ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು . ಕವಿ ಕಾಳಿದಾಸ ಹೇಳಿದಂತೆ ಹಳೆಯದು ಎಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದೇನೂ ಅಲ್ಲ. ನೂತನವಾದುದು ಬಂದ ಮೇಲೆ ಹಳೆಯದೆಲ್ಲವನ್ನೂ ತೆಗಳುವ ಕಾರಣವಿಲ್ಲ.ಎಂಬುದು ಸರ್ವಕಾಲಕ್ಕೂ ಅನ್ವಯವಾಗುವ ಮಾತು.
ಕವಿಯ ಕಲ್ಪನಾಲೋಕವನ್ನೂ ಮೀರಿಸುವಂತದ್ದು ಸೃಷ್ಟಿಯ ಸೊಬಗು. ನೀತ್ಸೆ ಉಕ್ತಿಯಂತೆ ಲಯದ ಹೃದಯದಲ್ಲಿಯೇ ಪುನಃ ಸೃಷ್ಟಿಯ ಬೀಜವಿದೆ. ಮಾಸಗಳಲ್ಲಿ ಸರ್ವಶ್ರೇಷ್ಠವಾದುದು ಚೈತ್ರ ಮಾಸ ಋತುವಿನಲ್ಲಿ ರಾಜನ ಸ್ಥಾನ ವಸಂತನಿಗೆ ಪಕ್ಷದಲ್ಲಿ ಶುಕ್ಲ ಪಕ್ಷ ತಿಥಿಯಲ್ಲಿ ಪಾಡ್ಯ ಹೀಗೆ ಸರ್ವೋತ್ತಮಗಳ ಸಮಾಗಮವನ್ನು ಮೂಡಿಸುವ ಹಬ್ಬವೇ ಯುಗಾದಿ.ಇದೇ ಹೊಸ ವರ್ಷದ ಪ್ರಥಮ ಹಬ್ಬ..
ಪ್ರತಿ ವರ್ಷವೂ ಚೈತ್ರಮಾಸದಂದು ಯುಗಾದಿ ಬಂದೇ ಬರುವುದು ಹೊಸತು ಹಳತುಗಳ ಬೆಸೆದರೆ ಸಿಹಿ ಕಹಿಗಳನು ಸಮಚಿತ್ತದಿ ಸ್ವೀಕರಿಸಿದರೆ ಬಾಳು ಸುಂದರವೆಂಬ ಜೀವನ ನೀತಿಯನ್ನು ಹೊರಹೊಮ್ಮಿಸಿ ಮರೆಯಾಗುತ್ತದೆ.
ಸದ್ಗುಣಗಳು ನೆಲೆಗೊಳ್ಳಲಿ
ಉತ್ತಮ ಜೀವನ ನೀತಿ ನಿಯಮಗಳನ್ನು ಗಾಳಿಗೆ ತೂರಿ ಅನುಕೂಲ ಸಿಂಧುಗಳಾಗುತ್ತಿರುವ ನಾವು ಕಾಲನ ಮೇಲೆ ಗೂಬೆ ಕೂರಿಸಿ ಕೈ ತೊಳೆದುಕೊಳ್ಳಲು ನೋಡುತ್ತಿದ್ದೇವೆ. ಕಾಲ ಕೆಟ್ಟು ಹೋಗಿದೆ ಎಂದು ಹೇಳುತಿದ್ದೇವೆ. ಆದರೆ ಕಾಲ ಕೆಡದು. ಅದೇ ಸೂರ್ಯ ಅದೇ ಚಂದ್ರ ಅದೇ ಭೂಮಿ ಅದೇ ಕಾಲ ಆದರೆ ಕೆಡುವುದು ಜನರ ನಡೆ ನುಡಿಗಳು ಮಾತ್ರ ಎನ್ನುವುದು ಗೊತ್ತಿದ್ದೂ ಸೋಗಲಾಡಿತನ ಮೆರೆಯುತ್ತಿದ್ದೇವೆ.
ಪ್ರತಿ ದಿನವೂ ಪ್ರತಿ ಸಂಬಂಧದಲ್ಲಿಯೂ ಮುಖಗಳಿಗೆ ಮುಖವಾಡ ಹಾಕಿಕೊಂಡೇ ವ್ಯವಹರಿಸುತ್ತಿದ್ದೇವೆ. ಹೊರಗೆ ಸೊಗಸು ಒಳಗೆ ಕೊಳಕು ನಿತ್ಯ ಬದುಕಿನ ಜಂಜಡಗಳ ಹೆಸರಿನಲ್ಲಿ ಅರ್ಥವಂತಿಕೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಕ್ರೂರತನದ ಬೇರನ್ನು ಇನ್ನಷ್ಟು ಆಳವಾಗಿ ಬೇರೂರಿಸುತ್ತಿದೇವೆ. ಕ್ರೌರ್ಯದ ಬೇರು ಕಿತ್ತು ಹಾಕಿದರೆ ಅಲ್ಲಿ ಕರುಣೆ ದಯೆ ಅನುಕಂಪ ಸಹನೆಯಂಥ ಸದ್ಗುಣಗಳು ನೆಲೆಗೊಳ್ಳುತ್ತವೆ. ಆಗ ಪ್ರಕೃತಿಯ ಸೊಬಗೂ ಕಣ್ಮನ ಸೆಳೆಯುತ್ತದೆ. ಪ್ರಕೃತಿ ಬಿಚ್ಚಿಟ್ಟಿರುವದಕ್ಕಿಂತ ಮುಚ್ಚಿಟ್ಟಿರುವುದೇ ಹೆಚ್ಚು ಎಂಬ ಅಂಶ ನಿಧಾನಕ್ಕೆ ಮನಸ್ಸಿನಾಳಕ್ಕೆ ಇಳಿಯುತ್ತದೆ.
ಒಳತಿನ ಚಿಗುರಿಗೆ ಜಾಗವಿರಿಸೋಣ
ಹಾಡು ಹಳೆಯದಾದರೇನು ಭಾವ ನವ ನವೀನ ಎಂಬ ಹಾಡು ಗುನುಗುನಿಸಿದರೂ ಕೀಲುಗೊಂಬೆಗೆ ಕೊಟ್ಟ ಕೀಲಿ ಮುಗಿದಾಕ್ಷಣ ಮರಳಿ ಮೊದಲ ಸ್ಥಿತಿಗೆ ಬರುವಂತೆ ಮನಸ್ಸು ಉತ್ತಮತೆಯೆಡೆಗೆ ಹೊರಳಿದರೂ ಕೆಲ ಹೊತ್ತಿನಲ್ಲಿಯೇ ಹಿಂದಿನ ದುಸ್ಥಿತಿಗೆ ಯಥಾವತ್ತಾಗಿ ಮರಳುತ್ತದೆ. ಸದಾ ಲಾಭ ನಷ್ಟಗಳ ಲೆಕ್ಕಾಚಾರ ಸ್ವಾರ್ಥಪರ ಚಿಂತನೆ ಮತೊಬ್ಬರನ್ನು ಕೆಳಕ್ಕೆ ತಳ್ಳಿ ಮೇಲೇರಬೇಕೆನ್ನುವ ವಿಚಾರ ಸರಣಿಯಲ್ಲಿ ದಿನದಿಂದ ದಿನಕ್ಕೆ ಕಸದ ಗುಡ್ಡೆಯನ್ನು ಮನದ ಮನೆಯಲ್ಲಿ ಹೆಚ್ಚಿಸುತ್ತ ಒಳತಿನ ಚಿಗುರಿಗೆ ಜಾಗವಿರಸದಿದ್ದರೆ ನಮಗರಿವಿಲ್ಲದಂತೆಯೇ ನಮ್ಮ ಬಾಳ ಬಂಡಿಯ ಕೀಲು ಕಳಚಿ ಬಿದ್ದಿರುತ್ತದೆ ಹಾದಿಯೂ ತಪ್ಪಿರುತ್ತದೆ. ರಿಪೇರಿ ಮಾಡಲು ಬರದಷ್ಟು ಮೂರಾಬಟ್ಟೆಯಾಗಿ ನಿಂತಿರುತ್ತದೆ.
ಮಾತಿನಲ್ಲೂ ಬೆಲ್ಲ ಕೃತಿಯಲ್ಲೂ ಬೆಲ್ಲ
ಎಷ್ಟು ಯುಗಾದಿಗಳು ಮರಳಿದರೂ ನಮ್ಮ ಮೂರಾಬಟ್ಟೆಯಾದ ಬಾಳಬಂಡಿಯ ಸ್ಥಿತಿ ಸುಧಾರಿಸುವುದಿಲ್ಲ. ಅದಕ್ಕೆ ಮೂಲ ಕಾರಣ ಸುಧಾರಿಸಲು ನಾವು ಮನಸ್ಸು ಮಾಡಿರುವುದಿಲ್ಲ. ಸದಾ ಸದ್ದು ಗದ್ದಲದಲ್ಲಿದ್ದರೂ ಮನಸ್ಸು ಒಂಟಿತನದ ರೋಗದಿಂದ ಬಳಲುತ್ತದೆ.
ಸಂಬಂಧದ ಬೆಸುಗೆಗಳನ್ನು ಸಂಶಯದ ನೆಲೆಗಟ್ಟಿನ ಮೇಲೆ ಬೆಸೆಯಲು ಹೋದಷ್ಟು ಕಳಚಿ ಬೀಳುತ್ತವೆ. ಮಾತಿನಲ್ಲಿ ಮಾತ್ರ ಬೆಲ್ಲ ಮನದಲ್ಲಿ ಬೇವು ತುಂಬಿಕೊಂಡಿರುವುದು ಸ್ನೇಹಿತರು ಆತ್ಮೀಯರು ಆಪ್ತರಾದವರು ಸಂಕಷ್ಟದಲ್ಲಿ ಬಿದ್ದಾಗ ತಿಳಿಯಲು ಬಹು ಸಮಯ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಮಾತಿನಲ್ಲೂ ಬೆಲ್ಲ ಕೃತಿಯಲ್ಲೂ ಬೆಲ್ಲ ರೂಢಿಸಿಕೊಳ್ಳಬೇಕಿದೆ. ಬೇವಿನಂಥ ಕಷ್ಟಗಳು ಬಂದಾಗ ಮನೋಸ್ಥೈರ್ಯ ಕಳೆದುಕೊಳ್ಳದೇ ಶಾಂತಚಿತ್ತರಾಗಿ ವ್ಯವಹರಿಸುವದನ್ನು ಕಲಿತುಕೊಳ್ಳಬೇಕಿದೆ.
ಸಂಬಂಧಗಳ ನಡುವೆ ಸೇತುವೆ ಕಟ್ಟಬೇಕಿದೆ.
ಸಾಮಾಜಿಕ ಸಂಬಂಧಗಳ ನಡುವೆ ಸೇತುವೆ ಕಟ್ಟಬೇಕಾದ ಇಟ್ಟಿಗೆಗಳಿಂದ ಅಡ್ಡಗೋಡೆಯ ನಿರ್ಮಿಸಿ ಸ್ವಜನ ಪಕ್ಷಪಾತದ ಬಲದಿಂದ ಮೇಲೇಳುವ ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಧರ್ಮ ಜಾತಿ ಭಾಷೆ ಹೆಸರಿನಲ್ಲಿ ಮುಗಿಯದ ಸಂಘರ್ಷಕ್ಕಿಳಿದು ಬುದ್ಧಿ ಬಲವನ್ನು ಕ್ಷೀಣಿಸಿಕೊಂಡು ಹೈರಾಣಾಗಿಬಿಡುತ್ತೇವೆ. ಮನೋಬಲಕ್ಕೆ ಸಾಣೆ ಹಿಡಿಯುವುದನ್ನು ಮರೆತು ಸುಸ್ತಾಗಿ ಮುದಿ ಸಿಂಹದಂತೆ ಘರ್ಜಿಸುತ್ತ ಬದುಕಿನ ಮೂಲೆಯಲ್ಲಿ ಬಿದ್ದುಬಿಡುತ್ತೇವೆ.ಸಂಘರ್ಷದಿಂದ ಯಾವುದಕ್ಕೂ ಪರಿಹಾರವಿಲ್ಲ ಎಂಬುದನ್ನು ಇತಿಹಾಸದಿಂದ ಮನಗಂಡಿದ್ದರೂ ಪದೇ ಪದೇ ಸಂಘರ್ಷಕ್ಕಿಳಿಯುವ ಕೆಟ್ಟ ಮನೋಭಾವನೆಯನ್ನು ಹಕ್ಕುಗಳಿಗಾಗಿ ಹೋರಾಡುವದು ನಮ್ಮ ಹಕ್ಕು ಎಂಬ ಬಣ್ಣ ಹಚ್ಚಿ ಆಧುನಿಕತೆಯ ಲಕ್ಷಣವೆಂದು ಬೊಬ್ಬೆ ಹಾಕುತ್ತ ಕುರುಡರಂತೆ ಅಜ್ಞಾನದ ದಟ್ಟಡವಿಯಲ್ಲಿ ಸಾಗುತ್ತಿದ್ದೇವೆ. ಜ್ಞಾನದ ಬಲದಿಂದ ಬೃಹದಾಕಾರವಾಗಿ ಬೆಳೆದು ನಿಂತ ನಮ್ಮ ಅಜ್ಞಾನವೆಂಬ ಮರವನ್ನು ನಿರ್ದಾಕ್ಷಿಣ್ಯವಾಗಿ ಕಡಿದು ಚೆಲ್ಲಬೇಕಿದೆ. ಮುದ್ದು ಎಂಬ ಮದ್ದು ನೀಡಬೇಕಿದೆ
ಸಿಟ್ಟು ಉದ್ವಿಗ್ನತೆ ದಾವಂತವನ್ನು ಹೆಚ್ಚಿಸಿಕೊಂಡು ಮನದಂಗಳದಲ್ಲಿರುವ ಪ್ರೀತಿಯ ಗಿಡಕ್ಕೂ ಷರತ್ತು ವಿಧಿಸಿ ಹಸಿರಾಗಿಸುವ ಬದಲು ಒಣಗಿಸುತಿದ್ದೇವೆ. ಪ್ರೀತಿ ಚಿಗುರೊಡೆಯಲು ಚೈತ್ರ ಮಾಸವನು ಎದೆಯಲ್ಲಿಟ್ಟುಕೊಳ್ಳಬೇಕಿದೆ. ಪ್ರತಿ ಬಾರಿಯೂ ಪ್ರೀತಿಗೆ ನಿರ್ಮಲ ಪ್ರೀತಿ ತೋರುವುದನ್ನು ಕಲಿತುಕೊಳ್ಳಬೇಕಿದೆ. ಬದುಕಿನ ಮುಸ್ಸಂಜೆಯಲ್ಲಿರುವವರಿಗೆ ನೆರವಿಗಾಗಿ ಕಾದು ಕುಳಿತುಕೊಂಡು ಕಣ್ಣೀರಿನ ಕೋಡಿ ಹರಿಸುವಂತೆ ಮಾಡುತ್ತಿದ್ದೇವೆ.
ಅವರಿಗೆಲ್ಲ ಪ್ರೀತಿಯ ಛಾಯೆಯ ಸೂರಿನಡಿ ಪೋಷಿಸಬೇಕಿದೆ. ದಯನೀಯ ಬದುಕು ಸಾಗಿಸುತ್ತಿರುವ ನೋವುಂಡ ಜೀವಗಳಿಗೆ ಗಾಯದ ಮೇಲೆ ಬರೆ ಎಳೆದಂತೆ ಅನ್ಯಾಯ ಮಾರ್ಗದಲ್ಲಿ ಮತ್ತಷ್ಟು ನೋವು ಹೆಚ್ಚಿಸುತ್ತಿದ್ದೇವೆ. ಹಾಗಾಗದೇ ನೋವುಂಡ ಜೀವಗಳಿಗೆ ನಮ್ಮ ಮನಸ್ಸು ಮಿಡಿಯಬೇಕಿದೆ ಅನಾಥರಿಗೆ ಮತ್ತಷ್ಟು ಅನಾಥ ಪ್ರಜ್ಞೆ ಬರುವಂತೆ ಕಾಡುವ ಮನೋಕ್ಲೇಷ ಬೆಳೆಸಿಕೊಂಡು ಅಟ್ಟಹಾಸ ಮೆರೆಯುತಿದ್ದೇವೆ. ಅನಾಥ ಜೀವಗಳಿಗೆ ಮುದ್ದು ಎಂಬ ಮದ್ದು ನೀಡಿ ಬದುಕಿಸಬೇಕಿದೆ.
ಆತ್ಮೀಯವಾಗಿ ಮಾತನಾಡಿ ಸಂತೈಸಬೇಕಿದೆ..
ಅಂತರಂಗವನ್ನು ಅರಳಿಸಬೇಕಿದೆ
ದಾನವೆಂಬುದು ಅಗಾಧ ಪ್ರಮಾಣದಲ್ಲಿಯೇ ಇರಬೇಕೆಂಬ ಭ್ರಮೆಗೆ ನೀರೆರೆದು ಸಣ್ಣ ಪ್ರಮಾಣದ ದಾನ ಧರ್ಮವೆಂಬುದನ್ನು ಅಲ್ಲಗಳೆಯುತ್ತಿದ್ದೇವೆ. ಹಸಿವಿನಿಂದ ಕಂಗಾಲಾದವರಿಗೆ ಕೋಟಿಗಟ್ಟಲೇ ಹಣ ಕೊಡಬೇಕಿಂದಿಲ್ಲ ಎರಡು ತುತ್ತು ಅನ್ನ ನೀಡಿದರೂ ಸಾಕು ಅದೇ ನಿಜವಾದ ಮಾನವ ಧರ್ಮದ ಔದಾರ್ಯತೆ ಮೆರೆಯುವುದು ಬದುಕಿನಲ್ಲಿ ಸಾಧಿಸುವುದು ಬೆಟ್ಟದಷ್ಟಿದ್ದರೂ ಕಾರು ಮನೆ ಬಂಗಲೆಯಂಥ ಭೌತಿಕ ವೈಭೋಗದ ಬೆನ್ನು ಹತ್ತಿ ನಿಜವಾದ ಸಂತೋಷ ಆತ್ಮತೃಪ್ತಿ ಆಂತರಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ. ಅಂತರಂಗವನ್ನು ಅರಳಿಸಿಕೊಂಡು ಹೃದಯ ವೈಶಾಲ್ಯತೆ ನಿಜ ಮಾನವೀಯತೆ ಮೆರೆಯಬೇಕಿದೆ. ದೇವರ ಸೃಷ್ಟಿಯ ಈ ಜಗದಲ್ಲಿ ಪ್ರತಿಯೊಂದು ಪವಿತ್ರವಾದುದು. ಪ್ರತಿ ಜೀವ ಸಂಕುಲದಲ್ಲಿ ದೈವತ್ವವನು ಗುರುತಿಸಿದಾಗ ದೈವ ಸಾಕ್ಷಾತ್ಕಾರವಾಗುವುದು
ಯುಗಾದಿ ಬೇವು ಬೆಲ್ಲಗಳನ್ನು ಸಾಂಕೇತಿಕವಾಗಿಟ್ಟುಕೊಂಡು ಕಹಿ ಸಿಹಿಗಳನ್ನು ಸಮಚಿತ್ತವಾಗಿ ಸ್ವೀಕರಿಸುವ ಸಂದೇಶ ಸಾರುತ್ತಿದೆ.
ಜೀವನದಲ್ಲಿ ನಡೆಯುವ ಪ್ರತಿಯೊಂದಕ್ಕೂ ಸ್ವಾರ್ಥ ಸಿದ್ದಾಂತಕ್ಕೆ ಕಟ್ಟು ಬಿದ್ದು ಇತÀರರ ನಿಲುವುಗಳೆಲ್ಲ ತಪ್ಪು ಎಂಬ ನಿಲುವು ತಾಳಲಾರದೇ ಬುದ್ಧಿ ಭಾವ ಮನಸ್ಸು ಹೃದಯ ತೆರದುಕೊಂಡು ಜ್ಞಾನದೀಪದಡಿಯಲ್ಲಿ ಬಾಳು ಪ್ರಾರಂಭಿಸಬೇಕು. ಉಪನಿಷತ್ ನುಡಿಯಂತೆ ಪ್ರಿಯವಾದುದನ್ನು ಬಿಟ್ಟು ಹಿತವಾದುದನ್ನು ಆರಿಸಿಕೊಳ್ಳಬೇಕು.
ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ
ಬಂದದ್ದೆಲ್ಲನೀಸಬೇಕಯ್ಯ ಓ ಗೆಳೆಯ
ಕಾಣದ್ದಕ್ಕೆ ಚಿಂತೆ ಯಾಕಯ್ಯಾ?
ಎಂಬ ಗೀತೆಯಲ್ಲಿನ ಕವಿಯ ಆಶಯದಂತೆ ಈ ನೀತಿಯನ್ನು ಅಳವಡಿಸಿಕೊಂಡು ಮನದೊಳಗೊಂದು ಹೊಸ ಯುಗಾದಿಗೆ ನಾಂದಿ ಹಾಡೋಣವಲ್ಲವೇ?
ಜಯಶ್ರೀ.ಜೆ. ಅಬ್ಬಿಗೇರಿ
ಆಂಗ್ಲ ಭಾಷಾ ಉಪನ್ಯಾಸಕರು ಸ ಪ ಪೂ ಕಾಲೇಜು ಹಿರೇಬಾಗೇವಾಡಿ
ತಾ ಜಿ: ಬೆಳಗಾವಿ 591109
9449234142