ಮೂಡಲಗಿ: ಸಹಕಾರ ಸಂಘಗಳು ಜನರಿಂದ ಠೇವಣಿ ಸಂಗ್ರಹಿಸಿ ಕಾರ್ಯನಿರ್ವಹಿಸುವ ಸಂಸ್ಥೆಗಳಾಗಿದ್ದು, ಎಂದಿಗೂ ಠೇವಣಿದಾರರ ವಿಶ್ವಾಸ ಕಳೆದುಕೊಳ್ಳಬಾರದು ಮತ್ತು ಪತ್ತಿನ ಸಹಕಾರ ಸಂಘಗಳು ಪ್ರಸ್ತುತ ದಿನಗಳಲ್ಲಿ ಬಹಳ ಜಾಗೃತದಿಂದ ಕಾರ್ಯನಿರ್ವಹಿಸ ಬೇಕಾಗಿದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಅವರು ಪಟ್ಟಣ ಬಸವೇಶ್ವರ ಅರ್ಬನ್ ಸೊಸೈಟಿಯ ಸಭಾ ಭವನದಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಪತ್ತಿನ (ಕ್ರೆಡಿಟ್) ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಏರ್ಪಡಿಸಿದ ಒಂದು ದಿನದ ವಿಶೇಷ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಬದಲಾಗುತ್ತಿರುವ ಕಾಯಿದೆ ಕಾನೂನುಗಳ ಅಡಿಯಲ್ಲಿ, ತಂತ್ರಜ್ಞಾನ ಅಳವಡಿಸಿಕೊಂಡು ಕಾರ್ಯನಿರ್ವಹಿಸಿದ್ದೇ ಆದಲ್ಲಿ ಎದುರಾಗುವ ಸಂಕಷ್ಟಗಳಿಂದ ಪಾರಾಗಬಹುದು. ಸ್ವಂತ ಬಂಡವಾಳ ಹೆಚ್ಚಾಗಿ ಹೊಂದಿದ ಸಹಕಾರ ಸಂಘಗಳು ಭದ್ರತೆಯಿಂದ ಇರುತ್ತವೆ. ಭದ್ರತೆ ಇಲ್ಲದಿದ್ದರೆ ಗ್ರಾಹಕರು ಸಂಘಗಳ ಜೊತೆ ವ್ಯವಹಾರ ಮಾಡುವುದಿಲ್ಲಾ. ಸಂಘಗಳು ಲಾಭದಲ್ಲಿ ಭದ್ರತಾ ಠೇವಣಿಯನ್ನು ತೆಗೆದಿಡಬೇಕು, ಅಂದಾಗ ಮಾತ್ರ ಸಂಘಗಳು ಸಧೃಡದಿಂದ ಕಾರ್ಯನಿರ್ವಹಿಸುತ್ತವೆ ಎಂದರು.
ಸಹಕಾರ ಸಂಘಗಳ ಕಾಯ್ದೆಯ ತಿದ್ದುಪಡಿಗಳ ಕುರಿತು ಮತ್ತು ಸಹಕಾರ ಸಂಘಗಳಲ್ಲಿ ಸಾಲ ವಿತರಣೆ ಮತ್ತು ಸಾಲ ವಸೂಲಾತಿ ಕುರಿತು. ಆಡಳಿತ ಮಂಡಳಿ ಸಭೆ ಹಾಗೂ ವಾರ್ಷಿಕ ಮಹಾಸಭೆ ಜರುಗಿಸುವ ವಿಧಾನಗಳ ಬಗ್ಗೆ ಸರಿಯಾಗಿ ಕಾರ್ಯನಿರ್ವಹಿಸಬೇಕು. ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಇಂತಹ ತರಬೇತಿಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕ ವರ್ಧಮಾನ ಬೋಳಿ ಮಾತನಾಡಿ, ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರು ತರಬೇತಿಯಲ್ಲಿ ಎಲ್ಲ ಕಾರ್ಯದರ್ಶಿಗಳು ಭಾಗವಹಿಸುವುದರ ಮೂಲಕ ಮತ್ತು ತರಬೇತಿ ಅವಧಿಯಲ್ಲಿ ಮಂಡಿಸುವ ಮುಖ್ಯವಾದ ವಿಷಯವನ್ನು ತಿಳಿದುಕೊಂಡು ತಮ್ಮ
ಸಂಘಗಳಲ್ಲಿ ಕಾರ್ಯ ನಿರ್ವಹಿಸುವುದರಿಂದ ಸಂಘಕ್ಕೆ ಬಹಲ ಸಹಕಾರಿಯಾಗಬಹುದು ಎಂದ ಅವರು ಬೆಳಗಾವಿ
ಜಿಲ್ಲಾ ಸಹಕಾರ ಯೂನಿಯನ್ ಜಿಲ್ಲಾದ್ಯಂತ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತಮಗೆ ಅವಶ್ಯಕವಾದ ವಿಷಯವನ್ನು ಇಟ್ಟುಕೊಂಡು ತರಬೇತಿಯನ್ನು ಏರ್ಪಡಿಸುತ್ತಾ ಬಂದಿದೆ ಎಂದರು.
ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ನಿರ್ದೇಶಕ ಸಂಜಯ ಪಿ. ಹೊಸಮಠ ಮಾತನಾಡಿ, ಇತ್ತೀಚೆಗೆ ಸಹಕಾರ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತಿದ್ದು, ಎಲ್ಲ ಸಹಕಾರ ಸಂಘಗಳು ಆ ಬದಲಾವಣೆಗಳಿಗೆ ತಕ್ಕಂತೆ ತಮ್ಮ ಕಾರ್ಯ ಚಟುವಟಿಕೆಯಲ್ಲೂ ಬದಲಾವಣೆ ಮಾಡಿಕೊಂಡು ಸಂಘಗಳ ಬೆಳವಣಿಗೆ ಜೊತೆಗೆ ಗ್ರಾಹಕರ ಬೆಳವಣಿಗೆಗೂ ಶ್ರಮಿಸಬೇಕೆಂದರು.
ರಾಯಬಾಗ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಶಂಕರ ಎಸ್. ಕರಬಸನ್ನವರ ಅವರು ಸಹಕಾರ
ಸಂಘಗಳ ಸಾಲ ವಿತರಣೆ ಮತ್ತು ಸಾಲ ವಸೂಲಾತಿ ಹಾಗೂ ಸಹಕಾರ ಸಂಘಗಳ ಚುನಾವಣೆ ಕುರಿತು, ಗೋಕಾಕದ ಲೆಕ್ಕಪರಿಶೋಧಕ ಸೈದಪ್ಪಾ ಗದಾಡಿ ಅವರು ದಾಖಲೆಗಳ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆಯಲ್ಲಿ ಕಂಡು ಬರುತ್ತಿರುವ ನ್ಯೂನ್ಯತೆಗಳ ವಿಷಯಗಳ ಕುರಿತು ತರಬೇತಿ ನೀಡಿದರು.
ಸಮಾರಂಭದ ವೇದಿಕೆಯಲ್ಲಿ ವೇದಿಕೆ ಮೇಲೆ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷ ಬಸಗೌಡ ಪಾಟೀಲ, ನಿರ್ದೇಶಕರಾದ ಬಸಪ್ಪಾ ಸಂತಿ, ಶಿವಪ್ಪಾ ಮರ್ದಿ, ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಮಹಾಮಂಡಳ ನಿರ್ದೇಶಕ ತಮ್ಮಣ್ಣ ಕೆಂಚರಡ್ಡಿ, ಬಸವೇಶ್ವರ ಅರ್ಬನ್ ಸೋಸಾಯಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಢವಳೇಶ್ವರ ಮುಂತಾದವರು ಉಪಸ್ಥಿತರಿದ್ದರು ಜಿಲ್ಲಾ ಯೂನಿಯನ್ನಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಲಪ್ಪಾ ಜಗ್ಗಿನವರ
ಸ್ವಾಗತಿಸಿ ವಂದಿಸಿದರು.