ಸಂಯುಕ್ತ ಅಮೇರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ ಮತ್ತೊಮ್ಮೆ ಗುಂಡಿನ ದಾಳಿ ನಡೆದಿದ್ದು ಅವರು ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ.
ವೆಸ್ಟ್ ಪಾಮ್ ಬೀಚ್ ನ ಗಾಲ್ಫ್ ಕ್ಲಬ್ ನಲ್ಲಿ ಟ್ರಂಪ್ ಅವರು ಗಾಲ್ಫ್ ಆಡುವಾಗ ರವಿವಾರ ಅವರ ಸಮೀಪದಿಂದಲೇ ಗುಂಡುಗಳು ಹಾದು ಹೋಗಿದ್ದು ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಅಮೇರಿಕದ ಮಾಜಿ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅವರು ಈ ಸಲವೂ ಅಮೇರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಟ್ರಂಪ್ ಅವರ ಪ್ರಚಾರ ಸಮಿತಿಯ ವಕ್ತಾರರು, ಟ್ರಂಪ್ ಅವರ ಸಮೀಪದಲ್ಲಿ ಗುಂಡು ಹಾದು ಹೋಗಿದೆ. ತಪ್ಪಿಸಿಕೊಂಡು ಹೋಗಿದ್ದ ದಾಳಿಕೋರನನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಖ್ಯಾತ ಸುದ್ದಿ ಸಂಸ್ಥೆಗಳಾದ ಸಿಎನ್ಎನ್, ದಿ ನ್ಯೂಯಾರ್ಕ್ ಟೈಂಸ್, ಫಾಕ್ಸ್ ನ್ಯೂಸ್ ಗಳು ದಾಳಿಕೋರ ರಿಯಾನ್ ವೆಸ್ಲಿ ರೌಥ್, ೫೮ ಎಂದು ಗುರುತಿಸಿವೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅಮೇರಿಕದ ಪೊಲೀಸ್ ಎಫ್ ಬಿ ಐ ನಿರಾಕರಿಸಿದೆ.
ಕಳೆದ ಎರಡು ತಿಂಗಳ ಹಿಂದೆ ಕೂಡ ಟ್ರಂಪ್ ಅವರು ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದು ಕಿವಿಯ ಭಾಗದಲ್ಲಿ ಗಾಯವಾಗಿತ್ತು. ಇದು ಎರಡನೆಯ ದಾಳಿಯಾಗಿದೆ.