spot_img
spot_img

ಕೂಗಿನ ಮಾರಯ್ಯ ಶರಣರ ವಚನಾನುಸಂಧಾನ

Must Read

- Advertisement -

ನಾರಿಯೂ ಮರನೂ ಕೂಡಿ ಬಾಗಲಿಕ್ಕಾಗಿ
ಶರ ಚರಿಸುವುದಕ್ಕೆಡೆಯಾಯಿತ್ತು.
ಭಕ್ತಿಯೂ ವಿರಕ್ತಿಯೂ ಕೂಡಲಿಕ್ಕಾಗಿ
ವಸ್ತುವನರಿವುದಕ್ಕೆ ಒಡಲಾಯಿತ್ತು.                                   ಆ ವಸ್ತು ತ್ರಿಕರಣವ ವೇದಿಸಿದ ಮತ್ತೆ ತ್ರಿಗುಣ ನಷ್ಟ.            ಆ ನಷ್ಟದಲ್ಲಿ ಪಂಚೇಂದ್ರಿಯ ನಾಶನ,                    ಸಪ್ತಧಾತು ವಿಸರ್ಜನ, ಅಷ್ಟಮದ ಹುಟ್ಟುಗೆಟ್ಟಿತ್ತು,

ಹದಿನಾರು ತೊಟ್ಟುಬಿಟ್ಟಿತ್ತು, ಇಪ್ಪತ್ತೈದರ ಬಟ್ಟೆ ಕೆಟ್ಟಿತ್ತು,ಸದ್ಭಾವದ ನಿಷ್ಠೆ ನಷ್ಟವಾಯಿತ್ತು.
ಇಂತಿವರೊಳಗಾದ ಕುಲವಾಸನೆ ಹೊಲಬುಗೆಟ್ಟಿತ್ತು.  ನಾನಾರೆಂಬುದ ತಿಳಿದಲ್ಲಿ ಕೂಗಿನ ಕುಲಕ್ಕೆ ಹೊರಗಾಯಿತ್ತು ಮಹಾಮಹಿಮ ಮಾರೇಶ್ವರನನರಿಯಲಾಗಿ.

ಕೂಗಿನ ಮಾರಯ್ಯ ವಚನ ಅನುಸಂಧಾನ

- Advertisement -

ಶರಣರ ವಚನಗಳು; ದೃಷ್ಟಾಂತ ಮತ್ತು ರೂಪಕ ಭಾಷೆಯಲ್ಲಿ ಮೂಡಿ, ಅತ್ಯಂತ ಸುಂದರವಾಗಿ ಅರಳಿ,ಸುಗಂಧ ಪರಿಮಳಿಸುವ ಪುಷ್ಪಗಳಿದ್ದಂತೆ! ನಿಜಕ್ಕೂ ಅವುಗಳು ನೀಡುವ ಭೌತಿಕದ ಚೆಲುವು ಹಾಗೂ ಅವುಗಳು ಸೂಸುವ ಅನುಭಾವಿಕವಾದ ಆ ಸುಗಂಧದ ಸುಖಾನಂದದ ಜೊತೆಗೆ ಪರಮಾನಂದದ ಆ ಅನನ್ಯ ಅನುಭೂತಿಯನ್ನು ಖರೇನ ಖುದ್ದಾಗಿ ಅನುಭವಿಸಿಯೇ ಹೇಳಬೇಕ್ರೀ! ಇದಕ್ಕೆ
ಇಲ್ಲಿ ಕೂಗಿನ ಮಾರಯ್ಯ ಶರಣರ ಪ್ರಸ್ತುತ ಈ ಮೇಲಿನ ವಚನವನ್ನು ಗಮನವಿಟ್ಟು ಓದುತ್ತಲೇ ಅನುಭವಿಸಿ, ಆನಂದಿಸುತ್ತಾ ಅನುಸಂಧಾನವನ್ನ ಮಾಡಲು ಒಂದು ಪ್ರಯತ್ನ ಮಾಡಿ ನೋಡೋಣ

ನಾರಿಯೂ ಮರನೂ ಕೂಡಿ ಬಾಗಲಿಕ್ಕಾಗಿ
ಶರ ಚರಿಸುವುದಕ್ಕೆಡೆಯಾಯಿತ್ತು.
ಭಕ್ತಿಯೂ ವಿರಕ್ತಿಯೂ ಕೂಡಲಿಕ್ಕಾಗಿ
ವಸ್ತುವನರಿವುದಕ್ಕೆ ಒಡಲಾಯಿತ್ತು.

ಇಲ್ಲಿ, ನಾರಿಯೂ ಅಂದರೆ ನಾರಿನಿಂದಾದ ದಾರ, ಮರನೂ ಅಂದರೆ, ಮರದಿಂದ ಮಾಡಿದ ಬಿಲ್ಲಿನ ಕೋದಂಡ. ಇವುಗಳು ಬಾಗಿ ಕೂಡಿದಾಗಲೇ ಶರ (ಬಾಣ) ನೇರ ಚರಿಸಲು ಹೇಗೆ ಸಾಧ್ಯವಾಗುತ್ತದೆ ಯೋ ಹಾಗೆ ಅದರಂತೆಯೇ ಸಾಧಕನಲ್ಲೂ ಭಕ್ತಿ ಮತ್ತು ವಿರಕ್ತಿ ಕೂಡಿದಾಗಲೇ ಆ ವಸ್ತು ಅಂದರೆ (ಮೂಲ ಚಿನ್ಮಯ ಚೈತನ್ಯ)ವನ್ನು ನೇರವಾಗಿ ಅರಿಯಲು ಸಾಧ್ಯವಾಗುತ್ತದೆಂದು ಇಷ್ಟೊಂದು ಸುಂದರ ದೃಷ್ಟಾಂತದ ಮೂಲಕವಾಗಿ ಆಧ್ಯಾತ್ಮಿಕ ಅರಿವಿನ ಸಾಧನೆಯ ಸಾಧ್ಯತೆಯ ಬಗ್ಗೆ ಪ್ರಸ್ತುತ ವಚನದ ಈ ಮೊದಲ ಭಾಗ ಒಂದು ಸುಂದರ ಚಿತ್ರವನ್ನು ಕಟ್ಟಿಕೊಡುವ ಮೂಲಕ ಮನದಟ್ಟು ಮಾಡಿ ತಿಳಿಸುತ್ತಲೇ ವಚನದ ಮುಂದಿನ ಸಾಲಿನಲ್ಲೇನಿದೆ ನೋಡೋಣ ಎನ್ನುವ ಕುತೂಹಲವನ್ನು
ಸಜೀವ ಗೊಳಿಸುತ್ತದೆ.

- Advertisement -

ಆ ವಸ್ತು ತ್ರಿಕರಣವ ವೇದಿಸಿದ ಮತ್ತೆ ತ್ರಿಗುಣ ನಷ್ಟ.            ಆ ನಷ್ಟದಲ್ಲಿ ಪಂಚೇಂದ್ರಿಯ ನಾಶನ, ಸಪ್ತ ಧಾತು ವಿಸರ್ಜನ, ಅಷ್ಟಮದ ಹುಟ್ಟುಗೆಟ್ಟಿತ್ತು,

ಆ ವಸ್ತು (ಮೂಲ ಚಿನ್ಮಯ ಚೈತನ್ಯ)ವು ತ್ರಿಕರಣ ಗಳಾದ (ಶರೀರ,ಮಾತು,ಮನಸು)ಗಳನ್ನು ಬೇಧಿ ಸಿದಾಗ; ತ್ರಿಗುಣ(ಸಾತ್ವಿಕ,ರಜಸ್ಸು,ತಮಸ್ಸು) ಗಳ ನಷ್ಟ ಉಂಟಾಗುತ್ತದೆ. ಆ ನಷ್ಟದಲ್ಲಿ ಪಂಚೇಂದ್ರಿ ಯ (ಕಣ್ಣು ಕಿವಿ ಮೂಗು ನಾಲಿಗೆ ಚರ್ಮ) ಇವು ಗಳ ಭೌತಿಕ ಮಾಯಾ ಪಾಶವು ನಾಶವಾಗಿ, ಸಪ್ತ ಧಾತು(ರಸ,ರಕ್ತ,ಮಾಂಸ,ಮೇದಸ್ಸು,ಅಸ್ಥಿ,ಮಜ್ಜೆ, ಶುಕ್ರ)ಇವು ದೇಹದಲ್ಲಿನ ಆ ಸಪ್ತಧಾತುಗಳು ಇಲ್ಲಿ ವಿಸರ್ಜನೆಯಾದ ಕಾರಣದಿಂದ ಆ ಅಷ್ಟಮದಗಳಾದ (ಕುಲಮದ,ಛಲಮದ,ಧನಮದ,ಯೌವನ ಮದ,ವಿದ್ಯಾಮದ,ರೂಪಮದ,ರಾಜಮದ ಮತ್ತು ತಪೋಮದ) ಇವು ಅರಿವಿನ ಕಿರಣದಿಂದ ಸುಟ್ಟು ಮತ್ತೆ ಮರುಹುಟ್ಟು ಹೊಂದಲಾರದಂತೆ ಬೆಂದು ನಷ್ಟವಾಗಿ ಹೋಯಿತು! ಎಂದು ಸಾರಿ ಹೇಳುವ ವಚನದ ಈ ಸಾಲುಗಳು ಶರಣರ “ಇದೇ ಜನ್ಮ ಕಡೆ” ಎನ್ನುವ ಪುನರ್ಜನ್ಮ ನಿರಾಕರಣೆ ತತ್ವವನ್ನು ಕುರಿತು ಸ್ಪಷ್ಟವಾಗಿ ಹೇಳುತ್ತವೆ.

ಹದಿನಾರು ತೊಟ್ಟುಬಿಟ್ಟಿತ್ತು, ಇಪ್ಪತ್ತೈದರ ಬಟ್ಟೆ ಕೆಟ್ಟಿತ್ತು, ಸದ್ಭಾವದ ನಿಷ್ಠೆ ನಷ್ಟವಾಯಿತ್ತು.
ಇಂತಿವರೊಳಗಾದ ಕುಲವಾಸನೆ ಹೊಲಬುಗೆಟ್ಟಿತ್ತು.

ಮನುಷ್ಯ ಹುಟ್ಟಿ ಸಾಯುವ ತನಕದ ವಿವಿಧಕಾಲ ಘಟ್ಟದಲ್ಲಿ ಮಾಡುವ ಹದಿನಾರು ಸಂಸ್ಕಾರಗಳು (ಷೋಡಷೋಪಚಾರ!?) ಪೂರ್ಣಗೊಂಡಿರುವ ಕಾರಣದಿಂದ ಸಾಧನೆ ತೊಟ್ಟು ಬಿಟ್ಟಿತ್ತು ಎನ್ನುತ್ತಾ ಇಪ್ಪತ್ತೈದು ತತ್ವಗಳ ಅರಿವು ಅನುಷ್ಠಾನದಿಂದಾಗಿ ಆ ಅಧೋ ಮಾರ್ಗವೂ ಕೆಟ್ಟು, ಅದುವರೆಗಿನ ಆ ಸದ್ಭಾವದ ನಿಷ್ಠೆಯೂ ನಷ್ಟವಾಯಿತು ಎನ್ನುವ ಮೂಲಕ ಹೀಗೆ ಸಾಧಕನ ತನು ಮನ ಭಾವಗಳ ಒಟ್ಟಾರೆಯ ಭೌತಿಕ, ತಾತ್ವಿಕ, ಪಾರಮಾರ್ಥಿಕಗಳ ಮಾರ್ಗದಲ್ಲಿನ ಸೂಕ್ಷ್ಮಗಳಲ್ಲಿನ ಗೊಂದಲಗಳನ್ನು
ಸಾಧಕನ ಅರಿವು ಆಚರಣೆಯ ದಗ್ದುಳಿತಕ್ಕೆ ಸಿಕ್ಕ ಕಾರಣಕ್ಕೆ ಭವಿತನದ ಬದುಕಿನ ಕುಲವಾಸನೆಯ ಬಟ್ಟೆಯೇ ಕೆಟ್ಟಿತ್ತು ಎನ್ನುತ್ತದೆ ವಚನದ ಈ ಭಾಗ.

ನಾನಾರೆಂಬುದ ತಿಳಿದಲ್ಲಿ ಕೂಗಿನ ಕುಲಕ್ಕೆ ಹೊರಗಾಯಿತ್ತು ಮಹಾಮಹಿಮ ಮಾರೇಶ್ವರನನರಿಯಲಾಗಿ

ಮನುಷ್ಯ/ಭಕ್ತಿ ಸಾಧಕನು ಮೊಟ್ಟ ಮೊದಲಿಗೆ; ನಾನಾರು ಎಂಬುದನ್ನ ತಿಳಿದುಕೊಳ್ಳುವ ಮೂಲಕ ಮಾರೇಶ್ವರನನ್ನು ನಿಜವಾಗಿ ಅರಿತು ಕೊಂಡಲ್ಲಿ, ಈ ಎಲ್ಲಾ ಮಲತ್ರಯಗಳಲ್ಲಿನ ರಂರಾಡಿಯಿಂದ ಮುಕ್ತವಾಗುತ್ತಾ ತನ್ಮೂಲಕ ಭವ ಬದುಕಿನ ಭವಿ ತನದ ಪುನರಪಿ ಜನನದ ಜೀವನ ಚಕ್ರದಿಂದಲೇ ಪಾರಾಗಿ ಹುಟ್ಟುಗೆಟ್ಟು ಇದೇ ಜನ್ಮಕಡೆಯಾಗುವ ಕಾರಣದಿಂದ ಭಕ್ತ ಮುಕ್ತನಾಗುವನೆಂದು ಪ್ರಸ್ತುತ ಕೂಗಿನ ಮಾರಯ್ಯ ಶರಣರ ವಚನವು ಇಲ್ಲಿ ವಿವರವಾಗಿ ಚಿತ್ರಿಸುತ್ತಾ ಶರಣಮಾರ್ಗದ ನಿಜದ ನೀಲ ನಕ್ಷೆಯನ್ನು ಚಿತ್ರಿಸಿ ತೋರಿಸುತ್ತದೆ ಎಂದು ಹೇಳಬಹುದಾಗಿದೆ.

ಸಂಕ್ಷಿಪ್ತ ಪರಿಚಯ
ಚಿತ್ರ :ಸಾಂದರ್ಭಿಕ ಮಾಹಿತಿ ಕೃಪೆ ಅಂತರ್ಜಾಲ.

೧೨ನೇ ಶತಮಾನದ ಕೂಗಿನ ಮಾರಯ್ಯಗಳದು ಕೂಗು ಹಾಕುವ ಕಾಯಕ.(ಬಿಜ್ಜಳನ ಸೈನ್ಯವು ಬಂದಾಗ ಉಚ್ಚಧ್ವನಿಯಲ್ಲಿ ಕೂಗುಹಾಕಿ ಶರಣರ ನ್ನು “ಎಚ್ಚರಿಸುವುದು”) ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲಿ ಇವರೊಬ್ಬ ವಚನಕಾರ ಶರಣರು. ‘ಮಹಾಮಹಿಮ ಮಾರೇಶ್ವರ’ ಈ ವಚನಾಂಕಿತದಲ್ಲಿ ಇವರು ರಚಿಸಿದ ೧೧ ವಚನ ಸಿಕ್ಕಿವೆ. ಈ ವಚನಗಳಲ್ಲಿ; ಆಧ್ಯಾತ್ಮಿಕ ಸಂಗತಿ ಅನನ್ಯವಾಗಿ ಬಿಂಬಿತವಾಗಿದೆ. ಷಡುಸ್ಥಲಗಳ ಸ್ವರೂಪ, ನಿಜಭಕ್ತನ ನಿಲುವು ಇವುಗಳೆಲ್ಲದರ ಪ್ರತಿಪಾದನೆಗಳನ್ನು ಅರ್ಥಪೂ ರ್ಣವಾಗಿ ಮಾಡ ಲಾಗಿದೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ; ಉಳವಿಯತ್ತ ಹೊರಟ ಶರಣರ ತಂಡದಲ್ಲಿದ್ದರು, ಬಿಜ್ಜಳನ ಸೈನ್ಯ ಶರಣರ ಜೊತೆ ಬೈಲಹೊಂಗಲದ ಹತ್ತಿರದ ‘ಮುರಗೋಡಿ’ನ ಬಳಿ ನಡೆಸಿದ ಭೀಕರ ಕದನದಲ್ಲಿ ಈ ಮಾರಯ್ಯ ಶರಣರು ಕಾದಾಡುತ್ತ ವೀರ ಗತಿಯನ್ನು ಹೊಂದುತ್ತಾರೆ.

ಅಳಗುಂಡಿ ಅಂದಾನಯ್ಯ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group