Homeಕವನಎರಡು ಕವನಗಳು

ಎರಡು ಕವನಗಳು

ಅವಳು ಹೀಗೆ
—————————
ಅವಳು ಹೀಗೆ
ಎಲ್ಲವನ್ನೂ ಹೊರಗೆ
ತೋರಿದವಳಲ್ಲ
ಅದೆಷ್ಟೋ ವರುಷಗಳಿಂದ
ಮೌನದಲಿ ಮೌಲ್ಯ
ತುಂಬಿಕೊಂಡು
ಬದುಕು ನೂಕಿದವಳು
ಅಳುವ ಮರೆಸುವ
ಹುಸಿ ನಗೆ
ಮುಚ್ಚಿ ಸೆರಗಿನಲಿ ಬಿಕ್ಕು
ಕರುಣೆ ದಾಕ್ಷಿಣ್ಯ ಭಿಕ್ಷೆಗೆ
ಸೆರಗೊಡ್ಡಿದವಳಲ್ಲ
ಹಲವು ಸಲ ಸೋತರು
ಗೆಲುವಿನ ದಾರಿಗೆ
ದಿಟ್ಟ ಹೆಜ್ಜೆ ಹಾಕಿದವಳು
ಎಲ್ಲರ ಯಶದಲಿ
ಹಿರಿ ಹಿರಿ ಹಿಗ್ಗಿದವಳು
ಮೃದು ಮಾತು ನಯನ
ಓದು ಬರಹ ಚಿಂತನಾ
ಸಂಘರ್ಷ ಹೋರಾಟ
ಒಳಗೆ ಲಾವಾದ ಕುದಿತ
ಮಾನವ ಮೌಲ್ಯಕ್ಕೆ ಮಿಡಿತ
ಸಮರತಿ ಸಮಪಾಲು
ಬುದ್ಧ ಬಸವರ ತುಡಿತ
ಹೊರಟಳು ಒಬ್ಬಳೇ
ಸತ್ಯದ ಬೆಳಕ ಹುಡುಕುತ
—————————————
ಸತ್ಯ ಸದಾ ಒಂಟಿ
—————————
ಸುಳ್ಳು ಬಳಲುತ್ತದೆ
ಅವರಿವರ ಆಶ್ರಯಕ್ಕೆ
ಮೊರೆ ಹೋಗುತ್ತದೆ
ಓತಿಕ್ಯಾತ ಬೇಲಿಯ
ಬೆಂಬಲ ಬಯಸುತ್ತದೆ
ಸುಳ್ಳಿಗೆ ಭಯ ಭೀತಿ
ಅದಕ್ಕೆ ಅದು ಸದಾ
ಇನ್ನೊಂದು ಸುಳ್ಳಿನ
ಜೊತೆಗೆ ಇರುತ್ತದೆ

ಸತ್ಯ ಹಾಗಲ್ಲ
ಗಟ್ಟಿ ಸ್ಪಟಿಕ
ಕಡ್ಡಿ ಮುರಿದ ಮಾತು
ನೇರ ನಿಷ್ಠುರ
ಮೈ ಗೆ ಬೀಸುವ
ಹದ ಚರ್ಮದ ಚಾಬುಕ
ಬರೆ ಬಾಸುಂಡೆ
ಏಳುವ ಹೊಡೆತ
ಸತ್ಯ ಸದಾ ಒಂಟಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

RELATED ARTICLES

Most Popular

error: Content is protected !!
Join WhatsApp Group