಗೆ ಸೌಮ್ಯ ಎಂಬ ಹೆಸರು ನಿಜವಾಗಿ ಒಪ್ಪುವಂತಿದೆ. ನಡೆ ನುಡಿಗೆ ಸುತ್ತ ಏಳು ಊರಲ್ಲಿ ಮುಂಚೂಣಿ ಹೆಸರು ನಿನ್ನದು. ಮೊದಲ ನೋಟದಲ್ಲೇ ಹೃದಯದ ಮೇಲೆ ಪ್ರೀತಿಯ ಕಸೂತಿ ಹಾಕಿದ ಮೂಗುತಿ ಸುಂದರಿ ನೀನು ಎಂಥ ದರ್ಪದ ಹೈದನೂ ಮರುಳಾಗಿ ಬಿಡುವಷ್ಟು ಅಂದದ ಆಕರ್ಷಕ ವ್ಯಕ್ತಿತ್ವ ನಿನ್ನದು. ಗಮನ ಸೆಳೆಯುವ ದುಂಡು ಮುಖ. ಗೌರ ವರ್ಣದ ಗೌರಿ. ಚೆಲುವಿನಲ್ಲಿ ಚೆಲುವೆಯರನ್ನು ಮೀರಿಸುವ ಚೆಂದುಳ್ಳಿ ಚೆಲುವೆ
ಹರೆಯದ ಆಸೆ ಹೃದಯದ ಭಾಷೆ ತಿಳಿಯದ ನನಗೆ ಇದೆಲ್ಲವೂ ಹೊಸತು ಹೊಸತು. ಏನಾಯಿತೋ ಹೀಗೆ ಏಕಾಯಿತೊ ನಾ ಕಾಣೆ ದೇವರಾಣೆ. ನಿನ್ನ ಕಂಡಾಗಿನಿಂದ ಆನಂದ ಮೈದುಂಬಿತು. ಹೂವಿನ ತೋಟದ ಬೀಸುವ ತಂಗಾಳಿ ಸೋಕಿದಂತೆನಿಸಿ ಮೈಜುಮ್ಮೆಂದಿತು. ಮನದಲ್ಲಿ ಪ್ರೀತಿಯ ತುಂತುರು ಸುಳಿದಾಡಿತು. ಮೈಮನಗಳೆರಡು ನಿನ್ನ ಹೆಸರಾಯಿತು. ನಿನ್ನ ಹೆಸರು ನನ್ನ ಉಸಿರಾಯಿತು.
ಹೆಸರಿಗೆ ಹೆಸರು ಸೇರಿಸಿ ಬರೆಯುವ ಕಾಲ ಬಂದಂತಾಯಿತು. ಬಾಡಿದ ಬಳ್ಳಿ ಚಿಗುರಿದಂತಾಯಿತು. ಬದುಕಲಿ ಹಿಂದೆಂದೂ ಕಂಡಿರದ ಸಡಗರ ಅಂದು ತುಂಬಿದಂತಾಯಿತು. ಒಳಗೊಳಗೆ ಮನದೊಳಗೆ ನವಿಲು ಗರಿ ಬಿಚ್ಚಿ ಕುಣಿಯಿತು. ಈ ಸುದ್ದಿ ಗೆಳೆಯರಿಗೆ ತಿಳಿಯಲು ಬಹಳ ಸಮಯ ಬೇಕಾಗಲಿಲ್ಲ. ಹೋದಲೆಲ್ಲ ಬಂದಲೆಲ್ಲ ನಿನ್ನ ಹೆಸರು ಹಿಡಿದು ಚುಡಾಯಿಸುವರೆ ಎಲ್ಲ.
ಜೀವನ ತುಂಬಾ ಭಾರ ಇದು ಅಲ್ಲ ಸಸಾರ ಎಂದೆಲ್ಲ ಗೋಳಾಡುತ್ತಿರುವಾಗ ಎಲ್ಲಿಂದಲೋ ನೀ ಬಂದೆ ದೇವರಂತೆೆ. ಬಾಳಿಗೆ ಬೆಳಕು ತಂದೆ. ಭಾವನೆಗಳೊಂದಿಗೆ ಉಯ್ಯಾಲೆ ಆಡದೆ, ಕಾಡದೆ, ಗೊತ್ತಾಗದಂತೆ ಮನದ ಬಾಗಿಲನ್ನು ತಟ್ಟಿದೆ. ಸದ್ದಿಲ್ಲದೆ ಹೃದಯದ ಅರಮನೆಯಲ್ಲಿ ಬಲಗಾಲಿಟ್ಟು ಒಳಬಂದೆ. ವರ್ಣಿಸಲಾಗದ ಸೌಂದರ್ಯ ರಾಶಿಯನ್ನು ಹೃದಯದಲ್ಲಿ ಕಾಪಿಟ್ಟುಕೊಂಡೆ. ಪ್ರೀತಿಯನ್ನು ಎದೆಗೂಡಿನಲ್ಲಿ ಕಟ್ಟಿಕೊಂಡೆ. ಪ್ರೀತಿ ಕೊಟ್ಟಷ್ಟು ಹಂಚಿದಷ್ಟು ಹೆಚ್ಚಾಗುತ್ತದೆ ಎಂದೆ. ಕೊಳಲಿಂದ ಹೊರಬಂದ ಸಂಗೀತದಂತಿದ್ದ ನಿನ್ನ ಜೀವನ ಧ್ಯೇಯದಿಂದ ಎಂಥ ಕಲ್ಲು ಹೃದಯದವರು ಬದಲಾದ ಪರಿಯನ್ನು ಕಣ್ಣಾರೆ ಕಂಡೆ.
ನಿನ್ನಾಗಮನ ಪ್ರೀತಿಯ ಜಲಪಾತದ ದರ್ಶನ ಮಾಡಿಸಿತು. ಅರಿವನ್ನು ದುಪ್ಪಟ್ಟು ಮಾಡಿತು. ಜೀವನದ ಹಲವು ಮುಖಗಳನ್ನು ಪರಿ ಪರಿಯಾಗಿ ಪರಿಚಯಿಸಿತು. ಸತ್ಯ, ಮಿಥ್ಯ, ಕಷ್ಟ, ಸುಖದ ಜತೆಗೆ ಬದುಕಿನ ವಾಸ್ತವತೆಯನ್ನು ಕಣ್ಮುಂದೆ ರಾಚುವಂತೆ ಹಿಡಿಯಿತು. ಸಾಗಿ ಬಂದ ದಾರಿಯನ್ನು, ಹಿಂದಿನ ಹೆಜ್ಜೆಗಳನ್ನು ನೆನೆಸಿಕೊಳ್ಳುವ ಪರಿ ಬದುಕಿನ ಪಾವಿತ್ರö್ಯತೆಯನ್ನು ಪ್ರತಿಬಿಂಬಿಸಿತು.
ಯಾರಿಗೂ ನೋವಾಗದಂತೆ ಮೆಲ್ಲಗೆ ಮೃದುವಾಗಿ ಆಡುವ ನಿನ್ನ ಮಾತು ನಿನ್ನ ಸೌಮ್ಯ ಸ್ವಭಾವಕ್ಕೆ ಕನ್ನಡಿ ಹಿಡಿಯುತ್ತಿತ್ತು. ಒಬ್ಬರಿಗೊಬ್ಬರು ಮುನಿಸಿನಿಂದ ಬೆನ್ನು ತಿರುಗಿಸಿ ನಡೆಯುವ ಈ ಕಾಲದಲ್ಲಿ ಎದುನರಿವರ ತುಟಿಯಲ್ಲಿ ಹೂ ನಗೆಯನ್ನು ಅರಳಿಸುವ ತಾಕತ್ತು ನಿನಗಿತ್ತು. ಅಮೃತದಂತಹ ಮಾತು ಎಲ್ಲರನ್ನೂ ಸಮ್ಮೊಹನಗೊಳಿಸುತ್ತಿತ್ತು. ಬಿರುಕು ಬಿಟ್ಟ ಗೋಡೆಗಳ ನಡುವೆಯೂ ಚಿಗುರಿ ಬಳ್ಳಿಯಾಗಲು ಕನವರಿಸುತ್ತಿಹ ಹಸಿರಿನ ಹಿಂದಿರುವುದು ಜೀವನ ಪ್ರೀತಿಯ ಹಂಬಲವೇ ಹೊರತು ಮತ್ತೇನೂ ಅಲ್ಲ ಎನ್ನುವ ನಿನ್ನ ಮಾತು ದುರ್ಬಲರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ಆಪ್ತರನ್ನಾಗಿಸಿಕೊಳ್ಳುವ ಪದಪುಂಜಗಳ ಕೋಶ ನಿನ್ನಲ್ಲಿದೆ. ನೀನಾಡುವ ಪದಗಳು ನಿನ್ನ ತುಟಿಗಳ ಅಪ್ಪುಗೆಗಾಗಿ ಕಾಯುತ್ತವೆ. ಇದಕ್ಕೆ ಕಳಸವಿಟ್ಟಂತೆ ನಿನ್ನ ಅಪರೂಪದ ರೂಪ ಸೂಜಿಗಲ್ಲಿನಂತೆ ಸೆಳೆಯುತ್ತದೆ.
ಜಂಭದ ಕೋಳಿ ಸ್ವಭಾವದವರು ನಿನ್ನ ಸೌಮ್ಯ ಸ್ವಭಾವವನ್ನು ಬದಲಿಸಿ ಬಿಡುತ್ತೇನೆ ಎಂದು ಬಂದವರು ತಾವೇ ಬದಲಾಗಿ ಬಿಡುವುದನ್ನು ಕಂಡು ನಾನು ಮೂಕವಿಸ್ಮಿತನಾಗಿದ್ದಾನೆ.
ರಾತ್ರಿಯಾದರೆ ಸಾಕು ನೀನಾಡಿದ ಸವಿ ಸವಿ ಪಿಸುಮಾತುಗಳು, ಹಲವು ಬಾರಿ ಹೇಳದೆಯೇ ಮನದೊಳಗೆ ಅಡಗಿಸಿರುವ ಬೆಚ್ಚನೆಯ ಭಾವಗಳು ಮಾರ್ದನಿಸುತ್ತವೆ. ನವಿರಾದ ಕೈಗಳಿಂದ ಮೃದುವಾಗಿ ನನ್ನ ಕೈ ಸವರಿದಂತೆ ಭಾಸವಾಗುತ್ತದೆ. ಬೆಚ್ಚನೆಯ ಭಾವದ ಕಾವನ್ನು ಅಕ್ಷರದಲ್ಲಿ ಇಳಿಸುವ ನಿನ್ನ ಬಗೆ ಅಚ್ಚರಿ ತರುವ ಕಲೆ. ಅದು ಯಾವ ಪಾಠಶಾಲೆಯಿಂದ ಕಲಿತೆ ಎಂಬುದು ತಿಳಿಯದಾಗಿದೆ. ಹೃದಯದಿಂದ ಬಂದ ಪ್ರೀತಿಯ ಭಾವಗಳಿಗೆ ಪದಗಳ ಮಾಲೆ ಕಟ್ಟಿ ಒಲವಿನ ಲೋಕಕ್ಕೆ ಒಪ್ಪಿಸುವ ರೀತಿ ನಿನ್ನಿಂದ ಕಲಿಯಬೇಕು ಕಣೆ.
ಅದೊಂದು ಸಂಜೆ ಕಾಲೇಜಿನ ಕೊನೆಯ ದಿನ ಚಂದನೆಯ ಜರತಾರಿ ಸೀರೆಗೆ ಅಂದನೆಯ ರವಿಕೆ ತೊಟ್ಟು ಮುಡಿಗೆ ಮಲ್ಲಿಗೆ ಇಟ್ಟು ಹಣೆಗೆ ಕೆಂಪು ಬೊಟ್ಟನಿಟ್ಟು ಬಳಿ ಬಂದೆ. ಬಾನಲ್ಲಿ ಸೂರ್ಯ ಜಾರುತ್ತಿದ್ದ ಅದೆಲ್ಲಿಂದಲೋ ಒಮ್ಮೆಲೇ ಮಳೆ ಹನಿ ಒಡೆಯಿತು. ಒಂದು ಹನಿ ನಿನ್ನ ಹಣೆ ಚುಂಬಿಸಿತು. ಅದನ್ನು ಇನ್ನೊಂದು ಹಿಂಬಾಲಿತು. ನಾ ಮುಂದೆ ತಾ ಮುಂದೆ ಎಂದು ಕೆಲವು ಕೆನ್ನೆಗೆ ಮುತ್ತಿಕ್ಕಿದವು. ಅದನ್ನು ಕಂಡ ನನ್ನ ಮನ ಆ ಹನಿ ನಾನಾಗಬಾರದೆ ಎಂದಿತು. ತುಂತುರು ಮಳೆಗೆ ಬಿರಿದ ಮಣ್ಣಿನ ಸುವಾಸನೆಗೆ ಮನವು ನವಿಲಾಯಿತು. ಸುಳಿವ ಗಾಳಿಗೆ ನಲಿದಾಡಿತು. ನಿನ್ನ ಮೊಗ ಅಂಗಳದ ಸೂಜಿಮಲ್ಲಿಗೆ ಅರಳಿದಂತೆ ಅರಳಿತು.
ಇಬ್ಬರೂ ಮಳೆಗೆ ಮೈ ಚೆಲ್ಲಿದೆವು. ತೊಯ್ದು ತೊಪ್ಪೆಯಾಗಿದ್ದೆವು ಮೈಗೆ ಮೈ ಸೋಕಿದಾಗ ಮುಡಿದ ಮಲ್ಲಿಗೆಯ ಘಮ, ಘಲ ಘಲ ಹೆಜ್ಜೆಯ ನಾದ ಸಮೀಪಿಸಿತು. ಹಿಂಜರಿಕೆಯಲ್ಲಿಯೇ ಒಲವಿನ ಮಿಡಿತಗಳೆರಡು ಒಂದಾಗಲು ಸಜ್ಜಾದವು. ಎದೆಯ ಗಟ್ಟಿ ನಗಾರಿಯ ಸದ್ದಿನಲಿ. ಮಧು ಹೀರಲು ತುದಿಗಾಲಲಿ ನಿಂತ ದುಂಬಿಯಂತಾದ ನನ್ನ ಕಂಡು ಹೆದರಿದ ಹರಿಣಿಯಾದೆ ನೀ. ನಿಧಾನ ಇನ್ನೇಕೆ ಸಂಕೋಚ ಇಲ್ಲೇಕೆ? ಸಂತೋಷ ಹೊಂದೋಣ. ಬೀಸುವ ಪ್ರೀತಿಯ ಗಾಳಿಗೆ ಬೇಲಿ ಬೇಕಿಲ್ಲ. ಬಾರೆ ರಾಜಕುಮಾರಿ ಸುಕುಮಾರಿ ಎಂದು ಹೇಳಬೇಕೆನಿಸಿತು. ಮೆಲ್ಲಗೆ ತೋಳಿಂದ ಬಳಸಿದೆ. ನವಿರಾದ ಬೆರಳುಗಳು ನನ್ನ ಸೊಂಪಾದ ಕೂದಲಲ್ಲಿ ಓಡಾಡತೊಡಗಿದವು. ಕೆಂದುಟಿಗಳಿಗೆ ಬೀಗ ಹಾಕುತ ಬಿಗಿದಪ್ಪಿಕೊಳ್ಳಲು ಮುಂದಾದೆ. ಅಷ್ಟರಲ್ಲಿ ನನ್ನದೆಲ್ಲವೂ ನಿನಗೆಂದೇ ಮೀಸಲಿದೆ ನನ್ನೊಲವೆ. ಸರಸಕೆ ಅವಸರ ಸಲ್ಲ ನಲ್ಲ ಎಂದು ಮೆಲ್ಲ ಮೆಲ್ಲ ಕೈ ಬಿಡಿಸಿಕೊಂಡೆ.
ಬರ‍್ರೆಂದು ನಿನ್ನ ಮನೆಯತ್ತ ಬೈಕು ಓಡಿಸಿದೆ.
ಅಂದಿನಿಂದ ಇಂದಿನವರೆಗೂ ಬರೀ ಫೋನಿನಲ್ಲೇ ಮಾತಾಯಿತು ಮುತ್ತಾಯಿತು. ಬಣ್ಣ ಬಣ್ಣದ ನೂರಾರು ಆಸೆ ಚಿಮ್ಮಿಸಿ ಬಯಕೆ ಹೊಮ್ಮಿಸಿ ದೂರ ಸರಿದರೆ ಹೇಗೆ ಪ್ರೇಯಸಿ? ಎಂದು ಪ್ರಶ್ನಿಸಿ ಮದುವೆಯ ಮಮತೆಯ ಕರೆಯೋಲೆ ಹಂಚಿ ಮಂಗಳಸೂತ್ರ ಕಟ್ಟಿದ್ದಾಯಿತು. ಇಂದು ಮೊದಲಿರುಳು ನಮ್ಮ ಪಾಲಿಗಿರಲಿ ಪ್ರತಿರಾತ್ರಿಯೂ ಮೊದಲಿರುಳು. ಇಷ್ಟು ದಿನ ಯಾರೂ ಕೇಳುವವರಿಲ್ಲದೆ, ಉಪಚರಿಸುವವರಿಲ್ಲದೆ ಸೊರಗಿರುವೆ. ರಾತ್ರಿಯಲಿ ಬಳಲಿರುವೆ. ನಿನ್ನ ಇನಿದನಿಗೆ ಇನಿಯನ ದನಿಯ ಬೆರೆಸಿ ನಗುವ ನಲಿವ ಸೊಗದ ಶುಭದ ಒಂದಾದ ಬಂಧದಲಿ ಒಂದಾಗುವ ಬಾ ಷೋಡಸಿ. ಹೊನ್ನ ಮಳೆಯಲಿ ಮಧುರ ಮಿಲನ ಸುಧೆಯ ಪಾನವಾಗಿಸಲು ಮಂಚದ ಹಾದಿಯಲಿ ಹೂ ಹಾಸಿರುವೆ. ಸುಂದರ ಸಂಗಮಕೆ ಕಾದಿರುವೆ. ಕಾದಿದೆ ಮನ ಒಪ್ಪಿಗೆಗೆ ಸಿಹಿ ಅಪ್ಪುಗೆಗೆ. ಬಂದು ಬಿಡು ಬೇಗ ಸತಾಯಿಸದೆ. ಸರಸ ತರುವ ಸುಖವ ಪಡೆವ. ಹಗಲಿರುಳೆನ್ನದೆ ಮೈಯೆಲ್ಲ ಹೂವಾಗಿಸುವೆ. ಕೆನ್ನೆ ಕೆಂಪೇರಿಸುವೆ ಚೆಂದುಟಿ ಮಿಂಚಿಸುವೆ. ಜೀವನಪೂರ್ತಿ ನಿನ್ನವನಾಗಿರುವೆ.
ನಿನ್ನ ಬರುವ ಕಾಯುತಿರುವ
ಅಭಿನವ
ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ, ೯೪೪೯೨೩೪೧೪೨