ಬೆಳಗಾವಿ: ಸಹಜ ಭಾಷೆ, ಸಹಜ ಭಾವ, ವಿಶೇಷ ಅರ್ಥ ಹೊಂದಿದ ವಚನಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಎನ್.ಆರ್. ಠಕ್ಕಾಯಿ ಹೇಳಿದರು.
ಲಿಂಗಾಯತ ಸಂಘಟನೆ ಬೆಳಗಾವಿ ಇವರ ವತಿಯಿಂದ ಪಟ್ಟಣದ ಮಹಾಂತೇಶ ನಗರದ ಫ.ಗು.ಹಳಕಟ್ಟಿ ಸಭಾಭವನದಲ್ಲಿ ಏರ್ಪಡಿಸಿದ ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ವಚನಕಾರರು ಮತ್ತು ವ್ಯಕ್ತಿತ್ವ ವಿಕಸನ ವಿಷಯದ ಕುರಿತು ಅವರು ಮಾತನಾಡಿದರು.
ವಚನಕಾರರ ನಡೆ-ನುಡಿ, ಉನ್ನತ ವಿಚಾರ, ಪರಿಶುದ್ಧ ಮನಸ್ಸು, ಶ್ರದ್ಧೆ, ಭಕ್ತಿ, ಮಾನವೀಯ ಮೌಲ್ಯಗಳು ನಮಗೆಲ್ಲ ಮಾದರಿಯಾಗಿವೆ. ಶ್ರೇಷ್ಠ ವ್ಯಕ್ತಿತ್ವ ರೂಪಿಸಿಕೊಳ್ಳಲು ಬೇಕಾದ ಎಲ್ಲ ಸೂತ್ರಗಳು, ತತ್ವಗಳು, ಸತ್ವಗಳು ವಚನ ಸಾಹಿತ್ಯದಲ್ಲಿ ಅಡಕವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಅಂತರಂಗ ಬಹಿರಂಗ ಶುದ್ಧತೆ, ಕಾಯಕ ನಿಷ್ಠೆ, ಸ್ವಾವಲಂಬನೆ, ನೈತಿಕತೆ, ಸಂಸ್ಕಾರ, ಸಕಲರಿಗೂ ಒಳಿತು ಬಯಸುವ ಮನೋಭಾವ ಇವು ಘನ ವ್ಯಕ್ತಿತ್ವದ ಕುರುಹುಗಳು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಚನ್ನಪ್ಪ ನರಸನ್ನವರ ಆಗಮಿಸಿದ್ದರು. ಕಮಲಾ ಗಣಾಚಾರಿ, ರಮೇಶ ಬಾ. ಹುಲಮನಿ, ಗುರುಸಿದ್ದಪ್ಪ ಮಾ. ರೇವಣ್ಣವರ, ನೇತ್ರಾವತಿ ರಾಮಾಪುರಿ, ಲಕ್ಷ್ಮಿ ಜವನಿ, ಮತ್ತಿಕೊಪ್ಪ, ಬಸಮ್ಮ, ಪ್ರೀತಿ ಮಠದ, ಕೆಂಪಣ್ಣ ರಾಮಾಪೂರಿ, ಬಾಬು ತಿಗಡಿ, ಶಿವಾನಂದ ನಾಯಕ, ಅನುಶ್ರೀ ಜವಣಿ, ಸುನಿಲ ಸಾಣಿಕೊಪ್ಪ ಹಾಗೂ ಶರಣ ಶರಣೆಯರು ಉಪಸ್ಥಿತರಿದ್ದರು. ಬಿ ಜಿ ಜವಣಿ ಪ್ರಾರ್ಥಿಸಿದರು. ಆನಂದ ಕಕಿ೯ ನಿರೂಪಿಸಿದರು. ವಿ. ಕೆ. ಪಾಟೀಲ, ಬಸವರಾಜ ಗುರುಗೌಡ ಮುಂತಾದವರು ವಚನ ಹೇಳಿದರು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗ ಎಂ. ವಾಯ್. ಮೆಣಸಿನಕಾಯಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಕಮಲಾದೆವವಿ ಮರಿಗೇರಿ ದಾಸೋಹ ಸೇವೆಗೈದರು.