ಇ ಲ್ಲಿವೆ ಎಳ್ಳು-ಬೆಲ್ಲದ ಸ್ವಾದ-ಮೋದ ಅನಾವರಣದ ಸಪ್ತ ಹನಿಗವಿತೆಗಳು. ಸಂಕ್ರಾಂತಿಯ ನಾದ-ನಿನಾದ ರಿಂಗಣಿಸುವ ಗುಪ್ತ ಭಾವಪ್ರಣತೆಗಳು. ಇಲ್ಲಿ ಒಲವಿನ ಲಾಸ್ಯವಿದೆ. ತಿಳಿನಗೆಯ ಹಾಸ್ಯವಿದೆ. ಹಬ್ಬದ ಸವಿ ಸಂವೇದನೆಗಳ ಹೃದ್ಯ ಭಾಷ್ಯವಿದೆ. ಒಲುಮೆಯ ಅಕ್ಷರಬಂಧುಗಳಿಗೆ ವರ್ಷದ ಮೊದಲ ಹಬ್ಬಕ್ಕೆ ಮುಂಗಡವಾಗಿ Honey ಹನಿ ಕಾವ್ಯದ ಉಡುಗೊರೆಯಿದು…
ಎಳ್ಳು-ಬೆಲ್ಲದ ಹನಿಗಳು..
ರಂಗೀಲ..!
ನನ್ನ ಕೈಗಿಡುವಾಗ ಎಳ್ಳುಬೆಲ್ಲ
ಅದೇಕೋ ಮೆಲ್ಲ.. ಮೆಲ್ಲ..
ಕೆಂಪಾಯಿತು ಅವಳ ಗಲ್ಲ.!
*******************
ಸಂಕ್ರಾಂತಿ ಸ್ಮರಣೆ.!
ಬಿಳಿ ಎಳ್ಳಿನ ಬಣ್ಣದ ಬೆಡಗಿ
ಸಿಹಿ ಬೆಲ್ಲದ ಮಾತಿನ ಹುಡುಗಿ
ಕಾಡುವಳು ಪ್ರತಿ ಸಂಕ್ರಾಂತಿಗು
ಪದೇ ಪದೇ ಚಿರ ನೆನಪಾಗಿ.!
**********************
ನಿತ್ಯ ಸಂಕ್ರಾಂತಿ.!
ಅವಳದು ಬೆಲ್ಲದ ನಿತ್ಯ ನಾವೀನ್ಯ
ನನ್ನದು ಎಳ್ಳಿನ ಚಿರ ಚೈತನ್ಯ
ಹಾಗಾಗಿ ಅನುದಿನವು ನಮಗೆ..
ಎಳ್ಳುಬೆಲ್ಲದ ಮಧುರ ಮಾಧುರ್ಯ
ಸಂಕ್ರಾಂತಿಯ ಅಮರ ಸೌಂದರ್ಯ.!
**********************
ಅಭಿಲಾಷೆ.!
ಅಕ್ಕಪಕ್ಕದೆಲ್ಲರಿಗು ಎಳ್ಳುಬೆಲ್ಲ ಕೊಟ್ಟು
“ಒಳ್ಳೆಯ ಮಾತಾಡೋಣ” ಎಂದಳು
ಅದೇಕೋ ನನಗೆ ಮಾತ್ರವೇ ಬೆಲ್ಲವಿಟ್ಟು
“ಒಲವಿನ ಮಾತಾಡೋಣ” ಅಂದಳು.!
**********************
ಸಂಕ್ರಾಂತಿ ಸ್ಪೆಶಲ್ಲು.!
ಸಂಕ್ರಾಂತಿಯಂದು ನನ್ನವಳ ಮಾತು
ಅಕ್ಷರಶಃ ಬೆಲ್ಲದಚ್ಚು..!
ಮತ್ತೆ ಇನ್ನುಳಿದ ದಿನ.. ಊಹೂಂ..
ಕೇಳಬೇಡಿ ಕಲಗಚ್ಚು..!
********************
ಸಮಾಗಮ.!
ಆದಾಗ ಬಿಳಿಬೆಲ್ಲಕೆ ಬಿಳಿಯೆಳ್ಳಿನ ಸಂಗಮ
ನೋಡಲು ಕಂಗಳಿಗೂ ಸವಿ ಸಂಭ್ರಮ..
ಬಹಳಷ್ಟು ಬಾರಿ ಬಿಳಿಬೆಲ್ಲ ಕರಿಎಳ್ಳು ಬೆರೆಸಿ
ಭಗವಂತ ಮಾಡಿಬಿಡುತ್ತಾನೆ ಸಂಗ್ರಾಮ.!
********************
ಹುಚ್ಚುಕವಿ.!
ಸಂಕ್ರಾಂತಿದಿನ ಯುವಕವಿಯೆಂದ..
“ಅವಳ ನಸುನಗು ಬೆಲ್ಲದಚ್ಚು
ನುಡಿ ಎಳ್ಳಿಗಿಂತ ಅಚ್ಚುಮೆಚ್ಚು”
ಅರ್ಧಕ್ಕೆ ನಿಲ್ಲಿಸುತ ಕೇಳುಗರೆಂದರು..
“ಸಾಕು ತಮ್ಮಾ ಬಾಯಿಮುಚ್ಚು
ಇದು ಪಡ್ಡೆವಯಸಿನ ಹುಚ್ಚು.”!
ಎ.ಎನ್.ರಮೇಶ್. ಗುಬ್ಬಿ.