ಹಿರಿಯ ನಟಿ ಲೀಲಾವತಿ ನಿಧನ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

0
196

ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ಸ್ವಗೃಹದಲ್ಲಿ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಬಹುಭಾಷಾ ನಟಿಯಾಗಿದ್ದ ಲೀಲಾವತಿ ಸುಮಾರು ೬೦೦ ಚಿತ್ರಗಳಲ್ಲಿ ನಟಿಸಿದ್ದರು. ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿಯನ್ನು 1999-2000ನೇ ಸಾಲಿನಲ್ಲಿ ಪಡೆದ ಲೀಲಾವತಿ ಅವರು, ‘ತುಮಕೂರು ವಿಶ್ವವಿದ್ಯಾಲಯ’ದ ಗೌರವ ಡಾಕ್ಟರೇಟ್ ಪದವಿಯನ್ನು 2008ರಲ್ಲಿ ಪಡೆದಿದ್ದರು.

ಲೀಲಾವತಿ ಎಂದು ಕರೆಯಲ್ಪಡುತ್ತಿದ್ದ ಲೀಲಾ ಕಿರಣ್ ಅವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ನಾಟಕ, ರಂಗಭೂಮಿ ಬಗೆಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಲೀಲಾ ಅವರು ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ. ವೃತ್ತಿರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸವನ್ನೂ ಅವರು ನಿರ್ವಹಿಸಿದ್ದರು.

ಇತ್ತೀಚೆಗೆ ಅವರು ಚಿತ್ರರಂಗದಿಂದ ದೂರವಾಗಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ತೊಡಗಿಕೊಂಡಿದ್ದರು. ಲೀಲಾವತಿ ಯವರ ಪುತ್ರ ವಿನೋದರಾಜ್ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ನಾಯಕಿಯಾಗಿ ಲೀಲಾವತಿ ಅವರು ಅಭಿನಯಿಸಿದ ಮೊದಲ ಚಿತ್ರ ಮಾಂಗಲ್ಯ ಯೋಗ. ಡಾ. ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ರಣಧೀರ ಕಂಠೀರವ.

 ಲೀಲಾವತಿಯವರಿಗೆ ದೊರೆತ ಪ್ರಶಸ್ತಿ-ಪುರಸ್ಕಾರಗಳು

  • 2008 – ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
  • 2006 – ಅತ್ತ್ಯುತ್ತಮ ಪೋಷಕನಟಿ ಫಿಲಂಫೇರ್ ಕನ್ನಡ – ಕನ್ನಡದ ಕಂದ
  • 1999-2000 – ಡಾ. ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು:

  • ಅತ್ತ್ಯುತ್ತಮ ಪೋಷಕನಟಿ ಪ್ರಶಸ್ತಿ
  • 1960-70 – ಗೆಜ್ಜೆಪೂಜೆ
  • 1971-72 – ಸಿಪಾಯಿ ರಾಮು
  • 1989-90 – ಡಾಕ್ಟರ್ ಕೃಷ್ಣ

ಹಿರಿಯ ನಟಿ ಡಾ. ಲೀಲಾವತಿ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

 ಗೋಕಾಕ – ಸ್ಯಾಂಡಲ್ ವುಡ್ ನ ಹಿರಿಯ ನಟಿ ಡಾ. ಲೀಲಾವತಿ ಅವರ ನಿಧನಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ.

ಲೀಲಾವತಿ ಅವರ ನಿಧನದಿಂದ ಚಿತ್ರೋದ್ಯಮವೂ ಸೇರಿದಂತೆ ಇಡೀ ನಾಡೇ ಬಡವಾಗಿದೆ. ಹಲವು ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಅವರು, ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.

ಬಹುಭಾಷೆ ನಟಿಯಾಗಿ ಗುರುತಿಸಿಕೊಂಡಿದ್ದ ಅವರು, ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ‌ಸಮಾಜಸೇವೆಯಲ್ಲಿಯೂ ಹೆಸರುವಾಸಿಯಾಗಿದ್ದರು.  ಡಾ.ಲೀಲಾವತಿಯವರ ಆತ್ಮಕ್ಕೆ ದೇವರು ಚಿರಶಾಂತಿಯನ್ನೀಡಲೆಂದು ಪ್ರಾರ್ಥಿಸಿರುವ ಅವರು, ದಿವಂಗತರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ್ದಾರೆ.