ಮೂಡಲಗಿ: “ರೇಬೀಸ್ ರೋಗ ತಡೆಗೆ ಶ್ವಾನಗಳಿಗೆ ಕಡ್ಡಾಯವಾಗಿ ರೇಬೀಸ್ ಲಸಿಕೆ ಹಾಕಿಸಿ ಅವುಗಳ ಅರೋಗ್ಯ ಕಾಪಾಡಬೇಕು ಎಂದು ಮೂಡಲಗಿಯ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ ಹೇಳಿದರು.
ಇಲ್ಲಿಯ ನವರಾತ್ರಿ ಉತ್ಸವ ಸಮಿತಿಯವರು ಏರ್ಪಡಿಸಿದ್ದ ಕೃಷಿ ಮೇಳದಲ್ಲಿ ಮೂಡಲಗಿ ಪಶು ಆಸ್ಪತ್ರೆ ಮತ್ತು ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ ಸಹಯೋಗದಲ್ಲಿ ಶ್ವಾನಗಳಿಗೆ ರೇಬೀಸ್ ರೋಗ ತಡೆಗೆ ಲಸಿರೆ ಹಾಕುವ
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ರೇಬಿಸ್ ಬಗ್ಗೆ ಎಚ್ಚರಿಕೆ ವಹಿಸಬೇಕು ತಾವು ಸಾಕಿದ ಶ್ವಾನಗಳಿಗೆ ತಪ್ಪದೆ ರೇಬಿಸ್ ರೋಗ ನಿರೋಧಕ ಲಸಿಕೆಯನ್ನು ಹಾಕಿಸಬೇಕು ಎಂದರು.
ಪಶುಸಂಗೋಪನೆ ಇಲಾಖೆಯ ಪಾಲಿಕ್ಲಿನ ಉಪನಿರ್ದೇಶಕ ಡಾ. ಎಂ.ಬಿ. ವಿಭೂತಿ ಮಾತನಾಡಿ ಪ್ರತಿ ವರ್ಷ ರೇಬೀಸ್ ರೋಗ ಪೀಡಿತ ಶ್ವಾನಗಳ ಕಡಿತದಿಂದ ದೇಶದಲ್ಲಿ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಶ್ವಾನಗಳಿಗೆ ರೇಬಿಸ್ ಲಸಿಕೆ ಕೊಡಿಸುವ ಬಗ್ಗೆ ನಿರ್ಲಕ್ಷತೆ ಮಾಡಿದರೆ ಅದು ಮನುಷ್ಯರಿಗೆ ಅಪಾಯವಿದೆ ಎಂದರು.
ಡಾ. ಮಹಾದೇವಪ್ಪ ಕೌಜಲಗಿ, ಡಾ. ಸೀಮಾ ತುಂಗಳ, ಡಾ. ಪ್ರಶಾಂತ ಕುರಬೇಟ, ಡಾ. ವಿನಯ ಕಡಪಟ್ಟಿ, ಡಾ.ಇಸ್ಮಾಯಿಲ, ಲಯನ್ಸ್ ಪರಿವಾರ ಅಧ್ಯಕ್ಷ ಸಂಜಯ ಮೊಖಾಶಿ, ವೆಂಕಟೇಶ ಸೋನವಾಲಕರ, ಬಾಲಶೇಖರ ಬಂದಿ, ಡಾ.ಎಸ್.ಎಸ್. ಪಾಟೀಲ, ಶ್ರೀಶೈಲ್ ಲೋಕನ್ನವರ, ಮಿರಜಾನಾಯಿಕ, ಸುರೇಶ ಅದಪ್ಪಗೋಳ, ಮಹಾಂತೇಶ ಹೊಸೂರ, ಶಂಕರ ಶಾಬನ್ನವರ, ಶಿವರುದ್ರ ಮಿಲ್ಲಾನಟ್ಟಿ, ಸರಸ್ವತಿ ಮುರಗೋಡ, ಶಶಿಕಲಾ ಕಾಗೆ, ಪಶು ಸಖಿಯರು ಮತ್ತು ಸಿಬ್ಬಂದಿಯವರು ಇದ್ದರು. ಶಿಬಿರದಲ್ಲಿ ೧೧೦ ಶ್ವಾನಗಳಿಗೆ ರೇಬೀಸ್ ಲಸಿಕೆಯನ್ನು ಹಾಕಿದರು.