ನ ಮ್ಮ ಅಣ್ಣ ನಾಗರಾಜ ಅಮೇರಿಕಾದಲ್ಲಿ ಡಾಕ್ಟರ್ ಆಗಿದ್ದಾನೆ. ಅವರ ಕುಟುಂಬ ಅಲ್ಲಿಗೆ ಹೋಗಿ ನೆಲೆಸಿ ಬಹಳ ವರ್ಷಗಳೇ ಆಗಿವೆ. ನಮ್ಮ ಅಣ್ಣನಿಗೆ ರಾಮ ಮತ್ತು ಗೀತ ಎಂಬ ಇಬ್ಬರು ಮಕ್ಕಳಿದ್ದಾರೆ. ಸಂಕ್ರಾಂತಿಗೆ ಕೇವಲ ಎರಡು ವಾರಗಳಿದ್ದವು. ಅಣ್ಣನ ಮೆಸೇಜ್ ಬಂದಿತು. ಸಂಕ್ರಾಂತಿ ಹಬ್ಬಕ್ಕೆ ಎಲ್ಲರೂ ಊರಿಗೆ ಬರುವುದಾಗಿ ತಿಳಿಸಿದ್ದ. ಈ ವಿಚಾರ ನಮಗೆ ಸಂತೋಷ ತಂದಿತ್ತು.
ನಮ್ಮ ಗದ್ದೆಯು ಚಂಗರವಳ್ಳಿ ನಾಲಾ ಬಯಲಿನಲ್ಲಿ ಇದೆ. ಮಳೆಗಾಲದ ಬೆಳೆಗೆ ನಾವು ರಾಜಮುಡಿ ಭತ್ತ ಹಾಕಿದ್ದೆವು. ಡಿಸೆಂಬರ್ ವೇಳೆಗೆ ಬಂಪರ್ ಬೇಳೆ ಬಂದಿತ್ತು. ಅಣ್ಣನ ಕುಟುಂಬ ಬರುವ ವೇಳೆಗೆ ಕುಯ್ಲಾಗಿ ಕಣದಲ್ಲಿ ಒಕ್ಕಣೆ ಮಾಡಿದ್ದೆವು. ಸಂಕ್ರಾಂತಿ ಕಳೆದ ಕೆಲದಿನಗಳ ನಂತರ ನಮ್ಮೂರಿನಲ್ಲಿ ರಥೋತ್ಸವ ಜಾತ್ರೆ ನಡೆಯುತ್ತದೆ. ಅದಕ್ಕಾಗಿ ಮೊದಲೇ ಯಾಕೂಬನ ಕಡೆಯಿಂದ ಮನೆಗೆ ಸುಣ್ಣ ಬಣ್ಣ ಹೊಡೆಸಿದೆವು. ನಾನು ಹಿತ್ತಲಿನಲ್ಲಿ ದನಕರುಗಳ ಮೈ ತೊಳೆಯುತ್ತದೆ. ಅಣ್ಣನ ಮಕ್ಕಳು ಅಲ್ಲಿಗೆ ಬಂದರು.
“ಚಿಕ್ಕಪ್ಪ, ನಾಳೇ ಸಂಕ್ರಾಂತಿ ಹಬ್ಬ ಅಲ್ಲವೇ..? ರಾಮ ಕುತೂಹಲದಿಂದ ಕೇಳಿದ.
“ಹೌದು ಅದಕ್ಕೆ ದನಕರುಗಳ ಮೈ ತೊಳೆದು ನಾಳೆಯ ಪೂಜೆಗೆ ಅಣಿಗೊಳಿಸುತ್ತಿದ್ದೇನೆ..
“ಸಂಕ್ರಾಂತಿ ಹಬ್ಬದಂದು ದನಕರುಗಳನ್ನು ಪೂಜಿಸುವುದೇಕೆ.? ಗೀತಳಿಗೂ ತಿಳಿದುಕೊಳ್ಳುವ ಕುತೂಹಲ.
ಸಂಕ್ರಾಂತಿ ಸುಗ್ಗಿಯ ಹಬ್ಬ. ಎತ್ತಿನ ಸಹಾಯವಿಲ್ಲದೆ ರೈತ ಫಸಲು ಪಡೆಯಲಾರ. ನಮಗೆ ಉಪಕಾರ ಮಾಡಿದ ದನಕರಗಳಿಗೆ ಕೃತಜ್ಞತೆ ಸಲ್ಲಿಸುವುದೇ ಪೂಜೆ ಸಂಪ್ರದಾಯ
“ಚಿಕ್ಕಪ್ಪ ನೀವು ಕತೆಗಾರರೆಂದು ಅಮ್ಮ ಹೇಳುತ್ತಿದ್ದಳು. ನಮಗೆ ಸಂಕ್ರಾಂತಿ ಹಬ್ಬದ ಬಗ್ಗೆ ಎಲ್ಲಾ ತಿಳಿಸು.
“ಸಂಕ್ರಾಂತಿ ಮೂರು ದಿನಗಳ ಹಬ್ಬ. ಮೊದಲ ದಿನ ಭೋಗಿ.
ಭೋಗಿ ಹಬ್ಬದಲ್ಲಿ ಋತುಗಳ ರಾಜ ಇಂದ್ರನನ್ನು ಪೂಜಿಸುವುದು. ಈ ಹಬ್ಬ ಹೊಸ ಋತು ಆರಂಭವಾಗುತ್ತಿರುವುದರ ಸೂಚನೆ.
“ಈಗ ಚಳಿ ಕಡಿಮೆಯಾಗಿ ಬೇಸಿಗೆ ಆರಂಭವಾಗುತ್ತದೆ ಅಲ್ಲವೇ ಚಿಕ್ಕಪ್ಪ..?
“ಹೌದು ಈ ಋತುವಿನಲ್ಲಿ ಹಳೇ ಎಲೆಗಳು ಉದುರಿ ಹೊಸ ಎಲೆಗಳು ಚಿಗುರುತ್ತವೆ. ಪ್ರಕೃತಿಯಂತೆ ನಮ್ಮ ಜೀವನದಲ್ಲಿಯೂ ಹೊಸ ಕಳೆ, ಉಲ್ಲಾಸ ಮೂಡಿಬರಬೇಕೆಂಬ ಆಶಾಭಾವನೆ ಇರುತ್ತದೆ.
ಇಂದು ಧನುರ್ಮಾಸದ ಕೊನೆಯ ದಿನ. ಶಕುಂತಲ ಸುಮಂಗಲೆಯರಿಗೆ ಬಾಗಿನ ಕೊಟ್ಟು ಬಂದಳು. ರಾತ್ರಿ ಊಟ ಮುಗಿಸಿ ವರಾಂಡದಲ್ಲಿ ಕುಳಿತ್ತಿದ್ದೆ. “ಚಿಕ್ಕಪ್ಪ ಒಂದು ಕಥೆ ಹೇಳಿ ಎನ್ನುತ್ತಾ ಗೀತಾ ಒಳಬಂದಳು. ಅವಳ ಹಿಂದೆ ರಾಮನೂ ಬಂದ. “ಸಂಕ್ರಾಂತಿ ಹಬ್ಬಕ್ಕೆ ಒಂದು ಪೌರಾಣಿಕ ಕಥೆ ಇದೆ. ಅದನ್ನೇ ಹೇಳುತ್ತೇನೆ ಕುಳಿತುಕೊಳ್ಳಿ.
ಹಿಂದೆ ತಿಲಕಾಸುರನೆಂಬ ರಕ್ಕಸನಿದ್ದ. ಬ್ರಹ್ಮನ ವರದಾನದಿಂದ ಉನ್ಮತ್ತನಾಗಿ ದೇವತೆಗಳನ್ನು ತಪೋನಿರತ ಋಷಿಗಳನ್ನು ಪೀಡಿಸುತ್ತಿದ್ದ. ಅವರೆಲ್ಲರೂ ಸೂರ್ಯದೇವನ ಮೊರೆಹೊಕ್ಕರು. ಸೂರ್ಯ ಕರ್ಕ ಮತ್ತು ಮಕರ ಎಂಬ ಹೆಂಗಸರನ್ನು ಕಳಿಸಿದ. ತಿಲಕಾಸುರನನ್ನು ಸಂಹರಿಸಿರೆಂದ. ತಿಲಕಾಸುರನಿಗೂ ಇವರಿಗೂ ಘೋರ ಯುದ್ಧ ನಡೆಯಿತು. ಮಕರ ದೇವತೆ ತನ್ನ ಬಲ್ಲೆಯಿಂದ ತಿಲಕಾಸುರನ ಹೊಟ್ಟೆ ಸೀಳಿದಳು. ತಿಲಕಾಸುರನ ಹೊಟ್ಟೆಯಲ್ಲಿ ಎಳ್ಳು ತುಂಬಿತ್ತು. ಅದನ್ನು ಹೊರಗೆ ತೆಗೆದಾಗ ಆತ ಮರಣ ಹೊಂದಿದ. ಇದರಿಂದ ಸೂರ್ಯದೇವ ಸಂತೋಷಗೊಂಡು ವರವಿತ್ತ.
ಮಕರ ಸಂಕ್ರಾಂತಿ ಎಂದರೆ ಉತ್ತರಾಯಣ ಕಾಲ.
ಸೂರ್ಯದೇವನು ಉತ್ತರಾಯಣಕ್ಕೆ ಪಾದಾರ್ಪಣೆ ಮಾಡುವ ಪರ್ವಕಾಲ. ಮಾನವನು ದಕ್ಷಿಣಾಯನದಲ್ಲಿ ಮಾಡಿದ ಪಾಪಗಳು ಸಂಕ್ರಾಂತಿ ಹೆಸರಿನಲ್ಲಿ ಉತ್ತರಾಯಣದಲ್ಲಿ ಕಾಣಿಸಿಕೊಳ್ಳುವುದು. ಎಳ್ಳುದಾನ ಪಾಪ ನಿವಾರಣೆ ಎಂದು ಹೇಳುತ್ತಾರೆ.
“ಚಿಕ್ಕಪ್ಪ, ನಾಳೆ ನಾನು ಎಳ್ಳು ಬೀರಲು ಹೊಗುತ್ತೇನೆ.. ಗೀತ ಆಕಳಿಸುತ್ತಾ ಹೇಳಿದಳು.
“ನಾಳೆ ಸಂಜೆ ನೀವಿಬ್ಬರು ಹೊಸ ಬಟ್ಟೆ ಉಟ್ಟು ಎಳ್ಳು ಬೆಲ್ಲ ಬೀರಲು ಹೋಗಿ. ಈಗ ಹೋಗಿ ಮಲಗಿ.
ರಾಮ ಗೀತ ಬೆಳಿಗ್ಗೆ ತಡವಾಗಿ ಎದ್ದರು. ಆ ಹೊತ್ತಿಗೆ ಮನೆಮಂದಿಯೆಲ್ಲಾ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಿದ್ದರು. ನಾನು ವರಾಂಡದಲ್ಲಿ ಕುಳಿತು ಪತ್ರಿಕೆ ಓದುತ್ತಿದ್ದೆ. ರಾಮ ಗೀತೆ ಅಲ್ಲಿಗೆ ಬಂದರು. ಶಕುಂತಲ ಮನೆಯ ಮುಂಬಾಗಿಲ ಹೊರಗೆ ಸುಂದರವಾಗಿ ರಂಗೋಳಿ ಬಿಡಿಸುತ್ತಿದ್ದಳು.
“ಚಿಕ್ಕಮ್ಮ ಎಷ್ಟು ಚೆನ್ನಾಗಿ ರಂಗೋಲಿ ಬಿಡಿಸಿದೆ.! ನಮ್ಮಮ್ಮನಿಗೆ ರಂಗೋಲಿ ಗಂಧವೇ ಗೊತ್ತಿಲ್ಲ.. ಗೀತಳ ಮುಖವು ಆನಂದ ಆಶ್ಚರ್ಯದಿಂದ ಅರಳಿತು.
“ಸೂರ್ಯದೇವನ ಮನವೊಲಿಕೆಗಾಗಿ ಎಲ್ಲರೂ ಮನೆಯ ಮುಂದೆ ರಂಗೋಲಿಯನ್ನು ಬಿಡಿಸುತ್ತಾರೆ ಎಂದಳು ಶಕುಂತಲೆ.
“ಚಿಕ್ಕಮ್ಮ ಹೇಳಿದ್ದು ಸರಿ, ಈ ಬೀದಿಯ ಎಲ್ಲರ ಮನೆ ಮುಂದೆಯೂ ಬಣ್ಣಬಣ್ಣದ ರಂಗೋಲಿ ಕಂಗೊಳಿಸುತ್ತಿದೆ. ಗೀತ ಒಂದು ಸುತ್ತು ಬೀದಿ ಸುತ್ತಿ ಬಂದಳು. ಅಡಿಗೆ ಮನೆಯಲ್ಲಿ ತಯಾರಾಗುತ್ತಿದ್ದ ಪೊಂಗಲಿನ ವಾಸನೆ ರಾಮನ ಮೂಗಿಗೆ ಬಡಿಯಿತು. ಅಡಿಗೆ ಮನೆಯೊಳಗೆ ಬಗ್ಗೆ ನೋಡಿದ. ಒಂದು ಮಡಿಕೆಯಲ್ಲಿ ಪೊಂಗಲ್ ಬೇಯುತ್ತಿತ್ತು.
“ಚಿಕ್ಕಪ್ಪ, ಇವತ್ತಿನ ವಿಶೇಷ ಪೊಂಗಲ್ ಅಲ್ಲವೇ.?
“ಹೌದು, ಇದು ಸೂರ್ಯನಿಗೆ ಪ್ರಿಯವಾದ ಪದಾರ್ಥ. ಆದರೆ ನೀವು ಸ್ನಾನ ಮಾಡದೇ ಅದನ್ನು ಮುಟ್ಟುವಂತಿಲ್ಲ. ಹೋಗಿ ಸ್ನಾನ ಮಾಡಿಕೊಂಡು ಬನ್ನಿ.
ಮನೆಯವರೆಲ್ಲಾ ಹೊಲದ ಮನೆ ಕಡೆ ಹೋದೆವು. ಸಗಣಿಯಿಂದ ಬೆಳವಣ್ಣನನ್ನು ಮಾಡಿ ತುಂಬೆ ಹೂವನ್ನು ಮುಡಿಸಿದೆವು. ಪೊಂಗಲ್ ಮಡಿಕೆಯನ್ನು ಇರಿಸಿ ವಿಧಿವತ್ತಾಗಿ ಅರ್ಪಿಸಿದೆವು. ಇದ್ದಕ್ಕಿದ್ದಂತೆ ಭಾರಿ ಗದ್ದಲ ಕೇಳಿಸಿತು. ಮಕ್ಕಳಿಬ್ಬರು ನೋಡಲು ಓಡಿದರು. ಸುಂದರವಾಗಿ ಅಲಂಕರಿಸಿದ್ದ ಎತ್ತುಗಳು ಹುಚ್ಚೆದ್ದು ಓಡುತ್ತಿದ್ದವು. ಅವುಗಳನ್ನು ಬೆನ್ನೆಟ್ಟಿ ಹಿಡಿಯಲು ಯುವಕರು ಹರಸಾಹಸ ಮಾಡುತ್ತಿದ್ದರು.
“ಚಿಕ್ಕಪ್ಪ, ಇದೇನು ಪಂದ್ಯ.? ರಾಮ ಕೇಳಿದ.
“ಇದು ದನ ಬಿಟ್ಟು ಹಿಡಿಯುವ ಪಂದ್ಯ. ಸಾಹಸಿಗರು ದನಗಳ ಕೊರಳಿಗೆ ಕೈ ಹಾಕಿ ಅದನ್ನು ಬಿಗಿಯಾಗಿ ಹಿಡಿಯುತ್ತಾರೆ. ದನಗಳ ಕೊಂಬಿಗೆ ಕಟ್ಟಿರುವ ಗಂಟನ್ನು ಕಿತ್ತುಕೊಳ್ಳುತ್ತಾರೆ. ಇದರಲ್ಲಿ ಹಣವನ್ನು ಇಟ್ಟಿರುತ್ತಾರೆ.
ಸಂಜೆ ಊರಿನಲ್ಲಿ ದನಕರುಗಳನ್ನು ಕಿಚ್ಚು ಹಾಯಿಸುತ್ತಾರೆ. ಅಲ್ಲಿಗೆ ಮನೆಯ ದನಕರುಗಳನ್ನು ಹೊಡೆದುಕೊಂಡು ಹೊರಟೆ. ರಾಮ ಗೀತ ಜೊತೆಗೆ ಬಂದರು. ವಿಶಾಲವಾದ ಜಾಗದಲ್ಲಿ ಹುಲ್ಲುಗಳನ್ನು ಹರವಿದ್ದರು. ಬೆಂಕಿ ಹಚ್ಚಿಸಿದಾಗ ಎರಡಾಳು ಎತ್ತರಕ್ಕೆ ಜ್ವಾಲೆ ಎದ್ದಿತು. ಊರಿನ ದನಕರುಗಳನ್ನು ಅದರೊಳಗೆ ನುಗ್ಗಿಸಿದರು. ನಮ್ಮ ಮನೆಯ ದನಕರಗಳನ್ನು ಕಿಚ್ಚು ಹಾಯಿಸಿದೆ.
“ಚಿಕ್ಕಪ್ಪ, ಈ ದನಕರುಗಳನ್ನು ಅದೇಕೆ ಬೆಂಕಿಯಲ್ಲಿ ನುಗ್ಗಿಸುವಿರಿ..? ರಾಮನಿಗೆ ಕುತೂಹಲ.
“ದನಕರುಗಳ ಮೈಯಲ್ಲಿ ಉಣ್ಣೆ ಹುಳು ಅಂಟಿಕೊಂಡಿರುತ್ತವೆ. ಹೀಗೆ ಕಿಚ್ಚು ಹಾಯಿಸಿದಾಗ ಅವು ಸಾಯುತ್ತವೆ. ಕಿಚ್ಚು ಹಾಯಿಸಿ ನಂತರ ಮನೆಯವರೆಲ್ಲಾ ದೇವಾಲಯಕ್ಕೆ ಹೋಗಿ ಗ್ರಾಮ ದೇವತೆ ಮಾರಮ್ಮನನ್ನು ಪೂಜಿಸಿದೆವು. ಸಂಕ್ರಾಂತಿಯ ಮರುದಿನ ಪರ್ವಕಾಲದ ಕರಿ. ಎಳೆಯ ಮಕ್ಕಳಿದ್ದವರ ಮನೆಗಳಲ್ಲಿ ಕರಿ ಎರೆಯುವ ಸಂಪ್ರದಾಯವಿದೆ. ವರ್ಷ ತೊಡಕೆಂದು ಮಾರನೇ ದಿನ ಬಾಡಿನೂಟದ ಸಮಾರಾಧನೆಯು ಕೆಲವರ ಮನೆಯಲ್ಲಿ ಇರುತ್ತದೆ.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧